ಸುರಪಾನ ಪ್ರಿಯರಿಗೊಂದು ಸಂತಸದ ಸುದ್ದಿ.. ಇಲ್ಲೊಂದು ಟೈಪ್ ರೈಟರ್ ಇದೆ.. ಅದರಲ್ಲಿ ನಿಮಗಿಷ್ಟವಾದ ಶಬ್ದ ಟೈಪ್ ಮಾಡಿದರೆ, ಅದುವೇ ಕಾಕ್ಟೈಲ್ ಗ್ಲಾಸ್ಗೆ ತುಂಬಿ ಕೊಡತ್ತೆ.. ವಿಚಿತ್ರ ಅನಿಸ್ತಿದೆ ಅಲ್ವಾ.. ? ಎಲ್ಲಿಯ ಟೈಪ್ರೈಟರ್.. ಯಾವ ಮದ್ಯವೋ.. ಹೀಗಂತ ಹುಬ್ಬೇರಿಸಬೇಡಿ.. ವಿಚಿತ್ರ ಆದರೂ ಇದು ಸತ್ಯ.
ಅಂದ ಹಾಗೆ ಟೈಪ್ ರೈಟರ್ ಎಲ್ಲರಿಗೂ ಗೊತ್ತಿರುವ ಬೆರಳಚ್ಚು ಯಂತ್ರ. ಕಂಪ್ಯೂಟರ್ ಟೈಪ್ರೈಟರ್ನ ಸುಧಾರಿತ ಮಾದರಿ ಎಂದು ಹೇಳುವುದಕ್ಕೇನೂ ಅಡ್ಡಿ ಇಲ್ಲ. ಹೆಚ್ಚು ಕಡಿಮೆ ಟೈಪ್ರೈಟರ್ ಮತ್ತು ಕಂಪ್ಯೂಟರ್ ಕೀ ಬೋರ್ಡ್ಗಳಲ್ಲಿ ಸಾಮ್ಯತೆ ಇದೆ. ಟೈಪ್ರೈಟರ್ನಲ್ಲಿ ಆಲ್ಟ್, ಕಂಟ್ರೋಲ್, ಬ್ಯಾಕ್ ಸ್ಪೇಸ್, ಹೋಮ್, ಪೇಜ್ ಅಪ್, ಪೇಜ್ ಡೌನ್ ಮತ್ತು ಡಿಲೀಟ್ ಬಟನ್ಗಳು ಇಲ್ಲ. ಎಸ್ಕೇಪ್, ಎಫ್ ಸೀರೀಸ್ ಕೀಗಳಂತೂ ಇಲ್ವೇ ಇಲ್ಲ. ಇವೆಲ್ಲವನ್ನೂ ಗಮನದಲ್ಲಿ ಇರಿಸಿಕೊಂಡರೆ, ಹೊಸ ಟೈಪ್ ರೈಟರ್ ಕೀ ಬೋರ್ಡ್ನಲ್ಲಿ ಕೂಡಾ ಇದ್ಯಾವ ಬಟನ್ಗಳು ಇಲ್ಲ. ಜೊತೆಗೆ ಒಂದರಿಂದ ಸೊನ್ನೆ ತನಕದ ಅಂಕಿಗಳ ಬಟನ್ ಕೂಡಾ ಇಲ್ಲ.

ಟೈಪ್ರೈಟರ್ನಲ್ಲಿ ಟೈಪ್ಮಾಡಬೇಕಾದರೆ ಬಿಳಿ ಹಾಳೆ ಹಾಕಿರಬೇಕು. ಇನ್ನು ಕಂಪ್ಯೂಟರ್ನಲ್ಲಾದರೆ ಸ್ಕ್ರೀನ್ ಮೇಲೆ ಟೈಪ್ಮಾಡಿದ ಅಕ್ಷರಗಳು ಮೂಡುತ್ತವೆ. ಹಾಗೆಯೇ ಈ ಹೊಸ ಟೈಪ್ರೈಟರ್ನಲ್ಲಿ ಟೈಪ್ ಮಾಡಿದರೆ ಎಲ್ಸಿಡಿ ಮೇಲೆ ಮೂಡುವಂತಹ ಅಕ್ಷರಗಳು ಮೂಡುತ್ತವೆ. ಅದು ಕೂಡಾ ವಿಭಿನ್ನ ಬಣ್ಣಗಳಲ್ಲಿ..
