ಗಂಗಾ ಶುದ್ಧಿಯ ಸುದ್ದಿಕಥೆ..

ಗಂಗಾ ಸ್ವಚ್ಛತಾ ಅಭಿಯಾನಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಲೋಕಸಭಾ ಚುನಾವಣಾಪೂರ್ವದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲು ಮೋದಿ ಸರ್ಕಾರ ಮುಂದಾಗಿದೆ. ಇಷ್ಟಕ್ಕೂ, 80ರ ದಶಕದ ಮಧ್ಯಭಾಗದಲ್ಲಿ ಚಾಲನೆ ಪಡೆದುಕೊಂಡ ಗಂಗಾ ಆ್ಯಕ್ಷನ್ ಪ್ಲಾನ್ ಅನುಷ್ಠಾನ ಎಡವಿದ್ದೆಲ್ಲಿ? ಇದುವರೆಗೆ ವೆಚ್ಚವಾಗಿದ್ದೆಷ್ಟು? ಸಮಸ್ಯೆಗಳೇನು? ಇತ್ಯಾದಿ ಸಮಗ್ರ ಚಿತ್ರಣ ಇಲ್ಲಿದೆ. 

13 JUNE 2014 GANGA `ಮಗನೊಬ್ಬ ತಾಯಿಯ ಮಡಿಲು ಸೇರುವಂತೆ, ಈ ಗಂಗಾಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೇನೋ ಎಂಬಂತೆ ಭಾಸವಾಗುತ್ತಿದೆ’ – ನರೇಂದ್ರ ಮೋದಿ
ಲೋಕಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ವಾರಾಣಸಿಗೆ ಬಂದಾಗ ಮೋದಿಯವರು ಹೇಳಿದ ಮಾತಿದು. ಗಂಗಾನದಿಯ ಪುನಶ್ಚೇತನದ ಬಗ್ಗೆಯೂ ಅವರು ಅಂದು ಭರವಸೆ ನೀಡಿದ್ದರು. ಈಗ ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ತಿಂಗಳಾಗುತ್ತಿದೆಯಷ್ಟೆ. ವಾರಾಣಸಿಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲು ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಸಾಧ್ವಿ ಉಮಾಭಾರತಿ ಜಲಸಂಪನ್ಮೂಲ ಸಚಿವರಾಗಿದ್ದು, ಗಂಗಾ ಪುನಶ್ಚೇತನದ ಹೊಣೆಯೂ ಅವರ ಮೇಲಿದೆ.
ಇದೇ ವೇಳೆ, 80ರ ದಶಕದಲ್ಲೇ ಎರಡು ಹಂತದ ಗಂಗಾ ಕ್ರಿಯಾ ಯೋಜನೆ (ಆ್ಯಕ್ಷನ್ ಪ್ಲಾೃನ್) ರೂಪಿಸಿದ್ದರೂ ಅದೇಕೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ? ವಿಶ್ವ ಬ್ಯಾಂಕ್ ಕೂಡಾ ಇದೊಂದು ಹೈ ರಿಸ್ಕ್ ಪ್ರಾಜೆಕ್ಟ್ ಎಂದು ಎಚ್ಚರಿಸಿರುವಾಗ ಗಂಗಾ ಪುನಶ್ಚೇತನ ಕಾರ್ಯ ಸುಲಭದ ವಿಷಯವೇ? ಎಂಬಿತ್ಯಾದಿ ವಿಚಾರಗಳೀಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿವೆ.

