ಭೋಪಾಲ್ ಅನಿಲ ದುರಂತದ ಬಗ್ಗೆ ಗೊತ್ತಿದ್ದವರಿಗೆ, ಆ ಕರಾಳ ಘಟನೆ ನೆನಪಿಗೆ ಬಂದರೆ ಒಮ್ಮೆ ಮೈ ನಡುಗದಿದ್ದರೆ ಕೇಳಿ.. ಇದು ಕೈಗಾರಿಕಾ ಜಗತ್ತಿನಲ್ಲಾದ ಅತ್ಯಂತ ಭೀಕರ ದುರಂತ. 1984ರ ಡಿಸೆಂಬರ್ನಲ್ಲಾದ ಈ ದುರಂತದ ನ್ಯಾಯದಾನ, ಪರಿಹಾರ ವಿತರಣೆ ಎಲ್ಲವೂ ಮುಗಿದಿದ ಕಥೆ ಎಂದು ಕೆಲವರು ಷರಾ ಬರೆದುಬಿಡಬಹುದು. ಆದರೆ, ಅಲ್ಲಿನ ಬಹಳ ಕುಟುಂಬಗಳು ದುರಂತದ ಬೆಚ್ಚಿಬೀಳಿಸುವಂಥ ಕನವರಿಕೆಯಿಂದ ಇನ್ನೂ ಹೊರಬಂದಿಲ್ಲ. ಈ ಪ್ರಕರಣದ ಪ್ರಮುಖ ಆರೋಪಿ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಅಮೆರಿಕದ ವಾರನ್ ಆ್ಯಂಡರ್ಸನ್. ಭೋಪಾಲ್ ದುರಂತದ ಬಳಿಕ ಒಮ್ಮೆ ಕಾಣಿಸಿಕೊಂಡು ಮಾಯವಾಗಿ ಅಕ್ಷರಶಃ ತಲೆಮರೆಸಿಕೊಂಡಿದ್ದ ಆ್ಯಂಡರ್ಸನ್, ನಂತರದ ದಿನಗಳಲ್ಲಿ ಎಷ್ಟು ಅನಾಮಿಕನಾಗಿ ಹೋದರು ಎಂದರೆ ಅವರ ಸಾವಿನ ಸುದ್ದಿ ಹೊರಜಗತ್ತಿಗೆ ಗೊತ್ತಾದದ್ದು ಒಂದು ತಿಂಗಳ ಬಳಿಕ!
ಭೋಪಾಲ್ ದುರಂತದ ಬಳಿಕ, ಅಂದರೆ 1985 ಮೇ 19ರಂದು ನ್ಯೂಯಾರ್ಕ್ ಟೈಮ್ಸ್ಗೆ ವಿಸ್ತೃತ ಸಂದರ್ಶನ ನೀಡಿದ್ದ ಆ್ಯಂಡರ್ಸನ್ ತಮ್ಮ ಖಾಸಗಿ ಬದುಕಿನ ಬಗ್ಗೆ ಹೇಳಿಕೊಂಡಿದ್ದರು. ಇದರ ಪ್ರಕಾರ, ಸ್ವೀಡನ್ನಿಂದ ವಲಸೆ ಬಂದ ಬಡಗಿಯೊಬ್ಬನ ಮೂವರು ಮಕ್ಕಳಲ್ಲಿ ಎರಡನೆಯವ ಆ್ಯಂಡರ್ಸನ್. 1921ರ ನವೆಂಬರ್ 29ರಂದು ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿ ಜನನ. ಬಾಲ್ಯದಲ್ಲಿ ಪತ್ರಿಕೆ ಹಂಚುವ ಹುಡುಗನಾಗಿ ಕೆಲಸ ಮಾಡಿದ್ದ ಅವರು, ದೊಡ್ಡವನಾದ ಬಳಿಕ ಡಾಕ್ಟರ್ ಆಗುವ ಕನಸು ಕಂಡಿದ್ದರು. ಆದರೆ ವಿಧಿಬರಹ ಬೇರೆಯೇ ಇತ್ತು. ಬಡತನದಿಂದಾಗಿ ವೈದ್ಯ ವಿಜ್ಞಾನ ಕಲಿಯಲಾಗಲಿಲ್ಲ. ರಸಾಯನ ಶಾಸ್ತ್ರದಲ್ಲಿ ಪದವೀಧರರಾದರು. 