ಚಿನ್ನ.. ಯಾರಿಗೆ ಬೇಡ ಹೇಳಿ.. ? ಅದರ ಬೆಲೆ ಗಗನಕ್ಕೆ ಏರುತ್ತಿದೆ. ಆದರೂ ಖರೀದಿ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ ಬಿಡಿ. ಹೂಡಿಕೆ ಅಂತ ಕೆಲವರು ಹೇಳಿದರೆ… ಚಿನ್ನ ಆಲ್ವಾ ಇರಲಿ ಬಿಡಿ ಅನ್ನೋರು ಕೂಡ ಇದ್ದಾರೆ. ನಮ್ಮ ಮದುವೆ ಆಗಿ ವರ್ಷ ತುಂಬಿಲ್ಲ ಬಿಡಿ. ಹೀಗಾಗಿ ಆಸೆ ಕನಸು ಎಲ್ಲವು ನೂರಾರು…
ಆದರೆ ನನಗ್ಯಾಕೋ ಈ ತಿಂಗಳಲ್ಲಿ ಚಿನ್ನ ಖರೀದಿಗೆ ಮನಸ್ಸೇ ಇರಲಿಲ್ಲ. ನನ್ನವಳಿಗೋ ನನಗೆ ಉಡುಗೊರೆ ನೀಡುವ ಕನಸು. ಇದೆ ತಿಂಗಳು ನನ್ನ ಹುಟ್ಟಿದ ದಿನ ಬೇರೆ. ಕೊನೆಗೆ ನನ್ನವಳದೆ ಗೆಲುವು. ಅಂದು ಅಕ್ಷಯ ತೃತೀಯ. ಚಿನ್ನದ ಮಳಿಗೆಗಳು ಎಲ್ಲ ಭರ್ತಿ..! ಸಂಜೆ ಕೆಲವಾದರೂ ಖಾಲಿ ಆಗಬಹುದು ಅನ್ನೋ ನಿರೀಕ್ಷೆ ನಮ್ಮದು. ಆರಂಭದಲ್ಲಿ ಕತ್ರಿಗುಪ್ಪೆ ಶುಭ್ ಜುವೆಲ್ಲರಿಗೆ ಹೋಗೋಣ ಎಂದು ಅಲ್ಲಿ ಹೋಗಿ ನೋಡಿದ್ರೆ.. ಸಣ್ಣ ಶಾಪ್.. ಕಾಲಿಡೋದಕ್ಕು ಜಾಗ ಇಲ್ಲ. ಹಾಗೆ ರೇಟ್ ನೋಡಿದ್ವಿ.. ಗ್ರಾಂ ಗೆ ೨೧೭೫ ರೂಪಾಯಿ. ಸರಿ ಬಿಡು ಬೇರೆ ಕಡೆ ನೋಡಿದರಾಯಿತು ಅಂತ ಗಾಂಧಿ ಬಜಾರ್ ಶುಭ್ ಗೂ ಕಾಲಿಟ್ವಿ. ಅಲ್ಲಿ ಕೂಡ ಅಷ್ಟೇ.. ಒಳಗೆ ಹೋಗೋದಕ್ಕೂ ಅವಕಾಶ ಇಲ್ಲ.
ಏನಾದರಾಗಲಿ.. ಲಕ್ಷ್ಮಿ ಜುವೆಲರಿಗೆ ಹೋಗೋಣ ಅಂತ ಹೆಜ್ಜೆ ಹಾಕಿದ್ವಿ. ಎದುರಲ್ಲೇ ಟಾಟಾ ನಾನೋ ಕಾರು ಬೇರೆ… ಲಕ್ಕಿ ಯಾರೋ ಯಾರಿಗೆ ಗೊತ್ತು. ೫೦೦೦ ರೂಪಾಯಿ ಗೆ ಹೆಚ್ಚು ಬೆಲೆಯ ಚಿನ್ನ ಖರೀದಿ ಮಾಡಿದ್ರೆ ಲಕ್ಕಿ ಡಿಪ್ ಕೊಡ್ತಾರೆ. ಪ್ರತಿ ಗ್ರಾಂ ಚಿನ್ನದ ಮೇಲೆ ೬೦ ರೂಪಾಯಿ ಕಡಿತ.. ಅಬ್ಬಬ್ಬ.. ಎಂದು ಅಲ್ಲಿ ಒಳಗೆ ಎಂಟ್ರಿ ಕೊಡುತ್ತಿದ್ದ ಹಾಗೆ ಕಣ್ಣಿಗೆ ರಾಚುವಂತೆ ಇತ್ತು ಚಿನ್ನದ ರೇಟ್. ಗ್ರಾಂ ಒಂದಕ್ಕೆ ೨೦೪೮ ರೂಪಾಯಿ. ೬೦ ರೂಪಾಯಿ ಕಳೆದರೆ ೧೯೮೮ ರೂಪಾಯಿ.