ಏನಿದು ಗಂಗಾ ಆ್ಯಕ್ಷನ್ ಪ್ಲಾೃನ್?
ಗಂಗಾ ನದಿಯ ಮಲಿನ ಮಟ್ಟ ತಗ್ಗಿಸುವ ಸಲುವಾಗಿ 80ರ ದಶಕದಲ್ಲಿ ಎರಡು ಹಂತದ ಯೋಜನೆ ಸಿದ್ಧಪಡಿಸಲಾಗಿತ್ತು. ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದಾಗ ಗಂಗಾ ನದಿ ಪ್ರಾಧಿಕಾರ ರಚಿಸಲಾಗಿತ್ತು. ಇದಕ್ಕೆ ಗಂಗಾ ಆ್ಯಕ್ಷನ್ ಪ್ಲಾೃನ್ ಎಂದು ಹೆಸರಿಸಿದ್ದು, 1986ರ ಏಪ್ರಿಲ್‍ನಲ್ಲಿ ರಾಜೀವ್ ಗಾಂಧಿಯವರೇ ಇದಕ್ಕೆ ಚಾಲನೆ ನೀಡಿದ್ದರು. ಮೊದಲ ಹಂತದ ಯೋಜನೆ 1993ರಲ್ಲಿ ವಾರಾಣಸಿ ಭಾಗದಲ್ಲಿ ಮುಕ್ತಾಯವಾಗಿದೆ. ಆದರೆ, ಅದರಿಂದ ಏನೂ ಪ್ರಯೋಜನವಾದಂತಿಲ್ಲ. ವಾಸ್ತವದಲ್ಲಿ ಗಂಗಾ ಇನ್ನಷ್ಟು ಮಲಿನಗೊಂಡು, ನಿರ್ಜೀವವಾಗಿತ್ತು. ಸಮಸ್ಯೆಗಳನ್ನು ಅರಿಯದೇ ಯೋಜನೆ ರೂಪಿಸಿದ್ದು ಮೊದಲ ಹಂತದ ವೈಫಲ್ಯಕ್ಕೆ ಮುಖ್ಯ ಕಾರಣ ಎಂಬುದು ವಿಶ್ಲೇಷಣೆಯಲ್ಲಿ ಗೊತ್ತಾಯಿತು. ಎರಡನೇ ಹಂತದ ಯೋಜನೆ 1993- 96ರ ಅವಧಿಯಲ್ಲಿ ಜಾರಿಗೊಂಡಿದ್ದು, ಐದು ರಾಜ್ಯಗಳಲ್ಲಿ ಅನುಷ್ಠಾನಗೊಂಡಿದೆ. ಈ ಎರಡು ಹಂತಗಳ ಯೋಜನೆಗೆ ಸರ್ಕಾರ ಸುಮಾರು 20 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

ಯೋಜನೆಯ ಅನುಷ್ಠಾನ
20 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟರೂ, ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಖರ್ಚು ಮಾಡಿದ್ದು ಕೇವಲ 967.3 ಕೋಟಿ ರೂ. ಅಂದರೆ ವಾರ್ಷಿಕ ಸುಮಾರು 30 ಕೋಟಿ ರೂ.ಗಳನ್ನು ಗಂಗಾ ಪುನಶ್ಚೇತನಕ್ಕಾಗಿ ಸರ್ಕಾರ ವ್ಯಯಿಸಿದೆ. ಶೇಕಡ 30ರಷ್ಟು ಮಾತ್ರ ಕಾರ್ಯಸಾಧನೆ ಆಗಿದೆ. ನದಿಯಿಂದ ಪ್ರತಿದಿನ 300 ಕೋಟಿ ಲೀಟರ್‍ನಷ್ಟು ಕಲ್ಮಶಗಳನ್ನು ಹೊರತೆಗೆಯಬೇಕೆಂದು ನಿರ್ಧರಿಸಲಾಗಿತ್ತು. ಆದರೆ, 100 ಕೋಟಿ ಲೀಟರ್‍ನಷ್ಟು ಮಾತ್ರ ಕಲ್ಮಶ ಹೊರತೆಗೆಯುವಲ್ಲಿ ಯಶಸ್ವಿಯಾಗಿರುವುದಾಗಿ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಮೂಲಗಳು ಬಹಿರಂಗಪಡಿಸಿವೆ. ಮೊದಲ ಹಂತದಲ್ಲಿ 260 ಯೋಜನೆಗಳಿಗೆ 461 ಕೋಟಿ ರೂ. ವ್ಯಯಿಸಲಾಗಿತ್ತು. ಈ ಹಂತದಲ್ಲಿ ಐದು ರಾಜ್ಯಗಳಲ್ಲಿ ಗಂಗಾ ನದಿಯಿಂದ 86.9 ಕೋಟಿ ಲೀಟರ್‍ನಷ್ಟು ಕಲ್ಮಶಗಳನ್ನು ಹೊರತೆಗೆಯಲಾಗಿತ್ತು. ಎರಡನೇ ಹಂತದಲ್ಲಿ 505 ಕೋಟಿ ರೂ. ವೆಚ್ಚ ಮಾಡಲಾಗಿತ್ತು; ಒಟ್ಟು 22.9 ಕೋಟಿ ಲೀಟರ್ ಕಲ್ಮಶ ಹೊರತೆಗೆಯಲಾಗಿತ್ತು.

