ಅನನುಭವಿಯ ಮುತ್ಸದಿತನ

`… ನನ್ನ ಹೆಸರು ಸ್ಮೃತಿ ಇರಾನಿ, ನನ್ನ ಜಾತಿ ಯಾವುದೆಂದು ಯಾರಾದರೂ ಹೇಳಬಲ್ಲಿರಾ?… ನಾನಿದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೇನೆ.. ಯಾಕೆ ಗೊತ್ತ? ಆ ಮಗುವಿನ ಸಾವು ಸಂಭವಿಸಿದ ವಿಷಯ ತಿಳಿದ ಕೂಡಲೆ ನಾನು ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ಅವರಿಗೆ ಫೋನ್ ಮಾಡಿದೆ.. ಅವರ ಸಹಾಯಕರು ಕರೆ ಸ್ವೀಕರಿಸಿದರು. ವಿವಿ ಘಟನೆ ಕುರಿತ ಮಾಹಿತಿ ಬೇಕಿದೆ ಎಂದಾಗ ಅವರೇನು ಹೇಳಿದರು ಗೊತ್ತೆ? ಸಾಹೇಬರು ಬ್ಯುಸಿ ಇದ್ದಾರೆ ಎಂದು ಕರೆ ಕಡಿತಗೊಳಿಸಿದರು. ಇವೆಲ್ಲವೂ ರೆಕಾರ್ಡ್ ಆಗಿದೆ. ನಾನು ಈ ವಿಷಯವನ್ನು ಸಾರ್ವಜನಿಕವಾಗಿ ಎಲ್ಲಿಯೂ ಪ್ರಸ್ತಾಪಿಸಲಿಲ್ಲ….’

ಸ್ಮೃತಿ ಇರಾನಿ
ಸ್ಮೃತಿ ಇರಾನಿ

ಈಗ್ಗೆ ಎರಡು ಮೂರು ದಿನ ಕೆಳಗೆ ಸಂಸತ್ತಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರ ಭಾವೋದ್ವೇಗದ ಮಾತುಗಳಿವು. ಜೆಎನ್‍ಯು ಘಟನೆ, ಹೈದರಾಬಾದ್ ವಿವಿ ಘಟನೆಗಳಿಂದಾಗಿ ಅವರು ಸದ್ಯ ಸುದ್ದಿಯ ಕೇಂದ್ರಬಿಂದು.
ಪ್ರಸ್ತುತ ಎಲ್ಲ ವಿದ್ಯಮಾನಗಳನ್ನು ಗಮನಿಸಿದಾಗ ಸ್ಮೃತಿ ಇರಾನಿ ಉಳಿದ ರಾಜಕಾರಣಿಗಳಂತಲ್ಲ ಎಂಬುದು ಮನದಟ್ಟಾದೀತು. ಹೈದರಾಬಾದ್ ವಿವಿಯ ಪ್ರಕರಣವನ್ನೇ ಗಮನಿಸಿ, ತೆಲಂಗಾಣ ಸಿಎಂ ಅವರಿಂದ ಪ್ರತಿಕ್ರಿಯೆಯೇ ಇಲ್ಲದೆ ಇದ್ದಾಗ ಅದನ್ನೇ ಮಾಧ್ಯಮಗಳ ಎದುರು ಹೇಳುವುದಕ್ಕೆ ಅವಕಾಶವಿತ್ತು. ಆದರೆ ಹಾಗೆ ಮಾಡಲಿಲ್ಲ. ಆದರೆ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಆ ಪ್ರಕರಣವನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ಆರೋಪಗಳ ಮೇಲೆ ಆರೋಪಗಳನ್ನು ಮಾಡಿದರೂ, ಎಲ್ಲವನ್ನೂ ಕೇಳಿಸಿಕೊಂಡು ಸಂಸತ್ತಿನಲ್ಲೇ ಉತ್ತರ ನೀಡುತ್ತಿರುವ ಪರಿ ನೋಡಿದರೆ, `ಅನನುಭವಿ’ ಎಂಬ ಆರೋಪ ಹೊತ್ತಿರುವ ಸ್ಮೃತಿ ಅವರ `ಮುತ್ಸದ್ಧಿತನ’ ಎದ್ದು ಕಾಣುತ್ತದೆ.
