ಕಟ್ಟಾಸೆಗೆ ಬಲಿ ಬಿದ್ದು ಕೆಡದಿರಿ…

ಕಳೆದೊಂದು ವಾರದಿಂದೀಚೆಗೆ ಕ್ಲೆಪ್ಟೋಮೇನಿಯಾ ಎಂಬ ಮಾನಸಿಕ ಕಾಯಿಲೆಯದ್ದೇ ಸುದ್ದಿ.. ವಿಐಪಿಗಳು, ಸೆಲೆಬ್ರಿಟಿಗಳೇಕೆ ಕಳ್ಳತನಕ್ಕೆ ಇಳಿಯುತ್ತಾರೆ? ಕ್ಲೆಪ್ಟೋಮೇನಿಯಾ ಕಳ್ಳತನದ ವ್ಯಾಧಿಯೇ ಹಾಗಾದರೆ? ಅಥವಾ ಕಳ್ಳತನವನ್ನು ಸಮರ್ಥಿಸುವುದಕ್ಕೆ ಇದೊಂದು ಕಳ್ಳನೆಪವೇ? ಇತ್ಯಾದಿ ಪ್ರಶ್ನೆಗಳ ಬೆನ್ನೇರಿದಾಗ ಗಮನಕ್ಕೆ ಬಂದ ವಿಚಾರ `ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್’ ಎಂಬ ಮಾನಸಿಕ ಆರೋಗ್ಯ ಸಮಸ್ಯೆ.

—-

ವಿಜಯವಾಣಿ ಪತ್ರಿಕೆಯ ಲಲಿತಾ ಪುರವಣಿಯಲ್ಲಿ ಮೇ 6ರ ಸಂಚಿಕೆಯ ಸುಖಿ ಪುಟದಲ್ಲಿ ಪ್ರಕಟವಾದ ಲೇಖನ
ವಿಜಯವಾಣಿ ಪತ್ರಿಕೆಯ ಲಲಿತಾ ಪುರವಣಿಯಲ್ಲಿ ಮೇ 6ರ ಸಂಚಿಕೆಯ ಸುಖಿ ಪುಟದಲ್ಲಿ ಪ್ರಕಟವಾದ ಲೇಖನ