6 ಅಡಿ 2 ಇಂಚು ಎತ್ತರದ ಆ್ಯಂಡರ್ಸನ್, ಕಾಲೇಜು ದಿನಗಳಲ್ಲಿ ಅತ್ಯುತ್ತಮ ಫುಟ್ಬಾಲ್ ಆಟಗಾರನಾಗಿದ್ದರು. ಹಾಗಂತ ಬರೀ ಆಟದಲ್ಲಿ ಮುಳುಗಿಹೋಗುವ ಆಸಾಮಿಯಾಗಿರಲಿಲ್ಲ. ಕಲಿಕೆಯಲ್ಲೂ ಮುಂದಿದ್ದು ಉತ್ತಮ ಅಂಕಗಳೊಂದಿಗೆ ವಿದ್ಯಾರ್ಥಿವೇತನ ಪಡೆದಿದ್ದರು. 1942ರಲ್ಲಿ ಪದವಿ ಮುಗಿಸಿದ ಬಳಿಕ ನೌಕಾಪಡೆಗೆ ಸೇರ್ಪಡೆಗೊಂಡು ಫೈಟರ್ ಪೈಲಟ್ ಆಗಿ ತರಬೇತಿ ಪಡೆದರು. ಆದರೆ, ಯಾವತ್ತೂ ಯುದ್ಧದಲ್ಲಿ ಭಾಗಿಯಾಗಲಿಲ್ಲ. 1945ರಲ್ಲಿ ದ್ವಿತೀಯ ಜಾಗತಿಕ ಯುದ್ಧ ಮುಗಿದಾಗ ನೌಕಾಪಡೆಯ ನಂಟೂ ಮುಗಿದಿತ್ತು. ನ್ಯೂಯಾರ್ಕ್ನಲ್ಲಿ ನೌಕರಿ ಬೇಟೆಗೆ ಇಳಿದ ಆ್ಯಂಡರ್ಸನ್ ರಾಸಾಯನಿಕ ಕಂಪನಿಗಳಿಗೆ ಎಡತಾಕಿದರು. ಅಂದು ಯೂನಿಯನ್ ಕಾರ್ಬೈಡ್ ಕಂಪನಿ ಅವರಿಗೆ ನೌಕರಿ ನೀಡಿತು. ಹಂತಹಂತವಾಗಿ ಕಂಪನಿಯಲ್ಲಿ ಬಡ್ತಿ ಪಡೆದುಕೊಂಡು 1977ರ ಹೊತ್ತಿಗೆ ಚೀಫ್ ಆಪರೇಟಿಂಗ್ ಆಫೀಸರ್ ಹುದ್ದೆಗೆ ಮೇಲೇರಿದ ಚಾಣಾಕ್ಷ ಆ್ಯಂಡರ್ಸನ್. 36 ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ 700 ಘಟಕಗಳ ಜವಾಬ್ದಾರಿ ಅವರ ಹೆಗಲೇರಿತು.
ಈ ನಡುವೆ, ಲಿಲ್ಲಿಯಾನಾ ಎಂಬಾಕೆಯನ್ನು ವಿವಾಹವಾಗಿದ್ದರು. ಈ ದಂಪತಿಗೆ ಮಕ್ಕಳಿಲ್ಲ. ವೃತ್ತಿ ಜೀವನದಲ್ಲಿ ಪ್ರಗತಿಪಥದಲ್ಲಿ ಸಾಗಿದ್ದರೂ ಆ್ಯಂಡರ್ಸನ್ ಹೊರಜಗತ್ತಿಗೆ ಬಹುತೇಕ ಅನಾಮಿಕನಾಗಿಯೇ ಉಳಿದಿದ್ದರು. ಅವರ ಟೇಬಲ್ ಮೇಲಿದ್ದ ಪೇಪರ್ವೇಟ್ನಲ್ಲಿದ್ದ “Leader is best, when people barely know he exists’ ಎಂಬ ಮಾತು ಅವರ ಜಾಯಮಾನಕ್ಕೆ ಹೊಂದುವಂತಿತ್ತು. 1979ರ ತನಕ ವೃತ್ತಿಜೀವನದಲ್ಲಿ ಹೇಳಿಕೊಳ್ಳುವಂತಹ ಏರುಪೇರುಗಳಾಗದೆ ಸಾಗುತ್ತ ಬಂತು.
1979ರಲ್ಲಿ ಆ್ಯಂಡರ್ಸನ್ ಕಂಪನಿಯ ಅಧ್ಯಕ್ಷರಾದರು. ಅಲ್ಲಿಂದಾಚೆಗೆ ಅವರ ಜವಾಬ್ದಾರಿ ಹೆಚ್ಚಿತು. ಕಂಪನಿಯ ಲಾಭ-ನಷ್ಟಕ್ಕೆ ನೇರ ಹೊಣೆಯಾಗಬೇಕಾಗಿತ್ತು. ಆದಾಯಕ್ಕೆ ಹಿನ್ನಡೆಯಾಗದಂತೆ ಕಂಪನಿಯನ್ನು ಮುನ್ನಡೆಸಿದ್ದರು. 1984ರ ಹೊತ್ತಿಗೆ ಆ್ಯಂಡರ್ಸನ್ ಕಂಪನಿಯ ಸಿಇಒ ಆಗಿದ್ದರು. ಅದೇ ವರ್ಷದ ಡಿಸೆಂಬರ್ 3 ತನ್ನ ಬದುಕಿನ `ಅನಾಮಿಕ’ ಆಯಾಮಕ್ಕೆ ವಿಚಿತ್ರ ತಿರುವು ನೀಡುತ್ತದೆ ಎಂದು ಅವರು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.
ಡಿಸೆಂಬರ್ 2ರ ಮಧ್ಯರಾತ್ರಿ 3ರ ಬೆಳಗಿನ ಜಾವ ಬೋಪಾಲದ ಯೂನಿಯನ್ ಕಾರ್ಬೈಡ್ನ ಕಾರ್ಖಾನೆಯಲ್ಲಿ ಅನಿಲ ಸೋರಿಕೆ ಸಂಭವಿಸಿ, ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿಯೇ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದರು. ಮಧ್ಯಪ್ರದೇಶ ಸರ್ಕಾರದ ಲೆಕ್ಕದ ಪ್ರಕಾರ ಸಾವಿನ ಸಂಖ್ಯೆ 3,787. ಅನಧಿಕೃತ ಲೆಕ್ಕದ ಪ್ರಕಾರ ಸಾವಿನ ಸಂಖ್ಯೆ 15 ಸಾವಿರಕ್ಕೂ ಹೆಚ್ಚು. ಡಿಸೆಂಬರ್ 3ರ ಬೆಳಗ್ಗೆ 8 ಗಂಟೆಗೆ ಆ್ಯಂಡರ್ಸನ್ ಮನೆಯ ದೂರವಾಣಿ ರಿಂಗಣಿಸಿತ್ತು. ಕಂಪನಿಯ ಅಧ್ಯಕ್ಷ ಅಲೆಕ್ ಫ್ಲಮ್ ಕರೆಮಾಡಿ ಭೋಪಾಲ್ ಅನಿಲ ದುರಂತದ ಷಾಕಿಂಗ್ ಸುದ್ದಿ ತಿಳಿಸಿದ್ದರು. ವಿಪರೀತ ನೆಗಡಿಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಅಂದು ವಿಶ್ರಾಂತಿ ತೆಗೆದುಕೊಳ್ಳಬಯಸಿದ್ದರು ಆ್ಯಂಡರ್ಸನ್. ಆದರೆ ಸುದ್ದಿ ಕೇಳಿ ಕೂಡಲೇ ಭಾರತಕ್ಕೆ ಹೊರಟು ಮುಂಬಯಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಕಂಪನಿಯ ಭಾರತದ ಆಡಳಿತ ಮಂಡಳಿ ಅಧ್ಯಕ್ಷ ಕೇಶವ್ ಮಹಿಂದ್ರಾ ಹಾಗೂ ಎಂಡಿ ವಿ.ಪಿ.ಗೋಖಲೆ ಅವರನ್ನು ಆತಂಕದಿಂದಲೇ ಬರಮಾಡಿಕೊಂಡಿದ್ದರು. ತಕ್ಷಣವೇ ಪೊಲೀಸರು ಮೂವರನ್ನೂ ಬಂಧಿಸಿ, ಆ್ಯಂಡರ್ಸನ್ಗೆ ಭೋಪಾಲಕ್ಕೆ ಹೋಗಗೊಡದೆ ದೆಹಲಿಗೆ ಕರೆದೊಯ್ದರು. ಐದು ದಿನಗಳ ಬಳಿಕ 25 ಸಾವಿರ ರೂ.ಗಳ ಭದ್ರತಾ ಠೇವಣಿ ನೀಡಿ ಜಾಮೀನು ಪಡೆದ ಆ್ಯಂಡರ್ಸನ್ ಅಮೆರಿಕಕ್ಕೆ ಹಿಂತಿರುಗಿದ್ದರು.