ಸದ್ಯದ ಪರಿಸ್ಥಿತಿ ಸ್ಮೃತಿ ಪಾಲಿಗೆ ಒಂದು ರೀತಿಯ ಅಗ್ನಿಪರೀಕ್ಷೆಯೇ ಸರಿ. ಜೀವನದ ನಿರ್ಣಾಯಕ ಘಟ್ಟಗಳಲ್ಲಿ ಸ್ವ ವಿವೇಚನೆಯಿಂದ ನಿರ್ಣಯ ತೆಗೆದುಕೊಂಡ ಅವರು, ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿ ಹೊಂದಿದವರು ಎನ್ನುವುದನ್ನು ನಿರೂಪಿಸುವ ಕೆಲವು ನಿದರ್ಶನಗಳು ಕಣ್ಣಮುಂದಿವೆ. ಪತ್ರಕರ್ತೆ ಅಥವಾ ಮಾಡೆಲ್ ಆಗಬೇಕು ಎಂದು ಹೊರಟ ಅವರು ಧಾರಾವಾಹಿಯ ಮುಖ್ಯಪಾತ್ರಕ್ಕೆ ಆಯ್ಕೆ ಆಗಿದ್ದು ಹೇಗೆ ಅನಿರೀಕ್ಷಿತವೋ ಅದೇ ರೀತಿ, ಮಾನವ ಸಂಪನ್ಮೂಲ ಸಚಿವ ಸ್ಥಾನಕ್ಕೆ ಆಯ್ಕೆ ಆಗಿದ್ದೂ ಅಷ್ಟೇ ಅನಿರೀಕ್ಷಿತ. ಇಂಡಿಯಾ ಟಿವಿಯಲ್ಲಿ ಹಿರಿಯ ಪತ್ರಕರ್ತ ರಜತ್ ಶರ್ಮಾ ನಡೆಸಿಕೊಡುವ `ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಅವರು `ಬದುಕಿನ ಹೆಜ್ಜೆಯ ಗುರುತು’ಗಳನ್ನು ಹೇಳಿಕೊಂಡಿದ್ದಾರೆ –
“ನನಗಾಗ ಹದಿನೈದೋ ಹದಿನಾರೋ ಪ್ರಾಯವಿರಬಹುದು. ದೆಹಲಿಯ ಆರ್.ಕೆ.ಪುರಂನ ಸೆಕ್ಟರ್ 6ರಲ್ಲಿ ನಮ್ಮ ಮನೆ ಇತ್ತು. ಸಾಫ್ ಸೀದಾ ಹುಡುಗಿಯಾಗಿದ್ದ ನನ್ನನ್ನು ಕಂಡರೆ ತಾತನಿಗೆ ಬಹಳ ಇಷ್ಟ. `ಈ ಹುಡುಗಿ ಭವಿಷ್ಯದಲ್ಲಿ ಏನೋ ಸಾಧಿಸುತ್ತಾಳೆ’ ಎಂದು ಅವರು ಯವಾಗಲೂ ಹೇಳುತ್ತಿದ್ದರು. ಅದೊಂದು ದಿನ ಅವರ ದೇಹಾಂತ್ಯವಾಯಿತು. ಆ ಘಟನೆ ನನ್ನನ್ನು ಚಿಂತನೆಗೆ ಹಚ್ಚಿತು. ಏನಾದರೂ ಸಾಧಿಸಬೇಕೆಂಬ ತುಡಿತ ಹೆಚ್ಚಿಸಿತು. ಪಿಯುಸಿ ಓದು ಮುಗಿದ ಬಳಿಕ ಕಾಲೇಜು ಸೇರಿದರೂ ನಾಟಕಗಳತ್ತ ಆಸಕ್ತಿ ಹೊರಳಿತು. ಕಾಲೇಜು ತೊರೆದೆ. ಅದೊಂದು ದಿನ ಪೇಪರ್ ಜಾಹೀರಾತು ನೋಡಿ ಮಿಸ್ ಇಂಡಿಯಾ ಸ್ಪರ್ಧೆಗೆ ಅರ್ಜಿ ಕಳುಹಿಸಿದೆ. ಅಕಸ್ಮಾತ್ ಅದರಲ್ಲಿ ಆಯ್ಕೆ ಆದೆ. ಆಗ ನನಗೆ 22 ವರ್ಷ. ಮುಂಬೈಗೆ ಹೋಗಬೇಕಿತ್ತು. ದುಡ್ಡಿರಲಿಲ್ಲ. ತಂದೆಯವರಲ್ಲಿ 2 ಲಕ್ಷ ರೂಪಾಯಿ ಕೇಳಿದೆ. ಅವರು ಆ ದುಡ್ಡು ಕೊಡುವುದಕ್ಕೆ ಒಂದು ಷರತ್ತು ಹಾಕಿದರು. ಅದೇನು ಗೊತ್ತ? ವರ್ಷದ ಬಳಿಕ ನಾನದನ್ನು ಹಿಂತಿರುಗಿಸದಿದ್ದಲ್ಲಿ, ಅವರು ನೋಡಿದ ವರನನ್ನು ಮದುವೆಯಾಗಬೇಕಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ, ಮುಂಬೈಗೆ ಬಂದಿಳಿದೆ. ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಸುತ್ತು ತಲುಪಿದೆ, ಗೆಲ್ಲಲಾಗಲಿಲ್ಲ, ಸೋತೆ. ಸಾಲ ತೀರಿಸಬೇಕಾದ ಬಾಧ್ಯತೆ ನನ್ನ ಮೇಲಿತ್ತು. ಕೊನೆಗೆ ಬಾಂದ್ರಾದ ಮೆಕ್‍ಡೊನಾಲ್ಡ್‍ನಲ್ಲಿ ವೇಟರ್ ಆಗಿ ಕೆಲಸಕ್ಕೆ ಸೇರಿ, ಬರ್ಗರ್‍ಗಳನ್ನು ಗ್ರಾಹಕರಿಗೆ ಕೊಡುವುದು, ನೆಲ, ಟೇಬಲ್ ಸ್ವಚ್ಛಗೊಳಿಸುವುದು ಮಾಡಲಾರಂಭಿಸಿದೆ. ಅದೊಂದು ದಿನ ಧಾರಾವಾಹಿ ನಿರ್ಮಾಪಕಿ ಏಕ್ತಾ ಕಪೂರ್ ನನ್ನನ್ನು ಗಮನಿಸಿ, `ಕ್ಯೂಂಕಿ ಸಾಸ್ ಭೀ ಕಭೀ ಬಹು ಥಿ'(2000-2008) ಎಂಬ ಜನಪ್ರಿಯ ಧಾರಾವಾಹಿಯ `ತುಳಸಿ ವಿರಾನಿ’ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಸಾಲ ಮರುಪಾವತಿಸುವುದಕ್ಕೆ ಇನ್ನೊಂದು ದಿನ ಬಾಕಿ ಇದೆ ಎನ್ನುವಾಗ ಈ ಧಾರಾವಾಹಿಗೆ ಸಹಿ ಹಾಕಿದೆ, ಹಣ ಬಂತು. ಸಾಲ ತೀರಿಸಿದೆ. ಧಾರಾವಾಹಿಯ ತುಳಸಿ ಪಾತ್ರದ ಮೂಲಕ ಜನರ ಪ್ರೀತಿ ಗಳಿಸಿದೆ. ಅದೇ ಪ್ರೀತಿ ಇದೀಗ ರಾಜಕೀಯ ಜೀವನದಲ್ಲೂ ಸಿಗುತ್ತಿದೆ. ಯಾವುದೇ ಕೆಲಸ ನಿರ್ವಹಿಸುವುದಕ್ಕೆ ಒಂದೊಮ್ಮೆ `ಅನುಭವ’ವೇ ಮಾನದಂಡ ಎಂದಾಗಿದ್ದಲ್ಲಿ, ಬಹುಶಃ ಯಾವ ಯುವಜನರಿಗೂ ಇಂದು ಕೆಲಸವಿರುತ್ತಿರಲಿಲ್ಲ. ಸಚಿವ ಸ್ಥಾನ ಅಲಂಕರಿಸಿದ ಆರಂಭದ ದಿನಗಳಲ್ಲಿ ಸ್ವಲ್ಪ ಶ್ರಮಪಡಬೇಕಾಯಿತು. ಈಗಾಗಲೇ ಇರುವ ಸಚಿವಾಲಯ, ಅಧಿಕಾರಿ, ಸಿಬ್ಬಂದಿ ವರ್ಗ, ತಜ್ಞರು ಜನೋಪಯೋಗಿ ಕೆಲಸ ಮಾಡುವುದಕ್ಕೆ ಬೇಕಾದ ವೇದಿಕೆ ನಿರ್ಮಿಸಿಕೊಡುವುದು ಸಚಿವರ ಕೆಲಸ ಅನ್ನುವುದು ನನಗೆ ವೇದ್ಯವಾಗಿದೆ”.
ಸ್ಮೃತಿ ಇರಾನಿಯವರ ಕೌಟುಂಬಿಕ ಹಿನ್ನೆಲೆ ಬಗ್ಗೆ ಹೇಳುವುದಾದರೆ ಅವರು ಹುಟ್ಟಿದ್ದು 1976ರ ಮಾರ್ಚ್ 23ರಂದು. ತಂದೆ ಪಂಜಾಬ್ ಮೂಲದವರು. ತಾಯಿ ಬೆಂಗಾಲಿ. ಮಧ್ಯಮ ವರ್ಗದ ಕುಟುಂಬ. ಸ್ಮೃತಿ ಕೊನೆಯವರು. ಇನ್ನಿಬ್ಬರು ಅಕ್ಕಂದಿರು. ತಾಯಿ ಜನಸಂಘದ ಸದಸ್ಯೆಯಾಗಿದ್ದರು. ದೆಹಲಿಯ ಹೋಲಿ ಚೈಲ್ಡ್ ಆಕ್ಸಿಲಿಯಂ ಸ್ಕೂಲ್‍ನಲ್ಲಿ ಪಿಯುಸಿ ತನಕ ಶಿಕ್ಷಣ ಪಡೆದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜತೆ ಬಾಲ್ಯದಿಂದಲೇ ಸಂಪರ್ಕ ಹೊಂದಿದವರು.
