ಬೆಳಗ್ಗೆ ಕಚೇರಿಗೆ ಆಗಮಿಸುವ ಧಾವಂತ. ಸುಂಕದಕಟ್ಟೆಯಿಂದ ನಮ್ಮ ಆಫೀಸ್ಗೆ ಕೇವಲ ೧೨ ಕಿ.ಮೀ. ಆದರೂ ಬೆಂಗಳೂರಿನ ಟ್ರಾಫಿಕ್ ನಡುವೆ ಅದು ದೂರವೇ ! ನಂಗೋ ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಂಡು ಹೋಗೋ ಹುಚ್ಚು. ಮೈಸೂರು ರೋಡ್ ಮೂಲಕವೇ ಹೋಗಬೇಕು ಅಂತಿದ್ದೋನು ನಾನು. ಹೀಗೆ ಸುತ್ತಾಡಿಕೊಂಡು ಹೋಗೋದಾದ್ರೆ ಬರೋಬ್ಬರಿ ೧೭ ಕಿ.ಮೀ. ಆಗತ್ತೆ. ಆದರೂ ಟೈಮ್ ಸೇವ್ ಆಗತ್ತೆ ಅಂತಿದ್ದೆ ಯಾರೇ ಕೇಳಿದ್ರು.
ಮೈಸೂರು ರಸ್ತೆಯೇನೂ ಟ್ರಾಫಿಕ್ ಇಲ್ದ ರಸ್ತೇನೇ ಅಂದ್ರೆ ಅಲ್ಲ… ಆದ್ರೂ ಮಾಗಡಿ ರಸ್ತೆಗಿಂತ ಬೆಟರ್ ಅನ್ನೋದೆ ನನ್ನ ವಾದ. ಮಾಗಡಿ ರಸ್ತೆಯಲ್ಲಿ ವಾಹನಗಳು ತೆವಳಿಕೊಂಡು ಹೋಗ್ತಾವೆ. ಮೈಸೂರು ರಸ್ತೇಲಿ ಎಟ್ಲೀಸ್ಟ್ ನಡೆದುಕೊಂಡಾದ್ರೂ ಹೋಗ್ತಾವಲ್ಲ ಅನ್ನೋದೇ ಸಮಾಧಾನ. ಆದರೆ ಗ್ರಹಚಾರ ನೋಡಿ ಎಲ್ಲಿ ಬೇಕಾದ್ರೂ ಹೇಗೆ ಬೇಕಾದ್ರೂ ವಕ್ಕರಿಸತ್ತೆ ಅನ್ನೋ ಹಿರಿಯ ಮಾತು ಸತ್ಯ ಅಂತ ಅನ್ನಿಸಿದ ಆ ಕ್ಷಣ….
ಅಂದು ೨೦೦೯ ಸೆಪ್ಟಂಬರ್ ೨೨. ಹಿಂದಿನ ದಿನವೆ ಕಚೇರಿಯಿಂದ ನಮ್ ಚಾನೆಲ್ ಇನ್ಪುಟ್ ಇನ್ಚಾರ್ಜ್ ಫೋನಾಯಿಸಿ, ನಾಳೆ ಬಿಬಿಎಂಪಿ ಮೀಸಲು ಪಟ್ಟಿ ಘೋಷಣೆ ಮಾಡಬಹುದು. ಮೊದಲು ನಮ್ಮಲೇ ಬ್ರೇಕಿಂಗ್ ನ್ಯೂಸ್ ಹೋಗಬೇಕು. ಯಾವುದೆ ಕಾರಣಕ್ಕೂ ಮಿಸ್ ಆಗಬಾರದು ಅನ್ನೋ ತಾಕೀತು ಬೇರೆ. ಯಾವತ್ತೂ ಇಂತಹ ತಾಕೀತು ಕೇಳದ ನನಗೆ ಅಂದು ಕೊಂಚ ದಿಗಲು. ಏನೋಪ್ಪ ಇದು ಅಂತ. ಇಷ್ಟು ಸಾಕಾಯ್ತು. ಬೆಳಗ್ಗೆ ೮.೩೦ಕ್ಕೇ ಹೊರಟೆ ಆಫೀಸಿಗೆ.