ಉಳಿದಿಬ್ಬರನ್ನು ಭೋಪಾಲದಲ್ಲಿ ಕಂಪನಿಯ ಅತಿಥಿಗೃಹದಲ್ಲೇ ಒಂಭತ್ತು ದಿನ ಕಾಲ ಗೃಹಬಂಧನದಲ್ಲಿರಿಸಲಾಗಿತ್ತು. ಅಂದು ಅರ್ಜುನ್ ಸಿಂಗ್ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದರೆ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು. ನರಸಿಂಹರಾವ್ ಗೃಹಸಚಿವರಾಗಿದ್ದರು. ಆ್ಯಂಡರ್ಸನ್ ಹೆಚ್ಚಿನ ತೊಂದರೆಯಿಲ್ಲದೆ ಸ್ವದೇಶಕ್ಕೆ ಹಾರುವಂತಾಗುವಲ್ಲಿ ಅಂದಿನ ಮಧ್ಯಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಪ್ರಮುಖರ ಪಾತ್ರವಿತ್ತು ಎಂಬ ಅಂಶ ತಡವಾಗಿ ಬೆಳಕಿಗೆ ಬಂತು.
ಜಾಮೀನು ಪಡೆದು ಹೋದ ಆ್ಯಂಡರ್ಸನ್ ಮತ್ತೆಂದೂ ವಿಚಾರಣೆಗೆ ಭಾರತದ ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಅವರನ್ನು ಗಡಿಪಾರು ಮಾಡುವಂತೆ ಅಮೆರಿಕ ಸರ್ಕಾರಕ್ಕೆ ಭಾರತ ಹಲವು ಬಾರಿ ಮನವಿ ಮಾಡಿತಾದರೂ ಅದಕ್ಕೆ ಮನ್ನಣೆ ಸಿಗಲಿಲ್ಲ. ಹೀಗಾಗಿ ಸರ್ಕಾರಗಳೂ ಕೈ ಚೆಲ್ಲಿ ಕೂತವು. ಹೀಗಾಗಿ ಆ್ಯಂಡರ್ಸನ್ `ತಲೆಮರೆಸಿಕೊಂಡಿರುವ ವ್ಯಕ್ತಿ’ ಎಂದು ಕೋರ್ಟ್ ಘೋಷಿಸಿತು.