ಕ್ಲೆಪ್ಟೋಮೇನಿಯಾ, ಇಂಟರ್‍ಮಿಟೆಂಟ್ ಎಕ್ಸ್ ಪ್ಲೋಸಿವ್ ಡಿಸಾರ್ಡರ್, ಡೊಮೆಸ್ಟಿಕ್ ವಯೋಲೆನ್ಸ್, ಪೈರೋಮೇನಿಯಾ, ಪ್ಯಾತಲಾಜಿಕಲ್ ಗ್ಯಾಂಬ್ಲಿಂಗ್, ಟ್ರಿಕೋಟಿಲೋಮೇನಿಯಾ ಮೊದಲಾದ ದೊಡ್ಡ ದೊಡ್ಡ ವೈದ್ಯಕೀಯ ಭಾಷೆಯ ಪದಗಳೆಲ್ಲವೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದವುಗಳು ಎಂದರೆ ಅಚ್ಚರಿಪಡಬೇಡಿ. ಇವುಗಳ ಮೂಲ ಕಾರಣವೂ ಒಂದೇ. ಹೀಗಾಗಿ ಇವೆಲ್ಲವನ್ನೂ ಒಟ್ಟಾಗಿ ಮೂರೇ ಶಬ್ದದಲ್ಲಿ `ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್’ ಎನ್ನುತ್ತಾರೆ.
ಇಂಪಲ್ಸ್ ಎಂಬುದು ಬಹುತೇಕ ಸಂದರ್ಭಗಳಲ್ಲಿ ದಿಢೀರಾಗಿ ಹುಟ್ಟುವ ಮನಸ್ಸಿನ ಪ್ರಚೋದನೆ ಅಥವಾ ಕಟ್ಟಾಸೆ ಇದು. ಮನುಷ್ಯ ಸಹಜವಾದ ಆಲೋಚನಾ ಪ್ರಕ್ರಿಯೆ ಇದು ಎಂದು ಹೇಳಬಹುದು. ಆದರೆ, ಅಗತ್ಯವಿಲ್ಲದೇ ಈ ಕಟ್ಟಾಸೆ ಕೆಲವೊಮ್ಮೆ ಸಮಸ್ಯೆಗಳನ್ನು ಅರ್ಥಾತ್ ಗೀಳಿನ ಪ್ರವೃತ್ತಿಯಿಂದಾಗುವ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇನ್ನೂ ಸರಳವಾಗಿ ಹೇಳಬೇಕು ಎಂದರೆ ಈ ಕಟ್ಟಾಸೆ ಎನ್ನುವಂಥದ್ದು ಸರಿ – ತಪ್ಪುಗಳ ಜಿಜ್ಞಾಸೆಯ ನಡುವೆ ಮಾಡುತ್ತಿರುವ ಕೆಲಸ ತಪ್ಪು ಎಂಬ ಅರಿವಿದ್ದರೂ ಅದನ್ನೇ ಮಾಡಿ ಬಳಿಕ ಪಶ್ಚಾತಾಪ ಪಡುವ ಪ್ರವೃತ್ತಿ ಎಂದರೆ
ತಪ್ಪಾಗಲಾರದು. ಕಂಟ್ರೋಲ್ ಎಂದರೆ ಎಲ್ಲರಿಗೂ ಗೊತ್ತಿರುವಂತೆ ನಿಯಂತ್ರಣದ ವಿಚಾರ. ಇಂತಹ ಕಟ್ಟಾಸೆಯ ಪ್ರಚೋದನೆ ಉಂಟಾದಾಗ ಅದನ್ನು ನಿಯಂತ್ರಿಸುವುದು ಕೂಡಾ ಸವಾಲಿನ ವಿಚಾರ. ಬಹುತೇಕ ಮಾನಸಿಕ ಸಮಸ್ಯೆಗಳು ಮನಸ್ಸಿನ ಪ್ರಚೋದನೆಯನ್ನು ಹತ್ತಿಕ್ಕಲಾಗದೇ ಉಂಟಾಗುವಂಥದ್ದು. ಇಂತಹ ಸಂದರ್ಭದಲ್ಲಿ ಮನುಷ್ಯನ ಕ್ರಿಯೆಗಳು `ವಿವೇಚನಾರಹಿತ’ವಾಗಿರುತ್ತವೆ. ಹೀಗಾಗಿ ಇದನ್ನು ಮಾನಸಿಕ ಆರೋಗ್ಯದಲ್ಲಾಗುವ ವ್ಯತ್ಯಾಸ ಎಂದೇ ಗುರುತಿಸಲಾಗುತ್ತದೆ.

