ಗುಟ್ಕಾ,ಬೀಡಾ ತಿನ್ನಿ.. ಥೂ… ಎಂದು ಉಗಿಯಬೇಡಿ..

ಮೇ ೩೧. ಅದೊಂದೇ ದಿನ ವಿಶ್ವದಾದ್ಯಂತ ನೋ ಟೊಬಾಕೋ ಡೇ.. ಆಚರಿಸ್ತಾರೆ. ಬಾಕಿ ಉಳಿದ ದಿನಗಳಲ್ಲಿ ಎಷ್ಟು ಬೇಕಾದ್ರೂ ಸಿಗರೇಟ್ ಸೇದಬಹುದು.. ಬೀಡಿ ಕೂಡಾ ಸೇದಬಹುದು.. ಇದ್ಯಾವುದೂ ಬೇಡವೇ.. ಅಚ್ಚ ಗ್ರಾಮಸ್ಥರಂತೆ ಬಾಯಿ ಕೆಂಪಾಗಿಸುವ ಬೀಡಾ ಜಗಿಯಬಹುದು.. ಇನ್ನೇನು ಹೆಚ್ಚು ಹೇಳಬೇಕು ಅಂದ್ರೆ ಗುಟ್ಕಾ ಕೂಡಾ ತಿಂದರೆ ತಪ್ಪೇನಿಲ್ಲ ಬಿಡಿ…

ಯಾಕೆ ಹೀಗೆ ಹೇಳ್ತಾ ಇದ್ದೇನೆ ಅಂತ ಹುಬ್ಬೇರಿಸಬೇಡಿ.. ಇದು ಈ ಜಗತ್ತಿನಲ್ಲಿ ಕಾಣುತ್ತಿರುವ ವಾಸ್ತವ. ಯಾವುದೇ ಆಚರಣೆ ಇರಲಿ.. ಅದು ಕೇವಲ ಒಂದು ದಿನಕ್ಕೆ ಸೀಮಿತ. ಆ ದಿನ ಹೇಗೆಲ್ಲ ಬಳಕೆಯಾಗತ್ತೆ ಗೊತ್ತಾ.. ಜಾಗೃತಿಯ ಹೆಜ್ಜೆ, ವ್ಯಾವಹಾರಿಕ ಹೆಜ್ಜೆ.. ಇವೆಲ್ಲವೂ ಅದು ಯಾವುದೇ ಕ್ಷೇತ್ರ ಇರಲಿ. ಇಂತಹ ಆಚರಣೆಗಳಲ್ಲಿ ನಾವು ಕಾಣಬಹುದು.  ಜಗತ್ತಿನಲ್ಲಿ ಯಾರು ಏನು ಬೇಕಾದ್ರೂ ಮಾಡಲಿ.. ಆದರೆ, ಬೀಡಾ, ಗುಟ್ಕಾ ತಿನ್ನುವ ಗೆಳೆಯರನ್ನು ಕಂಡರೆ ನನಗೆ ಎಲ್ಲಿಲ್ಲದ ಭಯ.. ಯಾಕೆ ಗೊತ್ತಾ.. ?

****
ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವ ನೂರರಲ್ಲಿ ೭೦ಕ್ಕೂ ಹೆಚ್ಚು ಜನಕ್ಕೆ ಇಂತಹ ಅನುಭವ ಆಗಿಯೇ ಆಗಿರುತ್ತದೆ. ಮೊದಲೇ ಟ್ರಾಫಿಕ್ ಒತ್ತಡ ಇರುವ ರಸ್ತೆ.. ಬಿಎಂಟಿಸಿ ಬಸ್‌ಗಳ ಬಗ್ಗೆ ಹೇಳಬೇಕಾ.. ? ಇನ್ನು ಕಾರುಗಳು, ಅಟೋಗಳು ಇವೆಲ್ಲ ಸಂಚರಿಸುತ್ತಿರುವಾಗ ನಡುವೆ ಇರುವ ಸಂಧಿಯಲ್ಲಿ ತೂರಿಕೊಂಡು ಹೋಗುವ ಪ್ರಯತ್ನ ನಡೆಸುವ ದ್ವಿಚಕ್ರ ಸವಾರರು.. (ಸಿಂಪ್ಲಿ ಹೇಳಬೇಕು ಅಂದ್ರೆ ನನ್ನಂಥವರು) ಇಂತಹ ಸಂಚಾರ ವ್ಯವಸ್ಥೆಯಲ್ಲಿ ಬಸ್‌‌ನಲ್ಲಿ ಪ್ರಯಾಣಿಸುವವರು ಬಾಯಿಯಲ್ಲಿ ಗುಟ್ಕಾ ಅಥವಾ ಬೀಡಾ ಹಾಕಿಕೊಂಡಿದ್ದರೆ.. ? ಅಂತಹ
ಕೆಲವು ಘಟನೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ..

