ಜೀವನ ಅಂದ್ರೆ ಹೀಗೇ ಏನೋ ? ಎಲ್ಲ ಕಡೆಯೂ ಜೀ.. ಹುಜೂರ್ ಅನ್ಬೇಕು. ನೀವು ಹೇಳ್ತಿರೋದು ತಪ್ಪು

ಅನ್ಬಾರ್ದು. ಹೇಳಿದ್ರೆ ಅದು ವಾದ ಅಂತ ಅನ್ಸತ್ತೆ. ಹಾಗೊಂದು ವೇಳೆ ಈ ಅಲಿಖಿತ ನಿಯಮ ಮೀರಿ ನೀವು ಮಾತನಾಡಿದ್ರೆ ಕೆಲಸ ಬರಲ್ಲ ಅವನಿಗೆ ಅಥವಾ ಅವಳಿಗೆ ಅನ್ನೋ ಈ ವಾತಾವರಣ…
ಬದಲಾಗೋದು ಯಾವಾಗ ? ಊಹೂಂ ಬಹಳ ಕಷ್ಟ ಅದಂತೂ ಬದಲಾಗಲ್ಲ. ಬೇಕಿದ್ರೆ ಅಂತಹ ವಾತಾವರಣಕ್ಕೆ ನಾವೇ ಒಗ್ಗಿಕೊಳ್ಳಬೇಕಷ್ಟೆ. ಇದೆಲ್ಲಾ ಏನಕ್ಕೆ ಅನ್ನೋ ಪ್ರಶ್ನೆ ಕಾಡಬಹುದು. ಇತ್ತೀಚೆಗೆ ನನ್ನನ್ನು ಕಾಡುತ್ತಿರುವ ಪ್ರಶ್ನೆ ಕೂಡಾ ಇದೇ. ಅದಕ್ಕೆ ಕಾರಣ ಇಲ್ಲದಿಲ್ಲ.
ಆಹಾರ ವಸ್ತುಗಳ ಬೆಲೆ ಏರಿಕೆ ವಿಚಾರ ಗಿರಕಿ ಹೊಡೆಯುತ್ತಲೇ ಇದೆ. ಅದ್ರಲ್ಲೂ ತೊಗರಿಬೇಳೆ ಜೊತೆ ಅಕ್ಕಿ ಬೆಲೆ ಕೂಡಾ ಏರಿಕೆ ಆಗ್ತಾ ಇದೆ ಅಂತ ನ್ಯಾಷನಲ್ ಚಾನೆಲ್ಗಳು ಸುದ್ದಿ ಬಿತ್ತರಿಸೋಕೆ ಶುರುಮಾಡಿದ್ದೇ ಮಾಡಿದ್ದು. ಪ್ರಾದೇಶಿಕ ಚಾನೆಲ್ಗಳೂ, ಪತ್ರಿಕೆಗಳೂ ಇದರ ಬಗ್ಗೆ ಗಮನಹರಿಸಿದ್ವು. ಮಾರುಕಟ್ಟೆ ಕಡೆಗೊಮ್ಮೆ ಮುಖ ಮಾಡಿದ್ರೆ ಸಾಕೇ ? ಅಲ್ಲಿ ಏನ್ ನಡೀತಾ ಇದೆ ಅಂತ ಅರ್ಥ ಮಾಡೋಕೇ ಬಹಳ ಹೊತ್ತು ಬೇಕು.
ದೆಹಲಿ ಮಾರುಕಟ್ಟೆಯ ಬೆಲೆ ಏರಿಕೆ ಮುಂದಿಟ್ಟುಕೊಂಡು ನ್ಯಾಷನಲ್ ಚಾನೆಲ್ಗಳು ಸುದ್ದಿ ಬಿತ್ತರಿಸಿದ್ದವು. ಅಲ್ಲಿ ಅಕ್ಕಿ ಬೆಲೆ ಕೂಡಾ ಹೆಚ್ಚಾಗಿದೆ ಎಂದು ಅಬ್ಬರಿಸಿದ್ದವು. ಅದೇ ಸ್ಥಿತಿ ಬೆಂಗಳೂರಿನಲ್ಲಿ ಇರಲು ಸಾಧ್ಯವೇ ? ಪ್ರಾದೇಶಿಕ ಮಾರುಕಟ್ಟೆಗೂ ದೆಹಲಿ ಮಾರುಕಟ್ಟೆಗೂ ಬೆಲೆಯಲ್ಲಿ ವ್ಯತ್ಯಾಸ ಇರತ್ತೆ ಅನ್ನೋದನ್ನು ಯಾಕೆ ಪರಿಗಣಿಸ್ತಾ ಇಲ್ಲ ?
ಬೆಂಗಳೂರಿನಲ್ಲಿ ಅಕ್ಕಿ ಬೆಲೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಎಲ್ಲರೂ ದೆಹಲಿ ಮತ್ತು ಮುಂಬಯಿ ಮಾರುಕಟ್ಟೆ ಮೇಲೆ ಕಣ್ಣಿಟ್ಟಿರೋದ್ರಿಂದ ಇಲ್ಲೂ ಬೆಲೆ ಏರಿಕೆ ಎಂದು ಪುಕಾರು ಹಬ್ಬಿಸ್ತಾರೆ. ಇದರಿಂದ ಗ್ರಾಹಕನಿಗೇನೂ ಲಾಭ ಇಲ್ಲ. ಉತ್ಪಾದಕನಿಗೂ ಇಲ್ಲ. ಮತ್ಯಾರಿಗೆ ಲಾಭ ಅಂದ್ರೆ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳಿಗಷ್ಟೇ.
ಬೆಂಗಳೂರಿನಲ್ಲಿ ಎಫ್ಕೆಸಿಸಿಐ ಕೂಡಾ ಪ್ರಾದೇಶಿಕ ಮಾರುಕಟ್ಟೆಯ ಏರಿಳಿತ ದಾಖಲಿಸಿ ಆರ್ಥಿಕ ಸ್ಥಿತಿ ಮಾಪನ ಮಾಡಲು ಘಟಕವೊಂದನ್ನು ಸ್ಥಾಪಿಸಿತ್ತಂತೆ. ಆದ್ರೆ ಅದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ. ಏನೇ ಹೇಳಿ… ಮಾರುಕಟ್ಟೆ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. ಅರ್ಥ ಆದರೂ ಅದನ್ನು ಉಳಿದವರಿಗೆ ಅರ್ಥ ಮಾಡಿಸುವುದು ಇದೆಯಲ್ಲಾ ಅದು ಇನ್ನೂ ಕಷ್ಟ…
ಯಾಕೆಂದ್ರೆ ಜೀ ಹುಜೂರ್ ಸಂಸ್ಕೃತಿಯಲ್ಲಿರುವವರಲ್ಲವೇ ನಾವು ನೀವೂ…