ಕ್ಲೆಪ್ಟೋಮೇನಿಯಾ: ವಸ್ತುವಿನ ಮೌಲ್ಯವನ್ನು ನೋಡದೇ, ಕೇವಲ ಮನಸ್ಸಿನ ಸಂತೋಷಕ್ಕಾಗಿ ಕದಿಯುವ ಪ್ರವೃತ್ತಿ ಈ ಮಾನಸಿಕ ಆರೋಗ್ಯ ಸಮಸ್ಯೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಸಿಟ್ಟು ಅಥವಾ ಸೇಡು ತೀರಿಸುವುದಕ್ಕಾಗಿ ವಸ್ತವನ್ನು ಕಳವು ಮಾಡುವುದಲ್ಲ. ಕಳವು ಮಾಡುವುದಕ್ಕೆ ಮುನ್ನ ವ್ಯಕ್ತಿಯಲ್ಲಿ ಒಂದು ರೀತಿಯ ಒತ್ತಡ ಅಥವಾ ಟೆನ್ಶನ್ ಉಂಟಾಗಿರುತ್ತದೆ. ಕಳ್ಳತನ ಮಾಡಿದ ಕೂಡಲೇ ಆ ವ್ಯಕ್ತಿಯಲ್ಲಿ ಸಂತೃಪ್ತ ಭಾವ ಕಂಡುಬರುತ್ತದೆ. ಹಾಗೆಂದು ಕಳ್ಳತನದ ಎಲ್ಲ ಪ್ರಕರಣಗಳೂ ಕ್ಲೆಪ್ಟೋಮೇನಿಯಾ ಎಂದು ಹೇಳುವುದಕ್ಕಾಗದು.
ಕೆಲವರು ಕಾನೂನನ್ನು ನಿರ್ಲಕ್ಷಿಸಿ ಕಳ್ಳತನ ಮಾಡಬಹುದು. ಇಂತಹ ಪ್ರಕರಣದಲ್ಲಿ ಭಾಗಿಯಾದವರು ಮಕ್ಕಳಾದರೆ ಅದು ಅವರ ನಡವಳಿಕೆಯ ಸಮಸ್ಯೆ, ದೊಡ್ಡವರಾದರೆ ಸಮಾಜ ವಿರೋಧಿ ವ್ಯಕ್ತಿತ್ವದ ಸಮಸ್ಯೆ ಎನ್ನಬೇಕಾಗುತ್ತದೆ. ಇನ್ನು ಕೆಲವರು ಹತಾಶರಾಗಿ ಕಳ್ಳತನಕ್ಕಿಳಿಯಬಹುದು. ಇಂಥ ಕೆಲಸ ಮಾಡಿದವರಲ್ಲಿ ನಡತೆಯಲ್ಲಿನ ಸಮಸ್ಯೆ ಮತ್ತು ಹೊಂದಾಣಿಕೆಯ ಭಾವದ ಕೊರತೆ ಇರಬಹುದು. ಹೀಗಾಗಿ ಎಲ್ಲ ಕಳ್ಳತನದ ಪ್ರಕರಣಗಳನ್ನೂ ಇದೇ ಮಾನಸಿಕ ಸಮಸ್ಯೆ ಎನ್ನಲಾಗದು.
ಕ್ಲೆಪ್ಟೋಮೇನಿಯಾ ಅತ್ಯಂತ ಅಪರೂಪದ ಸಮಸ್ಯೆಯಾಗಿದ್ದು, ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಮನಸ್ಸಿನ ಹಿಡಿತ ಮೀರಿದ ಅಂದರೆ ವಿವೇಚನಾ ರಹಿತ ಕ್ರಿಯೆಯಾಗಿದ್ದು, ವೈದ್ಯಕೀಯ ಭಾಷೆಯಲ್ಲಿ ಇದನ್ನು `ಇಗೋ ಡೈಸ್ಟೋನಿಕ್’ ಎನ್ನುತ್ತಾರೆ ಮನಶಾಸ್ತ್ರಜ್ಞರು.

ಇಂಟರ್‍ಮಿಟೆಂಟ್ ಎಕ್ಸ್ ಪ್ಲೋಸಿವ್ ಡಿಸಾರ್ಡರ್: ಈ ಸಮಸ್ಯೆಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿ ಆಸ್ತಿಪಾಸ್ತಿ ಹಾನಿ ಮಾಡುವಂಥದ್ದು ಅಥವಾ ಇತರರ ಮೇಲೆ ದೈಹಿಕ ಹಲ್ಲೆ ನಡೆಸುತ್ತಾನೆ. ವಿಶೇಷವಾಗಿ ಇಂತಹ ಸಮಸ್ಯೆಗಳಿಂದಾಗುವ ಪರಿಣಾಮವೆಂದರೆ, ಹಲ್ಲೆಗೀಡಾದವರು ಪೊಲೀಸರಿಗೆ ದೂರು ನೀಡಿದಾಗ ಹಲ್ಲೆ ಮಾಡಿದ ವ್ಯಕ್ತಿ ಕಾನೂನು ಸಮಸ್ಯೆಗಳಿಗೆ ಸಿಲುಕುತ್ತಾನೆ. ಕೌಟುಂಬಿಕ ಹಿಂಸಾಚಾರ ಅಥವಾ ಡೊಮೆಸ್ಟಿಕ್ ವಯೋಲೆನ್ಸ್ ಕೂಡಾ ಇದೇ ವಿಭಾಗಕ್ಕೆ ಸೇರುತ್ತದೆ. ಆಕ್ರೋಶ, ಸಿಟ್ಟು ಹೆಚ್ಚಾಗಿರುವ ಇಂಥ ಸನ್ನಿವೇಶಗಳಲ್ಲಿ ಮನೋ ನಿಯಂತ್ರಣ ಬಹಳ ಮುಖ್ಯ.

