ಜನ ಬಯಸಿದ್ದು ದಿಟ್ಟತನ ಅಧ್ಯಕ್ಷ ತೋರಿದ್ದೂ ಅದನ್ನೇ..!

Hollande
Hollande

`ಭಯೋತ್ಪಾದಕರ ದಾಳಿಯಿಂದಾಗಿ ಫ್ರಾನ್ಸ್ ನಶಿಸಿಹೋಯಿತು ಎಂದು ಭಾವಿಸಬೇಡಿ. ಫ್ರೆಂಚರ ರಕ್ಷಣೆ ಸರ್ಕಾರದ ಆದ್ಯ ಹೊಣೆಗಾರಿಕೆ. ಸಿರಿಯಾ ಹಾಗೂ ಇರಾಕ್‍ಗಳನ್ನು ನೆಲೆಯನ್ನಾಗಿಸಿಕೊಂಡಿರುವ ಆ ಉಗ್ರರನ್ನು ಪೂರ್ಣ ನಿರ್ನಾಮ ಮಾಡಬೇಕಾದ ಅಗತ್ಯವಿದೆ. ಇದಕ್ಕಾಗಿಯೇ ನಾವು ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿರುವುದಲ್ಲದೇ, ಉಗ್ರರ ವಿರುದ್ಧ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದ್ದೇವೆ. ಇದನ್ನು ಎಲ್ಲಿಯ ತನಕ ಅಗತ್ಯವೋ ಅಲ್ಲಿ ತನಕ ಮುಂದುವರಿಸಲಿದ್ದೇವೆ’

ಜಿಹಾದಿ ಉಗ್ರರ ವಿರುದ್ಧ ಹೀಗೆ ಘಂಟಾಘೋಷವಾಗಿ ಸಮರಸಾರಿರುವ ನಾಯಕ ಬೇರಾರೂ ಅಲ್ಲ, ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ. ಅವರ ಈ ದಿಟ್ಟತನ ಹಾಗೂ ಸ್ವಾಭಿಮಾನದ ನಡೆಯನ್ನು ಫ್ರೆಂಚರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಫ್ರಾನ್ಸ್ ಪಾಲಿಗೆ ಕಳೆದ ಕ್ಯಾಲೆಂಡರ್ ವರ್ಷಾರಂಭ ಹಾಗೂ ವರ್ಷದ ಕೊನೆಗೆ ಉಗ್ರ ದಾಳಿಯ ಆಘಾತ. ಅಂತಹ ಕರಾಳ ದಿನಗಳಲ್ಲಿ ಅಲ್ಲಿನ ಜನ ಬಯಸಿದಂತಹ ನಾಯಕತ್ವ ಹೊಲಾಂಡೆ ಮೂಲಕ ಸಿಕ್ಕಿದ್ದು, ಆತಂಕದ ನಡುವೆಯೂ ಫ್ರೆಂಚರಲ್ಲಿ ಸುರಕ್ಷತೆಯ ಭಾವವನ್ನು ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ ಈ ಬೆಳವಣಿಗೆ ಹೊಲಾಂಡೆ ಅವರಿಗೆ ರಾಜಕೀಯ ಲಾಭ ತಂದುಕೊಡಲಿದೆ ಎಂಬ ಮಾತು ಬಲವಾಗಿ ಕೇಳತೊಡಗಿದೆ. ಆದರೆ, ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸಿದ ಹೊತ್ತು ಹೀಗಿರಲಿಲ್ಲ ಪರಿಸ್ಥಿತಿ.

