ಅಪ್ಪ ಅಮ್ಮ ಅಂದರೆ ಸಾಕು ಬಾಲ್ಯ ನೆನಪಾಗುವುದು ಸಹಜ. ಆ ಮಮತೆ, ಅಕ್ಕರೆ ಅದು ಬಾಲ್ಯಕ್ಕೆ ಅಷ್ಟೇ ಸೀಮಿತ.. ಪ್ರೌಢರಾದಂತೆ ಅವರ ಮಮತೆ, ಅಕ್ಕರೆ ಹಾಗೇ ಇದ್ದರೂ ಮಕ್ಕಳಿಗೆ ಅದರ ಅರಿವು ಅಷ್ಟಾಗಿ ಇರುವುದಿಲ್ಲ. ಕೆಲವೊಂದು ಬಾರಿ ಅದುವೇ ಕಿರಿ ಕಿರಿ ಎಂಬ ಭಾವನೆ ಕೂಡಾ ಉಕ್ಕಿಸಿಬಿಡಬಹುದು. ಈ ಮಾತು ಈಗ ಯಾಕೆ ಅನ್ನೋ ಪ್ರಶ್ನೆ ಎದುರಾಗಬಹುದು.
ವಿಶ್ವದಾದ್ಯಂತ ದಿನಾಚರಣೆಗಳಿಗೆ ಏನು ಬರವೇ ? ಅಂದ ಹಾಗೆ ಜೂನ್ ಬಂತು ಎಂದರೆ ಸಾಕು ಕೆಲವೊಂದು ವಿಶ್ವ ದಿನಾಚರಣೆಗಳಿವೆ. ಅವುಗಳಲ್ಲಿ ಅಪ್ಪಂದಿರ ದಿನಾಚರಣೆ ಕೂಡಾ ಒಂದು. ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಜೂನ್ ೩ನೇ ಭಾನುವಾರ ಈ ವಿಶ್ವ ಅಪ್ಪಂದಿರ ದಿನಾಚರಣೆ ಆಚರಿಸಲಾಗುತ್ತಿದೆ. ಇತ್ತೀಚೆಗೆ ನನ್ನ ಗಮನ ಸೆಳೆದ ಒಂದು ಘಟನೆ ಇದು. ಅದರ ವಿಡಿಯೋ ಚಿತ್ರಣ ಮತ್ತು ಛಾಯಾಚಿತ್ರಗಳು ಪಿಕಾಸ ಆಲ್ಬಮ್ನಲ್ಲಿದೆ. ಈ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು ಎಂಬ ಇಚ್ಛೆ ನನ್ನದು. ಬಹುಶಃ ಇಂತಹ ಘಟನೆ ನಮ್ಮ ನಿಮ್ಮ ನಡುವೆ ಕೂಡಾ ನಡೆದಿರಬಹುದು..
***

೩ ವರ್ಷದ ಹಿಂದೆ ನಡೆದ ಘಟನೆ ಇದು. ಜೂನ್ ೨೦೦೮. ಕ್ಯಾಲಿಫೋರ್ನಿಯಾದ ರಾಬ್ ಥಾಮ್ಸನ್ ಕಾರು ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡ. ಮೆದುಳಿಗೆ ಬಿದ್ದ ಏಟು ಎಷ್ಟು ಪ್ರಬಲವಾಗಿತ್ತು ಅಂದರೆ ಎಡ ಕೈ ಮತ್ತು ಕಾಲಿನ ನಿಯಂತ್ರಣ ಕಳೆದುಕೊಂಡ. ಓಡಾಟಕ್ಕೆ ವೀಲ್ ಚಯರೇ ಗತಿ.