ಕಾಕ್ಟೈಲ್ ಮಿಕ್ಸರ್ ಅಥವಾ ಟೈಪ್ ರೈಟರ್ ?
ಈ ಹೊಸ ಟೈಪ್ರೈಟರ್ ಅರ್ಥಾತ್ ಕಾಕ್ಟೈಲ್ ಮಿಕ್ಸರ್ಗೆ ೭ ಬಾಟಲಿಗಳಿಂದ ಕೊಳವೆ ಸಂಪರ್ಕ ಏರ್ಪಡಿಸಲಾಗಿದೆ. ಈ ಏಳು ಬಾಟಲಿಗಳಲ್ಲಿ ವಿವಿಧ ಮದ್ಯ ಅಥವಾ ಹಣ್ಣಿನ ರಸವನ್ನು ಹಾಕಿಡಬಹುದು.
ಅಕ್ಷರಗಳನ್ನು ಟೈಪ್ಮಾಡುತ್ತಿದ್ದಂತೆ ಆಯಾ ಬಾಟಲಿಗೆ ಸಂಪರ್ಕ ಕೊಂಡಿಯಂತೆ ಇರುವ ಕೊಳವೆಗಳ ಮೂಲಕ ರಸ ಮೇಲೇ ಏರುತ್ತದೆ. ಹಾಗೆ ಏರುತ್ತಿದ್ದಂತೆ ಯಾವ ಅಕ್ಷರದ ಬಟನ್ ಒತ್ತಿದ್ದಾರೋ ಅದೇ ಅಕ್ಷರ ಎಲ್ಸಿಡಿ ಪರದೆ ಮೇಲಿನ ಅಕ್ಷರದಂತೆ ಕಾಣುತ್ತದೆ. ಮಾತ್ರವಲ್ಲದೇ ಅದಕ್ಕೆ ಜೋಡಿಸಿರುವ ಪೈಪ್ ಮೂಲಕ ಗ್ಲಾಸ್ಗೆ ಆ ರಸ ಅಥವಾ ಮದ್ಯ ಬೀಳುತ್ತದೆ. ಅದೇ ರೀತಿ ಬೇರೆ ಅಕ್ಷರ ಒತ್ತಿದರೆ, ಮತ್ತೆ ಇದೇ ರೀತಿಯ ಕ್ರಿಯೆ ಪುನರಾವರ್ತನೆ ಆಗುತ್ತದೆ.

ಹೀಗಾಗಿ, ನಿಮಗಿಷ್ಟವಾದ ಶಬ್ದ ಟೈಪ್ ಮಾಡಿ ಅದರ ರುಚಿಯನ್ನು ಆಸ್ವಾದಿಸಿ ಎಂಬ ಪ್ರಚಾರ ಕೂಡಾ ಈ ಟೈಪ್ರೈಟರ್ಗೆ ಲಭಿಸಿದೆ.