ಅರೆ… ಎಷ್ಟು ಕಡಿಮೆ ಆಲ್ವಾ.. ಅಂಥ ಮನದಲ್ಲೇ ಮಂಡಿಗೆ ಸವಿದದ್ದು ಆಯಿತು. ೩.೧೨ ಗ್ರಾಂ ತೂಕದ ಚಿನ್ನದ ಸರಕ್ಕೆ ೬೨೦೦ ರೂಪಾಯಿ ಅಷ್ಟೇ.. ಹಾಗಂದುಕೊಂಡು ಖರೀದಿಗೆ ಮುಂದಾಗಿ ನೋಡಿದ್ರೆ ರೇಟ್ ಎಷ್ಟು ಗೊತ್ತಾ ? ಹತ್ತಿರ ಹತ್ತಿರ ೭,೫೦೦ ರೂಪಾಯಿ. ತೂಕ ನೋಡಿದ್ರೆ ೩.೧೧ ಗ್ರಾಂ ಅಷ್ಟೇ.. ಆದರೆ ರಸೀದಿಯಲ್ಲಿ ೩.೧೨ ಗ್ರಾಂ ಅಂತಾನೆ ಬರೆದರು. ೧೩೦೦ ರೂಪಾಯಿ ಹೆಚ್ಚು.. ಯಾಕೆ ಹೀಗೆ ಎಂದು ನೋಡಿದ್ರೆ.. ವೇಸ್ಟೆಜ್ ಮತ್ತು ಕೂಲಿ ಅಂತ ಬರೋಬ್ಬರಿ ಹಣ ವಸೂಲಿ ಮಾಡಿದ್ದಾರೆ. ರಸೀದಿ ಕೂಡ ಕೊಟ್ರು. ಅದರ ಹಿಂಬದಿಯಲ್ಲಿ ನಿಬಂಧನೆಗಳು..!
ಎರಡೇ ದಿನಕ್ಕೆ ಆ ಸರ ಕಟ್ ಆಯಿತು. ಸರಿ ಮಾಡಿ ಕೊಡಿ ಎಂದು ಹೋದರೆ.. ತೆಗೆದು ಎರಡು ದಿನ ಇರಿಸಿಕೊಂಡರು. ಮತ್ತೆ ಹೋದಾಗ ಸರಿ ಮಾಡಲು ಒಂದು ವಾರ ಬೇಕು. ತೂಕ ೧೦೦ ಮಿಲ್ಲಿ ಕಡಿಮೆ ಆಗತ್ತೆ.. ಈಗ ತೂಕ ೩.೧೦ ಗ್ರಾಂ ಅಷ್ಟೇ ಇದೆ.. ಅದು ಇದು… ಹೀಗೆ ನೂರೆಂಟು ಮಾತು ಹೇಳಿ ಕೆಟ್ಟದಾಗಿ ನಡೆದುಕೊಂಡರು. ಬೇಸತ್ತು ವಾಪಸು ಬಂದೆ. ಬಳಿಕ ಮತ್ತೆ ಶುಭ್ ಶಾಪ್ ಗೆ ಹೋದ್ವಿ..
ಚಿನ್ನದ ಬೆಲೆ ಅಲ್ಲಿ ಗ್ರಾಂ ಗೆ ೨೨೨೦ ರೂಪಾಯಿ. ವೇಸ್ಟೆಜ್ ಮತ್ತು ಕೂಲಿ ಏನು ಇಲ್ಲ.. ಅಷ್ಟೇ ತೂಕದ ಚಿನ್ನದ ಸರಕ್ಕೆ ಕೇವಲ ೬೯೨೬ ರೂಪಾಯಿ. ಅಕ್ಷಯ ತೃತೀಯದ ದಿನದ ರೇಟ್ ಪ್ರಕಾರ ನೋಡಿದ್ರೆ..೬೭೮೬ ರೂಪಾಯಿ. ಇಲ್ಲಿ ಇನ್ನೊದು ವಿಶೇಷ ಇದೆ. ಇಲ್ಲೇ ಖರೀದಿ ಮಾಡಿದ ಚಿನ್ನ ವಾಪಸ್ ಕೊಡೋದಾದ್ರೆ ಕೊಡುವ ದಿನ ಚಿನ್ನದ ರೇಟ್ ಎನಿರುತ್ತದೋ ಅದಕ್ಕಿಂತ ೫೦-೧೦೦ ರೂಪಾಯಿ ಅಷ್ಟೇ ಕಡಿಮೆ ಇರತ್ತೆ. ಒಟ್ಟಿನಲ್ಲಿ ಯಾರು ಸಾಚಾ ಯಾರು ಖೊಟ್ಟಿ ಅನ್ನೋದೇ ಗೊತ್ತಾಗಲ್ಲ ಈ ಲೋಕದಲ್ಲಿ.. ಇದು ಕೂಡ ಒಂದು ಅನುಭವ..