ಮಾಮೂಲಿ ರಸ್ತೆ ಅದೇ ಹೊರವಲಯದ ರಿಂಗ್ ರೋಡ್… ಅಂಬೇಡ್ಕರ್ ಕಾಲೇಜು… ನಾಗರಬಾವಿ ರಸ್ತೆ… ಚಂದ್ರಾಲೇಔಟ್ ಬಂದಾಗ ಒಂದು ಬ್ರೇಕ್ ತಗೊಂಡೆ. ಅಲ್ಲೊಬ್ಬರು ಒಂದು ಡಿವಿಡಿ ಕೊಟ್ಟು ವಿಶೇಷ ಕಾರ್ಯಕ್ರಮದ್ದು ಇದು. ನಿಮ್ಮಲ್ಲಿ ಹಾಕಿಸಿ ಎಂದು ವಿನಂತಿಸಿದ್ರು. ಅಲ್ಲಿಂದ ಹೊರಟೆ ನೋಡ್ರಿ… ಇನ್ನೇನು ಬಂದು ಮೈಸೂರು ರಸ್ತೆಗೆ ಎಂಟ್ರಿ ತಗೊಂಡೆ. ಫುಲ್ ಟ್ರಾಫಿಕ್…
ಹಾಗೂ ಹೀಗೂ ವಾಹನಗಳ ನಡುವೆ ಸಿಕ್ಕ ಸಂದಿಗೊಂದಿಗಳಲ್ಲಿ ಎರಡು ಚಕ್ರದ ರಥವನ್ನು ಕೊಂಡೊಯ್ದೆ. ಬ್ಯಾಟರಾಯನಪುರ ಪೊಲೀಸ್ ಸ್ಟೇಶನ್ ಬಳಿ ತಲುಪಿದಾಗ ಅಲ್ಲಿ ರಸ್ತೆ ಪೂರ್ತಿ ವಾಹನಗಳು ನಿಂತಿದ್ದವು. ಮಧ್ಯ ಭಾಗದಲ್ಲಿ ರಸ್ತೆ ಉದ್ದಕ್ಕೂ ಖಾಲಿ ಇದ್ದುದು ನೋಡಿ ಖುಷಿ ಆಯ್ತು. ಇನ್ನೇನು ಅಲ್ಲೇ ಹೋದ್ರೆ ಘಾಳಿ ಆಂಜನೇಯ ದೇವಸ್ತಾನದ ಮುಂದಿನ ಮೋರಿ ದಾಟಿ ಬಿಡ್ತೀನಲ್ಲ ಎಂಬ ಸಂತೋಷದಿಂದ ಬೈಕ್ ಮುಂದಕ್ಕೋಡಿತು. ಇನ್ನೇನು ಘಾಳಿ ಆಂಜನೇಯನ ಗುಡಿ ಎದುರಲ್ಲೇ ಪುಣ್ಯಾತ್ಮ ಅದೆಲ್ಲಿಂದ ಬಂದನೋ…
ಏಯ್…….. ! ಎಂದು ಜೋರಾಗಿ ಕೂಗೀದ್ದೇ ಬಂತು… ಅಷ್ಟರಲ್ಲಾಗಲೇ ಆತ ನನ್ನ ಬೈಕ್ ಮುಂದಕ್ಕೆ ಬಂದಿದ್ದ. ಅವನು ಬೀಳದೇ ಸಾವರಿಸಿಕೊಂಡ.. ಆದ್ರೆ ನಾನೋ… ಬೈಕ್ ಕಂಟ್ರೋಲ್ ತಪ್ಪಿತ್ತು. ಅವನಿಗೂ ಹೊಡೆದ ಬಳಿಕ ಮುಂದೆ ನಿಂತಿದ್ದ ಖಾಸಗಿ ಬಸ್ ಹಿಂಬದಿ ಹೇಗಿದೆ ಎಂದು ನೋಡಿದೆ. ಬೈಕ್ ನೇರ ಬಸ್ ಅಡಿಗೆ ಹೋದ್ರೆ ನಾನು ಬಸ್ ಹಿಂಬದಿ ಬಾಡಿಗೆ ನನ್ನ ಬಾಡಿ ಟಚ್ ಮಾಡಿಕೊಂಡಿದ್ದೆ.