ಮೋರ್ಸ್ಕೋಯ್ಬಾಯ್ ಎಂಬಾತ ಈ ಹೊಚ್ಚ ಹೊಸ ಟೈಪ್ರೈಟರ್ ಕಂಡು ಹಿಡಿದ ಸಾಧಕ. ಇದನ್ನು ಟೈಪ್ ರೈಟರ್ ಅನ್ನೋದಾ ಅಥವಾ ಕಾಕ್ಟೈಲ್ ಮಿಕ್ಸರ್ ಅನ್ನೋ ಗೊಂದಲ ಇನ್ನೂ ಇದೆ. ಯಾಕೆಂದರೆ, ಟೈಪ್ರೈಟರ್ನಂತೆ ಇದರಲ್ಲೂ ಕೀ ಬೋರ್ಡ್ ಇದೆ. ಕೀ ಬೋರ್ಡ್ ನಲ್ಲಿ ಕೇವಲ ಆಂಗ್ಲ ಭಾಷಾ ಅಕ್ಷರಗಳು ಮಾತ್ರ ಇವೆ. ಇತರೆ ಯಾವುದೇ ಕೀ ಇಲ್ಲಿಲ್ಲ..ವಾಸ್ತವವಾಗಿ ಮಾರ್ಸ್ ಕೊಯ್ಬಾಯ್ ಹಿನ್ನೆಲೆ ಗಮನಿಸಿದರೆ, ಅಂತಹ ದೊಡ್ಡ ಸಾಧನೆಯನ್ನೇನೂ ಆತ ಇದುವರೆಗೆ ಮಾಡಿಲ್ಲ. ಆದರೆ, ಈ ಕಾಕ್ಟೈಲ್ ಟೈಪ್ರೈಟರ್ ಮಾತ್ರ ಈತ ಸಾಧಕ ಹೌದು ಎಂಬುದನ್ನು ಸಾಬೀತು ಮಾಡಿದೆ.
ಹೇಗೆ ಕೆಲಸ ಮಾಡತ್ತೆ ?
ಬಳಕೆದಾರ ಈ ಯಂತ್ರದ ಮೇಲ್ಭಾಗಕ್ಕೆ ಆಲ್ಕೋಹಾಲ್ ಅಥವಾ ನೀರು ಅಥವಾ ಹಾಲಿನ ಬಾಟಲಿ ಜೋಡಿಸಬೇಕು. ಉಳಿದ ಕಾಫಿ, ಕೋಲಾ ವೆಂಡಿಂಗ್ ಯಂತ್ರಗಳಂತೆ ನೀರು ಕೂಡಾ ಪೂರೈಸಬೇಕು. ಇದೇ ನೀರು ಕಾಕ್ಟೈಲ್ಗೆ ಬೇಕಾದ ನೀರನ್ನು ಒದಗಿಸುತ್ತದೆ. ಔಷಧದ ಅಂಗಡಿಂದ ಖರೀದಿಸಿದ ಐವಿ ರೇಟ್ ಫ್ಲೋ ರೆಗ್ಯುಲೇಟರ್ ಕೂಡಾ ಇದಕ್ಕೆ ಅಳವಡಿಸಿದ್ದು, ಸ್ವಿಚ್ ಆನ್ ಮತ್ತು ಆಫ್ ಮಾಡುವುದಕ್ಕೆ ಅನುಕೂಲಕರವಾಗಿದೆ.
ಪ್ರತಿಯೊಂದು ಅಕ್ಷರದ ಬಟನ್ ಕೂಡಾ ಸಿರೆಂಜ್ ಒಂದಕ್ಕೆ ಕನೆಕ್ಟ್ ಆಗಿದ್ದು, ಪ್ರತಿಯೊಂದು ಸಿರೆಂಜ್ ಕೂಡಾ ಬೇರೆ ಬೇರೆ ಬಣ್ಣದ ಮದ್ಯ ಅಥವಾ ಸಿರಪ್ ಬಾಟಲಿಗೆ ಕೊಳವೆ ಮೂಲಕ ಕನೆಕ್ಟ್ ಆಗಿರುತ್ತದೆ. ಕೀ ಇರುವ ಬಟನ್ ಒತ್ತಿದಾಗ ಸಿರೆಂಜ್ ಗೆ ಕನೆಕ್ಟ್ ಆಗಿರುವ ಕೊಳವೆ ಮೂಲಕ ಮದ್ಯ ಅಥವಾ ಸಿರಪ್ ಒಳಕ್ಕೆ ಎಳೆದುಕೊಳ್ಳುವ ಕ್ರಿಯೆ ನಡೆಯತ್ತದೆ. ಸಾಮಾನ್ಯ ಸಿರೆಂಜ್ ಕೆಲಸ ಮಾಡವಂತೆ ಇದು ಕೂಡಾ ಕೆಲಸ ಮಾಡುತ್ತದೆ.