ಯೋಜನಾವೆಚ್ಚದ ಗೊಂದಲ
ಪರಿಸರ ಸಚಿವಾಲಯದ ಮೂಲಗಳ ಪ್ರಕಾರ ಕಳೆದ, ಮೂವತ್ತು ವರ್ಷದಲ್ಲಿ 967.30 ಕೋಟಿ ರೂ. ವ್ಯಯಿಸಲಾಗಿದೆ. ಆದರೆ, ಪರಿಸರ ಮತ್ತು ಅರಣ್ಯ ಸಚಿವಾಲಯದ ಸಂಪುಟ ಸಮಿತಿ 2012ರ ಮೇ 18ರಂದು ರಾಜ್ಯಸಭೆಗೆ ನೀಡಿದ ವರದಿ ಪ್ರಕಾರ, ಕಳೆದ 20 ವರ್ಷಗಳಲ್ಲಿ ಗಂಗಾ ನದಿಯ ಸ್ವಚ್ಛತೆಗೆ 39,226 ಕೋಟಿ ರೂ. ವ್ಯಯಿಸಲಾಗಿದೆ.

ಹಿನ್ನಡೆಗೆ ಕಾರಣ
ಗಂಗಾ ಆ್ಯಕ್ಷನ್ ಪ್ಲಾನ್ ಅನುಷ್ಠಾನದ ಹಿನ್ನಡೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಪ್ರಮುಖ ಕಾರಣ. ಗಂಗಾ ನದಿ ಐದು ರಾಜ್ಯಗಳಲ್ಲಿ ಹರಿಯುತ್ತಿದ್ದು, ಅಲ್ಲೆಲ್ಲ ಬೇರೆ ಬೇರೆ ಪಕ್ಷಗಳ ಸರ್ಕಾರಗಳಿವೆ. ಆಡಳಿತಶಾಹಿಯ ವಿಳಂಬ ನೀತಿಯೂ ಗಂಗೆಯ ಸ್ವಚ್ಛತೆ ನಡೆಯದಿರಲು ಕಾರಣ. 1995ರಲ್ಲಿ ರಾಷ್ಟ್ರೀಯ ನದಿ ಸಂರಕ್ಷಣಾ ಪ್ರಾಧಿಕಾರ ರಚನೆಯಾಗಿದ್ದು, 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಒಂದು ಸಭೆ ನಡೆಸಿದ್ದರು. ಅದು ಬಿಟ್ಟರೆ ಕಳೆದ ಹತ್ತು ವರ್ಷಗಳಲ್ಲಿ ಗಂಗಾ ಸ್ವಚ್ಛತೆ ವಿಚಾರದಲ್ಲಿ ಪ್ರಾಧಿಕಾರದ ಒಂದು ಸಭೆಯೂ ನಡೆದಿಲ್ಲ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ನದಿ ಸಂರಕ್ಷಣಾ ಪ್ರಾಧಿಕಾರದ ಸಭೆಯನ್ನು ವರ್ಷಕ್ಕೊಮ್ಮೆ ನಡೆಸಿದರೆ ಸಾಕು ಎಂಬ ಫರ್ಮಾನು ಹೊರಡಿಸಿತ್ತು. ಇದರಿಂದಾಗಿ ಪ್ರಾಧಿಕಾರದ ಉದ್ದೇಶ, ಕಾರ್ಯ ಎಲ್ಲವೂ ಮೂಲೆಗುಂಪಾಯಿತು ಎಂದು ಖೇದ ವ್ಯಕ್ತಪಡಿಸುತ್ತವೆ ಮೂಲಗಳು.
ಪರಿಸರ ಮತ್ತು ಅರಣ್ಯ ಸಚಿವಾಲಯದ ಕಾರ್ಯದರ್ಶಿ ನೇತೃತ್ವದ ಸ್ಟೀರಿಂಗ್ ಕಮಿಟಿ ಈ ಪ್ರಾಧಿಕಾರದ ಕೆಲಸಕಾರ್ಯ ಫಾಲೋ ಅಪ್ ಹಾಗೂ ಹಣಕಾಸು ಹಂಚಿಕೆ ಜವಾಬ್ದಾರಿ ನಿರ್ವಹಿಸಬೇಕು. ಪ್ರಾಧಿಕಾರದ ಸಭೆ ನಡೆಯದೇ ಹೋದರೂ, ನದಿ ದಂಡೆಯ ಐದು ರಾಜ್ಯಗಳ ಅಧಿಕಾರಿಗಳ ಜತೆಗೆ ಈ ಸಮಿತಿಯ ಸಭೆಯಾದರೂ ಮೂರು ತಿಂಗಳಿಗೊಮ್ಮೆ ನಡೆಯಬೇಕಿತ್ತು. ಆದರೆ, 2007ರ ನಂತರ ಆ ಸಮಿತಿಯ ಸಭೆಯೂ ನಡೆದಿಲ್ಲ.
ಪ್ರಾಧಿಕಾರ ರಚನೆ: ಗಂಗಾ ನದಿ ಪುನಶ್ಚೇತನದ ಯೋಜನೆ ಕುಂಟುತ್ತಿದ್ದರೂ, 1986ರ ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 3(3) ಅಡಿ ಕೇಂದ್ರ ಸರ್ಕಾರ 2009ರ ಫೆಬ್ರವರಿ 20ರಂದು ನ್ಯಾಷನಲ್ ಗಂಗಾ ರಿವರ್ ಬೇಸಿನ್ ಅಥಾರಿಟಿ (ಎನ್‍ಜಿಆರ್‍ಬಿಎ)ಯನ್ನು ರಚಿಸಿತು. ಇದೇ ಕಾಯ್ದೆ ಅಡಿ ಗಂಗೆಯನ್ನು `ರಾಷ್ಟ್ರೀಯ ನದಿ’ ಎಂದು ಘೋಷಿಸಲಾಗಿದೆ. ಈ ಪ್ರಾಧಿಕಾರಕ್ಕೆ ಪ್ರಧಾನಮಂತ್ರಿ ಅಧ್ಯಕ್ಷರಾಗಿದ್ದು, ಗಂಗಾ ನದಿ ತಟದ ಐದು ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರು. ಈ ಪ್ರಾಧಿಕಾರ ಮೂರು ಬಾರಿ ಸಭೆ ಸೇರಿದ್ದು, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ.

