ಉದ್ಯಮಿ ಹೆಗಲಿಗೆ ವಿದೇಶಾಂಗದ ಹೊಣೆ

ಮೆರಿಕದ ಅತ್ಯುನ್ನತ ರಾಜತಾಂತ್ರಿಕ ಹೊಣೆಗಾರಿಕೆ ಅದು. ಜಾಗತಿಕ ಮಟ್ಟದಲ್ಲಿ ಅಮೆರಿಕವನ್ನು ಮುನ್ನಡೆಸುವಲ್ಲಿ ಈ ಜವಾಬ್ದಾರಿ ನಿಭಾಯಿಸುವವರ ಪಾತ್ರ ಮಹತ್ವದ್ದು. ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಘೊಷಣೆಯಾದ ಬೆನ್ನಲ್ಲೆ, ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ರೆಕ್ಸ್ ಟಿಲ್ಲರ್ಸನ್ ಹೆಸರನ್ನು ಅವರು ಪ್ರಸ್ತಾಪಿಸಿದ್ದರು. ಅದಕ್ಕೆ ಫೆಬ್ರವರಿ 1ರಂದು ಸೆನೆಟ್ ಕೂಡ ಅಧಿಕೃತ ಮುದ್ರೆಯೊತ್ತಿದೆ. ಅಮೆರಿಕನ್ ಸೆನೆಟ್ನಲ್ಲಿ ಎಲ್ಲ ರಿಪಬ್ಲಿಕನ್ನರು ಹಾಗೂ ನಾಲ್ವರು ಡೆಮಾಕ್ರಟರು ಟ್ರಂಪ್ ಅವರ ಆಯ್ಕೆ ಪರವಾಗಿ ಮತ ಚಲಾಯಿಸಿದ್ದು ವಿಶೇಷ.

‘ಜಾಗತಿಕ ವಹಿವಾಟನ್ನು ನಿಭಾಯಿಸುವುದು ಹೇಗೆಂಬುದು ರೆಕ್ಸ್ ಅವರಿಗೆ ಚೆನ್ನಾಗಿ ಗೊತ್ತು. ವಿದೇಶಾಂಗ ಇಲಾಖೆಯನ್ನು ಯಶಸ್ವಿಯಾಗಿ ಮುನ್ನಡೆಸಲು ಇಂತಹ ಕೌಶಲ ಅತೀಅವಶ್ಯ. ಜಗತ್ತಿನ ನಾನಾ ದೇಶಗಳ ಜತೆಗೆ ಅವರ ಸ್ನೇಹ ಸಂಬಂಧವೂ ಚೆನ್ನಾಗಿದ್ದು, ಅವರಿಗೆ ಪರ್ಯಾಯ ಇನ್ನೊಬ್ಬರಿಲ್ಲ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಜಾಗತಿಕ ಮಟ್ಟದಲ್ಲಿ ಅಮೆರಿಕವನ್ನು ಮುನ್ನಡೆಸುವುದಕ್ಕೆ ಅವರಿಗಿಂತ ಸಮರ್ಥರು ಇನ್ನೊಬ್ಬರಿಲ್ಲ ಎಂಬುದನ್ನು ಅರಿತೇ ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ಅವರ ಹೆಸರನ್ನು ನಾಮನಿರ್ದೇಶನ ಮಾಡುತ್ತೇನೆ’ ಎಂದು ಕಳೆದ ವರ್ಷ ಡಿಸೆಂಬರ್ 13ರಂದು