ಈಗ ಥಾಮ್ಸನ್ ಗೆ ೨೨ ವರ್ಷ ವಯಸ್ಸು. ಇವಿಷ್ಟೇ ಆಲ್ವಾ ತೊಂದರೆ ಅಂದರೆ.. ಆತನ ಸ್ಮರಣ ಶಕ್ತಿ ಮಾತ್ರವಲ್ಲ ಮಾತು ಕೂಡಾ ಕಡಿಮೆ ಆಗಿತ್ತು. ದಿನಕ್ಕೆ ಎರಡು ಬಾರಿ ಫಿಸಿಕಲ್ ತೆರಪಿ (ಶರೀರಕ್ಕೆ ಮಸಾಜ್) ನಡೆಯುತ್ತಿತ್ತು. ಇದು ಆತನ ಆರೋಗ್ಯದಲ್ಲಿ ನಿಧಾನಗತಿಯ ಪ್ರಗತಿಯನ್ನು ಸೂಚಿಸಿತ್ತು.
ರಾಬ್ ತಂದೆ ಡೇವ್ ಗೆ ಮಗನ ಆರೋಗ್ಯದ ಬಗ್ಗೆ ಚಿಂತೆ ಮತ್ತು ಕಾಳಜಿ. ಇದುವೇ ರಾಬ್ ಗೆ ವರವಾಯ್ತು ಎಂದೇ ಹೇಳಬೇಕು. ಮಗನ ಆರೋಗ್ಯ ಇನ್ನಸ್ಟು ಬೇಗ ಸುಧಾರಿಸಲು ಏನಾದ್ರು ಮಾಡಬೇಕು ಅನ್ನೋ ತುಡಿತ ಹೆಚ್ಚಾಗಿತ್ತು. ಇಂತಹ ತುಡಿತವೇ ಹೊಸ ಪ್ರಯತ್ನಕ್ಕೆ ನಾಂದಿಯಾಯಿತು. ಡೇವ್ ಥಾಮ್ಸನ್ ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್. ಸೈಕ್ಲಿಂಗ್ ಅಂದ್ರೆ ಇನ್ನಿಲ್ಲದ ಖುಷಿ. ಹೀಗಾಗಿ ಮಗನನ್ನು ಕೂರಿಸಿಕೊಂಡು ಹೋಗಬಲ್ಲ ತ್ರಿಚಕ್ರ ಸೈಕಲ್ ತಯಾರಿಸಿದ. ಡೇವ್ ಗೆ ಈ ರೀತಿ ಐಡಿಯಾ ಹೊಳೆಯೋದಕ್ಕೆ ಕಾರಣ ಇದೆ. ಮಗನ ಆರೋಗ್ಯ ಸಮಸ್ಯೆ ಮೆದುಳಿಗೆ ಸಂಬಂಧಿಸಿದ್ದು ಅನ್ನೋದು ಡೇವ್ ಬಲವಾದ ನಂಬಿಕೆ. ಹೀಗಾಗಿ ಸೈಕ್ಲಿಂಗ್ ಮಾಡಿಸುವುದರಿಂದ ಖಂಡಿತವಾಗಿ ಮಗ ಚೇತರಿಸಿಕೊಳ್ಳುತ್ತಾನೆ.. ಮತ್ತೆ ಮೊದಲಿನಂತೆ ನಡೆದಾಡುತ್ತಾನೆ ಅನ್ನೋ ವಿಶ್ವಾಸ ಹೆಚ್ಚಾಗಿತ್ತು.
ಈ ಎಲ್ಲ ಹಿನ್ನೆಲೆ ಇಟ್ಟುಕೊಂಡು ಸೈಕ್ಲಿಂಗ್ ಸಂಬಂಧಪಟ್ಟಂತೆ ಸಂಶೋಧನೆ ಆರಂಭಿಸಿದರು ಡೇವ್. ಆದರೆ ಮಾರುಕಟ್ಟೆಯಲ್ಲಿ ಮಗನ ಆರೋಗ್ಯ ಸುಧಾರಿಸೋದಕ್ಕೆ ಬೇಕಾದ ಸೈಕಲ್ ಕಾಣಲಿಲ್ಲ. ಇದ್ದರು ಅದನ್ನು ಮಗನನ್ನು ಕೂರಿಸೋದಕ್ಕೆ ಬೇಕಾದಂತೆ ಮಾರ್ಪಡಿಸಬೇಕಾದ ಅಗತ್ಯ ಇತ್ತು. ಅದು ತುಂಬಾ ದುಬಾರಿ ಆಗುವ ಲಕ್ಷಣಗಳೇ ಗೋಚರಿಸುತ್ತಿದ್ದವು.