ಗಂಗೆಯ ಹರಿವು ಮತ್ತು ಸ್ಥಳೀಯ ಸಮಸ್ಯೆ
ಗಂಗಾ ನದಿ ಹಾದು ಹೋಗುವ ನಗರಗಳಲ್ಲಿ ಹರಿದ್ವಾರ, ಕಾನ್ಪುರ, ಅಲಹಾಬಾದ್ ಹಾಗೂ ವಾರಾಣಸಿ ಪ್ರಮುಖವಾದವು. ಇಲ್ಲಿ ಸ್ಥಳೀಯ ಸಮಸ್ಯೆಗಳೂ ಹೆಚ್ಚು. ಹೀಗಾಗಿ ಗಂಗೆಯ ಸ್ವಚ್ಛತೆ ಸುಲಭದ ಮಾತಲ್ಲ. 2011ರ ಅಂಕಿಅಂಶದ ಪ್ರಕಾರ, ಹರಿದ್ವಾರದಲ್ಲಿ 12 ಪಟ್ಟಣ ಪಂಚಾಯಿತಿಗಳಿಂದ ವಾರ್ಷಿಕ ಒಟ್ಟು 89 ದಶಲಕ್ಷ ಲೀಟರ್‍ನಷ್ಟು ಅಮೇಧ್ಯವೂ ಸೇರಿದಂತೆ ಇತರೆ ಕಲ್ಮಶ ನದಿ ನೀರಿಗೆ ಸೇರುತ್ತದೆ. ಕಾನ್ಪುರದಲ್ಲಿ 476 ದಶಲಕ್ಷ ಲೀಟರ್‍ಗಳಷ್ಟು ಕಲ್ಮಶ, ಅಲಹಾಬಾದ್‍ನಲ್ಲಿ 58 ಚರಂಡಿಗಳು ಕೈಗಾರಿಕಾ ತ್ಯಾಜ್ಯಗಳನ್ನೂ ನದಿಗೆ ಸೇರಿಸುತ್ತಿವೆ.

ಗಂಗೆಯ ಹಾದಿ

 • ಗಂಗೆಯಲ್ಲಿ ಸೇರುವ ನದಿಗಳಿವು- ಯಮುನಾ, ರಾಮಗಂಗಾ, ಗೋಮತಿ, ಘಘರ, ಗಂಡಕ, ದಾಮೋದರ, ಕೋಸಿ, ಕಾಳಿ, ಚಂಬಲ್, ಬೆಟ್ವಾ, ಕೆನ್, ಟನ್ಸ್, ಸೋನೆ.
 • ಗಂಗಾ ನದಿ ಹರಿದು ಹೋಗುವ ಪಂಚರಾಜ್ಯಗಳು- ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ.