ಭಾರತದಲ್ಲಿದ್ದ ಐದು ದಿನವೂ ಆರಾಮವಾಗಿದ್ದ ಆ್ಯಂಡರ್ಸನ್ಗೆ ಭಾರತೀಯರ `ಮೌನ’ ಅಚ್ಚರಿ ಉಂಟುಮಾಡಿತ್ತಂತೆ. ಭಾರತದಲ್ಲಿ ತನ್ನನ್ನು ಯಾರೂ ಬೆದರಿಸಿರಲಿಲ್ಲ, ಯಾವುದೇ ಬೆದರಿಕೆ ಕರೆ ಬಂದಿರಲಿಲ್ಲ. ಅದೊಂದು ರೀತಿಯ `ಮೌನ’ ಎಂದು ಅಚ್ಚರಿಪಟ್ಟ ಆ್ಯಂಡರ್ಸನ್ಗೆ, ತನ್ನದೇ ದೇಶದ ಕನೆಕ್ಟಿಕಟ್ನಲ್ಲಿ ಜನರನ್ನು ಎದುರಿಸುವುದಕ್ಕೆ ಸಾಧ್ಯವಾಗದೇ ಹೋಯಿತು. ಇದೆಲ್ಲವನ್ನೂ ಅವರು ನ್ಯೂಯಾರ್ಕ್ ಟೈಮ್ಸ್ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಭೋಪಾಲ್ ದುರ್ಘಟನೆ ಬಳಿಕ ನೀಡಿದ್ದ ಏಕೈಕ ಸಂದರ್ಶನ ಇದಾಗಿದ್ದು, ಬಳಿಕ ಅವರು ಎಂದೂ ವರದಿಗಾರರು ಸೇರಿದಂತೆ ಯಾರನ್ನೂ ಭೇಟಿಯಾಗಲಿಲ್ಲ. ಏಕಕಾಲಕ್ಕೆ ಎಲ್ಲರಿಂದ ತೂರಿ ಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕುಸಿದ ಆ್ಯಂಡರ್ಸನ್ಗೆ ಆಸರೆಯಾಗಿದ್ದು ಪತ್ನಿ ಲಿಲ್ಲಿಯಾನಾ. ಭೇಟಿಮಾಡ ಹೋದವರಿಗೆಲ್ಲ, ಪತಿಯ ಆರೋಗ್ಯ ಸರಿ ಇಲ್ಲ, ನೆನಪಿನ ಶಕ್ತಿಯೂ ಸರಿಯಾಗಿಲ್ಲ ಎಂದು ಆಕೆಯೇ ಎಲ್ಲರನ್ನೂ ದೂರ ಇರಿಸಿದರು. ಹೀಗೆ, ಅವರ `ಅನಾಮಿಕತೆ’ಯ ಪ್ರೀತಿ ಜೀವಿತದ ಕೊನೆಗಾಲದಲ್ಲಿ ವ್ಯತಿರಿಕ್ತರೂಪದಲ್ಲಿ ಕಾಣಿಸಿಕೊಂಡಿತ್ತು!
ಫ್ಲೋರಿಡಾದ ವೆರೋ ಬೀಚ್ನಲ್ಲಿರುವ `ವೆರೋ ಬೀಚ್ 32963′ ಎಂಬ ವಾರಪತ್ರಿಕೆ ಆ್ಯಂಡರ್ಸನ್ (92) ಸಾವಿನ ಕುರಿತ ಲೇಖನವನ್ನು ಪ್ರಕಟಿಸದೇ ಹೋಗಿದ್ದರೆ, 2014ರ ಸೆಪ್ಟೆಂಬರ್ 29ರಂದು ಅವರು ಕೊನೆಯುಸಿರೆಳೆದ ವಿಷಯ ಬಹಿರಂಗವಾಗುತ್ತಲೇ ಇರಲಿಲ್ಲವೇನೋ! ಕುಟುಂಬದವರೂ ಈ ವಿಷಯವನ್ನು ಪ್ರಕಟಿಸಿಲ್ಲ. ಸಾರ್ವಜನಿಕ ಮಾಹಿತಿ ಆಧರಿಸಿ ಫ್ಲೋರಿಡಾದ ವಾರಪತ್ರಿಕೆ ಪ್ರಕಟಿಸಿದ ಸುದ್ದಿ ಗಮನಿಸಿದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಸುಮಾರು ಒಂದು ತಿಂಗಳ ಬಳಿಕ ಈ ವಿಚಾರವಾಗಿ ಜಗತ್ತಿನ ಗಮನ ಸೆಳೆದಿದೆ. ಬದುಕಿನಲ್ಲಿ ಪ್ರಖರ ಪ್ರಚಾರವನ್ನು ಇಷ್ಟಪಡದ ಆ್ಯಂಡರ್ಸನ್ ಸಾವಿನಲ್ಲೂ ಸುದ್ದಿಯಾಗಲಿಲ್ಲ. ಬಹುಶಃ ಭೋಪಾಲ್ ಸಂತ್ರಸ್ತರ ನಿಟ್ಟುಸಿರು ಕೊನೆಯವರೆಗೂ ಅವರ ಕಿವಿಯಲ್ಲಿ ಕೇಳುತ್ತಿದ್ದಿರಬೇಕು…
This blog article is very interesting and will add insight to visitors of this blog. Thank you, this blog has added to my knowledge.
pengobatan sakit maag kronis