ಅಕ್ಕರೆಯ ಆರೈಕೆ ನೀಡುವ `ಸಕ್ಕರೆ’ ಆಸ್ಪತ್ರೆ!

* ಆರೋಗ್ಯ ತಾಣ ಕರ್ನಾಟಕ ಮಧುಮೇಹ ಸಂಸ್ಥೆ * ಒಂದೇ ಸೂರಿನಡಿ ಎಲ್ಲ ಚಿಕಿತ್ಸಾ ಸೌಲಭ್ಯ ಜಯನಗರ ಈಸ್ಟ್‍ಎಂಡ್ ಸಮೀಪದಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆ ಆವರಣ ಪ್ರವೇಶಿಸುತ್ತಿದ್ದಂತೆ ಎದುರುಗಡೆಯೇ ಒಂದು ಮಾರ್ಗ ಸೂಚಿ ಫಲಕ. ಕರ್ನಾಟಕ ಮಧುಮೇಹ ಸಂಸ್ಥೆ(Karnataka Institute of Diabetology) ಎಂಬ ಬರೆಹ ಅದರಲ್ಲಿದ್ದು ಕೆಳಗೆ ಬಾಣದ ಗುರುತಿದೆ. ಅಂತಹ ನಾಲ್ಕಾರು ಫಲಕಗಳು ಅಲ್ಲಿದ್ದು, ಅದನ್ನೇ ಅನುಸರಿಸಿ ಮುನ್ನಡೆದರೆ ಅಲ್ಲೊಂದು ಕಡೆ ಒಂದು ಸುಸಜ್ಜಿತ ಕಟ್ಟಡ ಕಾಣಸಿಗುತ್ತದೆ. ಅದುವೇ ಕರ್ನಾಟಕ ಮಧುಮೇಹ ಸಂಸ್ಥೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಂಸ್ಥೆಯೊಳಗೆ ಪ್ರವೇಶಿಸುವುದಕ್ಕೆ ಬಾಗಿಲ ಸಮೀಪಕ್ಕೆ ತೆರಳುತ್ತಿದ್ದಂತೆ ನಿಮ್ಮನ್ನು ಎದುರುಗೊಳ್ಳಲು ವಾಚ್‍ಮನ್ ಇದ್ದಾರೆ. ಅವರೊಂದು ನಮಸ್ಕಾರ ಹೇಳಿ ನಿಮ್ಮನ್ನು ಒಳ ಬರಮಾಡಿಕೊಳ್ಳುತ್ತಾರೆ. ಅಲ್ಲೇ ಪಕ್ಕದಲ್ಲಿ ಸ್ವಾಗತಕಾರರ ಕೌಂಟರ್ ಇದೆ. ಅಲ್ಲಿ ಸ್ವಾಗತಕಾರಣಿ ಕೂಡಾ ನಿಮಗೆ ನಮಸ್ಕಾರ ಹೇಳಿ, ಟೋಕನ್ ಕೊಟ್ಟು ಕೂರಿಸುತ್ತಾರೆ. ಪ್ರತಿಯೊಂದು ಕೂಡ ಸುವ್ಯವಸ್ಥಿತವಾಗಿದೆ. ವ್ಯವಸ್ಥೆಯಲ್ಲೂ ಅಷ್ಟೇ ಅಚ್ಚುಕಟ್ಟು. ಅಲ್ಲಿನ ಸಿಬ್ಬಂದಿಗಳಾರೂ ಸಿಡುಕುವುದಿಲ್ಲ. ಮನೆಗೆ ಬಂದ ಅತಿಥಿಗಳನ್ನು ಹೇಗೆ ಬರಮಾಡಿಕೊಳ್ಳಲಾಗುತ್ತದೆಯೋ ಹಾಗಿದೆ ಅಲ್ಲಿನ ಸಂಸ್ಕøತಿ ಮತ್ತು ವಾತಾವರಣ. ಬಡ ಮಧ್ಯಮ ವರ್ಗದವರಿಂದ ಹಿಡಿದು ವಿವಿಐಪಿಗಳ ತನಕ ಬಹುತೇಕ ಮಧುಮೇಹಿಗಳು ಚಿಕಿತ್ಸೆಗೆಂದು ಇಲ್ಲಿಗೇ ಆಗಮಿಸುತ್ತಾರೆ. ಇಡೀ ದೇಶದಲ್ಲೇ ಇದೊಂದು ಮಾದರಿ ಸಂಸ್ಥೆ.