ಟ್ರಂಪ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಗಮನಾರ್ಹ ಅಂಶ ಎಂದರೆ, ರೆಕ್ಸ್ ಟಿಲ್ಲರ್ಸನ್ಗೆ ಇದುವರೆಗೆ ಯಾವುದೇ ರಾಜತಾಂತ್ರಿಕ ಹೊಣೆಗಾರಿಕೆ ನಿಭಾಯಿಸಿದ ಅನುಭವವಿಲ್ಲ. ಅವರೂ ಟ್ರಂಪ್ ಅವರಂತೆ ಉದ್ಯಮಿ. ಆದರೂ, ರಾಜಕೀಯ ದೃಷ್ಟಿಕೋನಗಳಿದ್ದವು. ಟ್ರಂಪ್ ಅವರಿಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜತೆಗೆ ಉತ್ತಮ ಸ್ನೇಹ ಸಂಬಂಧ ಇರುವಂತೆ ರೆಕ್ಸ್ ಅವರಿಗೂ ರಷ್ಯಾ ಬಗ್ಗೆ ಭಾರಿ ಒಲವು, ಪುತಿನ್ ಜತೆಗೆ ಉತ್ತಮ ಒಡನಾಟವೂ ಇದೆ. ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ರೆಕ್ಸ್ ಹೆಸರು ಕೇಳಿದ ಕೂಡಲೇ ಅವರ ಈ ರಷ್ಯಾ ಒಲವಿನ ಕುರಿತ ಸುದ್ದಿಗಳೂ ಹರಿದಾಡತೊಡಗಿದ್ದವು.

ಇದು ಸುಳ್ಳು ಸುದ್ದಿಯೇನೂ ಅಲ್ಲ. 64 ವರ್ಷದ ರೆಕ್ಸ್ ಈ ಮೊದಲು ಎಕ್ಸೋನ್ ಮೊಬಿಲ್ ಕಂಪನಿಯನ್ನು ಮುನ್ನಡೆಸುತ್ತಿದ್ದವರು. ಅದು ಅಮೆರಿಕ, ಯೆಮೆನ್, ರಷ್ಯಾಗಳಲ್ಲಿ ವಹಿವಾಟು ನಡೆಸುತ್ತದೆ. ಹೀಗಾಗಿ, ರೆಕ್ಸ್ಗೆ ರಷ್ಯಾ ಅಧ್ಯಕ್ಷ ಪುತಿನ್ ಜತೆಗೆ ನಿಕಟ ಸಂಪರ್ಕವೂ ಇದೆ. ಈ ವಾಣಿಜ್ಯ ಸಂಬಂಧಕ್ಕೆ 1990ರ ದಶಕದಷ್ಟು ಹಳೆಯ ಇತಿಹಾಸವೂ ಇದೆ. 2011ರಲ್ಲಿ ರಷ್ಯನ್ ತೈಲ ಕಂಪನಿ ರೋಸ್ನೆಫ್ಟ್ (ಕಂಪನಿಯ ಮಾಲೀಕತ್ವದಲ್ಲಿ ಶೇಕಡ 75 ರಷ್ಯಾ ಸರ್ಕಾರದ್ದು) ಜತೆಗೆ ಎಕ್ಸೋನ್ ಮೊಬಿಲ್ ವ್ಯವಹಾರ ಕುದುರಿಸಿದ್ದರಿಂದ ಆರ್ಕ್ಟಿಕ್ ಪ್ರದೇಶದ ತೈಲನಿಕ್ಷೇಪದಲ್ಲಿ ಪಾಲುದಾರಿಕೆ ಹೊಂದುವ ಅವಕಾಶ ಪಡೆದಿತ್ತು. ಇದರ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಪುತಿನ್ ಕೂಡ ಭಾಗವಹಿಸಿದ್ದರು. 