ಒಮ್ಮೊಮ್ಮೆ ಹೀಗೂ ಆಗುವುದು..

ಪತ್ರಕರ್ತನಾಗಿ ಸಮಾಜವನ್ನು ನೋಡೋದಕ್ಕೂ, ಜನಸಾಮಾನ್ಯನಾಗಿ ಸಮಾಜವನ್ನು ನೋಡೋದಕ್ಕೆ ಬಹುದೊಡ್ಡ ವ್ಯತ್ಯಾಸವಿದೆ. ಹಾಗಾಗಿ ನನಗೆ ಇದು ಹೊಸ ಅನುಭವ. ಅದೊಂದು ಬುಧವಾರ ಸಂಜೆ ಆಸ್ಪತ್ರೆಯ ಮೇಲಧಿಕಾರಿಯೊಬ್ಬರು ಫೋನ್ ಮಾಡಿ,
ಈ ಶನಿವಾರ ಹ್ಯೂಮರಿಸ್ಟ್ ವೈಎಂಎನ್ ಮೂರ್ತಿ ಬರ್ತಿದ್ದಾರೆ. ಅವರನ್ನು ಎಲ್ಲರಿಗೂ ಪರಿಚಯಿಸಲು ನನಗೊಂದು ಸ್ವಲ್ಪ ನೆರವು ಬೇಕು ಅಂತ ಹೇಳಿದ್ರು. ಸರಿ ಎಂದು ಹೇಳಿದ್ದಾಗಿದೆ.

ವಿಕ್ರಂ ಆಸ್ಪತ್ರೆಯಲ್ಲಿ ಶ್ರೀಯುತ ವೈಎನ್‌ಎಂ ಮೂರ್ತಿ…

ಹೆಸರೇನೋ ಚಿರಪರಿಚಿತ. ಆದರೆ, ವೈಎಂಎನ್ ಮೂರ್ತಿ ಅವರ ಹಿನ್ನೆಲೆ, ಸಾಧನೆ ಬಗ್ಗೆ ಏನೇನೋ ಗೊತ್ತಿರಲಿಲ್ಲ. ಸುಮ್ಮನೆ ಗೂಗಲ್ ಸರ್ಚ್ ಮಾಡತೊಡಗಿದೆ. ವೈಎಂಎನ್ ಮೂರ್ತಿ ಎಂದು ಟೈಪ್ ಮಾಡಿದಾಕ್ಷಣ ಕೆಲವು ಪುಟಗಳು ತೆರೆದುಕೊಂಡವು. ಆದರೆ ಎಲ್ಲೂ ವೈಎಂಎನ್ ಮೂರ್ತಿ ಅವರ ಪ್ರೊಫೈಲ್ ಸಿಗಲಿಲ್ಲ. ಒಂದೆರಡು ಸುದ್ದಿಪುಟಗಳು ತೆರೆದುಕೊಂಡವು. ಅದರಲ್ಲಿ ಮಾನವೀಯತೆ ಮತ್ತು ಹಾಸ್ಯದ ಕುರಿತು ಮೂರ್ತಿಯವರು ಹೆಚ್ಚಿನ ಆದ್ಯತೆ ಕೊಡ್ತಿದ್ದಾರೆ ಅನ್ನೋದು ಮನದಟ್ಟಾಯಿತು. ಹಾಗೆಯೇ, ಡಾ.ರಾಜ್‌ಕುಮಾರ್ ನಿಧನರಾದ ವೇಳೆ ಉಂಟಾದ ಗಲಭೆಯಲ್ಲಿ ಮೃತಪಟ್ಟ ಇಬ್ಬರು ಪೊಲೀಸ್ ಪೇದೆ ಕುಟುಂಬಕ್ಕೆ ಧನಸಹಾಯ ಮಾಡಿದ ಫೋಟೋ ಸುದ್ದಿ ಕೂಡಾ ಕಂಡು ಬಂತು.ಹ್ಯೂಮರ್ ಕ್ಲಬ್ ಇಂಟರ್ ನ್ಯಾಷನಲ್ ಕೂಡಾ ಶ್ರೀಯುತರ ಕನಸಿನ ಕೂಸು. ಇದೀಗ ಬೃಹದಾಕಾರಾವಾಗಿ ಬೆಳೆದಿದೆ. ಇವಿಷ್ಟನ್ನೇ ಇಟ್ಟುಕೊಂಡು ಪರಿಚಯ ಮಾಡಲು ಸಿದ್ಧತೆ ನಡೆಸಲಾಯಿತು.