ಪೈರೋಮೇನಿಯಾ: ಕೆಲವು ಮಕ್ಕಳು ಖುಷಿಗಾಗಿ ಮನೆ ಸಮೀಪ ಕಸ ಕಡ್ಡಿಗಳಿಗೆ ಬೆಂಕಿ ಹಚ್ಚುವುದನ್ನು ನೋಡಿರಬಹುದು. ಇಂತಹ ಬೆಂಕಿ ಹಚ್ಚುವ ಪ್ರವೃತ್ತಿ ಪೈರೋಮೇನಿಯಾದ ಸಾಮಾನ್ಯ ಸಮಸ್ಯೆ. ಸಂತೋಷ ಮತ್ತು ಒಂದು ರೀತಿಯ ಸಮಾಧಾನ ಹೊಂದುವುದಕ್ಕಾಗಿ ಕೆಲವರು ಎಲ್ಲೆಂದರಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಇಂತಹ ಪ್ರವೃತ್ತಿ ಹೆಚ್ಚಾಗಿ ಬೆಳಕಿಗೆ ಬರುವುದಿಲ್ಲ. ಯಾವಾಗ ವ್ಯಕ್ತಿಗೆ ಅದರಲ್ಲೂ ಮಕ್ಕಳಾದರೆ ಅವರ ನಡವಳಿಕೆಯಲ್ಲಿ ವ್ಯತ್ಯಾಸವಾದಾಗ ಇದು ಬೆಳಕಿಗೆ ಬರಬಹುದು. ದೊಡ್ಡವರಲ್ಲಾದರೆ ಸ್ಕೀಝೋಫ್ರೀನಿಯಾ ಕಂಡುಬಂದಾಗ ಇದು ಬಹಿರಂಗವಾಗಬಹುದು. ತಜ್ಞ ಮನೋ ವೈದ್ಯರು ಸೂಕ್ಷ್ಮ ತಪಾಸಣೆ ಮೂಲಕ ಇದನ್ನು ಪತ್ತೆ ಹಚ್ಚಬಹುದಾಗಿದೆ.

ಪ್ಯಾತಲಾಜಿಕಲ್ ಗ್ಯಾಂಬ್ಲಿಂಗ್: ಇದು ಕೂಡಾ ಕಟ್ಟಾಸೆ ನಿಯಂತ್ರಿಸಲಾಗದೆ ಉಂಟಾಗುವ ಸಮಸ್ಯೆ. ಜೂಜಾಡುವುದಕ್ಕಿರುವ ತುಡಿತದಿಂದಾಗಿ ವ್ಯಕ್ತಿ ಜೀವನದಲ್ಲಿ ಹಲವು ಸಮಸ್ಯೆ, ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಜೂಜಿನಿಂದ ವ್ಯಕ್ತಿಗೆ ತಾತ್ಕಾಲಿಕ ಸಂತೋಷ, ನೆಮ್ಮದಿ ಸಿಗಬಹುದು ಅಥವಾ ಒಂದೇ ಸಲ ಅತಿಹೆಚ್ಚು ಹಣ ಮಾಡುವ ದುರಾಸೆಬಿದ್ದು ಹಣ ಕಳೆದುಕೊಂಡು ಹತಾಶರಾಗಬಹುದು.
ಕಳೆದುಕೊಂಡ ಹಣವನ್ನು ಮತ್ತೆ ಪಡೆಯುವುದಕ್ಕಾಗಿ ಪುನಃ ಜೂಜಾಡುವ ಗೀಳು ಕೂಡಾ ಹತ್ತಿಕೊಳ್ಳಬಹುದು. ಸಾಲದ ಮೊತ್ತವೂ ಹೆಚ್ಚಾಗಬಹುದು. ವ್ಯಕ್ತಿಗೆ ಖಿನ್ನತೆ ಮೂಡಬಹುದು. ಕೌಟುಂಬಿಕ ಸಮಸ್ಯೆಗಳು ಕಾಡಬಹುದು. ಈ ರೀತಿ ಜೂಜಿನ ಗೀಳು ಕೂಡಾ ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್ ಆಗಿದ್ದು, ಸೂಕ್ತ ಸಮಯದಲ್ಲಿ ಮನೋ ವೈದ್ಯರ ಶಿಫಾರಸಿನಂತೆ ಚಿಕಿತ್ಸೆ ಪಡೆಯುವುದು ಉತ್ತಮ.
ಟ್ರಿಕೋಟಿಲೋಮೇನಿಯಾ: ವ್ಯಕ್ತಿ ಯಾವುದೇ ಕೆಲಸದಲ್ಲಿ ನಿರತವಾಗಿರುವಾಗ ತನಗೆ ಅರಿವಿಲ್ಲದಂತೆ ತಲೆಕೂದಲನ್ನು ಕಿತ್ತುಕೊಳ್ಳುವ ಪ್ರವೃತ್ತಿ. ಇದರಿಂದ ಒಂದು ರೀತಿಯ ಖುಷಿ ವ್ಯಕ್ತಿಗಾಗಬಹುದು ಇಲ್ಲವೇ ಟೆನ್ಶನ್‍ನಿಂದ ತಾತ್ಕಾಲಿಕ ಮುಕ್ತಿ ಸಿಗಬಹುದು. ಇದು ಕೂಡಾ ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್ ಎಂದು ಪರಿಗಣಿಸಲ್ಪಟ್ಟಿದೆ. ಹಾಗೆಂದು ತಲೆಕೂದಲು ಉದುರುವಿಕೆ ಈ ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್ ವ್ಯಾಪ್ತಿಗೆ ಸೇರುವುದಿಲ್ಲ.