2013ರಲ್ಲಿ ಎರಡೂ ಕಂಪನಿಗಳು ತಮ್ಮ ಪಾಲುದಾರಿಕೆಯನ್ನು ವಿಸ್ತರಿಸಿದ್ದವು. ಅದೇ ವರ್ಷ ರೆಕ್ಸ್ಗೆ ‘ಆರ್ಡರ್ ಆಫ್ ಫ್ರೆಂಡ್ಷಿಪ್’ ಪುರಸ್ಕಾರವೂ ಪುತಿನ್ರಿಂದ ಸಂದಿತ್ತು. ಇದಾಗಿ, 2014ರಲ್ಲಿ ಕ್ರಿಮಿಯಾವನ್ನು ರಷ್ಯಾ ತನ್ನ ಸುಪರ್ದಿಗೆ ಸೇರಿಸಿದಾಗ, ಅಮೆರಿಕ ಅದಕ್ಕೆ ವಿರೋಧ ವ್ಯಕ್ತಪಡಿಸಿ ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿತ್ತು. ಅಮೆರಿಕ ಸರ್ಕಾರದ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದವರಲ್ಲಿ ರೆಕ್ಸ್ ಕೂಡ ಒಬ್ಬರು ಎಂಬುದನ್ನು ಡಲ್ಲಾಸ್ ಬಿಸಿನೆಸ್ ಜರ್ನಲ್ ವರದಿ ಮಾಡಿತ್ತು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ರೆಕ್ಸ್ ಹೆಸರು ನಾಮನಿರ್ದೇಶನಗೊಂಡ ಬಳಿಕ, ಅವರು ಸೆನೆಟ್ ಕನ್ಫಮೇಷನ್ ಹಿಯರಿಂಗ್(ಅಮೆರಿಕದಲ್ಲಿ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರ ಹೊರತಾಗಿ ಎಲ್ಲ ಕ್ಯಾಬಿನೆಟ್ ಮಟ್ಟದ ಸ್ಥಾನಗಳ ನೇಮಕಕ್ಕೆ ಸೆನೆಟ್ನ ಈ ವಿಚಾರಣೆ/ಸಂದರ್ಶನ ಅವಶ್ಯ)ಗೆ ಜನವರಿ 11-12ರಂದು ಹಾಜರಾಗಿದ್ದರು. ಅಲ್ಲಿ, ರಷ್ಯಾ ಜತೆಗಿನ ವ್ಯಾವಹಾರಿಕ ಸಂಬಂಧಗಳ ಕುರಿತು ಪ್ರಶ್ನಿಸಲಾಗಿತ್ತು. ರಷ್ಯಾದ ಅತಿಕ್ರಮಣದ ಬಗ್ಗೆ ಜಾಗೃತಗೊಳ್ಳುವುದಕ್ಕೆ ಪಶ್ಚಿಮ ರಾಷ್ಟ್ರಗಳಿಗೆ ಕಾರಣವಿದೆ ಎಂದು ಒಪ್ಪಿಕೊಂಡ ರೆಕ್ಸ್, ಪುತಿನ್ ಅವರನ್ನು ಯುದ್ಧಾಪರಾಧಿ ಎಂಬ ವಿಷಯದ ಬಗ್ಗೆ ಪ್ರಶ್ನಿಸುವ ಅವಕಾಶವನ್ನು ನಿರಾಕರಿಸಿದ್ದರು ಎಂಬುದೂ ಗಮನಾರ್ಹ.