ಶನಿವಾರ ಬಂದೇ ಬಿಡ್ತು. ವಿಕ್ರಂ ಆಸ್ಪತ್ರೆಯ ಆವರಣದಲ್ಲಿ ನಾವೆಲ್ಲರೂ ಶ್ರೀಯುತ ವೈಎಂಎನ್ ಮೂರ್ತಿ ಅವರ ಆಗಮನಕ್ಕಾಗಿ ಕಾಯುತ್ತಿದ್ದೆವು. ಅದುವರೆಗೆ, ಬಹುಶಃ ಅವರ ಕಾರ್ಯಕ್ರಮದಲ್ಲಿ ನಾವ್ಯಾರು ಪಾಲ್ಗೊಂಡಿರಲೇ ಇಲ್ಲ. ಬಿಳಿ ಬಣ್ಣದ ಮಾರುತಿ ಎಸ್ಟೀಮ್ ಕಾರು ಆಸ್ಪತ್ರೆ ಆವರಣ ಪ್ರವೇಶಿಸಿತು. ಸಣಕಲು ಶರೀರದ ವ್ಯಕ್ತಿಯೊಬ್ಬರು ಅದನ್ನು ಡ್ರೈವ್ ಮಾಡುತ್ತಿದ್ದರು. ಅವರೇ ವೈಎಂಎನ್ ಮೂರ್ತಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿ ಬರಲಿಲ್ಲ. ಪಾರ್ಕಿಂಗ್ ವ್ಯವಸ್ಥೆ ಇನ್ನೊಂದು ಕಡೆ ಇದ್ದುದರಿಂದ ಸಾಮಾನ್ಯವಾಗಿ ಹ್ಯಾಪಿ ಟು ಹೆಲ್ಪ್ ವಿಭಾಗದವರು ಕಾರಿನ ಕೀ ಪಡೆದು ಅದನ್ನು ಪಾರ್ಕಿಂಗ್ ಮಾಡಿ ಬರುವುದು ವಿಕ್ರಂ ಆಸ್ಪತ್ರೆಯ ವಾಡಿಕೆ. ಆದರೆ, ಇಲ್ಲಿ ಹಾಗಾಗಲಿಲ್ಲ. ಒಮ್ಮೆ ಇಳಿದ ಮೂರ್ತಿಯವರು, ಮತ್ತೆ ತಾವೇ ಕುಳಿತು ಅಲ್ಲೇ ಮುಂದೆ ಪಾರ್ಕ್ ಮಾಡಿದರು.
ಅಂದ ಹಾಗೆ ಮೂರ್ತಿಯವರ ವಯಸ್ಸು ಎಷ್ಟು ಗೊತ್ತೆ ? ೮೬ ವರ್ಷ ವಯಸ್ಸಿನ ತರುಣ. ಕಾರು ಪಾರ್ಕ್ ಮಾಡುವಲ್ಲಿಂದಲೇ ಎಲ್ಲರ ಗಮನ ಸೆಳೆದ ಮೂರ್ತಿಯವರು, ಎಲ್ಲರಿಗೂ ಕೈ ಜೋಡಿಸಿ ನಮಸ್ಕರಿಸಿ ಮುಂದೆ ಸಾಗುತ್ತಿದ್ದರು. ವಿಕ್ರಂ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಮೂಲಕ ಒಳಪ್ರವೇಶಿಸುತ್ತಿದ್ದಂತೆ ಹಂಬಲ್,ಹ್ಯುಮಾನೆ,ಹೋನೆಸ್ಟ್ ತಂಡದ ಸದಸ್ಯರು ಆರತಿ ಬೆಳಗಿದರೆ, ಆಸ್ಪತ್ರೆಯ ಜನರಲ್ ಮ್ಯಾನೇಜರ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಆಸ್ಪತ್ರೆಯಲ್ಲಿನ ಉತ್ತಮ ವಾತಾವರಣ ಕಂಡು ಖುಷಿ ವ್ಯಕ್ತಪಡಿಸಿದ ಮೂರ್ತಿಯವರು, ಬರೋಬ್ಬರಿ ಒಂದು ತಾಸು ಹಾಸ್ಯ ಮತ್ತು ಮಾನವೀಯತೆ ಬಗ್ಗೆ  ಮಾತನಾಡಿದರು.. ನಗಿಸಿದರು.. ಕೊನೆಯಲ್ಲೊಂದು ಜೀವನಾನುಭವದ ಮಾತು ಹೇಳಿದರು. ಅದು ಎಂಥವರ ಮನಸ್ಸನ್ನೂ ಮುಟ್ಟುವಂತಿತ್ತು. ಅದನ್ನು ಇಲ್ಲಿ ಅವರ ಮಾತಿನಲ್ಲೇ ಪ್ರಸ್ತಾಪಿಸ ಬೇಕು.