ರಾಬ್ ಗೆ ಪೆಡಲಿಂಗ್ ಮಾಡುವುದು ಕಷ್ಟ ಅನ್ನೋದು ಡೇವ್ ಗೆ ಗೊತ್ತಿತ್ತು. ಆದರೂ, ಪೆಡಲಿಂಗ್ ಮಾಡಿಸುವ ಮೂಲಕ ರಾಬ್ ಮೆದುಳಿಗೆ ಹೊಸ ಸಂದೇಶ ರವಾನಿಸುವ ಪ್ರಯತ್ನ ಅದು. ಮಗನಿಗಾಗಿ ಹೊಸ ತ್ರಿಚಕ್ರ ರಚಿಸುವುದಕ್ಕೆ ಡೇವ್ ಮುಂದಾದರು. ಇದರಲ್ಲಿ ಇಬ್ಬರಿಗೂ ಪೆಡಲಿಂಗ್ ಮಾಡುವುದಕ್ಕೆ ಅವಕಾಶ ಬೇಕಿತ್ತು. ಇದಕ್ಕಾಗಿ ಡೇವ್ ೬ ತಿಂಗಳು ಶ್ರಮವಹಿಸಬೇಕಾಯಿತು.
ಆರಂಭದಲ್ಲಿ ರಾಬ್ನ ಪ್ರತಿ ಚಲನವಲನದ ಬಗ್ಗೆ ನಿಗಾವಹಿಸಬೇಕಿತ್ತು. ಪೆಡಲಿಂಗ್ ಮಾಡುವಾಗ ಆತನಲ್ಲಿ ಉಂಟಾಗುತ್ತಿದ್ದ ಬದಲಾವಣೆಯನ್ನು ಕೂಡಾ ಡೇವ್ ತಂದೆಯಾಗಿ ಗಮನಿಸಬೇಕಿತ್ತು. ಈ ಎಲ್ಲ ಸವಾಲುಗಳನ್ನು ಎದುರಿಸಿದ ಡೇವ್, ಮಗ ರಾಬ್ನಲ್ಲಿ ಆಗುತ್ತಿದ್ದ ಬದಲಾವಣೆಗೆ ತಕ್ಕಂತೆ ಸ್ಪಂದಿಸುತ್ತಿದ್ದ. ಹಾಗಾಗಿ ಪ್ರತಿ ಸಲ ಸೈಕಲ್ ರೈಡ್ ಮಾಡಲು ಹೊರಟಾಗ ರಾಬ್ನಲ್ಲಿ ಪ್ರತಿಕ್ರಿಯೆ ಧನಾತ್ಮಕವಾಗಿದ್ದ ಕಾರಣ ಡೇವ್ ಆತ್ಮಸ್ಥೈರ್ಯ ಕೂಡಾ ಹೆಚ್ಚಾಗುತ್ತಿತ್ತು.
ಅಪ್ಪನ ಏಕಮಾತ್ರ ಧ್ಯೇಯ ಏನು ಗೊತ್ತಾ ? ಮಗ ರಾಬ್ ಮತ್ತೆ ಹಿಂದಿನಂತೆ ಓಡಾಡಬೇಕು.. ತನ್ನ ಕೆಲಸ ತಾನೇ ಮಾಡಬೇಕು.. ಇದು ಅಪ್ಪ ಡೇವ್ನ ಕನಸು ಕೂಡಾ ಆಗಿತ್ತು. ಡೇವ್ನ ಈ ಪ್ರಯತ್ನ ರಾಬ್ನಲ್ಲಿ ಬಹಳಷ್ಟು ಬದಲಾವಣೆ ಉಂಟುಮಾಡಿತ್ತು. ಇದನ್ನು ರಾಬ್ ಗೆ ಚಿಕಿತ್ಸೆ ನೀಡುತ್ತಿದ್ದ ತಜ್ಞರು ಕೂಡಾ ಗುರುತಿಸಿದರು. ಇಂತಹ ಪರಿಸ್ಥಿತಿಯಲ್ಲಿ ಕೌಟುಂಬಿಕ ಬೆಂಬಲದ ಜೊತೆ ಸಾಮಾಜಿಕ ಬೆಂಬಲ ಕೂಡಾ ಸಿಕ್ಕಿದಲ್ಲಿ ವ್ಯಕ್ತಿ ಬಹುಬೇಗ ಚೇತರಿಕೆ ಕಾಣಲು ಸಾಧ್ಯ ಅನ್ನುವ ಅಭಿಪ್ರಾಯಕ್ಕೆ ಬಂದಿದ್ದರು.