ಗಂಗೆಯ ಮಡಿಲಲ್ಲಿ ಹಾಲಾಹಲ

 • 80ರ ದಶಕದಲ್ಲಿ ಗಂಗೆಯ ಮಡಿಲಿನಲ್ಲಿದ್ದ ಡಾಲ್ಫಿನ್‍ಗಳು 5000, 2013ರಲ್ಲಿ ಡಾಲ್ಫಿನ್‍ಗಳ ಸಂಖ್ಯೆ 1,800
 • ಗಂಗಾ ನದಿಯ ನೀರಿಗೆ ಪ್ರತಿ ನಿಮಿಷ ಸೇರುವ ಮನುಷ್ಯ ಮಲದ ತ್ಯಾಜ್ಯ 11,00,000 ಲೀ.
 • ಗಂಗಾ ನದಿ ದಂಡೆಯಲ್ಲಿ ಪ್ರತಿವರ್ಷ ಅಂತ್ಯಸಂಸ್ಕಾರ ಕಾಣುವ ಮೃತದೇಹಗಳ ಸಂಖ್ಯೆ 40,000
 • ನದಿಗೆ ಪ್ರತಿ ವರ್ಷ ಸೇರಲ್ಪಡುವ ಬೂದಿಯ ಪ್ರಮಾಣ 15,000 ಟನ್
 • ಪ್ರತಿವರ್ಷ ಗಂಗಾ ನದಿ ನೀರಿಗೆ ಸೇರುವ ಅರ್ಧಂಬರ್ಧ ಸುಟ್ಟ ಹೆಣಗಳ ಪ್ರಮಾಣ 140-200 ಟನ್

ಸಾಬರ್‍ಮತಿ ಮಾದರಿ
ಗಂಗೆಯ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ಯಾವ ರೀತಿ ಕ್ರಮ ಕೈಗೊಳ್ಳುವರೆಂಬ ಸಹಜ ಕುತೂಹಲ ಎಲ್ಲರದ್ದು. ಇದಕ್ಕೆ ಪೂರಕವಾಗಿ, ಸಾಬರ್‍ಮತಿ ನದಿಯ ಪುನಶ್ಚೇತನದ ಕತೆಯನ್ನು ಅವರು ವಾರಾಣಸಿಯಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದರು. “ನಾನು 2001ರಲ್ಲಿ ಗುಜರಾತಿನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗ, ಸಾಬರ್‍ಮತಿ ನದಿಯ ಪರಿಸ್ಥಿತಿಯೂ ಹೀಗೇ ಇತ್ತು. ನರ್ಮದಾ ನದಿಯ ನೀರನ್ನು ಬಳಸಿ ಸಾಬರ್‍ಮತಿಯನ್ನು ಶುದ್ಧೀಕರಿಸಿದೆವು. ಈಗ ಅದೇ ಸಾಬರ್‍ಮತಿ ನದಿಯಲ್ಲಿ ನೀರಿನ ಸಹಜ ಹರಿವು ಇದ್ದು, ಅಹಮದಾಬಾದಿನ ಜೀವನದಿಯಾಗಿದೆ. ಇದೇ ಮಾದರಿಯನ್ನು ವಾರಾಣಸಿಯಲ್ಲೂ ಅಳವಡಿಸಬೇಕಾಗಿದೆ” ಎಂದು ಮೋದಿ ಹೇಳಿದ್ದರು.
ರಾಜಸ್ಥಾನದ ಉದಯಪುರ ಸಮೀಪದ ಅರಾವಳಿ ಬೆಟ್ಟದ ತಪ್ಪಲಲ್ಲಿ ಹುಟ್ಟಿ 370 ಕಿ.ಮೀ. ದೂರ ಹರಿದು ಗಲ್ಫ್ ಆಫ್ ಖಂಭಟ್‍ನಲ್ಲಿ ಅರಬ್ಬೀ ಸಮುದ್ರಕ್ಕೆ ಸೇರುವ ನದಿ ಸಾಬರ್‍ಮತಿ. 1978ರಲ್ಲಿ ಧರೋಯ್ ಎಂಬಲ್ಲಿ ಈ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿದ ನಂತರ, ಅಹಮದಾಬಾದ್ ಮತ್ತು ಗಾಂಧಿನಗರದಿಂದ ನದಿಗೆ ಕಲ್ಮಶಗಳು ಸೇರಿಸಲ್ಪಟ್ಟವು. 1990ರ ವೇಳೆಗೆ ನದಿ ಜೀವಸತ್ವವನ್ನೇ ಕಳೆದುಕೊಂಡಿತ್ತು. 1997ರಲ್ಲಿ ಅಹಮದಾಬಾದ್ ಮಹಾನಗರಪಾಲಿಕೆ ನದಿಯ ಪುನಶ್ಚೇತನಕ್ಕೆ ಕಾರ್ಯಯೋಜನೆ ರೂಪಿಸಿತು. ಈ ಯೋಜನೆಗೆ 1,100 ಕೋಟಿ ರೂ. ವೆಚ್ಚವಾಗಿತ್ತು. ಆ ಯೋಜನೆ 2012ರಲ್ಲಿ ಪೂರ್ಣಗೊಂಡು ಮಾದರಿ ಎನಿಸಿತು.

ಸರ್ಕಾರವು ಐಐಟಿ ರೂರ್ಕಿ ಹಾಗೂ ಕಾನ್ಪುರದ ವಿಜ್ಞಾನಿಗಳ ಸಮಿತಿ, ಸಚಿವರು, ಪರಿಸರ ತಜ್ಞರು ಹಾಗೂ ಸಾಧುಸಂತರ ಸಹಯೋಗದಲ್ಲಿ ಗಂಗಾ ಪುನಶ್ಚೇತನಕ್ಕೆ 90 ದಿನಗಳೊಳಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಿದೆ. ಇದನ್ನಾಧರಿಸಿ ಗಂಗಾ ನದಿಯನ್ನು ಹೂಗ್ಲಿಯಿಂದ ಬನಾರಸ್‍ತನಕ ಶುದ್ಧೀಕರಿಸಲಾಗುವುದು.
– ಸಾಧ್ವಿ ಉಮಾಭಾರತಿ, ಜಲಸಂಪನ್ಮೂಲ ಸಚಿವೆ

ಕೆಲ ನದಿಗಳ ಪುನಶ್ಚೇತನಕ್ಕೆ ತಗುಲಿದ ವೆಚ್ಚ ಹಾಗೂ ಪೂರ್ಣಗೊಳ್ಳಲು ತೆಗೆದುಕೊಂಡ ಅವಧಿ

ನದಿಗಳು           ಥೇಮ್ಸ್ (ಬ್ರಿಟನ್)     ರಿನೆ (ಯುರೋಪ್)       ದಾನುಬೆ (ಯುರೋಪ್)       ಗಂಗಾ (ಭಾರತ)
ಉದ್ದ (ಕಿ.ಮೀ)    346 1                     233 2                             860                            2525
ಜನಸಂಖ್ಯೆ            1.4 ಕೋಟಿ             5 ಕೋಟಿ                          8.6 ಕೋಟಿ                 50 ಕೋಟಿ
ಪುನಶ್ಚೇತನದ ಅವಧಿ 30 ವರ್ಷ              50 ವರ್ಷ                       15+ ವರ್ಷ                 25+ ವರ್ಷ
ಯೋಜನಾ ವೆಚ್ಚ

(ಕೋಟಿ ರೂ.ಗಳಲ್ಲಿ) 500 1,             94,000                           12,500                     20,000

* ಮಾಹಿತಿ – ಪರಿಸರ ಮತ್ತು ಅರಣ್ಯ ಸಚಿವಾಲಯ

 •  ಕಳೆದ 10 ವರ್ಷಗಳಲ್ಲಿ ನದಿ ಸಂರಕ್ಷಣಾ ಪ್ರಾಧಿಕಾರದ ಸಭೆಯೇ ನಡೆದಿಲ್ಲ.
 •  ಪರಿಸರ ಸಚಿವಾಲಯದ ಮೂಲಗಳ ಪ್ರಕಾರ ಗಂಗೆಯ ಶುದ್ಧೀಕರಣಕ್ಕೆ 30 ವರ್ಷಗಳಲ್ಲಿ ಖರ್ಚಾದ ಮೊತ್ತ 967.30 ಕೋಟಿ ರೂ.
 • ಪರಿಸರ ಸಚಿವಾಲಯದ ಕ್ಯಾಬಿನೆಟ್ ಸಮಿತಿ ವರದಿ ಪ್ರಕಾರ ಯೋಜನೆಗೆ ವ್ಯಯಿಸಿದ್ದು 39,226 ಕೋಟಿ ರೂ.
 • ಯೋಜನಾವೆಚ್ಚದ ಬಗ್ಗೆ ನಿಖರ ಮಾಹಿತಿ ಬಹಿರಂಗಪಡಿಸದ ಸಚಿವಾಲಯ