ಅಂದು 2009ರ ಬೇಸಿಗೆ ಕಾಲ. ದೇಶದ ಅಧ್ಯಕ್ಷರಾಗಿದ್ದವರು ನಿಕೋಲಸ್ ಸರ್ಕೋಸಿ. ದೇಶದಲ್ಲಿ ನಿಧಾನವಾಗಿ ರಾಜಕೀಯ ಪಕ್ಷಗಳು ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆ ನಡೆಸಿದ್ದವು. ಸೋಷಿಯಲಿಸ್ಟ್ ಪಕ್ಷದ ನಾಯಕ ಫ್ರಾಂಕೋಯಿಸ್ ಹೊಲಾಂಡೆ ಅಂದು ತಮ್ಮ ಪಕ್ಷ ಹಾಗೂ ಮಿತ್ರಪಕ್ಷಗಳ ನಾಯಕರನ್ನು ಅನೌಪಚಾರಿಕ ಔತಣಕ್ಕೆ ಕರೆದಿದ್ದರು. ಸಾಮಾನ್ಯವಾಗಿ ಎಲ್ಲ ರಾಜಕಾರಣಿಗಳು ಅನುಸರಿಸುವ ತಂತ್ರವನ್ನೇ ಹೊಲಾಂಡೆ ಕೂಡ ಅನುಸರಿಸಿದ್ದರು. 500 ಆಹ್ವಾನಿತರ ಪೈಕಿ 400 ನಾಯಕರು ಅಲ್ಲಿಗೆ ಆಗಮಿಸಿದ್ದರು. ಮಾಧ್ಯಮಗಳು ಆ ಕಡೆಗೆ ದೃಷ್ಟಿ ಹಾಯಿಸಿರಲಿಲ್ಲ. ಕಾರಣವೂ ಇಲ್ಲದಿಲ್ಲ. ವಿರೋಧ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಹೊಲಾಂಡೆ ಅದಾಗಲೇ ವಿಫಲ ನಾಯಕರಾಗಿದ್ದರು. ಹೀಗಾಗಿ ಫ್ರಾನ್ಸ್‍ನ ರಾಜಕೀಯದ ಮಟ್ಟಿಗೆ ಹತ್ತರೊಟ್ಟಿಗೆ ಒಂದು ಎಂಬತಿದ್ದರು ಹೊಲಾಂಡೆ.
ಇದಕ್ಕೂ ಮುನ್ನ ಪಕ್ಷದೊಳಗೆ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಗುರುತಿಸಿಕೊಳ್ಳಲು ಸ್ಪರ್ಧಿಸಿದ್ದರು. ಆದರೆ, ಡೊಮಿನಿಕ್ ಸ್ಟ್ರಾಸ್ ಕನ್ಹ್‍ರ ಪ್ರಭಾವಿ ವ್ಯಕ್ತಿತ್ವದ ಎದುರು ಹೊಲಾಂಡೆ ಪೇಲವವಾಗಿದ್ದರು. ಅದೃಷ್ಟವೋ ಎಂಬಂತೆ ಶಂಕಿತ ಲೈಂಗಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕನ್ಹ್ ಅವರು ನ್ಯೂಯಾರ್ಕ್‍ನಲ್ಲಿ ಬಂಧಿಸಲ್ಪಟ್ಟಾಗ ಹೊಲಾಂಡೆ ಅದೃಷ್ಟ ಖುಲಾಯಿಸಿತ್ತು. ನಂತರದ ಎರಡು ವರ್ಷದಲ್ಲಿ ರಾಜಕಾರಣ ಯಾವ ರೀತಿ ಬದಲಾಯಿತು ಎಂದರೆ, ಆಪ್ತರು ಹಾಗೂ ಸಹೋದ್ಯೋಗಿಗಳ ವಲಯದಲ್ಲಿ “ಫ್ಲಾಂಬಿ”(ಒಂದು ಬ್ರಾಂಡ್‍ನ ಮೃದುವಾದ ತಿನಿಸು) ಎಂದೇ ಕರೆಯಿಸಿಕೊಳ್ಳುತ್ತಿದ್ದ ಹೊಲಾಂಡೆ, ನಾಯಕತ್ವ ಗುಣವನ್ನು ಅದ್ಭುತವೆನ್ನುವಂತೆ ಬೆಳೆಸಿಕೊಂಡುಬಿಟ್ಟರು. ಹಾಗೆ 2012ರಲ್ಲಿ ಫ್ರಾನ್ಸ್‍ನಲ್ಲಿ ಅಧ್ಯಕ್ಷೀಯ ಚುನಾವಣೆಯ ಕಣ ರಂಗೇರಿತ್ತು. ಸರ್ಕೋಸಿ ಹಾಗೂ ಹೊಲಾಂಡೆ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು.
ಈ ಬೆಳವಣಿಗೆಗಳನ್ನು ಗಮನಿಸಿದ್ದ ಲೊರಿಂಟ್‍ನಲ್ಲಿರುವ ಇತಿಹಾಸಕಾರ ಬೆಂಜಮಿನ್ ಸ್ತೋರಾ ಅಂದು, `ಈ ಸಲದ ಚುನಾವಣೆಯಲ್ಲಿ ಹೊಲಾಂಡೆ ಅವರನ್ನು ನಾನು ಬೆಂಬಲಿಸುತ್ತಿz್ದÉೀನೆ ಎಂದು ಪತ್ರಕರ್ತನೊಬ್ಬನ ಬಳಿ ಹೇಳಿದಾಗ ಆತ ನನ್ನತ್ತ ನೋಡಿ ಲೇವಡಿ ಮಾಡಿದ್ದ’ ಎಂದು ಹೇಳಿದ್ದನ್ನು ನೆನಪಿಸಿಕೊಂಡು ಲೇಖನವೊಂದರಲ್ಲಿ ದಾಖಲಿಸಿದ್ದಾರೆ.
ಆ ಚುನಾವಣೆಯಲ್ಲಿ ಹೊಲಾಂಡೆ ಶೇಕಡ 51.6 ಮತಗಳಿಸಿ ಗೆಲುವು ಸಾಧಿಸಿದರು. ಆ ಕ್ಷಣವನ್ನು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದು ಹೀಗೆ- `ಬದುಕಿನ ಪ್ರತಿಯೊಂದು ಕ್ಷಣವೂ ನನ್ನನ್ನು ಈ ಕ್ಷಣಕ್ಕೆ ಬೇಕಾದಂತೆ ತಯಾರು ಮಾಡಿತು. ಅದೊಂದು ಸುದೀರ್ಘ ಪಯಣ’!.
ಹೀಗೆ ಅಧ್ಯಕ್ಷರಾಗಿ ಆರಂಭವಾದ ಅವರ ಬದುಕಿನ ಪಯಣ ಆ ಪದವಿಯಲ್ಲೀಗ ಮೂರೂವರೆ ವರ್ಷ ದಾಟಿದೆ. ಇದೀಗ ಫ್ರಾನ್ಸ್‍ನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಪಕ್ಷಗಳು ಸಿದ್ಧತೆ ನಡೆಸಿವೆ. 2009ಕ್ಕೂ 2016ರಲ್ಲಿ ಹೊಲಾಂಡೆ ಇರುವ ಪರಿಸ್ಥಿತಿ ಬಹಳಷ್ಟು ಬದಲಾಗಿವೆ. ಅಂದು ನಿರ್ಲಕ್ಷಿಸಲ್ಪಟ್ಟ ಹೊಲಾಂಡೆ ಇದೀಗ ಸಮರ್ಥ ನಾಯಕರಾಗಿ ರೂಪುಗೊಂಡಿದ್ದು, ಮತ್ತೊಂದು ಅವಧಿಗೆ ಅಧ್ಯಕ್ಷ ಪಟ್ಟ ಅಲಂಕರಿಸಬೇಕು ಎಂಬ ಭಾವನೆ ಫ್ರಾನ್ಸ್‍ನಲ್ಲಿ ವ್ಯಕ್ತವಾಗಿದೆ. ಆದರೆ, ಈ ನಡುವೆ ಅವರು ಸವೆಸಿದ ಹಾದಿ ಹೂವಿನ ಹಾಸಿನದ್ದಾಗಿರಲಿಲ್ಲ. 2012ರಿಂದ 2015ರ ತನಕವೂ ಅವರೊಬ್ಬ ಅಸಮರ್ಥ ನಾಯಕ, ಅವರಲ್ಲಿ ದೂರ ದೃಷ್ಟಿ ಇಲ್ಲ, ದಿಟ್ಟತನ ಇಲ್ಲ ಎಂಬ ಮುಂತಾದ ಮಿಶ್ರಭಾವನೆಗಳು ಜನರಲ್ಲಿದ್ದವು.
ಆದರೆ 2015ರ ಜನವರಿಯಲ್ಲಿ ಚಾರ್ಲಿ ಹಬ್ಡೋ ಪತ್ರಿಕಾ ಕಚೇರಿ ಮೇಲೆ ನಡೆದ ಉಗ್ರ ದಾಳಿ, ನಂತರ ನವೆಂಬರ್ ಕೊನೆಯಲ್ಲಿ ಪ್ಯಾರಿಸ್‍ನಲ್ಲಿ ನಡೆದ ಉಗ್ರ ದಾಳಿ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿಬಿಟ್ಟವು. ಈ ಸಂಕಷ್ಟಮಯ ಸನ್ನಿವೇಶದಲ್ಲಿ ಹೊಲಾಂಡೆ ತಳೆದ ನಿಲುವು ಅವರ ನಾಯಕತ್ವದ ಬಗ್ಗೆ ಇನ್ನಷ್ಟು ನಂಬಿಕೆಯನ್ನು ಹುಟ್ಟಿಸಿದವು. ಇದೀಗ ಅವರ ಮುಂದೆ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ಸವಾಲಿದೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಾಣಬೇಕಾದ ಅವಶ್ಯಕತೆ ಇದೆ. ಅದಾಗಲೇ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಬೆಂಬಲಿಸಿದ ಅವರು, ಸಲಿಂಗಿಗಳ ವಿವಾಹವನ್ನೂ ಬೆಂಬಲಿಸಿದರು. ಇದಲ್ಲದೇ, ಕಾರ್ಮಿಕ ಸುಧಾರಣೆ, ಪಿಂಚಣಿ ಸುಧಾರಣೆಯಂತಹ ಕ್ರಮಗಳನ್ನು ಕೈಗೊಂಡು ಜನಮೆಚ್ಚುಗೆ ಗಳಿಸಿದರು. ಇವೆಲ್ಲದರ ನಡುವೆ, ಸಕಾರಾತ್ಮಕ ನಡೆಗಳನ್ನು ಒಳಗೊಂಡ ವಿದೇಶ ನೀತಿಯನ್ನು ಅನುಸರಿಸುತ್ತಿರುವ ಹೊಲಾಂಡೆ ಜಗತ್ತು ಗುರುತಿಸುವಂತಹ ಪ್ರಭಾವಿ ನಾಯಕರಾಗಿ ಬೆಳೆದುಬಿಟ್ಟರು.