ಇದೇ ವೇಳೆ, ರಾಬ್ ಕೂಡಾ ಸಾಕಷ್ಟು ಚೇತರಿಸಿಕೊಂಡಿದ್ದಾನೆ. ಕೈ ಕಾಲುಗಳಿಗೆ ಸಾಕಷ್ಟು ಚಲನೆ ಸಿಕ್ಕಿದೆ. ಜೊತೆಗೆ ಮಾತು ಕೂಡಾ ಅರ್ಥ ಮಾಡಿಕೊಳ್ಳಬಹುದಾದ ಮಟ್ಟಿಗೆ ಚೇತರಿಕೆ ಕಂಡಿದೆ. ಅಂದ ಹಾಗೆ ಈ ವೈಯಕ್ತಿಕ ವಿಚಾರ ಬೆಳಕಿಗೆ ಬಂದಿರೋದು ಹೇಗೆ ಗೊತ್ತಾ ? ವಿಮ್ ಬಸ್ಸಲ್ಸ್ ವೆಬ್ಸೈಟ್ನಲ್ಲಿ ಡುಯೋ ಸೈಕಲ್ ವಿನ್ಯಾಸದ ಬಗ್ಗೆ ಬರೆದಿರುವುದನ್ನು ನೋಡಿದ ಡೇವ್ ಅಚ್ಚರಿ ಪಟ್ಟರು. ಅದರ ವಿನ್ಯಾಸ ನೋಡಿ, ತಾನು ಈಗಾಗಲೇ ಸಿದ್ಧಪಡಿಸಿ ಬಳಸುತ್ತಿರುವ ತ್ರಿಚಕ್ರ ಸೈಕಲ್ನ ಕತೆಯನ್ನು ಈ ಅಂತರ್ಜಾಲದವರ ಜೊತೆ ಹಂಚಿಕೊಂಡರು. ಹೀಗಾಗಿ ಇವರ ಈ ಸಾಧನೆ ಬಹಿರಂಗವಾಯ್ತು.. ಅಂದ ಹಾಗೆ ಇವರ ಸಾಧನೆ ಇಲ್ಲಿಗೆ ನಿಂತಿಲ್ಲ. ಬದಲಾಗಿ ಅಪ್ಪ ಡೇವ್ ಮತ್ತು ಮಗ ರಾಬ್ ಇಬ್ಬರು ಜೊತೆಗೂಡಿ ತಾವೇ ತಯಾರಿಸಿದ ತ್ರಿಚಕ್ರದಲ್ಲಿ ಸಂಚರಿಸುತ್ತಾ ಕ್ಯಾನ್ಸರ್ ಸಂಶೋಧನೆಗೆ ನಿಧಿ ಸಂಗ್ರಹ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರಂತೆ..
***
ಮಗನ ಬಗ್ಗೆ ಈ ರೀತಿ ಕಾಳಜಿ ವಹಿಸಿದ ತಂದೆಯನ್ನು ನೋಡಿದಾಗ ಒಮ್ಮೆಯಾದರೂ ಅಪ್ಪನ ನೆನಪಾಗದೇ ಇರಲ್ಲ. ಬಹುಶಃ ಡೇವ್ ಎಲ್ಲ ಗಂಡು ಮಕ್ಕಳಿಗೆ ಅಪ್ಪ ಅಂದರೆ ಹೇಗಿರಬೇಕು ಅನ್ನೋದಕ್ಕೆ ಮಾದರಿ ಅಲ್ವಾ..