ಘಟನೆ ೧ – ಕನ್ನಿಂಗ್‌ಹ್ಯಾಂ ರಸ್ತೆಯ ಬದಿಯ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದೆ. ಏಕಮುಖಿ ಸಂಚಾರದ ರಸ್ತೆ ಅದು.. ಚಂದ್ರಿಕಾ ಹೋಟೆಲ್ ಸಿಗ್ನಲ್‌ನಿಂದ ಇಂಡಿಯನ್ ಎಕ್ಸ್‌ಪ್ರೆಸ್‌ ಕಡೆಗೆ ನಡೆದು ಹೋಗುತ್ತಿದೆ. ಬಿಎಂಟಿಸಿ ಬಸ್ಸೊಂದು ಪಕ್ಕದಲ್ಲೇ ಹಾದುಹೋಯಿತು. ಮೊಣಕಾಲಿನಿಂದ ಕಳೆಗೆ ಏನೋ ಬಿಸಿಯಾದಂತಾಯಿತು.. ಏಯ್‌…! ಎಂದು ಕೂಗು ಹಾಕುವಷ್ಟರಲ್ಲಿ..  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು ಒಬ್ಬರು ಗುಟ್ಕಾ ಜಗಿದು ಉಗಿದ ಪರಿಯಾಗಿತ್ತು ಅದು..ಎಂಬ ಅರಿವಾಗಿತ್ತು… ನನಗೋ ಸಂಕಟ.. ಬಸ್ ವೇಗವಾಗಿ ಹೋಗುತ್ತಿದೆ.. ನಿಲ್ಲಿಸಬೇಕು ಅಂದ್ರೂ ಆಗಲ್ಲ.. ಬಸ್ಸಿಗೆ ಕಲ್ಲು ಹೊಡೆಯೋಣ ಅನ್ನುವಷ್ಟು ಸಿಟ್ಟು ಬಂದಿತ್ತು. ಆದರೇನು ಮಾಡಲಿ.. ಅಸಹಾಯಕ ಪರಿಸ್ಥಿತಿ…
“ಹಾಗೆ ಉಗಿದವರಿಗೆ ನಾನು ಹೇಳೋದಿಷ್ಟೆ… ಇಂದು ನಾನು.. ನಾಳೆ ಈ ಅನುಭವ ನಿಮಗೆ ಗ್ಯಾರೆಂಟಿ.. ಮರೆಯದಿರಿ.. ಕಾಲಚಕ್ರ ಉರುಳುತ್ತಿರುತ್ತದೆ..” ಇದಕ್ಕಿಂತ ಹೆಚ್ಚೇನೂ ಹೇಳಲಾರೆ..

ಘಟನೆ ೨ – ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಬಿಎಂಟಿಸಿ ಬಸ್ ಓವರ್ ಟೇಕ್‌ ಮಾಡುತ್ತಿದ್ದೆ. ಯಾವನೋ ಒಬ್ಬ ಕಿಟಕಿಯಿಂದ ತಲೆಹೊರಹಾಕಿ ಉಗಿದೇ ಬಿಟ್ಟ.. ತಪ್ಪಿಸುವುದಿರಲಿ.. ಸ್ವಲ್ಪ ಆ ಕಡೆ ಈ ಕಡೆ ಆದ್ರೂ ಅಪಘಾತ ಗ್ಯಾರೆಂಟಿ.. ಹಾಕಿದ್ದ ಶರ್ಟ್ ಬಣ್ಣವೇ ಬದಲಾಗಿ ಹೋಗಿತ್ತು.. ಅಷ್ಟು ಮಾಡಿದ್ದ ಪುಣ್ಯಾತ್ಮ.. ಬಸ್‌ ಎದುರು ಬೈಕ್ ನಿಲ್ಲಿಸಿ ಒಳಗೆ ಹೋಗಿ ಉಗಿದವನ ಮುಖಕ್ಕೆ ಉಗಿಯೋಣ ಅನ್ನುವಷ್ಟು ಸಿಟ್ಟು ಬರುತ್ತಿತ್ತು. ಆದರೆ, ಏನು ಮಾಡುವುದು.. ಉಗಿದವನು ಯಾರು ಅನ್ನೋದೇ ಗೊತ್ತಾಗಲಿಲ್ಲ..