ಪಾರದರ್ಶಕವಾಗಿ ಅಳವಡಿಸಿರುವ ಗಾಜಿನ ಕೊಳವೆ ಮೂಲಕ ಈ ಮದ್ಯ ಸಾಗುವಾಗ ಯಾವ ಅಕ್ಷರ ಒತ್ತಿದ್ದಾರೋ ಅದೇ ಅಕ್ಷರ ಎಲ್ಸಿಡಿ ಪರದೆ ಮೇಲೆ ಕಾಣುವ ಅಕ್ಷರದಂತೆ ಭಾಸವಾಗುತ್ತದೆ. ಸರಳವಾದ ವಿಧಾನ ಅನುಸರಿಸಿ ಈ ಯಂತ್ರ ಸಂಶೋಧಿಸಿದ್ದು, ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.
ಉದಾಹರಣೆಗೆ, ರಸವನ್ನು ಜೋಡಿಸುವಾಗ ಎಲ್ ಎಂದರೆ ಲೈಮ್, ಎ ಎಂದರೆ ಆಪಲ್, ಒ-ಆರೆಂಜ್, ಪಿ-ಫೈನಾಪಲ್ ಹೀಗೆ ಜೋಡಿಸಿಕೊಳ್ಳಬಹುದು. ಇದರಿಂದ ಕಾಕ್ಟೈಪ್ ಮಾಡಿ ಕಾಕ್ಟೈಲ್ ಪಡೆದುಕೊಳ್ಳುವವರಿಗೆ ಸುಲಭ.
ಸಾಧಕನ ತಾಣ
ಸುರಪಾನ ಪ್ರಿಯರಿಗೆ ಇಷ್ಟವಾಗವಂತಹ ಸಾಧನೆ ಮಾಡಿದ ಮೋರ್ಸ್ಕೋಯ್ಬಾಯ್ ತನ್ನ ಅಂತರ್ಜಾಲ ತಾಣ ( http://www.morskoiboy.com/ ) ಈ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾನೆ. ಯಂತ್ರ ತಯಾರಿಸಿದ ವಿಧಾನವನ್ನು ಕೂಡಾ ವಿಡಿಯೋ ಚಿತ್ರಣ ಮಾಡಿದ್ದು ಅದನ್ನು ಕೂಡಾ ತಾಣದಲ್ಲಿ ಸೇರಿಸಿದ್ದಾನೆ.
[youtube http://www.youtube.com/watch?v=SNQ5sfMJa0s]
ಹಾಗಾದ್ರೆ ಇನ್ನೇಕೆ ತಡ ಕಾಕ್ ಟೈಲ್ ಕುಡೀಬೇಕಾ.. ವೈಟರ್ಗೆ ಕಾಯಬೇಕಿಲ್ಲ.. ಈ ಟೈಪ್ರೈಟರ್ ಬಳಿ ಹೋಗಿ ನಿಮಗಿಷ್ಟವಾದ ಶಬ್ದ ಟೈಪ್ ಮಾಡಿ.. ಅದೇ ಶಬ್ದದ ಕಾಕ್ಟೈಲ್ ಕುಡಿಯಬಹುದು.. ಆದರೆ ನೀವು ರಷ್ಯಾಗೆ ಹೋಗಬೇಕು ಅಷ್ಟೇ…
ಮಾಹಿತಿ – ಚಿತ್ರಕೃಪೆ –