Image
ವಿಜಯವಾಣಿ ಪತ್ರಿಕೆಯ ಫೆ.26ರ ಸಂಚಿಕೆಯ ಕೊನೆಯ ಪುಟ(14)ದಲ್ಲಿ ಪ್ರಕಟವಾದ ಸುದ್ದಿ ಚಿತ್ರ

ಸರ್ಕಾರಿ ಆಸ್ಪತ್ರೆ ! ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆ, ಕಚೇರಿಗಳು ಎಂದರೆ ಜನ ಮೂಗು ಮುರಿಯುವಂತಹ ಪರಿಸ್ಥಿತಿ ಇದೆ. ಅಂಥದ್ದರಲ್ಲಿ ಇಷ್ಟೆಲ್ಲ ಸುಸಜ್ಜಿತ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆ ಮತ್ತು ವಾತಾವರಣ ಹೊಂದಿರುವ ಈ ಸಂಸ್ಥೆ ಸರ್ಕಾರಿ ಆಸ್ಪತ್ರೆ ಎಂದರೆ ನೀವು ನಂಬಲೇ ಬೇಕು. ಉಳಿದ ಸರ್ಕಾರಿ ಆಸ್ಪತ್ರೆಗಳಿಗಿಂತ ಭಿನ್ನವಾಗಿ ಕಾರ್ಯಾಚರಿಸುವ ಈ ಸಂಸ್ಥೆಯಲ್ಲಿ ಸಿಬ್ಬಂದಿ ಬೆಳಗ್ಗೆ 8.30ಕ್ಕೆಲ್ಲ ಕೆಲಸಕ್ಕೆ ಹಾಜರಾಗುತ್ತಾರೆ. ಪ್ರತಿಯೊಂದರಲ್ಲೂ ಶಿಸ್ತು ಪಾಲಿಸುತ್ತಿದ್ದಾರೆ. ಅಂದ ಹಾಗೆ ಇದು ಕರ್ನಾಟಕ ಸರ್ಕಾರದ ಹೆಮ್ಮೆಯ ಸಂಸ್ಥೆಯಾಗಿದ್ದು, ಸ್ವಾಯತ್ತ ಅಧಿಕಾರ ಹೊಂದಿದೆ. ಈ ಆಸ್ಪತ್ರೆ ಡಾ.ಕೆ.ಆರ್.ನರಸಿಂಹ ಸೆಟ್ಟಿ ಅವರ ಕನಸಿನ ಕೂಸಾಗಿದ್ದು, 2009ರ ಜನವರಿ 20ರಂದು ಅಸ್ತಿತ್ವಕ್ಕೆ ಬಂತು. ಇದುವರೆಗೆ 1.58 ಲಕ್ಷ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಡಾ.ನರಸಿಂಹ ಸೆಟ್ಟಿಯವರ ಕನಸಿನ ಕೂಸು.. ಈ ಸ್ವಾಯತ್ತ ಸಂಸ್ಥೆಗೆ ಡಾ.ಕೆ.ಆರ್.ನರಸಿಂಹ ಸೆಟ್ಟಿಯವರೇ ನಿರ್ದೇಶಕರು. ಅವರು ಇದಕ್ಕೂ ಮೊದಲು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪೆÇ್ರಫೆಸರ್ ಆಗಿದ್ದರು. ಅವರ ಕನಸಿನ ಪ್ರಾಜೆಕ್ಟ್ ಇದಾಗಿದ್ದು, ಇದರ ಕಾರ್ಯಾನುಷ್ಠಾನದ ವೇಳೆ ಎದುರಾದ ಸಮಸ್ಯೆಗಳು, ನಂತರ ಸಿಕ್ಕ ಯಶಸ್ಸು ಎಲ್ಲವನ್ನೂ ಸ್ಮರಿಸುತ್ತಾರೆ ಡಾಕ್ಟರ್. ಕನಸಿನ ಪ್ರಾಜೆಕ್ಟ್ ಬಗ್ಗೆ 2007ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಗಮನ ಸೆಳೆದಾಗ ಅವರು ತಕ್ಷಣವೇ ಅದಕ್ಕೆ ಒಪ್ಪಿಗೆ ಸೂಚಿಸಿದರು. ಕೂಡಲೇ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಮಂಜುನಾಥ್ ಅವರನ್ನು ಸಂಪರ್ಕಿಸಿ ಪ್ರಾಜೆಕ್ಟ್ ಬಗ್ಗೆ ವಿವರಿಸಿದೆ. ಹಲವು ಅಡೆತಡೆಗಳ ನಡುವೆಯೂ ಅವರು ಸ್ಥಳಾವಕಾಶ ಮಾಡಿಕೊಟ್ಟರು. ಸರ್ಕಾರವೂ ಅನುಕೂಲ ಮಾಡಿಕೊಟ್ಟ ಕಾರಣ ತನ್ನ ಕನಸಿನ ಪ್ರಾಜೆಕ್ಟ್ ನನಸಾಯಿತು ಎನ್ನುತ್ತಾರೆ ಡಾ.ನರಸಿಂಹ ಸೆಟ್ಟಿ. ಏನಿದರ ವಿಶೇಷತೆ ? ಮಧುಮೇಹ ಎಂದರೆ ಅದನ್ನು ಪ್ರತ್ಯೇಕ ರೋಗವಾಗಿ ನೋಡಲು ಸಾಧ್ಯವಿಲ್ಲ. ಮಧುಮೇಹದ ಪ್ರತಿಕೂಲ ಪರಿಣಾಮ ಮನುಷ್ಯ ಶರೀರದ ವಿವಿಧ ಅಂಗಾಂಗಗಳ ಮೇಲಾಗುತ್ತದೆ. ಪ್ರಸ್ತುತ ಮಧುಮೇಹಿಗಳು ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡು, ಎಲ್ಲ ಅಂಗಾಂಗಳ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಒಂದೇ ಸೂರಿನಡಿ ಸಿಗಬೇಕು ಎಂಬ ಕಾರಣಕ್ಕೆ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಇಲ್ಲಿ, ಮಧುಮೇಹಕ್ಕೆ ಸಂಬಂಧಿಸಿದಂತೆ quote 1 N settyವಿಶೇಷ ತಪಾಸಣೆ, ಮಧುಮೇಹದಿಂದಾಗುವ ಕಣ್ಣುಗಳ ತೊಂದರೆ, ಪಾದಗಳಲ್ಲಿ ಕಂಡು ಬರುವ ಸಮಸ್ಯೆ, ನರ, ಮೂತ್ರಕೋಶ, ಹೃದಯ, ಮಾನಸಿಕ, ಎಲುಬು, ಪಥ್ಯಾಹಾರ, ಮಕ್ಕಳ ಮಧುಮೇಹ, ಸುಸಜ್ಜಿತ ಸಂಶೋಧನಾಲಯ ಸೇರಿದಂತೆ ಎಲ್ಲ ರೀತಿಯ ಮಧುಮೇಹದ ಸಮಸ್ಯೆಗಳಿಗೆ ಒಂದೇ ಸೂರಿನಡಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಇಲ್ಲಿ ಸುಸಜ್ಜಿತ ಮತ್ತು ಅತ್ಯಾಧುನಿಕ ಉಪಕರಣಗಳನ್ನೇ ಅಳವಡಿಸಲಾಗಿದೆ. ಪ್ರತಿಯೊಬ್ಬ ರೋಗಿಯ ಆರೋಗ್ಯ ಸ್ಥಿತಿ ಮೇಲೂ ವೈಯಕ್ತಿಕ ನಿಗಾವಹಿಸಲಾಗುತ್ತದೆ. ಚಿಕಿತ್ಸಾ ವೆಚ್ಚ ಮತ್ತು ವ್ಯವಸ್ಥೆ ಮಧುಮೇಹಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಮಾಡಿಸಬೇಕಾದ ವಿಶೇಷ ತಪಾಸಣೆಗೆ ತಗಲುವ ವೆಚ್ಚದ ತುಲನಾತ್ಮಕ ಫಲಕವನ್ನೂ ಅಲ್ಲಿ ಪ್ರದರ್ಶಿಸಲಾಗಿದೆ. quote 2 patientಇದರಲ್ಲಿ ಇತರೆ ಆಸ್ಪತ್ರೆಗಳಲ್ಲಿ ಅದೇ ಚಿಕಿತ್ಸೆಗಾಗುವ ವೆಚ್ಚವನ್ನೂ ನಮೂದಿಸಲಾಗಿದೆ. ಇದಲ್ಲದೇ ಉಳಿದ ಚಿಕಿತ್ಸೆಗಳಿಗೂ ತಗಲುವ ವೆಚ್ಚ ಇತರೆ ಆಸ್ಪತ್ರೆಗಳಿಗೆ ಹೋಲಿಸಿದರೆ ತುಸು ಕಡಿಮೆಯೇ. ಹೀಗೆ ಒಂದೇ ಸೂರಿನಡಿ ಇಷ್ಟೊಂದು ಸೌಲಭ್ಯ ಇರುವ ಕಾರಣ, ರಾಜ್ಯದಿಂದಷ್ಟೇ ಅಲ್ಲ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಅಸ್ಸಾಂ, ಮಹಾರಾಷ್ಟ್ರ ಹೀಗೆ ವಿವಿಧೆಡೆಯಿಂದ ಮಧುಮೇಹ ಸಂಸ್ಥೆಗೆ ಆಗಮಿಸುತ್ತಾರೆ. ಪ್ರಸ್ತುತ ಆಸ್ಪತ್ರೆಯ ಸಾಮಥ್ರ್ಯಕ್ಕೆ ಅನುಗುಣವಾಗಿ ಇಲ್ಲಿ ಪ್ರತಿದಿನ 150 ಟೋಕನ್‍ಗಳನ್ನಷ್ಟೇ ವಿತರಿಸಿ ರೋಗಿಗಳ ತಪಾಸಣೆ ಮಾಡಲಾಗುತ್ತಿದೆ. ಬೆಳಗ್ಗೆ 8.30ರಿಂದ 10 ಗಂಟೆ ತನಕ ಟೋಕನ್ ವಿತರಿಸಲಾಗುತ್ತಿದೆ. ಉಳಿದವರನ್ನು ಮರುದಿನ ಬರುವಂತೆ ಸೂಚಿಸಲಾಗುತ್ತದೆ. ಇಂದಿರಾನಗರದಲ್ಲಿ ಸುಸಜ್ಜಿತ ಆಸ್ಪತ್ರೆ ಕರ್ನಾಟಕ ಮಧುಮೇಹ ಸಂಸ್ಥೆಗೆ ಇಂದಿರಾನಗರದಲ್ಲಿ 6 ಎಕರೆ 11 ಗುಂಟೆ ಜಮೀನು ಲಭಿಸಿದ್ದು, ಅಲ್ಲಿ ಇದೇ ಮಾದರಿಯ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ. ಆಸ್ಪತ್ರೆಯಲ್ಲಿ ಅಡಿಟೋರಿಯಂ, ಕ್ಲಾಕ್ ರೂಮ್, ಪ್ರಾರ್ಥನಾ ಮಂದಿರ, ವಿಐಪಿ ಚಿಕಿತ್ಸಾ ವಿಭಾಗ, ಹೆಲಿಪ್ಯಾಡ್, ಮಕ್ಕಳ ಆಟಕ್ಕೆ ಬೇಕಾದ ಸೌಲಭ್ಯ ಸೇರಿದಂತೆ ರೋಗಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವ ಗುರಿ ಹಾಕಿಕೊಂಡಿರುವುದಾಗಿ ಡಾ.ನರಸಿಂಹ ಸೆಟ್ಟಿ ಹೇಳಿದರು.

Leave a Reply

Your email address will not be published. Required fields are marked *