ಘಟನೆ ೩ – ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿ ಬಾಯಿಯಲ್ಲಿ ಬೀಡಾ ಇತ್ತು. ಜಗಿದು ಜಗಿದು.. ಬಾಯಿ ತುಂಬಿಕೊಂಡಿತ್ತು.. ನನಗೆ ಮೊದಲೇ ಗೊತ್ತಿತ್ತು.. ಈ ವ್ಯಕ್ತಿ ಹೊರಗೆ ಉಗಿದು ಗಲೀಜು ಮಾಡ್ತಾನೆ ಈಗ ಅಂತ.. ಅಂದುಕೊಂಡಂತೆ ಒಂದು ಕಡೆ ಬಸ್ ಹೋಗುತ್ತಿರುವಂತೆಯೇ ಕಿಟಕಿಯಿಂದ ತಲೆಹೊರಗೆ ಹಾಕಿ ಉಗಿದೇ ಬಿಟ್ಟ.. ಹಿಂದಿನ ಸೀಟಿನಲ್ಲಿದ್ದ ವ್ಯಕ್ತಿ ಎದ್ದು ಈತನ ತಲೆಗೊಂದು ಮೊಟಕಿದ.. “ಏನ್ ತಿಂತೀಯ ಹೊಟ್ಟೆಗೆ ? ಕಾಮನ್ ಸೆನ್ಸ್‌ ಇಲ್ವಾ ? ” ಎಂದು ಬೈದು ಸುಮ್ಮನಾದ.. ಬೀಡಾ ತಿಂದವನ ಬಾಯಿಗೆ ಮತ್ತೆ ಬೀಗ.. ಗಾಬರಿಯಾಗಿದ್ದ ಆತ…

***
ಇನ್ನು ಬೀಡಿ, ಸಿಗರೇಟ್ ಬಗ್ಗೆ ಹೇಳಬೇಕು ಅಂದ್ರೆ, ಇವು ಗುಟ್ಕಾ, ಬೀಡಿಯಷ್ಟು ಡೇಂಜರಸ್‌ ಅಲ್ಲ.. (ನಮ್ಮಂತಹ ಪಾದಚಾರಿಗಳು, ಸಹಪ್ರಯಾಣಿಕರು ಮತ್ತು ದ್ವಿಚಕ್ರವಾಹನಸವಾರರಿಗೆ ಸಂಬಂಧಪಟ್ಟಂತೆ). ಬೆಂಗಳೂರಿನಂತಹ ಮಹಾನಗರದಲ್ಲಿ ಬೀಡಿ ಸೇದುವವರ ಸಂಖ್ಯೆ ಕಡಿಮೆ.. ಹಾಗೊಂದು ವೇಳೇ ಸೇದುವವರು ಕಂಡ್ರೂ ಕಡಿಮೆ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಬಹುಶಃ ಅಷ್ಟು ಕೆಟ್ಟ ವಾಸನೆ ನಗರವಾಸಿಗಳಿಗೆ ಹಿಡಿಸುತ್ತಿಲ್ಲವೇನೋ.. ಅದಕ್ಕಿಂತ ವಾಹನಗಳ ಹೊಗೆಯೇ ಸಾಕಾಗಬಹುದು.. ಸಿಗರೇಟು ಸೇದುವವರಂತೂ ಹತ್ತು ಜನರಲ್ಲಿ ೫ ಜನ ಇದ್ದೇ ಇರುತ್ತಾರೆ.. ಸಿಗರೇಟು ಸೇದಿ ತಪ್ಪೇನಿಲ್ಲ. ಆದರೆ, ಇಂತಹವರಲ್ಲಿ ಒಂದೇ ಒಂದು ಮನವಿ ಏನು ಗೊತ್ತಾ ? ವಾಹನ ಚಲಾಯಿಸುವಾಗ ಸಿಗರೇಟು ಸೇದುತ್ತಾ ಅದರ ಬೂದಿಯನ್ನು ಕೊಡವಬೇಡಿ.. ಅದು ಹಾರಿ ಹಿಂದೆ ಬರುತ್ತಿರುವವರ ಕಣ್ಣಿಗೆ ಬೀಳುತ್ತವೆ.. ಮುಂದಿನ ಪರಿಣಾಮದ ಬಗ್ಗೆ ಹೇಳಬೇಕಾಗಿಲ್ಲ ಅಲ್ವಾ… ಸಾಧ್ಯವಾದಷ್ಟು ನಾವೇ ದೂರ ಇರ್ತೇವೆ..
***
ಇಂತಹ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇದೆ. ಇದನ್ನು ತಪ್ಪಿಸೋದಕ್ಕೆ ಜಾಗೃತಿ ಮೂಡಿಸಬೇಕಾಗಿದೆ. ಹೇಗೆ ಜಾಗೃತಿ ಮೂಡಿಸಬಹುದು.. ನಿಮಗೇನಾದ್ರೂ ಐಡಿಯ ಇದ್ರೆ ತಿಳಿಸಿ.. ಎಲ್ಲರೂ ಜೊತೆಗೂಡಿ ಕಾರ್ಯಾಚರಿಸೋಣ.. ಏನಂತೀರಿ..

Leave a Reply

Your email address will not be published. Required fields are marked *