ಡಾ.ಸೂರ್ಯ ಬಾಲಿ ಆಂಗ್ಲ ಪತ್ರಿಕೆಯೊಂದಕ್ಕೆ ಹೇಳಿದ ಕಥೆ..

 

`ಮನಸಿದ್ದರೆ ಮಾರ್ಗ’ ಅಂತಾರೆ ಎಲ್ಲರೂ. ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ, ಸ್ವಯಂ ಉತ್ತೇಜನೆ, ಸ್ಪಷ್ಟ ಗುರಿ ಅದಕ್ಕೆ ತಕ್ಕಂತೆ ಕಾರ್ಯ ಯೋಜನೆ ಮತ್ತು ಪರಿಶ್ರಮ ಇದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ಇದು. 

ಡಾ.ಸೂರ್ಯ ಬಾಲಿ

`ನಾನು ಜೀತದಾಳುವಿನ ಮಗ. ಉತ್ತರ ಪ್ರದೇಶದ ಜಾನ್‌ಪುರದ ಹಳ್ಳಿಯೊಂದರಲ್ಲಿ ನನ್ನ ಜನನ. ಗೊಂಡ್ ಬುಡಕಟ್ಟು ಜನಾಂಗದವರಾದ ನಾವು ಅಲ್ಲಿ ಜೀತದಾಳುಗಳು. ಹೋಲಿ, ದೀಪಾವಳಿ ಮೊದಲಾದ ಹಬ್ಬ ಬಂದಾಗ ನಾನು ತುತ್ತು ಅನ್ನಕ್ಕಾಗಿ ತಟ್ಟೆ ಹಿಡಿದು ಗ್ರಾಮವೆಲ್ಲಾ ಅಲೆಯುತ್ತಿದ್ದೆ. ನನ್ನ ಅಪ್ಪನಿಗೆ ಜೀತ ಪದ್ಧತಿ ಬಗ್ಗೆ ರೋಸಿ ಹೋಗಿ, ಒಂದು ದಿನ ಹೇಳದೇ ಕೇಳದೆ ಓಡಿ ಹೋಗಿದ್ದ. ಆತ ವಾಪಸ್ ಬರುವ ತನಕ ಅಮ್ಮನೇ ಮೇಲ್ವರ್ಗದ ಮನೆಗಳಿಗೆ ತೆರಳಿ ಅಲ್ಲಿ ಚಾಕರಿ ನಡೆಸಿ ನಮ್ಮ ಕುಟುಂಬವನ್ನು ಸಲಹಿದ್ದು.
ನನಗಾಗ ಏಳು ವರ್ಷ. ನನ್ನ ತಮ್ಮನೊಬ್ಬ ಸರಿಯಾದ ಚಿಕಿತ್ಸೆ ಸಿಗದೇ ಕೊನೆಯುಸಿರೆಳೆದ. ಇದೇ ಘಟನೆ ನನ್ನನ್ನು ವೈದ್ಯನಾಗುವಂತೆ ಪ್ರೇರೇಪಿಸಿತು. ಶಿಕ್ಷಣ ಇದ್ದರಷ್ಟೇ ನನ್ನ ಕುಟುಂಬದ ಸ್ಥಿತಿ ಬದಲಾಗಬಹುದು ಎಂಬ ಅಂಶ ಅಷ್ಟು ಹೊತ್ತಿಗಾಗಲೇ ನನಗೆ ಮನವರಿಕೆಯಾಗಿತ್ತು. ಕನರ್‌ವಾಲ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಗ್ರಾಮದಿಂದ ೧೧ ಕಿ.ಮೀ. ದೂರ ಇರುವ ಸರ್ಸಿಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದೆ. ಬರಿಗಾಲಿನಲ್ಲೇ ನಡೆದು ಸೈಕಲ್ ರಿಪೇರಿ, ಪಂಕ್ಚರ್ ಹಾಕುವ ಕೆಲಸ ಮಾಡಿ ಹಣಗಳಿಸಿ ಅದರಿಂದಲೇ ಶಿಕ್ಷಣದ ವೆಚ್ಚ ಭರಿಸಿದೆ. ಇಷ್ಟೆಲ್ಲ ಕಷ್ಟಪಟ್ಟರೂ, ಶಾಲೆಯಲ್ಲಿ ಶಿಕ್ಷಕರು ಉತ್ತೇಜನ ನೀಡುವ ಬದಲು, `ನೀನು ನಿನ್ನ ಕುಟುಂಬದವರು ಮಾಡುವಂತೆ ಜೀತವನ್ನೇ ಮುಂದುವರಿಸು, ನೀನು ಕಲಿತು ಯಾರನ್ನು ಉದ್ಧಾರ ಮಾಡಬೇಕಿದೆ ‘ ಎಂಬಿತ್ಯಾದಿ ಲೇವಡಿ ಮಾತುಗಳು