ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಅಂದ್ರೆ ಧರ್ಮ. ಸಚಿನ್ ತೆಂಡುಲ್ಕರ್ ಅಂದ್ರೆ ಕ್ರಿಕೆಟ್ ದೇವರು. ದೇವರಿಗೆ ಈ ಬಾರಿ ವಿಶ್ವಕಪ್ ನೈವೇದ್ಯ ಆಗಬೇಕು ಅನ್ನೋದು ಅಭಿಮಾನಿಗಳ ಆಶಯ. ಆದ್ರೆ,ಸಚಿನ್ ತೆಂಡುಲ್ಕರ್ ಶತಕ ದಾಖಲಿಸಿದ್ರೆ ಟೀಂ ಇಂಡಿಯ ಗೆಲ್ಲೋದಿಲ್ಲ ಎಂಬ ನಂಬಿಕೆಯೊಂದು ಆಗಾಗ ಚರ್ಚೆಗೀಡಾಗುತ್ತಲೇ ಇದೆ. ಸಚಿನ್ ಶತಕ ದಾಖಲಿಸಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯ ಸಮಬಲಗೊಂಡಿತ್ತು. ಇನ್ನು ಸೌತ್ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯ ಸೋಲು ಕಂಡಿತ್ತು. ಸಚಿನ್ ಈ ಪಂದ್ಯದಲ್ಲಿ ದಾಖಲಿಸಿದ ಕ್ರಿಕೆಟ್ ಕೆರಿಯರ್ನ ೯೯ನೇ ಶತಕ ಸಾಕಷ್ಟು ಟೀಕೆಗೊಳಗಾಗಿತ್ತು. ಉಳಿದ ಆಟಗಾರರ ವೈಫಲ್ಯ ಇಲ್ಲಿ ಕಣ್ಣಿಗೆ ರಾಚಲೇ ಇಲ್ಲ.
ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯ ಬೌಲರ್ಗಳು ಇಡೀ ಪಂದ್ಯವನ್ನೇ ಕೈ ಚೆಲ್ಲಿದ್ರು. ಇನ್ನು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ಮತ್ತು ನಾಯಕ ಧೋನಿ ಪಂದ್ಯ ಸೋತ ಬಗೆ ಎಂಥವರನ್ನೂ ನಿರಾಸೆಗೀಡುಮಾಡುವಂತಿತ್ತು. ಇವೆಲ್ಲದರ ನಡುವೆಯೂ ಸಚಿನ್ ಯಾಕೆ ಇಷ್ಟ ಆಗ್ತಾರೆ ?
ವಿಶ್ವಕಪ್ನ ಕೊನೆಯ ಲೀಗ್ ಪಂದ್ಯ. ಧೋನಿ ಪಡೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಓವರ್ನ ಮೊದಲ ಎಸೆತವೇ ವೈಡ್ ಮತ್ತು ಲೆಗ್ ಬೈ ಆಗಿ ಐದು ರನ್ ಟೀಂ ಇಂಡಿಯ ಖಾತೆ ಸೇರಿತ್ತು. ಗಂಭೀರ್ ಮತ್ತು ಸಚಿನ್ ಮತ್ತೆ ೩ ರನ್ ಸೇರಿಸಿದ್ದರು. ಮೊದಲ ಓವರ್ನ ಕೊನೆಯ ಎಸೆತ ಎದುರಿಸಿದ ಸಚಿನ್, ಕೀಪರ್ ಕೈಗೆ ಕ್ಯಾಚ್ ನೀಡಿದ್ರು. ಅಂಪೈರ್ ನಾಟ್ ಔಟ್ ತೀರ್ಪು ನೀಡಿದ್ರು. ಸಚಿನ್ ತಲೆ ತಗ್ಗಿಸಿಕೊಂಡು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ರು. ಇದಕ್ಕೇ ಅನ್ನೋದು ಸಭ್ಯತೆ ಅಂತ.
ಸಚಿನ್ ಮತ್ತೆ ಕ್ರೀಸ್ನಲ್ಲೇ ನಿಲ್ಲಬಹುದಿತ್ತು. ಆದ್ರೆ, ಔಟ್ ಆಗಿರೋದು ಅರಿವಾಗುತ್ತಿದ್ದಂತೆ ಮರುಮಾತಿಲ್ಲದೇ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರು. ಈ ವಿಶ್ವಕಪ್ ಪಂದ್ಯದಲ್ಲಿ ಯುಡಿಆರ್ಎಸ್ ಜಾರಿಯಲ್ಲಿದೆ. ಸಚಿನ್ ಅದೃಷ್ಟ ಪರೀಕ್ಷೆ ಮಾಡಬಹುದಿತ್ತು. ಆದ್ರೆ, ಅದಕ್ಕೆ ಅವಕಾಶವೇ ನೀಡಲಿಲ್ಲ. ಕಳೆದ ಪಂದ್ಯದಲ್ಲಿ ಸಚಿನ್ ಶತಕ ದಾಖಲಿಸಿದ್ದೇ ಟೀಕಾಕಾರರಿಗೆ ಆಹಾರವಾಗಿತ್ತು. ಈ ಪಂದ್ಯದಲ್ಲಿ ಸಚಿನ್ ವ್ಯಕ್ತಿತ್ತ ಅಂತಹ ಟೀಕಾಕಾರರ ಬಾಯಿ ಮುಚ್ಚಿಸಿರಬಹುದು.
ಸಚಿನ್ ಕಳೆದ ಎರಡು ದಶಕಗಳಿಂದ ಟೀಂ ಇಂಡಿಯ ಪ್ರತಿನಿಧಿಸುತ್ತಿದ್ದಾರೆ. ಸಚಿನ್ ಶತಕ ಬಾರಿಸಿದ ಶೇಕಡಾ ಹತ್ತರಷ್ಟು ಪಂದ್ಯಗಳಲ್ಲಷ್ಟೇ ಟೀಂ ಇಂಡಿಯ ಸೋಲು ಅನುಭವಿಸಿದೆ. ಸರಿಯಾದ ವಿಮರ್ಶೆ ನಡೆಸಿದ್ರೆ, ಉಳಿದ ಆಟಗಾರರ ವೈಫಲ್ಯ ಎದ್ದು ಕಾಣಬಹುದು. ಆದ್ರೆ, ಅಂತಹ ವಿಶ್ಲೇಷಣೆ ಹೊರಡುವುದು ಟೀಕೆ ಹೊರಬಂದ ನಂತರವಷ್ಟೇ..
ಯಾರು ಏನೇ ಹೇಳಿದ್ರೂ, ಮ್ಯಾಚ್ ಫಿಕ್ಸಿಂಗ್ ಅಂತಹ ಕಪ್ಪು ಚುಕ್ಕೆ ಕ್ರಿಕೆಟ್ ಆಟಕ್ಕೆ ಮೆತ್ತಿಕೊಂಡಿರುವ ಈ ಸಂದರ್ಭದಲ್ಲಿ ಇಂತಹ ಘಟನೆಗಳು ಮೂಕರನ್ನಾಗಿಸುತ್ತದೆ. ಭಾರತದಲ್ಲಿ ಕ್ರಿಕೆಟ್ ಧರ್ಮ, ಸಚಿನ್ ಕ್ರಿಕೆಟ್ ದೇವರು ಯಾಕೆ ಅನ್ನೋದು ಈಗ ಅರ್ಥ ಆಗಿರಬಹುದಲ್ಲವೇ.. ?