***                                                   ***                                                   ***                                         ***

ತಜ್ಞರ ನುಡಿ

ಇದೊಂದು ಆವರ್ತನ ಕ್ರಿಯೆ

ಇಂಪಲ್ಸ್ ಅನ್ನೋದು ನಮ್ಮೆಲ್ಲರಲ್ಲೂ ಇರುತ್ತದೆ. ಅದು ಬೇಕು, ಇದು ಬೇಕು, ಅದು ಮಾಡಬೇಕು ಇದು ಮಾಡಬೇಕು ಎಂಬಂಥ ತುಡಿತ ಅದು. ಅಂತಹ ತುಡಿತಗಳನ್ನು ತಡೆಯುವ ಅಥವ ನಿಯಂತ್ರಿಸುವ ಶಕ್ತಿ ನಮ್ಮೆಲ್ಲರಲ್ಲೂ ಸಾಮಾನ್ಯವಾಗಿ ಇರುತ್ತದೆ. ಆ ಶಕ್ತಿ ಇಲ್ಲದೇ ಆದಾಗ ಉಂಟಾಗುವ ಸಮಸ್ಯೆಯೇ ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್. ನಮ್ಮ ಶರೀರದಲ್ಲಿ ಸೆರೋಟಿನಿನ್ ಎಂಬ ನ್ಯೂರೋ ಟ್ರಾನ್ಸ್‍ಮೀಟರ್ ಕಡಿಮೆ ಇದ್ದಾಗ ಇಂತಹ ಸಮಸ್ಯೆ ಕಂಡುಬರುತ್ತದೆ. ಎಲ್ಲ ವರ್ಗದ ಜನರಲ್ಲೂ ಇದು ಇರುತ್ತದೆ. ಏನೋ ತಗೋಬೇಕು ತಗೋಬೇಕು ಎಂಬ ಕಟ್ಟಾಸೆ ಇರುತ್ತದೆ. ಹಾಗೆ ಅದನ್ನು ತೆಗೆದುಕೊಂಡ ಬಳಿಕ ಸ್ವಲ್ಪ ಸಮಾಧಾನವಾಗಿ ನಂತರ ಪಶ್ಚಾತಾಪ ಕಾಡುತ್ತದೆ. ಅಯ್ಯೋ ನಾನು ಇಂತಹ ತಪ್ಪು ಮಾಡಿಬಿಟ್ಟೆನಲ್ಲಾ ಎಂದು ಹಲುಬಲಾರಂಭಿಸುತ್ತಾರೆ. ಹೀಗೆ ಕೊರಗುತ್ತಾ ಖಿನ್ನತೆಗೆ ಒಳಗಾಗುತ್ತಾರೆ. ಆಗ ಸೆರೋಟಿನಿನ್ ಕಡಿಮೆಯಾಗುತ್ತದೆ. ಮತ್ತದೇ ಕೆಲಸ ಮಾಡುವಂತಹ ಪ್ರಚೋದನೆಗೆ ಒಳಗಾಗುತ್ತಾರೆ. ಇದೊಂದು ಆವರ್ತನ ಕ್ರಿಯೆ.
ಇದರಲ್ಲಿ ಮನಸ್ಸಿನ ತಾತ್ಕಾಲಿಕ ಸಂತೋಷಕ್ಕಾಗಿ ಮಾಡುವ ಕೆಲಸದ ಹಿಂದೆ ಹಣಕಾಸಿನ ಲಾಭದ ಉದ್ದೇಶ ಇರುವುದಿಲ್ಲ. ಆದರೆ ಅದನ್ನು ಮಾಡಲೇಬೇಕೆಂಬ ತುಡಿತ ಅಥವಾ ಪ್ರಚೋದನೆ ಇರುತ್ತದೆ. ಮಾಡಿದ ಬಳಿಕ ಪಶ್ಚಾತಾಪ, ಕೊರಗುವಿಕೆ ಸಾಮಾನ್ಯ. ಸರಳ ಉದಾಹರಣೆ ಹೇಳಬೇಕೆಂದರೆ ಕೆಲವರು ಮನೆ ಒಳಗೆ ಬರುವಾಗ ಬಲಗಾಲಿಟ್ಟೇ ಬರುತ್ತಾರೆ. ಅಕಸ್ಮಾತ್ ಎಡಗಾಲಿಟ್ಟು ಬಂದರೆ ಬಳಿಕ ಕೊರಗುತ್ತಾರೆ. ಮತ್ತೆ ಹೊರಗೆ ಹೋಗಿ ಬಲಗಾಲಿಟ್ಟು ಒಳಕ್ಕೆ ಬರುತ್ತಾರೆ. ಇಂತಹ ಪ್ರಕ್ರಿಯೆಗಳು ಯಾವುದೇ ಇರಬಹುದು ಇವೆಲ್ಲವೂ ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್ ಎಂದು ಪರಿಗಣಿಸಲ್ಪಡುತ್ತಿವೆ. ಇಂತಹ ಕೊರಗುವಿಕೆ ಇಲ್ಲದೇ ಹೋದರೆ ಆತ/ಆಕೆ ಉದ್ದೇಶ ವೈಯಕ್ತಿಕ ಅಥವಾ ಇನ್ನಾವುದೋ ರೀತಿಯ ಲಾಭದ್ದಾಗಿರುತ್ತದೆ. ಇದು ಕಳ್ಳತನ/ಅಪರಾಧಕ್ಕೂ ಮಾನಸಿಕ ಸಮಸ್ಯೆಗೂ ಇರುವ ವ್ಯತ್ಯಾಸ.
ಕ್ಲೆಪ್ಟೋಮೇನಿಯಾ ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳಿಗೆ ಈಗಾಗಲೇ ಹೇಳಿದಂತೆ ಸೆರೋಟಿನ್ ಎಂಬ ನ್ಯೂರೋ ಟ್ರಾನ್ಸ್‍ಮೀಟರ್ ಅಂಶ ಕಡಿಮೆಯಾಗುವುದೇ ಮೂಲ ಕಾರಣ. ಇದನ್ನು ಬಿಟ್ಟು ಬೇರಾವ ತಾಂತ್ರಿಕ ಕಾರಣಗಳೂ ಬಹಿರಂಗಗೊಂಡಿಲ್ಲ.
ಇದು ಸಮಸ್ಯೆಯ ಕಾರಣವಾಯ್ತು.. ಇನ್ನು ಸಮಸ್ಯೆಯಿಂದಾಗುವ ಪರಿಣಾಮ ಏನು ಎಂದರೆ, ಬೇಕಾದ್ದು ಎಲ್ಲವೂ ಇದ್ದ ಕಾರಣ ತಾವು ಮಾಡುತ್ತಿರುವುದು ತಪ್ಪೆಂಬ ಭಾವನೆ ರೋಗಿಗಳಲ್ಲಿ ಇರುತ್ತದೆ. ಚಂಚಲತೆಗೆ ಒಳಗಾಗಿ, ಖಿನ್ನತೆಯಿಂದ ಇಂತಹ ಕೆಲಸ ಮಾಡುತ್ತಾರೆ. ಆದರೆ, ಇದು ಮಾನಸಿಕ ಸಮಸ್ಯೆ ಎಂಬುದನ್ನು ಒಪ್ಪಿಕೊಳ್ಳಲು ಯಾರೂ ಸಿದ್ಧರಿರುವುದಿಲ್ಲ. ಕೇವಲ ಒಂದು ಘಟನೆಯಿಂದ ಇಂತಹ ಪ್ರಕರಣ ಗುರುತಿಸಲಾಗದು. ಆದರೆ, ವ್ಯಕ್ತಿಯ ಪೂರ್ವ ಇತಿಹಾಸ ಪರಿಶೀಲಿಸಿ ಇಂತಹ ಪ್ರಕರಣಗಳನ್ನು ಮನೋವೈದ್ಯರಷ್ಟೇ ಗುರುತಿಸಿ ಹೇಳಲು ಸಾಧ್ಯ.
ಕ್ಲೆಪ್ಟೋಮೇನಿಯಾ ಸಾಮಾನ್ಯವಾಗಿ ಮಹಿಳೆಯರಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ಯಾಕೆಂದರೆ ಅವರಲ್ಲಿ ಶಾಪಿಂಗ್ ಟ್ರೆಂಡ್ ಹೆಚ್ಚಾಗಿದೆ. ಶಾಪಿಂಗ್‍ನಿಂದ ಅವರಿಗೆ ಸಿಕ್ಕುವ ತೃಪ್ತಿಯೇ ಬೇರೆಯಾಗಿರುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಅವರ ಮನಸ್ಸಿನ ಪ್ರಚೋದನೆ ಅಥವಾ ಕಟ್ಟಾಸೆಗೆ ಸಿಕ್ಕು ಸಣ್ಣಪುಟ್ಟ ವಸ್ತುಗಳನ್ನು ಕಳವು ಮಾಡಿ ಮುಜುಗರಕ್ಕೆ ಒಳಗಾಗುತ್ತಾರೆ.
ಕ್ಲೆಪ್ಟೋಮೇನಿಯಾವನ್ನು ಕಳ್ಳತನಕ್ಕೆ ಜೋಡಿಸಲಾಗದು. ಕಳ್ಳತನದಲ್ಲಿ ಅಗತ್ಯ ಇರುತ್ತದೆ. ಕದ್ದೆ ತಿಂದೆ ಮಾಡಿದೆ ಎಂಬ ಭಾವ ಇರುತ್ತದೆ. ಆದರೆ ಕ್ಲೆಪ್ಟೋಮೇನಿಯಾದಲ್ಲಿ ಅಂತಹ ಅಗತ್ಯ ಇರುವುದಿಲ್ಲ. ತುಡಿತ ಇರುತ್ತದೆ. ಬೇಕು ಬೇಕೆಂಬ ಮಾನಸಿಕ ತುಡಿತವನ್ನು ಸಮಾಧಾನಗೊಳಿಸುವ ಪ್ರಕ್ರಿಯೆ ಅಷ್ಟೇ ಇದೆ. ಹೀಗಾಗಿ ಕ್ಲೆಪ್ಟೋಮೇನಿಯಾ ಎಂಬುದು ಇಂಪಲ್ಸ್ ಕಂಟ್ರೋಲ್ ಸ್ಪೆಕ್ಟ್ರಂ ಡಿಸಾರ್ಡರ್ ವ್ಯಾಪ್ತಿಗೆ ಬರುತ್ತದೆ. ಪ್ಯಾತಲೋಜಿಕಲ್ ಗ್ಯಾಂಬ್ಲಿಂಗ್ ಸೇರಿದಂತೆ ಕೆಲವು ಮಾನಸಿಕ ಸಮಸ್ಯೆಗಳು ಬರುತ್ತವೆ. ಎಲ್ಲದರಲ್ಲೂ ಸೆರೋಟಿನಿನ್ ಕಡಿಮೆಯಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಅಭಿವ್ಯಕ್ತಿ ಬೇರೆಯಾಗಿರುತ್ತದೆ. ಹೀಗಾಗಿ ಇವೆಲ್ಲವನ್ನೂ ಇಂಪಲ್ಸ್ ಕಂಟ್ರೋಲ್ ಸ್ಪೆಕ್ಟ್ರಂ ಡಿಸಾರ್ಡರ್ ಎನ್ನುತ್ತಾರೆ.
ಇಂಥ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಡಿದಾಗ ಸಮೀಪದ ಮನೋವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ, ಸಾರ್ವಜನಿಕವಾಗಿ ಮುಜುಗರಕ್ಕೆ ಈಡಾಗುವುದನ್ನು ತಪ್ಪಿಸಬಹುದು.

 

 

 

 

ಡಾ. ಧನಂಜಯ, ತಜ್ಞ ಮನೋವೈದ್ಯರು, ಇಎಸ್ಐ ಆಸ್ಪತ್ರೆ ರಾಜಾಜಿನಗರ ಬೆಂಗಳೂರು

Tags :

1 thought on “ಕಟ್ಟಾಸೆಗೆ ಬಲಿ ಬಿದ್ದು ಕೆಡದಿರಿ…

Leave a Reply

Your email address will not be published. Required fields are marked *