ದೇಶದ ಪ್ರಥಮ ಫೈರ್ ವುಮನ್ !

ಅಗ್ನಿಶಾಮಕ ಸೇವೆ ಎಂದರೆ, ಪ್ರಕೃತಿ ವಿಕೋಪ ಮತ್ತು ಇತರೆ ದುರಂತ ಕಾಲದಲ್ಲಿ ಅತಿ ಭಾರವಾದ ಉಪಕರಣಗಳನ್ನು ಎತ್ತಿಕೊಂಡು ಕೆಲಸ ನಿರ್ವಹಿಸಬೇಕು. ಹೀಗಾಗಿ ಇದು ಪುರುಷ ಪ್ರಧಾನ ಕಾರ್ಯ. ಇಂತಹ ಕ್ಷೇತ್ರದಲ್ಲಿ ಮಹಿಳೆ ಕೆಲಸ ಮಾಡಲು ಸಾಧ್ಯವೇ? ಈ ಪ್ರಶ್ನೆಗೆ ದಿಟ್ಟ ಉತ್ತರ ನೀಡಿದವರು ಮಹಾರಾಷ್ಟ್ರದ ಹರ್ಷಿಣಿ ಕನ್ಹೇಕರ್!.
====

ಯಾವುದೇ ಕೆಲಸ ಇರಲಿ ಅದು ಪುರುಷರದ್ದು ಅಥವಾ ಮಹಿಳೆಯರದ್ದು ಎಂದು ವರ್ಗೀಕರಿಸಿ ನೋಡಬಾರದು. ಪುರುಷರದ್ದೇ ಕಾರ್ಯಕ್ಷೇತ್ರ ಎಂಬಂತಿದ್ದ ಅಗ್ನಿಶಾಮಕ ಕ್ಷೇತ್ರದಲ್ಲಿ ಮಹಿಳೆಯಾಗಿ ನಂ.1 ಸ್ಥಾನವನ್ನು ಅಲಂಕರಿಸುವ ಅವಕಾಶ ನನಗೆ ಸಿಕ್ಕಿದ್ದು ಅದೃಷ್ಟ ಎನ್ನಬೇಕು. ಆದರೆ, ನಿಜವಾಗಿಯೂ ನನಗೆ ಈ ಕೆಲಸದ ಬಗ್ಗೆ ಅತೀವ ಆಸಕ್ತಿ ಇತ್ತು. ನಾನು ಅಗ್ನಿಶಾಮಕ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದೇನೆ

– ಹರ್ಷಿಣಿ ಕನ್ಹೇಕರ್, ಫೈರ್ ವುಮನ್

—-

vijayavani  25 Feb 2014 Ladies dairy
ವಿಜಯವಾಣಿ ಫೆ.25ರ ಸಂಚಿಕೆಯ ಲೇಡಿಸ್ ಡೈರಿಯಲ್ಲಿ ಪ್ರಕಟವಾದ ಬರೆಹ

