ಪೀಪ್ಲಿ ಲೈವ್‌… ಉಫ್‌ !

ಪೀಪ್ಲಿ ಲೈವ್… ನೋಡಿದಾಗ ಮನದಲ್ಲಿ ಎದ್ದ ಭಾವನೆಗಳ ಅಲೆಗಳಿವು…ಎಷ್ಟೋ ಬಾರಿ ಹೀಗೆ ಅನಿಸಿದ್ದಿದೆ.. ಒಬ್ಬ ವರದಿಗಾರನಾಗಿ ಸಮಾಜವನ್ನು ನೋಡುವಾಗ ಉಂಟಾಗುವ ಭಾವನೆಗಳವು.. ಮಾಧ್ಯಮಗಳು ಎಲ್ಲಿ ಎಡವುತ್ತಿವೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗತ್ತೆ..

ಆತ್ಮಹತ್ಯೆ ಎಂಬ ಕತೆಯ ಸುತ್ತ…

foto courtesy -connect.in.com

ಪೀಪ್ಲಿ ಲೈವ್  ಸಿನಿಕತೆ ಕಡೆಗೆ ಗಮನಹರಿಸಿದ್ರೆ ಸಾಕು. ಪೀಪ್ಲಿ ಎಂಬ ಗ್ರಾಮದಲ್ಲಿ ನತ್ತಾ ಎಂಬ ರೈತ ಆತ್ಮಹತ್ಯೆ ಮಾಡ್ತೇನೆ ಎಂದು ಹೇಳ್ತಾ ಇರ್ತಾನೆ.. ಮಾಧ್ಯಮ ಬ್ರೇಕಿಂಗ್ ನ್ಯೂಸ್‌  ಭರಾಟೆ ನಡುವೆ ಒಂದಿಷ್ಟು ಹೆಸರು ಮಾಡಬೇಕು ಎಂಬ ಆಸೆ ಪ್ರತಿಯೊಬ್ಬ ಪತ್ರಿಕಾ ವರದಿಗಾರನಿಗೂ ಇರತ್ತೆ. ಹಾಗೆ ಆ ವರದಿಗಾರನಿಗೂ ಅಂಥದ್ದೊಂದು ಹಪಹಪಿ ಇತ್ತು. ಪೀಪ್ಲಿ ಎಂಬ ಗ್ರಾಮದ ಅಂಗಡಿಯೊಂದರ ಬಳಿ ಟೀ ಕುಡಿಯುತ್ತಿದ್ದ ಈತನ ಕಣ್ಣಿಗೆ ರೈತ ನತ್ತಾದಾಸ್‌ ಮಾಣಿಕ್‌ಪುರಿ ಕಾಣಿಸ್ತಾನೆ. ಆತ ತನ್ನ ಅಣ್ಣನೊಂದಿಗೆ ಟೀ ಅಂಗಡಿ ಬಳಿ ಆತ್ಮಹತ್ಯೆ ಬಗ್ಗೆ ಮಾತಾಡ್ತಾ ಇದ್ದ. ಇದು ಪತ್ರಿಕಾ ವರದಿಗಾರನ ಕಿವಿಗೆ ಬೀಳತ್ತೆ. ಆತ ಪೋಟೋ ತೆಗೆದು, ವರದಿಯೊಂದನ್ನು ತಯಾರಿಸಿದ ಕೂಡಾ. ಅದು ಪತ್ರಿಕೆಯಲ್ಲಿ ಬೈಲೈನ್ ಜೊತೆ ಪ್ರಕಟವಾದಾಗ, ಟಿವಿ ಮಾಧ್ಯಮದ ಗಮನ ಸೆಳೆಯತ್ತೆ. ಇನ್ನೇನು ಈ ಕತೆಯ ಫಾಲೋ ಅಪ್‌ ಮಾಧ್ಯಮಗಳೇ ಮಾಡೋಕೆ ಶುರುಮಾಡ್ತವೆ.. ಇದೇ ವೇಳೆ, ಇನ್ನೊಬ್ಬ ಕೃಷಕಾಯನಾದ ರೈತ ಭೂಮಿ ಅಗೆಯುತ್ತಿರುತ್ತಾನೆ. ಈ ಎಲ್ಲ ಬೆಳವಣಿಗೆ ನಡುವೆ ಸಿನಿಮಾ ಕ್ಯಾಮರಾ ಕಣ್ಣು ಇದನ್ನೂ ಸೆರೆ ಹಿಡಿಯತ್ತೆ… ಪತ್ರಕರ್ತನ ಕಣ್ಣಿಗೂ ಇದು ಬೀಳತ್ತೆ. ಇದ್ರಲ್ಲೂ ಸುದ್ದಿ ಮೌಲ್ಯ ಕಾಣ್ತಾನೆ ಆತ. ಆದ್ರೆ, ಮಾಧ್ಯಮಗಳ ಕಣ್ಣಲ್ಲಿ ನತ್ತಾ ಹೊರತು ಬೇರಾರೂ ರೈತನೇ ಅಲ್ಲ ಅನ್ನೋ ಭಾವನೆ… ಕೊನೆಗೆ ಸಾಯೋದು ಈ ಪತ್ರಕರ್ತ… ಆದ್ರೆ, ಮಾಧ್ಯಮಗಳಲ್ಲಿ ಸಾಯೋದು ಆತ್ಮಹತ್ಯೆ ಮಾಡ್‌ಬೇಕು ಅಂತಿದ್ದೀನೆ ಎಂದಿದ್ದ ನತ್ತಾದಾಸ್‌ ಮಾಣಿಕ್‌ಪುರಿ… ದೂರದ ನಗರಿಯೊಂದರಲ್ಲಿ ನತ್ತಾ ಇನ್ನೂ ಬದುಕಿದ್ದಾನೆ ಎಂಬುದನ್ನು ಸಿನಿಮಾ ತೋರಿಸತ್ತೆ…