ಇನ್ನು, ಟ್ರಂಪ್ ಜತೆಗಿನ ಸ್ನೇಹದ ವಿಚಾರದಲ್ಲಿ ಹೇಳುವುದಾದರೆ ಅದು ಇತ್ತೀಚಿನದು. ಟ್ರಂಪ್ ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ಅರ್ಹರನ್ನು ಆಯ್ಕೆ ಮಾಡಲು ಹುಡುಕಾಟ ನಡೆಸುತ್ತಿದ್ದಾಗ ಕೊನೆಯದಾಗಿ ಕಣ್ಣಿಗೆ ಬಿದ್ದವರು ರೆಕ್ಸ್. ಡಿಸೆಂಬರ್ 6 ಮತ್ತು 10ರಂದು ಟ್ರಂಪ್ ಅವರನ್ನು ಭೇಟಿಯಾಗಿದ್ದರು. ರೆಕ್ಸ್ ಟಿಲ್ಲರ್ಸನ್ ರಾಜಕೀಯ ಇತಿಹಾಸ ಗಮನಿಸಿದರೆ, ಇತ್ತೀಚಿನ ವರ್ಷಗಳಲ್ಲಿ ಅವರು ರಿಪಬ್ಲಿಕನ್ ಪಕ್ಷಕ್ಕೆ ದೇಣಿಗೆ ನೀಡುತ್ತ ಬಂದಿದ್ದಾರೆ. ಫೆಡರಲ್ ಇಲೆಕ್ಷನ್ ಕಮಿಷನ್ ದಾಖಲೆಗಳ ಪ್ರಕಾರ, ಮಿಟ್ ರೊಮ್ನಿ ಅವರ ಅಧ್ಯಕ್ಷೀಯ ಚುನಾವಣಾ ನಿಧಿಗೆ 2012ರಲ್ಲಿ 50,000 ಡಾಲರ್, 2015ರ ಆಗಸ್ಟ್ನಲ್ಲಿ ರೈಟ್ ಟು ರೈಸ್ಗೆ 5,000 ಡಾಲರ್ ದೇಣಿಗೆ ನೀಡಿದ್ದರು. ಆದರೆ, 2016ರ ಚುನಾವಣೆಗೆ ದೇಣಿಗೆ ನೀಡಿದ ದಾಖಲೆಗಳಿಲ್ಲ. ಆದರೆ, ಟ್ರಂಪ್ ಹಾಗೂ ಎಕ್ಸೋನ್ ಸಂಬಂಧ ಹಳೆಯದು. ಎಕ್ಸೋನ್ ಮೊಬಿಲ್ನ ಆಸ್ತಿಗಳ ಪೈಕಿ ಟ್ರಂಪ್ 50,000 ದಿಂದ ಒಂದು ಲಕ್ಷ ಡಾಲರ್ನಷ್ಟು ಪಾಲು ಹೊಂದಿದ್ದಾರೆ.

ರೆಕ್ಸ್ ವೈಯಕ್ತಿಕ ಬದುಕಿನತ್ತ ನೋಡಿದರೆ ಟೆಕ್ಸಾಸ್ನ ವಿಚಿತಾ ಫಾಲ್ಸ್ನಲ್ಲಿ ಪ್ಯಾಟಿ ಸ್ಯೂ ಮತ್ತು ಬಾಬ್ಬಿ ಜೋ ಟಿಲ್ಲರ್ಸನ್ ಅವರ ಪುತ್ರನಾಗಿ 1952ರ ಮಾರ್ಚ್ 23ರಂದು ಜನನ. ರೆಕ್ಸ್ ವಾಯ್ನೆ ಟಿಲ್ಲರ್ಸನ್ ಅವರ ಪೂರ್ಣ ಹೆಸರು. ಶಾಲಾ ಶಿಕ್ಷಣದ ವೇಳೆ ಅಮೆರಿಕದ ಬಾಯ್ ಸ್ಕೌಟ್ಸ್ನಲ್ಲಿ ತೊಡಗಿಸಿಕೊಂಡು ಈಗಲ್ ಸ್ಕೌಟ್ ತನಕದ ರ್ಯಾಂಕ್ ಪಡೆದಿದ್ದರು. 1975ರಲ್ಲಿ ಆಸ್ಟಿನ್ನ ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಸಿವಿಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದರು. ಇದಾಗಿ, ಎಕ್ಸೋನ್ವೊಬಿಲ್ ಕಂಪನಿಯಲ್ಲಿ ಪ್ರೊಡಕ್ಷನ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಹಂತ ಹಂತವಾಗಿ ಬಡ್ತಿ ಪಡೆದ ಅವರು 1989ರಲ್ಲಿ ಜನರಲ್ ಮ್ಯಾನೇಜರ್ ಆದರು. 