ಶಕದ ಹಿಂದೆ ಅವರು ಮಹಾರಾಷ್ಟ್ರದ ನಾಗಪುರದಲ್ಲಿರುವ ನ್ಯಾಷನಲ್ ಫೈರ್ ಸರ್ವೀಸ್ ಕಾಲೇಜಿನಲ್ಲಿ ಫೈರ್ ಇಂಜಿನಿಯರಿಂಗ್ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಾಗ ಎಲ್ಲರ ಹುಬ್ಬೂ ಮೇಲೇರಿತ್ತು. ಇದಕ್ಕೆ ಕಾರಣವಿಲ್ಲದಿಲ್ಲ. ಅಗ್ನಿಶಾಮಕ ಸೇವೆ ಕುರಿತ ಶಿಕ್ಷಣ ನೀಡುವ ದೇಶದ ಏಕೈಕ ಶಿಕ್ಷಣ ಸಂಸ್ಥೆ ಇದು. ಯುವಕರಿಗಷ್ಟೇ ಶಿಕ್ಷಣ ನೀಡುತ್ತಿದ್ದ ಆ ಕಾಲೇಜನ್ನು ಪ್ರವೇಶಿಸಿದ ಮೊದಲ ಯುವತಿ ಹರ್ಷಿಣಿ ಕನ್ಹೇಕರ್! ಆ ಕಾಲೇಜಿಗೆ ಪ್ರವೇಶ ಪಡೆಯುವ ತನಕ ತಾನೊಂದು ಹೊಸ ದಾಖಲೆ ಬರೆಯುತ್ತಿದ್ದೇನೆ ಎಂಬ ಅರಿವು ಅವರಿಗೆ ಇರಲಿಲ್ಲ.
ಹೌದು.. 2005ರಲ್ಲಿ ದೇಶದ ಮೊಟ್ಟ ಮೊದಲ ಫೈರ್‍ವುಮನ್ ಎಂಬ ಕೀರ್ತಿಗೆ ಅವರು ಭಾಜನರಾದರು. ಈ ವಿಚಾರವನ್ನು ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ, “ಅಗ್ನಿಶಾಮಕ ಸೇವೆ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿದ ಮೊಟ್ಟ ಮೊದಲ ಮತ್ತು ಏಕೈಕ ಯುವತಿ ನಾನು ಎಂಬುದು ನನಗೆ ಗೊತ್ತೇ ಇರಲಿಲ್ಲ. ಈ ವಿಷಯ ಅರಿವಿಗೆ ಬರುತ್ತಲೇ ನನ್ನ ತಂದೆ ತಾಯಿ ಬಹಳ ಮಾನಸಿಕ ತೊಳಲಾಟಕ್ಕೆ ಸಿಲುಕಿದ್ದರು. ಈ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯಬೇಕಿದ್ದರೆ ಮೆಡಿಕಲ್ ಟೆಸ್ಟ್ ಎದುರಿಸಬೇಕಾಗಿತ್ತು. ಆದರೆ ಅಲ್ಲಿ ಹೋದಾಗ, ಮಹಿಳೆಯರಿಗೆ ಅಲ್ಲಿ ಯಾವುದೇ ಶಾರೀರಿಕ ಮತ್ತು ವೈದ್ಯಕೀಯ ಅರ್ಹತೆ ನಿಗದಿ ಮಾಡಿಲ್ಲ ಎಂಬುದು ಗಮನಕ್ಕೆ ಬಂತು. ಆದರೂ ಅಲ್ಲವರು ನನ್ನ ಎತ್ತರ, ತೂಕ ಮತ್ತು ದೃಷ್ಟಿ ಹೇಗಿದೆ ಎಂಬುದನ್ನು ಪರಿಶೀಲಿಸಿ ದಾಖಲಿಸಿಕೊಂಡರು. ಹಾಗೆ ಫೈರ್ ಇಂಜಿನಿಯರಿಂಗ್ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾಯಿತು’’.