ಸ್ಮೃತಿ ಅವರು 2001ರಲ್ಲಿ ಜುಬಿನ್ ಇರಾನಿ ಎಂಬ ಪಾರ್ಸಿ ಉದ್ಯಮಿಯನ್ನು ವಿವಾಹವಾದರು. ಒಬ್ಬ ಮಗ ಝೋಹರ್, ಮಗಳು ಝೋಯಿಶ್. ಜುಬಿನ್ ಇದಕ್ಕೂ ಮೊದಲು ಮೊನಾ ಇರಾನಿ ಜತೆ ವಿವಾಹವಾಗಿದ್ದು, ಆ ದಾಂಪತ್ಯದಲ್ಲಿ ಜನಿಸಿದ್ದ ಶಾನೆಲ್ಲೆ ಎಂಬ ಮಗಳಿಗೂ ಸ್ಮೃತಿ ಇರಾನಿ ಮಲತಾಯಿಯಾಗಿದ್ದಾರೆ.
ಇಂತಹ ಸ್ಮೃತಿ ರಾಜಕೀಯ ಪ್ರವೇಶ ಮಾಡಿದ್ದು 2003ರಲ್ಲಿ. ಮರುವರ್ಷವೇ ಅವರು ಮಹಾರಾಷ್ಟ್ರ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷೆ ಆದರು. 2004ರಲ್ಲಿ ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಕಪಿಲ್ ಸಿಬಲ್ ವಿರುದ್ಧ ಸ್ಪರ್ಧಿಸಿ ಸೋತರು. ಇದೇ ಅವಧಿಯಲ್ಲಿ ಅವರು, ಗೋಧ್ರಾ ಹತ್ಯಾಕಾಂಡದ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇಷ್ಟಾಗ್ಯೂ, ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದರು. 2011ರಲ್ಲಿ ಗುಜರಾತ್‍ನಿಂದ ರಾಜ್ಯಸಭೆಗೆ ಆಯ್ಕೆಯಾದರು. 2014ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಅಮೇಠಿಯಿಂದ ಕಣಕ್ಕಿಳಿದು ಸೋತರು. ಆದಾಗ್ಯೂ, ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಾಗ, ಮೋದಿ ಅವರು ಮಹತ್ವದ ಮಾನವ ಸಂಪನ್ಮೂಲ ಖಾತೆಯ ಹೊಣೆಯನ್ನು ಸ್ಮೃತಿ ಇರಾನಿ ಹೆಗಲಿಗೇರಿಸಿದ್ದರು.
ಅಂದಿನಿಂದ ಇಂದಿನ ತನಕ ವಿಪಕ್ಷದವರು ಸ್ಮೃತಿ ಅವರನ್ನು `ಅನನುಭವಿ’ ಎಂದರು, ವಿದ್ಯಾರ್ಹತೆ ಇಲ್ಲ ಎಂದು ಆರೋಪಿಸಿದರು. ಮೋದಿ ಅವರ ಸಂಪುಟದಲ್ಲಿ ಕಿರಿಯರೆನಿಸಿಕೊಂಡರೂ ಮಹತ್ವದ ಖಾತೆಯ ಹೊಣೆಗಾರಿಕೆ ಹೊತ್ತ ಅವರು, ಇಷ್ಟೆಲ್ಲ ವಿವಾದಗಳನ್ನು ಸವಾಲಾಗಿ ಸ್ವೀಕರಿಸಿ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾರೆ. `ನನ್ನ ಮಾತನ್ನು ಕುರುಡಾಗಿ ನಂಬಬೇಡಿ, ವಾಸ್ತವಾಂಶ ಮತ್ತು ದಾಖಲೆಗಳನ್ನು ಪರಿಶೀಲಿಸಿಯೇ ನಂಬಿ’ ಎನ್ನುವಲ್ಲಿ ಅವರ ಆತ್ಮವಿಶ್ವಾಸ ಎದ್ದು ಕಾಣಿಸುತ್ತದೆ. ಆದರೆ, ಫಲಿತಾಂಶ ಏನು ಅನ್ನೋದಕ್ಕೆ `ಶೈಕ್ಷಣಿಕ ಪರಿವರ್ತನೆ’ ಕಡೆಗೆ ಗಮನಹರಿಸಬೇಕಾಗುತ್ತದೆ.

Leave a Reply

Your email address will not be published. Required fields are marked *