ಗಂಗಾ ಆ್ಯಕ್ಷನ್ ಪ್ಲಾನ್ 1
ಅವಧಿ: 1986- 1993
ಅನುಮೋದಿತ ವೆಚ್ಚ 461 ಕೋಟಿ ರೂ.

ಗಂಗಾ ಆ್ಯಕ್ಷನ್ ಪ್ಲಾನ್ 2
ಅವಧಿ : 1993-96 – 2001
ಬಿಡುಗಡೆಯಾದ ಹಣ 591 ಕೋಟಿ ರೂ.
ಐದು ರಾಜ್ಯಗಳು ಹಾಗೂ ಕೇಂದ್ರ ವ್ಯಯಿಸಿದ್ದು 505 ಕೋಟಿ ರೂ.

ಗಂಗಾ ಮಲಿನಕ್ಕೆ ಜೈಲು ಶಿಕ್ಷೆ
ಗಂಗಾ ನದಿ ಪುನಶ್ಚೇತನಕ್ಕೆ ಯೋಜನೆ ಜತೆಗೆ, ಗಂಗೆ ಮಲಿನವಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲೂ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಗಂಗಾನದಿಯ ಮೂಲಕ ವಾರಾಣಸಿಯಿಂದ ಹೂಗ್ಲಿಯನ್ನು ಸಂಪರ್ಕಿಸುವ 45 ಮೀ. ಅಗಲ, 3 ಮೀಟರ್ ಆಳದ ಜಲಮಾರ್ಗ ನಿರ್ಮಿಸಲು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಸಿದ್ಧಪಡಿಸಿರುವ ಪ್ರಸ್ತಾವನೆ ಪ್ರಕಾರ, ಗಂಗಾ ನದಿಯಲ್ಲಿ ಉಗುಳುವುದು ಅಥವಾ ಕಸ ಎಸೆಯುವುದು, ತ್ಯಾಜ್ಯಗಳನ್ನು ಸುರಿಯುವುದು ಮಾಡಿದಲ್ಲಿ 3 ವರ್ಷ ಜೈಲು ಶಿಕ್ಷೆ ಅಥವಾ 10 ಸಾವಿರ ರೂ. ದಂಡದ ಶಿಕ್ಷೆಯಿದೆ.

ಅಭಿಯಾನಕ್ಕೆ ಜನಬೆಂಬಲ
ಚುನಾವಣಾ ಗೆಲುವಿನ ಬಳಿಕ ವಾರಾಣಸಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ, ಗಂಗಾರತಿ ಮಾಡಿದ ಬಳಿಕ ಜನರನ್ನು ಉz್ದÉೀಶಿಸಿ ಮಾತನಾಡಿದ್ದರು. ಗಂಗಾ ನದಿಯ ಪುನಶ್ಚೇತನಕ್ಕೆ ಇಲ್ಲಿನ ಜನರೇ ಮುನ್ನುಡಿ ಬರೆಯಬೇಕು. ಸ್ಥಳೀಯರ ಸಹಭಾಗಿತ್ವ ಇಲ್ಲದೇ ಇದ್ದರೆ ಯಾವುದೇ ಕಾರ್ಯ ಯಶಸ್ವಿಯಾಗಲಾರದು ಎಂದು ಅವರು ಹೇಳಿದ್ದರು. ಅವರ ಈ ಮಾತು ಸ್ಥಳೀಯರ ಮೇಲೆ ಪ್ರಭಾವ ಬೀರಿದ್ದು, ವಾರಾಣಸಿಯ ವಿವಿಧ ಸಂಘಟನೆಗಳು, ಯುವಜನರ ಒಕ್ಕೂಟಗಳು ಸ್ವಯಂಪ್ರೇರಣೆಯಿಂದ ಗಂಗಾ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡಿವೆ.

Leave a Reply

Your email address will not be published. Required fields are marked *