ಮೊದಲೇ ಹೇಳಿದಂತೆ, ಹರ್ಷಿಣಿ ಅವರನ್ನು ಬಿಟ್ಟರೆ ಇಡೀ ಕಾಲೇಜಿನ ವಿದ್ಯಾರ್ಥಿ ಸಮುದಾಯದಲ್ಲಿ ಯುವತಿಯರಿಲ್ಲ. ಮೂರು ವರ್ಷದ ಪದವಿ ಶಿಕ್ಷಣಕ್ಕಾಗಿ ಕಾಲೇಜಿಗೆ ಹೋಗಲಾರಂಭಿಸಿದರು. ಅಲ್ಲಿ ಎದುರಾಗಿತ್ತು ಉಳಿದ ವಿದ್ಯಾರ್ಥಿಗಳನ್ನು ಎದುರಿಸುವ ಸವಾಲು. ಎಲ್ಲರೂ ಅಚ್ಚರಿಯಿಂದ ನೋಡುವವರೇ. ಸ್ವಲ್ಪ ಪರಿಚಯವಾದ ನಂತರ ಅವರಿಂದ ಎದುರಾದ ಪ್ರಶ್ನೆಗಳನ್ನು ಕೂಡಾ ಹರ್ಷಿಣಿ ಸವಾಲಿನಂತೆಯೇ ಎದುರಿಸಬೇಕಾಗಿ ಬಂತು. ಅಂದಿನ ಆ ಕ್ಷಣಗಳನ್ನು ಅವರು ನೆನಪಿಸಿಕೊಳ್ಳುವುದು ಹೀಗೆ..
“ಕಾಲೇಜು ಪ್ರವೇಶಿಸಿದ ಆರಂಭದಲ್ಲಿ ಎಲ್ಲರೂ ನನ್ನತ್ತ ಅಚ್ಚರಿ ಮತ್ತು ಪ್ರಶ್ನಾರ್ಥಕ ನೋಟವನ್ನೇ ಬೀರುತ್ತಿದ್ದರು. ನಾನೊಂದು ಬಲಿಪಶು ಎಂಬಂತ್ತಿತ್ತು ಅವರ ನೋಟದ ಭಾವಾರ್ಥ. ಈ ಕೆಲಸ ಈಕೆಯಿಂದ ಸಾಧ್ಯವೇ ಎಂಬ ಪ್ರಶ್ನೆಯೂ ಅವರಲ್ಲಿತ್ತು. ಈ ಕಾಲೇಜು ಸೇರುವ ಬದಲು ಸೇನೆಗೆ ಸೇರಬಹುದಿತ್ತಲ್ಲವೇ ಎಂದೂ ಹಲವರು ಕೇಳಿದ್ದರು. ಅವರ ಎಲ್ಲ ವರ್ತನೆಗಳು, ಮಾತುಗಳನ್ನು ನನ್ನಲ್ಲಿ ಸಾಧಿಸಬೇಕೆಂಬ ಪ್ರೇರಣೆಯನ್ನೂ ಛಲವನ್ನೂ ಮೂಡಿಸಿತು. ಕ್ರಮೇಣ ಸಹಪಾಠಿಗಳು, ಉಪನ್ಯಾಸಕರು ಮತ್ತು ಕಾಲೇಜು ಸಿಬ್ಬಂದಿಗಳ ಆ ನೋಟ ಮೆಚ್ಚುಗೆಯ ನೋಟವಾಗಿ ಪರಿವರ್ತನೆಯಾಯಿತು. ಅಂದು ಕಾಲೇಜಿನ ನಿರ್ದೇಶಕರಾಗಿದ್ದ ಡಾ.ಕೆ.ಸಿ. ವಾಧ್ವಾ ನನ್ನ ಬಳಿ ಬಂದು, ‘ಅಕಸ್ಮಾತ್ ಕ್ಯಾಂಪಸ್ ರಿಕ್ರುಟ್‍ಮೆಂಟ್ ಆದರೇನು ಮಾಡ್ತಿ’ ಎಂದು ಕೇಳಿದ್ದರು. ಎಲ್ಲ ಉಪನ್ಯಾಸಕರು, ಸಹಪಾಠಿಗಳು ನನಗೆ ನೀಡಿದ ಬೆಂಬಲ, ಪ್ರೋತ್ಸಾಹ ಎಲ್ಲವೂ ಅವಿಸ್ಮರಣೀಯ. ಅಂದಿನ ಆ ಕ್ಷಣಗಳೆಲ್ಲವೂ ಅಷ್ಟು ಅಪ್ಯಾಯಮಾನವಾಗಿದ್ದವು ನನ್ನ ಪಾಲಿಗೆ. ಹೆಚ್ಚಿನ ಮುತುವರ್ಜಿವಹಿಸಿ ಕಲಿತು ಯಾರಿಗೂ ನಿರಾಶೆಯಾಗದಂತೆ ನೋಡಿಕೊಂಡಿದ್ದೇನೆ’’.
ಕಾಲೇಜಿನ ಆ ದಿನಗಳ ನಡುವೆ ಹಲವು ಘಟನೆಗಳು ನಡೆದು ಹೋಗಿವೆ. ಅವುಗಳಲ್ಲಿ ಸದಾ ನೆನಪಿನಲ್ಲಿರುವಂಥ ಒಂದು ಘಟನೆ ಇದೆ ಎನ್ನುತ್ತಾರೆ ಹರ್ಷಿಣಿ. ಅದು ಕೂಡಾ ವೃತ್ತಿ ಸಂಬಂಧಿತವಾದ್ದು ಎಂಬುದು ವಿಶೇಷ. “ಅದೊಂದು ದಿನ ತುರ್ತು ಪರಿಸ್ಥಿತಿ ನಿಭಾಯಿಸುವ ತರಬೇತಿ ನೀಡುತ್ತಿದ್ದರು. ನಾವು ಕ್ಲಿಷ್ಟಕರ ಅಣಕು ಕಾರ್ಯಾಚರಣೆ ನಡೆಸಬೇಕಿತ್ತು. ಎತ್ತರ ಕಟ್ಟಡ ಏರಿ ಅಲ್ಲಿಂದ ಕೃತಕ ಗಾಯಾಳುವನ್ನು ಹೆಗಲ ಮೇಲೇರಿಸಿಕೊಂಡು ಏಣಿಯ ಮೂಲಕ ಕೆಳಗಿಳಿಯಬೇಕು. ನಾವು ನಾಲ್ಕು ವಿದ್ಯಾರ್ಥಿಗಳು ಮೇಲೇರಿದ್ದೆವು. ಕೆಳಗಿದ್ದ ತರಬೇತುದಾರ ನನ್ನ ಹೆಸರು ಕೂಗಿ ಕೆಳಕ್ಕೆ ಹಾರುವಂತೆ ಸೂಚನೆ ನೀಡಿದರು. ನಮ್ಮ ತಂಡದಲ್ಲಿದ್ದವರು ಒಬ್ಬೊಬ್ಬರಾಗಿ ಆ ಕೆಲಸ ಮಾಡಿದ್ದರು. ನನ್ನ ಕಣ್ಣಾಲಿಗಳು ತುಂಬಿಕೊಂಡು ಮುಂದೇನು ಕಾಣಿಸುತ್ತಿರಲಿಲ್ಲ. ನನ್ನನ್ನು ಎಳೆದು ಹೊರಗೆ ಹಾಕುತ್ತಾರೆ ಉಳಿದವರು ಎಂದುಕೊಂಡಿದ್ದೆ ನಾನು. ಆದರೆ, ತರಬೇತುದಾರ ಮತ್ತೊಮ್ಮೆ ನನ್ನ ಹೆಸರು ಕೂಗಿದಾಗ, ನನಗೆ ಅದನ್ನು ನಂಬಲಾಗಲಿಲ್ಲ. ಕೂಡಲೇ ಒಬ್ಬಂಟಿಯಾಗಿ ಕೃತಕ ಗಾಯಾಳುವನ್ನು ಎತ್ತಿಕೊಂಡು ಏಣಿ ಬಳಿ ಹೋಗಿ ಕೆಳಕ್ಕೆ ಇಳಿದೆ. ಅಂದು ನನ್ನಲ್ಲಿದ್ದ ಸಾಮಥ್ರ್ಯದ ಅರಿವು ನನಗಾಗಿತ್ತು’’
ಫೈರ್ ಇಂಜಿನಿಯರಿಂಗ್ ಪದವಿ ಶಿಕ್ಷಣದ ಕೊನೆಯ ಕ್ಷಣಗಳು, ಮೊಟ್ಟ ಮೊದಲ ಕ್ಯಾಂಪಸ್ ಇಂಟರ್‍ವ್ಯೂ ಎದುರಿಸಿ ಕೆಲಸ ಸಿಕ್ಕಿದ ಆ ಕ್ಷಣಗಳು ಕೂಡಾ ಸದಾ ಕಾಲ ನೆನಪಿನಲ್ಲಿ ಉಳಿಯವಂಥದ್ದು ಎನ್ನುತ್ತಾರೆ ಹರ್ಷಿಣಿ. “2005ರಲ್ಲಿ ನನ್ನ ಪದವಿ ಶಿಕ್ಷಣ ಮುಗಿದ ಬಳಿಕ ಕ್ಯಾಂಪಸ್ ಸಂದರ್ಶನ ಎದುರಿಸಿದೆ. ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಮಿಷನ್ (ಒಎನ್‍ಜಿಸಿ)ಯಲ್ಲಿ ಫೈರ್ ಅಂಡ್ ಸೆಕ್ಯುರಿಟ್ ಅಧಿಕಾರಿಯಾಗಿ ಕೆಲಸವೂ ಸಿಕ್ಕಿತು. ಸೇನೆಯಲ್ಲಿ ಕೆಲಸ ಮಾಡಬೇಕು ಎಂಬ ನನ್ನಾಸೆಗೆ ಒಎನ್‍ಜಿಸಿಯಲ್ಲಿ ವೇದಿಕೆಯೂ ಸಿಕ್ಕಿದೆ. ಈ ಸಂಸ್ಥೆಯಲ್ಲಿ ತನ್ನದೇ ಆದ ಪ್ರಾದೇಶಿಕ ಸೇನೆ ಇದೆ’’.
ಹೀಗೆ ಪುರುಷ ಪ್ರಧಾನ ಕಾರ್ಯಕ್ಷೇತ್ರದೊಳಕ್ಕೆ ಪ್ರವೇಶಿಸಿ ಅಸೀಮ ಸಾಧನೆ ಮೆರೆದ ಹರ್ಷಿಣಿ, ಕೆಲಸ ಯಾವುದಾದರೂ ಸರಿ. ಅದು ಲಿಂಗಾಧಾರಿತ ಅಲ್ಲವೇ ಅಲ್ಲ. ಅಂಥ ಭಾವನೆ ಬಿಟ್ಟು ಯಾವುದೇ ಕೆಲಸವನ್ನಾದರೂ ಪ್ರೀತಿಯಿಂದ ಮಾಡಿ. ಅದುವೇ ನಮ್ಮನ್ನು ಸಾಧನಾ ಪಥದಲ್ಲಿ ಕೊಂಡೊಯ್ಯುತ್ತದೆ ಎಂಬ ಸಂದೇಶ ಸಾರುವ ಮೂಲಕ ಉಳಿದ ಹೆಣ್ಮಕ್ಕಳಿಗೂ ಆದರ್ಶಪ್ರಾಯರಾಗಿದ್ದಾರೆ.

Leave a Reply

Your email address will not be published. Required fields are marked *