“ಕೆಲದಿನಗಳ ಹಿಂದೆ ನಡೆದ ಸತ್ಯ ಘಟನೆ ಇದು. ಇಂದಿನಂತೆ ಅಂದು ಕೂಡಾ ನಾನು ಕಾರ್ ಡ್ರೈವ್ ಮಾಡುತ್ತಿದ್ದೆ. ನಾಲ್ವರು ಕಾಲೇಜು ಯುವಕರು ನನ್ನ ಕಾರನ್ನು ಓವರ್ ಟೇಕ್ ಮಾಡುತ್ತಾ, “ಏಯ್ ಮುದುಕಾ.. ನಿಧಾನವಾಗಿ ಗಾಡಿ ಓಡಿಸು..” ಎಂದು ಟೀಸ್ ಮಾಡಿ ಮುಂದೆ ಹೋದರು. ಮುಂದಿನ ಸಿಗ್ನಲ್ ಬರುವಷ್ಟರಲ್ಲಿ ಅವರನ್ನು ಓವರ್ ಟೇಕ್ ಮಾಡಿ, ಗಾಡಿ ನಿಲ್ಲಿಸುವಂತೆ ಸೂಚಿಸಿದೆ. ಅವರು ಗಾಡಿ ನಿಲ್ಲಿಸಿ, ಏನು ? ಏನು ಎಂದು ಅಬ್ಬರಿಸುತ್ತಾ ಬಳಿ ಬಂದರು. ತಕ್ಷಣವೇ ನಾನು ಅವರನ್ನು ಕೇಳಿದೆ.
ನಾನು ಒಂದು ಮಾತು ಹೇಳಲಾ…
ಹೇಳಿ ತಾತ…
ನಾವು ಮುದುಕರಾಗೋದೇ ಬೇಡ.. ವೃದ್ಧಾಪ್ಯ ಬರದಿರಲಿ.. ಎಂದು ಹಾರೈಸುತ್ತೇನೆ.. ನೀವು ಕೂಡಾ ಹಾಗೆಯೇ ದೇವರಲ್ಲಿ ಬೇಡಿಕೊಳ್ಳಿ..
ಇಷ್ಟು ಹೇಳಿದಾಕ್ಷಣ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದಾಯಿತು.. ಸುಮ್ಮನೇ ನಕ್ಕು ಮತ್ತೆ ಕಾರ್ ಹತ್ತಿ ಡ್ರೈವ್ ಮಾಡತೊಡಗಿದೆ.”
ಮೂರ್ತಿಯವರ ಈ ಮಾತು ಕೇಳಿದ ಆಸ್ಪತ್ರೆ ಸಿಬ್ಬಂಧಿ ಕೂಡಾ ಒಂದು ಕ್ಷಣ ಮೂಕರಾಗಿದ್ದು ಸುಳ್ಳಲ್ಲ.. ಇಂಥ ಮಾತಿನಲ್ಲಿ ಹಾಸ್ಯ ಇದ್ದರೂ, ಅದು ಜೀವನಕ್ಕೊಂದು ಪಾಠ ಹೇಳುವಂತಹ ಚಾಟಿ ಏಟಿನ ಗುಣ ಹೊಂದಿದೆ ಅನ್ನೋದು ವಾಸ್ತವ..

“RESPECT AGE TODAY, AS YOU WILL BE AGED TOMORROW…”

– Y.M.N. MURTHY

0 thoughts on “ಒಮ್ಮೊಮ್ಮೆ ಹೀಗೂ ಆಗುವುದು..

  1. ನಾವೆಲ್ಲ ಮುದುಕರಾಗೋಕೆ ಸಿಕ್ಕಾಪಟ್ಟೆ ಸಮಯ ಇದೆ ಸರ್‌. ಅಷ್ಟರಲ್ಲಿ ಈ ಜಗತ್ತು ಏನಾಗಿರತ್ತೊ ಗೊತ್ತಿಲ್ಲ. ಸೋ ಡೋಂಟ್‌ ವರಿ! ಒಳ್ಳೆ ಬರಹ…
    -ಕೋಡ್ಸರ

Leave a Reply

Your email address will not be published. Required fields are marked *