ಸುತ್ತಲೂ ನೋಡಿದೆ…. ಎದುರಿಗೆ ಬಂದ ಪುಣ್ಯಾತ್ಮ ಅಲ್ಲೆಲ್ಲೂ ಕಾಣಲಿಲ್ಲ. ಬೈಕ್ ಹೋಯಿತೆಂದೇ ಭಾವಿಸಿದ ನಾನು ಮೆಲ್ಲನೇ ಸಾವರಿಸಿಕೊಂಡು ಎದ್ದೆ. ಯಾರೂ ಕಾಣಿಸಲಿಲ್ಲ. ಮೆಲ್ಲನೆ ಬೈಕ್ ಮೇಲೆತ್ತಿದೆ. ಕೈ ಯಾಕೋ ನೋವು ಅಂತ ಅನ್ನಿಸ್ತಾ ಇತ್ತು. ಆದರೂ ಅದೇ ಸ್ಪಿರಿಟ್ನಲ್ಲಿ ಮತ್ತೆ ಬೈಕ್ ಸ್ಟಾರ್ಟ್ ಮಾಡಿದೆ. ಖಾಸಗಿ ಬಸ್ ಹಿಂದೆ ಬಿಎಂಟಿಸಿ ಬಸ್ ನಿಂತಿತ್ತು.
ಅವುಗಳ ನಡುವೆ ಮತ್ತೆ ತೂರಿಸಿದೆ ನನ್ನ ಬೈಕ್ನ.. ಇನ್ನೇನು ಮುಂದಕ್ಕೆ ನುಗ್ಗಬೇಕು ಎನ್ನುವಷ್ಟರಲ್ಲೇ ಇನ್ನೊಂದು ಬೈಕ್ ಅಲ್ಲೇ ಮುನ್ನುಗ್ಗಬೇಕೆ ! ಎದೆ ಝಲ್ಲೆಂದಿತು. ಅಬ್ಬಾ ! ಬದುಕಿದೆಯಾ ಬಡಜೀವಾ ಎಂದು ಸುಧಾರಿಸಿಕೊಂಡು ಮುಂದೆ ಹೋಗಿ ಬೈಕ್ಗೆ ಢೀ ಕೊಟ್ಟ ಪಾದಚಾರಿಯನ್ನು ಮುಖವನ್ನು ಒಮ್ಮೆ ನೋಡಿದೆ. ಏನೂ ನಡೆದೇ ಇಲ್ಲವೆಂಬಂತೆ ಆತ ಸಾಗುತ್ತಿದ್ದ.
ಅಯ್ಯಾ ದೊರೆ… ಯಾವ ಲೋಕದಲ್ಲಿದ್ದೀಯಾ ಎಂದು ಕೇಳಿದ್ರೆ ಉತ್ತರವೇ ಇಲ್ಲ. ಮತ್ತೆ ಕೇಳಿದೆ.. ಆತನ ಬಾಯಿ ಮೆಲ್ಲನೆ ಅದುರಿತು. ಆದರೆ ಶಬ್ದ ಹೊರಬರಲೇ ಇಲ್ಲ. ಇನ್ನೇನಿದ್ರೂ ಮಾತಾಡಿ ಲಾಭವಿಲ್ಲ ಅಂದು ಕೊಂಡು ಆಫೀಸಿನತ್ತ ಮುನ್ನುಗ್ಗಿದೆ. ಹೌದೂ ನಾನು ಬಿದ್ದಾಗ ಎಬ್ಬಿಸಲೂ ಯಾರೂ ಯಾಕೆ ಬರಲೇ ಇಲ್ಲ….
ಹಾಗೇ ನೆನಪಿನ ಸುರುಳಿ ಬಿಚ್ಚಿಕೊಂಡಿತು. ೨೦೦೪ ಸಮ್ ವೇರ್ ಸೆಪ್ಟಂಬರ್ ಇರಬೇಕು. ಸರಿಯಾಗಿ ನೆನಪಿಲ್ಲ ದಿನಾಂಕ. ಶೇಷಾದ್ರಿಪುರಂ ಕೆನರಾಬ್ಯಾಂಕ್ ಎದುರು ನಡೆದುಕೊಂಡು ಸ್ವಸ್ತಿಕ್ ವೃತ್ತದ ಕಡೆಗೆ ಹೊರಟಿದ್ದೆ. ಬಜಾಜ್ ಸ್ಕೂಟರ್ ಒಂದು ಢೀ ಕೊಟ್ಟದ್ದಷ್ಟೇ ಗೊತ್ತು. ನನಗಲ್ಲಾರಿ…
ಸುಂದರಿಯೊಬ್ಬಳು ರಸ್ತೆ ದಾಟುವ ಧಾವಂತದಲ್ಲಿದ್ಳು. ಪಾಪ… ಆ ಸ್ಕೂಟರ್ನವನೂ ಅದೆಲ್ಲಿಗೋ ಹೋಗುವ ಧಾವಂತದಲ್ಲಿದ್ದ. ಆಕೆಗೆ ಢೀ ಕೊಟ್ಟ ಬಳಿಕ ಆತ ಸ್ಕೂಟರ್ ನಿಲ್ಲಿಸಲಿಲ್ಲ. ಹಾಗೇ ಮುಂದಕ್ಕೋಡಿದ್ದ. ಅಷ್ಟರಲ್ಲಾಗಲೇ ಅಲ್ಲಿ ಜನ ಸೇರಿಯಾಗಿತ್ತು. ಆಕೆಯನ್ನು ಬದಿಗೆ ಕರೆ ತಂದಿದ್ದರು. ಎಲ್ಲರೂ ಆಕೆಗೆ ಸಹಾಯ ಹಸ್ತ ಚಾಚೋರೆ.. ಆದರೆ ಆಕೆ ಅವರಿಂದ ತಪ್ಪಿಸಿಕೊಂಡು ನಡೆದು ಹೋಗುತ್ತಿದ್ದ ನನ್ನ ಬಳಿ ಹೆಜ್ಜೆ ಹಾಕಿದ್ಳು. ಮೆಲುದನಿಯಲ್ಲಿ ಉಸುರಿದಳು… “ನಂಗೆ ಹೆಲ್ಪ್ ಮಾಡ್ತೀರಾ ಪ್ಲೀಸ್ “…
ಸಹಾಯ ಕೇಳಿದ್ ಮೇಲೆ ಮಾಡಿದಿದ್ರೆ ಹೇಗೆ ? ಸುಂದರಿ ಅಲ್ವೇ ! ಆಕೆಯ ಮೊಣಕೈ ಗಾಯ ತೊಳೆದದ್ದೂ ಆಯ್ತು.. ಅದಕ್ಕೆ ಸಮೀಪದಲ್ಲೇ ಇದ್ದ ಮೆಡಿಕಲ್ ಷಾಪ್ನಿಂದ ಮುಲಾಮ್ ಪಡೆದು ಹಚ್ಚಿದ್ದೂ ಆಯ್ತು. ಇನ್ನೇನು ಸಾಕಲ್ವೇ ಅಂದ್ರೆ ರಸ್ತೆ ದಾಟೋಕೆ ಸ್ವಲ್ಪ ಹೆಲ್ಪ್ ಮಾಡ್ತೀರಾ ಎಂದು ಉಲಿದಳಾಕೆ… ಹಾಗೇ.. ಬೆಳಗ್ಗಿನ ಆ ಟ್ರಾಫಿಕ್ನಲ್ಲಿ ಆಕೆಯ ಕೈ ಹಿಡಿದು ರಸ್ತೆ ದಾಟಿಸಿದ್ದಾಯ್ತು. ಮೆಲ್ಲ ಮೆಲ್ಲಗೇ ಶುರುವಾಯ್ತು ಮನದ ಮಾತು…
ಹೆಸರೇನು ?
ಗ್ರೀಷ್ಮಾ..
ಏನ್ ಮಾಡ್ತಿದ್ದೀರಾ ?
ಬಿಎಎಂಎಸ್
ಮನೆಯಲ್ಲಿ ಯಾರಿದ್ದಾರೆ ?
ನಂಗೆ ಅಪ್ಪ ಅಮ್ಮ ಇಬ್ಬೂ ಇಲ್ಲ. ಆಕ್ಸಿಡೆಂಟ್ನಲ್ಲಿ ತೀರ್ಕೊಂಡ್ರು. ತಮ್ಮ ಒಬ್ಬ ಇದ್ದಾನೆ. ತುಮಕೂರಲ್ಲಿ ಹಾಸ್ಟೆಲ್ನಲ್ಲಿದ್ದಾನೆ. ನಾನು ಇಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದೇನೆ. ಪಾರ್ಟ್ ಟೈಂ ಕೆಲ್ಸ ಕೂಡಾ ಮಾಡ್ತಿದ್ದೇನೆ ಎನ್ನುತ್ತಿದ್ದಾಗಲೇ ಆಕೆಯ ಪಿಜಿ ಕಣ್ಣೆದುರಿತ್ತು….
ಅರೆ..! ಇನ್ಫೆಂಟ್ರಿ ರಸ್ತೆಯಲ್ಲಿರೋ ನಮ್ ಆಫೀಸ್ ಕೂಡಾ ತಲುಪಿದ್ದೆ. ನನ್ನ ತಲೆಯಲ್ಲಿ ಹರಿಯತ್ತಿದ್ದ ಪ್ರಶ್ನೆ ಒಂದೇ… ನಂಗೂ ಆಕ್ಸಿಡೆಂಟ್ ಆಯ್ತಲ್ಲಾ ಆಗ ಯಾಕೆ ಹೆಲ್ಪ್ ಮಾಡೋಕೆ ಯಾರೂ ಬರಲಿಲ್ಲಾ…… 🙁
ಆಗಲೇ ತಡವಾಗಿತ್ತು. ಅಲ್ಲೂ ನನ್ನ ಆಕ್ಸಿಡೆಂಟ್ ವಿಚಾರ ಹೇಳಿ ಕೆಲಸಕ್ಕೆ ತೊಡಗಿಕೊಂಡೆ. ಆದರೆ ಆಕ್ಸಿಡೆಂಟ್ ಪರಿಣಾಮ ಆಮೇಲೆ ಗೊತ್ತಾಯ್ತು. ಗಾಡಿಗೇನೂ ಆಗಿಲ್ಲ… ಎಲ್ಲವೂ ಆಗಿದ್ದು ನನ್ನ bodyಗೇ.. ಎಡಭುಜದ ಸಮೀಪ ಹೇರ್ಲೈನ್ ಫ್ರಾಕ್ಚರ್…! ಹತ್ತಿಪ್ಪತ್ತು ದಿನ ಚಿಕಿತ್ಸೆಯ ಸಜೆ 🙁