1992ರಲ್ಲಿ ಎಕ್ಸೋನ್ ಕಾರ್ಪೇರೇಷನ್ನ ಪ್ರೊಡಕ್ಷನ್ ಅಡ್ವೈಸರ್ ಆದರು. 1998ರಲ್ಲಿ ಎಕ್ಸೋನ್ ವೆಂಚರ್ಸ್ನ ಉಪಾಧ್ಯಕ್ಷ, ಎಕ್ಸೋನ್ ನೆಫ್ಟೆಗ್ಯಾಸ್ನ ಅಧ್ಯಕ್ಷರಾಗಿ ರಷ್ಯಾದಲ್ಲಿ ಕಂಪನಿಯ ವಹಿವಾಟು ವಿಸ್ತರಣೆ ಹೊಣೆಗಾರಿಕೆ ನಿಭಾಯಿಸಿದರು. 2001ರ ಆಗಸ್ಟ್ನಲ್ಲಿ ಎಕ್ಸೋನ್ ಮೊಬಿಲ್ ಕಾರ್ಪೇರೇಷನ್ನ ಹಿರಿಯ ಉಪಾಧ್ಯಕ್ಷರಾಗಿ ಬಡ್ತಿ ಪಡೆದ ಅವರು, 2006ರಲ್ಲಿ ಕಂಪನಿಯ ಸಿಇಒ ಆದರು. ಇದು ಬಿಟ್ಟರೆ, ಸಾರ್ವಜನಿಕ ಸ್ವಾಮ್ಯದ ಕೆಲಸ ಕಾರ್ಯಗಳ ಅನುಭವ ಅವರಿಗಿಲ್ಲ. 2015ರಲ್ಲಿ ಫೋರ್ಬ್ಸ್ ನಿಯತಕಾಲಿಕೆಯ ಜಗತ್ತಿನ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ 20ನೇ ಸ್ಥಾನ ಪಡೆದಿದ್ದರು.

ಇನ್ನು ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ, ರೆಂಡಾ ಸ್ಟೀಫನ್ ಕ್ಲೈರ್ ಅವರನ್ನು ವಿವಾಹವಾಗಿದ್ದು ನಾಲ್ವರು ಮಕ್ಕಳಿದ್ದಾರೆ. ಪ್ರೊಟೆಸ್ಟಂಟ್ ಚರ್ಚ್ನ ರೀತಿ ರಿವಾಜನ್ನು ಅನುಸರಿಸುವವರಾಗಿದ್ದು, ನ್ಯಾಷನಲ್ ಅಸೋಸಿಯೇಷನ್ ಆಫ್ ಕಾಂಗ್ರೆಷನಲ್ ಕ್ರಿಶ್ಚಿಯನ್ ಚರ್ಚಸ್ನ ಸದಸ್ಯತ್ವ ಹೊಂದಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಅಧಿಕಾರ ಸ್ವೀಕರಿಸಿರುವ ರೆಕ್ಸ್ ಎದುರು ಹಲವು ಸವಾಲುಗಳಿವೆ. ಟ್ರಂಪ್ ಸಂಪುಟದಲ್ಲಿ ಬಹುತೇಕರು ರಾಜಕೀಯ, ರಾಜತಾಂತ್ರಿಕ ಬದುಕಿನ ಅನುಭವ ಹೊಂದಿದವರಲ್ಲ. ವಾಣಿಜ್ಯ, ಉದ್ಯಮ ವಲಯದ ಸ್ನೇಹ ಸಂಬಂಧ ಹೊಂದಿದವರೇ ಆದ್ದರಿಂದ ಜಗತ್ತಿನ ಇತರೆ ದೇಶಗಳೊಂದಿಗಿನ ಸಂಕೀರ್ಣ ದ್ವಿಪಕ್ಷೀಯ ಬಾಂಧವ್ಯವನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *