
ಟ್ರಾಫಿಕ್ ಕಿರಿಕಿರಿಂದ ಬೇಸತ್ತಿದ್ದೀರಾ.. ? ಬೆಂಗಳೂರಿನ ಟ್ರಾಫಿಕ್ನಲ್ಲಿ ಕಾರು ಚಲಾಸುವುದು ಹೇಗಪ್ಪಾ ಎಂಬ ಕೊರಗು ಕಾಡುತ್ತಿದೆಯೇ ? ಜೇಮ್ಸ್ ಬಾಂಡ್ ಸಿನಿಮಾ ನೋಡುವವರಾಗಿದ್ದರೆ, ‘ದ ಸ್ಪೈ ಹೂ ಲವ್ಡ್ ಮಿ’ ಸಿನಿಮಾದಲ್ಲಿ ಖಚಿತವಾಗಿ ರಸ್ತೆ ಮತ್ತು ಜಲದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಕಾರನ್ನು ನೋಡಿರುತ್ತೀರಿ.. ಹಾರುವ ಕಾರಿನ ಬಗ್ಗೆ ಕೂಡಾ ಕೇಳಿರುತ್ತೀರಿ.. ನೆಲದ ಮೇಲೆ ಹೋಗುತ್ತಿರುವ ಕಾರು ಇದ್ದಕ್ಕಿದ್ದಂತೆ ಟೇಕ್ ಆಫ್ ಆಗಿ ವಿಮಾನದಂತೆ ಮೇಲೆ ಹಾರಾಡಿದರೆ.. !
ಈ ರೀತಿ ಕಲ್ಪನೆಗಳು ಮನಸಿನಲ್ಲಿ ತುಂಬಿ ತುಳುಕುತ್ತಿವೆಯೇ ? ಕಲ್ಪನೆಯೇ ಒಂದು ರೀತಿ ವಿಚಿತ್ರವಾಗಿದೆ ಎಂದೆಣಿಸಬೇಕಾಗಿಲ್ಲ. ಯಾಕೆ ಗೊತ್ತಾ ? ಇದೀಗ ಕಲ್ಪನೆಯೋ ಕನಸೋ ಅಲ್ಲ. ಸಂಶೋಧಕರು ಸುದೀರ್ಘ ಸಂಶೋಧನೆ ನಡೆಸಿ ಇಂಥ ಕನಸನ್ನು ನನಸು ಮಾಡಿದ್ದಾರೆ ! ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ ನಡೆದ ಅಂತಾರ್ಟ್ರಾಯ ವಾಹನ ಪ್ರದರ್ಶನವೊಂದರಲ್ಲಿ ಇದರ ಪ್ರಥಮ ಪ್ರಯೋಗವೂ ಯಶಸ್ವಿಯಾಗಿ ನಡೆದಿದೆ.

ಅಮೆರಿಕದ ಟೆರ್ರಾಫೂಜಿಯ (Terrafugia (terra-FOO-gee-ah)) ಕಂಪನಿ ಸತತ ಆರು ವರ್ಷ ಈ ಉಭಯ ಸಂಚಾರಿ ಕಾರಿನ ಸಂಶೋಧನೆ ನಡೆಸಿತ್ತು. ಕೆಲವು ಪೈಲೆಟ್ಗಳು ಮತ್ತು ಎಂಜಿನಿಯರ್ಗಳು ಸೇರಿ ಹುಟ್ಟುಹಾಕಿದ ಕಂಪನಿ ಇದು. ರಸ್ತೆ ಮೇಲೆ ಕಾರಿನಂತೆ ಸಂಚರಿಸಬೇಕು. ಹಾಗೆಯೇ, ಬಾನಿನಲ್ಲಿ ವಿಮಾನದಂತೆಯೂ ಹಾರಬೇಕು.. ಇದು ಅವರ ಕನಸಾಗಿತ್ತು. ಅದೀಗ ಸಾಕಾರಗೊಂಡಿದೆ.
ಉತ್ತರ ನ್ಯೂಯಾರ್ಕಿನ ಪ್ಲಾಟ್ಸ್ಬರ್ಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಕಾರು/ವಿಮಾನ ತನ್ನ ಮೊದಲ ಸಂಚಾರ/ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದೆ. ಇದನ್ನು ಲಘು ಕ್ರೀಡಾ ವಿಮಾನ (light sport aircraft) ಎಂದು ಪರಿಗಣಿಸಲಾಗಿದೆ. ಇಬ್ಬರು ಮಾತ್ರ ಪಯಣಿಸಬಹುದಾದ ಈ ಪುಟಾಣಿ ಕಾರು/ಲಘು ಕ್ರೀಡಾ ವಿಮಾನ ಗಂಟೆಗೆ ೨೨೨ ಕಿ.ಮೀ. ವೇಗದಲ್ಲಿ ಹಾರಬಲ್ಲದು. ಸದ್ಯದ ಲೆಕ್ಕಾಚಾರ ಪ್ರಕಾರ, ಇದರ ಬೆಲೆ ೨.೭೯ ಲಕ್ಷ ಅಮೆರಿಕನ್ ಡಾಲರ್. ಅಂದ ಹಾಗೆ ಟೆರ್ರಾಫೂಜಿಯ ಎಂಬುದು ಲ್ಯಾಟಿನ್ ಪದವಾಗಿದ್ದು, ‘ಭೂಮಿಯಿಂದ ಪರಾರಿಯಾಗೋಣ’ ಎಂಬುದು ಇದರ ಅರ್ಥ.. !
[youtube http://www.youtube.com/watch?v=To1ExC–Pks]
ಇಷ್ಟೆಲ್ಲ ಓದಿದ ಮೇಲೆ, ವಿಡಿಯೋ ಚಿತ್ರಣ ನೋಡಿದ ಮೇಲೆ, ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿರುವವರು ಈ ಕಾರಿನ ಜತೆ ಪರಾರಿಯಾಗೋದಂತೂ ಖಚಿತ.. ಆದರೆ ಭಾರತಕ್ಕೆ ಇದು ಇನ್ನೂ ಬಂದಿಲ್ಲ.. ಬರುವುದು ಸ್ವಲ್ಪ ತಡವಾಗುತ್ತದೆಯಂತೆ.. ಕಾಯ್ತಾ ಇರಿ..