ಕೇಳಬೇಕಾಗಿ ಬಂತು. ಇಂತಹ ಪ್ರತಿಯೊಂದು ಲೇವಡಿ ಮಾತುಗಳು ನನ್ನನ್ನು ಇನ್ನಷ್ಟು ಮಾನಸಿಕವಾಗಿ ಬಲಶಾಲಿಯನ್ನಾಗಿಸಿತು. ಮಳೆಗಾಲದಲ್ಲಿ ಶಾಲೆಗೆ ಹಾಜರಾಗಲು ತೊಂದರೆಯಾಗುತ್ತಿತ್ತು. ಕಾರಣ ನನ್ನಲ್ಲಿದ್ದುದು ಎರಡೇ ಜತೆ ಬಟ್ಟೆ. ಒದ್ದೆಯಾದರೆ ಹಾಕುವುದಕ್ಕೆ ಇನ್ನೊಂದು ಜತೆ ಇರಲಿಲ್ಲ. ಇವೆಲ್ಲದರ ನಡುವೆ ನನಗೆ ೮ನೇ ತರಗತಿಯಲ್ಲಿ ಮೊದಲ ರ್‍ಯಾಂಕ್‌  ಬಂತು. ಆದರೆ, ಇವನಿಗೇನು ಹುಚ್ಚೇ.. ಬರಿಗಾಲಿನಲ್ಲಿ ಪ್ರತಿದಿನ ಅಷ್ಟು ದೂರ ನಡೆಯುತ್ತಾನಲ್ಲ ಎಂದು ಗ್ರಾಮಸ್ಥರು ವ್ಯಂಗ್ಯವಾಡಿದ್ದರು. ಹತ್ತನೇ ತರಗತಿ, ಪಿಯುಸಿ ಕೂಡಾ ಉತ್ತೀರ್ಣನಾದೆ. ವೈದ್ಯಕೀಯ ಪದವಿ ಪಡೆಯಲು ೩ ಸಾವಿರ ಶುಲ್ಕವನ್ನೂ ಕೂಡಿಟ್ಟೆ. ಆದರೆ, ಅದು ಸಾಕಾಗಲಿಲ್ಲ. ಆದರೆ, ಹಾಸ್ಟೆಲ್ ವಾರ್ಡನ್ ಒಬ್ಬರು ಸಹಾಯ ಹಸ್ತ ಚಾಚಿದರು. ಹೀಗಾಗಿ ಅಲಹಾಬಾದ್‌ನ ಮೋತಿಲಾಲ್ ನೆಹರೂ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುವುದು ಸಾಧ್ಯವಾಯಿತು. ಇಷ್ಟಾದರೂ, ಹಣಕಾಸಿನ ಕೊರತೆ ಕಾಡುತ್ತಲೇ ಇತ್ತಾದ್ದರಿಂದ ಸರಿಯಾದ ಉಡುಪುಗಳಿರಲಿಲ್ಲ. ಎಲ್ಲರ ನಡುವೆ ಭಿನ್ನವಾಗಿ ಕಾಣಿಸುತ್ತಿದ್ದೆ. ಮತ್ತೆ, ಕಾಲೇಜಿನಲ್ಲೂ ಸಹಪಾಠಿಗಳಿಂದ ಲೇವಡಿಗೊಳಗಾದೆ. ಹಣಕಾಸು ಪರಿಸ್ಥಿತಿ ಸರಿದೂಗಿಸಲು ಪತ್ರಿಕೆಗಳಿಗೆ ಕವನ, ಕಥೆ, ಲೇಖನ ಬರೆದೆ. ಹಾಗೂ ಹೀಗೂ ಎಂಬಿಬಿಎಸ್ ಪದವಿ ಗಳಿಸಿದೆ. ಇದಾದ ನಂತರ ಎಂಡಿ ಪದವಿ ಪಡೆಯಲು ವಿದ್ಯಾರ್ಥಿ ವೇತನ ೧೫ ಸಾವಿರ ರೂ. ಜತೆ ಸಿಕ್ಕಾಗ ಆದ ಆನಂದ ಅಷ್ಟಿಷ್ಟಲ್ಲ. ಫ್ಲೋರಿಡಾ ವಿ.ವಿ.ಯಿಂದ ಹೆಲ್ತ್ ಮ್ಯಾನೇಜ್‌ಮೆಂಟ್‌ನ ಸ್ನಾತಕೋತ್ತರ ಪದವಿ ಕೂಡಾ ಪಡೆದೆ. ಪ್ರಸ್ತುತ, ಯಾವ ಮೆಡಿಕಲ್ ಕಾಲೇಜಿನಲ್ಲಿ ಸಹಪಾಠಿಗಳಿಂದಲೇ ಲೇವಡಿಗೆ ಒಳಗಾಗಿದ್ದೆನೋ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದೇನೆ.. ಈ ನಾನು ಬೇರಾರೂ ಅಲ್ಲ. ಡಾ. ಸೂರ್ಯ ಬಾಲಿ.

 

Leave a Reply

Your email address will not be published. Required fields are marked *