ನಾರ್ಮೆಂಡಿಯ ರೊವೆನ್‍ನಲ್ಲಿ 1954ರ ಆಗಸ್ಟ್ 12ರಂದು ಫ್ರಾಂಕೋಯಿಸ್ ಹೊಲಾಂಡೆ ಜನಿಸಿದರು. ಮಧ್ಯಮ ವರ್ಗದ ಕ್ಯಾಥೋಲಿಕ್ ಕುಟುಂಬ ಅವರದ್ದು. ತಾಯಿ ಸಾಮಾಜಿಕ ಕಾರ್ಯಕರ್ತೆ ನಿಕೋಲೆ ಫ್ರೆಡ್ರಿಕ್ ಮಾರ್ಗರೆಟ್ ಟ್ರಿಬೆರ್ಟ್. ತಂದೆ ಕಿವಿ ಮೂಗು ಗಂಟಲು ವೈದ್ಯ ಹಾಗೂ ರಾಜಕಾರಣಿ ಜಾರ್ಜಸ್ ಗುಸ್ತವೆ ಹೊಲಾಂಡೆ. ನ್ಯೂಯೆಲ್ಲಿ-ಸರ್-ಸೈನೆಗಳಲ್ಲಿ ಶಿಕ್ಷಣ ಪಡೆದ ಅವರು, ಅಮೆರಿಕದಲ್ಲಿ ಪದವಿ ಶಿಕ್ಷಣ ಪಡೆದು ಲೆಕ್ಕಪತ್ರ ಪರಿಶೀಲನೆ ಕೋರ್ಟ್‍ನಲ್ಲಿ ಕೌನ್ಸಿಲರ್ ಆಗಿ ಉದ್ಯೋಗ ಆರಂಭಿಸಿದರು.
ರಾಜಕೀಯ ಜೀವನ ಆರಂಭವಾಗಿದ್ದು 1970ರ ದಶಕದಲ್ಲಿ. 1974ರ ಅಧ್ಯಕ್ಷೀಯ ಚುನಾವಣೆ ಬಳಿಕ ಸೋಷಿಯಲಿಸ್ಟ್ ಪಕ್ಷದ ಪ್ರಾಥಮಿಕ ಸದಸ್ಯರಾಗಿ ಸೇರ್ಪಡೆಗೊಂಡ ಅವರು, ಹಂತ ಹಂತವಾಗಿ ಪಕ್ಷದ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದರು. 1978ರಲ್ಲಿ ಸೆಗೋಲಿನ್ ರಾಯಲ್ ಎಂಬಾಕೆ ಜತೆಗಿನ ದಾಂಪತ್ಯದಲ್ಲಿ ನಾಲ್ವರು ಮಕ್ಕಳನ್ನು ಪಡೆದರು. ಸೆಗೋಲಿನ್ ಕೂಡಾ ರಾಜಕಾರಣಿಯಾಗಿದ್ದು, ಸದ್ಯ ಹೊಲಾಂಡೆ ಸಚಿವ ಸಂಪುಟದಲ್ಲಿ ಸದಸ್ಯೆ. ಈ ದಾಂಪತ್ಯ 2007ರಲ್ಲಿ ಅಂತ್ಯವಾಗಿದ್ದು, ಅಲ್ಲಿಂದೀಚೆಗೆ 2014ರ ತನಕ ಹೊಲಾಂಡೆಯ ಪತ್ನಿ ಸ್ಥಾನ ತುಂಬಿದಾಕೆ ಪತ್ರಕರ್ತೆ ವಲೆರಿ ಟ್ರಿಯರ್‍ವೈಲರ್. ಇದೀಗ ಮತ್ತೊಬ್ಬ ಹೆಣ್ಮಗಳು ನಟಿ ಜ್ಯೂಲಿ ಗಯೆಟ್ ಹೆಸರು ಆ ಸ್ಥಾನದಲ್ಲಿ ಕೇಳಿಬಂದಿದೆ.
ಇವೆಲ್ಲ ಏನೇ ಇದ್ದರೂ, ಅವರೊಬ್ಬ ಸಮರ್ಥ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಗಣರಾಜ್ಯೋತ್ಸವದ ಅತಿಥಿಯಾಗಿ ಅವರು ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅವರ ಈ ಭೇಟಿ ಭಾರತ-ಫ್ರಾನ್ಸ್ ನಡುವಿನ ಸಂಬಂಧದ ಮಟ್ಟಿಗೆ ಮಹತ್ವದ ಘಟ್ಟ.

Leave a Reply

Your email address will not be published. Required fields are marked *