ಓಡಿಸಿ ನೋಡು.. ‘ಅಂಡಾಕೃತಿ’ ಕಾರು !

Image Courtesy – Eggasus

ಸಣ್ಣ ಕಾರು ಎಂದರೆ ಎಷ್ಟು ಸಣ್ಣದಿರಬಹುದು.. ? ಕಾರು ಎಂದರೆ ನಾಲ್ಕು ಜನ ಅಥವ ಕನಿಷ್ಟ ಇಬ್ಬರು ಪ್ರಯಾಣಿಸುವಂತೆ ಇರಬೇಕು ಅಲ್ವಾ? ನಮ್ಮ ಊರಿನ ರಸ್ತೆಯಲ್ಲಿ ರೇವಾ ಎಂಬ ಪರಿಸರ ಸ್ನೇಹಿ ಪುಟಾಣಿ ಕಾರು ಓಡಾಡುವುದನ್ನು ನೋಡಿದ್ದೇವೆ.. ಇದಕ್ಕಿಂತಲೂ ಸಣ್ಣ ಕಾರು ಇದೆ ಎಂದರೆ ನಂಬುತ್ತೀರಾ..?
ನಂಬಲೇ ಬೇಕು.. ಅರೆ ! ಇದೇನಿದು ಕೋಳಿಮೊಟ್ಟೆಯನ್ನು ಲಂಬವಾಗಿ ನಿಲ್ಲಿಸಿದಂತಿದೆಯಲ್ಲಾ.. ಎಂದು ಹುಬ್ಬೇರಿಸಬೇಡಿ. ಇದು ಭವಿಷ್ಯದ ಪರಿಸರ ಸ್ನೇಹಿ ಕಾರು.. ಇದರ ಹೆಸರು ಎಗ್‌ಸಸ್.. ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಕಾರು. ನೋಡೋದಕ್ಕೆ ಅಂತರಿಕ್ಷ ವಾಹನದಂತಿದೆ.. ಎಲ್ಲ ಕಾರುಗಳಂತೆ ಇದಕ್ಕೆ ನಾಲ್ಕು ಚಕ್ರಗಳಿಲ್ಲ.. ಆಟೋ ರಿಕ್ಷಾದಂತೆ ಕೇವಲ ಮೂರು ಚಕ್ರ. ಅತ್ತ ಕಾರೂ ಅಲ್ಲದ, ಇತ್ತ ರಿಕ್ಷಾವೂ ಅಲ್ಲದ, ಹೋಗಲಿ ಬೈಕ್ ಎಂದೂ ಹೇಳಲಾಗದ ಮೊಟ್ಟೆಯಾಕಾರದ ಈ ವಾಹನದಲ್ಲಿ ಒಬ್ಬ ಮಾತ್ರ ಪ್ರಯಾಣಿಸಬಹುದು. ಆತನೇ ಚಾಲಕನಾಗಿದ್ದರೆ ಪಯಣ ಸುಖಕರ. ಯಾವುದೇ ಹವಾಮಾನ ಇದ್ದರೂ, ಮಳೆ, ಗಾಳಿ ಏನೇ ಇದ್ದರೂ ಸುರಕ್ಷಿತವಾಗಿ ಈ ವಾಹನ ಚಲಾಯಿಸಬಹುದು.
ಅಂಡಾಕೃತಿಯ ಈ ವಾಹನಕ್ಕೆ ತ್ರಿಚಕ್ರ ವಾಹನಕ್ಕೆ ಅಳವಡಿಸುವ ವಿದ್ಯುತ್ ಮೋಟಾರ್ ಅಳವಡಿಸಲಾಗಿದೆ. ಇದು, ಗರಿಷ್ಠ ೪೦ ಕಿ.ಮೀ. ವೇಗದಲ್ಲಿ ಒಟ್ಟು ೮೦ ಕಿಲೋ ಮೀಟರ್ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ. ಟ್ರಾಫಿಕ್ ಕಿರಿ ಕಿರಿ ಹೆಚ್ಚಾಗಿರುವ ನಗರಗಳಿಗೆ ಈ ಕಾರು ಸರಿಯಾದ ಆಯ್ಕೆ ಎಂಬುದು ಎಗ್‌ಸಸ್ ತಂಡದ ಅಭಿಮತ. ಯಾಕೆಂದರೆ, ಈ ಕಾರಿನ ವಿನ್ಯಾಸ ವಿಶಿಷ್ಟವಾಗಿದೆ. ಬೈಕ್ ಅಥವ ಯಾವುದೇ ದ್ವಿಚಕ್ರ ವಾಹನಕ್ಕಿಂತಲೂ ಕಡಿಮೆ ಪಾರ್ಕಿಂಗ್ ಜಾಗ ಸಾಕು ಇದಕ್ಕೆ. ದೊಡ್ಡ ದೊಡ್ಡ ಸಂಸ್ಥೆಗಳ ಕ್ಯಾಂಪಸ್‌ನಲ್ಲಿ ಸುತ್ತಾಡೋದಕ್ಕೂ ಇದು ಹೇಳಿ ಮಾಡಿಸಿದಂತಿದೆ. ಸದ್ಯಕ್ಕೆ ಇದರ ಬೆಲೆ ೫ ಸಾವಿರ ಅಮೆರಿಕನ್ ಡಾಲರ್. ವಿಶ್ವಾದ್ಯಂತ ಇದಕ್ಕೆ ಮಾರುಕಟ್ಟೆ ಸ್ಟೃಸಲು ಪ್ರಯತ್ನಿಸುತ್ತಿದ್ದು, ಬೇರೆ ಬೇರೆ ದೇಶಗಳಿಂದಲೂ ಬೇಡಿಕೆ ಇದೆ ಎನ್ನುತ್ತಿದ್ದಾರೆ ಎಗ್‌ಸಸ್ ಕಂಪನಿಯವರು. ಅಂದರೆ, ಸದ್ಯದಲ್ಲೇ ಇದು ಭಾರತದ ರಸ್ತೆಗಳಲ್ಲಿ ಓಡಲಿದೆ ಎಂದಾಯಿತು..

Source:     http://www.eggasus.com/

Leave a Reply

Your email address will not be published. Required fields are marked *