ಸಿನಿಮಾ ಜನಗಳ ಮನ ಅಂದ್ರೆ ತಪ್ಪಲ್ಲವೇನೋ ?

ಪತ್ರಕರ್ತ ಬರೆದ ಸುದ್ದಿ ಒಂದು ಟಿ.ವಿ.ಚಾನೆಲ್‌ ಗಮನ ಸೆಳೆಯತ್ತೆ.. ಆ ಚಾನೆಲ್‌ ಈ ಪತ್ರಕರ್ತನ ಫೇವರಿಟ್‌.. ಚಾನೆಲ್‌ನ ವರದಿಗಾರ್ತಿ ಪತ್ರಿಕಾ ವರದಿಗಾರನಿಗೆ ಫೋನಾಯಿಸ್ತಾಳೆ. ಆಕೆ ಪೀಪ್ಲಿ ಗ್ರಾಮಕ್ಕೆ ಆಗಮಿಸಿ ವಿಶೇಷ ವರದಿ ತಯಾರಿಸುವ ಭರದಲ್ಲಿರುತ್ತಾಳೆ.. ಆದ್ರೆ, ಆಕೆ ನತ್ತಾನ ಇಂಟರ್‌ ವ್ಯೂ ನಡೆಸುವ ಪ್ರಯತ್ನದಲ್ಲಿದ್ದಾಗ, ಹತ್ತಿಪ್ಪತ್ತು ಚಾನೆಲ್‌ಗಳ ಲೈವ್‌ ಕೊಡೋ ಡಿಎಸ್‌ಎನ್‌ಜಿ ವಾಹನಗಳು ಪೀಪ್ಲಿಗೆ ತಲುಪಿದ್ವು..ಅಲ್ಲಿಂದ ಮುಂದೆ ಎಲ್ಲವೂ ಮಾಧ್ಯಮದ ಬ್ರೇಕಿಂಗ್ ನ್ಯೂಸ್‌, ಟಿಆರ್‌ಪಿ ಹೆಚ್ಚಿಸುವ ಭರಾಟೆ…

ಒಂದೊಂದು ಚಾನೆಲ್‌ನಲ್ಲಿ ಒಂದೊಂದು ರೀತಿ ವರದಿ.. ಒಂದೊಂದು ರೀತಿ ವಿಶ್ಲೇಷಣೆ.. ನತ್ತಾ ಏನ್ ಮಾಡಿದ್ರೂ ಸುದ್ದಿಯೇ.. ಎಲ್ಲಿ ಹೋದ್ರೂ ಸುದ್ದಿಯೇ…ನತ್ತಾ ಮಾಧ್ಯಮಗಳ ಹೀರೋ ಆಗಿ ಹೋಗಿದ್ದ.. ನತ್ತಾ ಮನೆಯ ಸುತ್ತಲೂ ಮಾಧ್ಯಮಗಳ ಕ್ಯಾಮರಾದ್ದೇ ಹದ್ದಿನ ಕಣ್ಣು.. ಆತನ ಸಾವಿನ ಬಗ್ಗೆಯೇ ಸುದ್ದಿ.. ಆತ್ಮಹತ್ಯೆ ಮಾಡೋದನ್ನು ಲೈವ್ ಆಗಿಯೇ ತೋರಿಸಬೇಕು ಅನ್ನೋ ಹಪಹಪಿ… ಹೇಗೋ ನತ್ತಾ ಎಲ್ಲರ ಕಣ್ಣು ತಪ್ಪಿಸಿದ್ದ…

ನತ್ತಾ ತಾನು ಆತ್ಮಹತ್ಯೆ ಮಾಡ್ತೇನೆ ಎಂದು ಹೇಳಿದ್ದನ್ನು ಪತ್ರಿಕೆಯೊಂದು ಸುದ್ದಿ ಮಾಡಿತ್ತು. ಈ ವರದಿಯ ಪರಿಣಾಮ ಏನು? ಆತನಿಗೇನಾದ್ರೂ ಲಾಭ ಆಯ್ತಾ ? ಖಂಡಿತಾ ಇಲ್ಲ.. ಮನೆಯ ನೆಮ್ಮದಿ ಹಾಳಾಯ್ತು.. ಮಾಧ್ಯಮಗಳ ಭರಾಟೆಯಿಂದಾಗಿ ಮನೆಯಲ್ಲೇ ಅನಾಥನಂತೆ ಬದುಕುವ ಕಷ್ಟ.. ಜೀವಂತ ಇದ್ರೂ ಸತ್ತಂತೆ ಬಾಳಬೇಕಾದ ಸಂಕಟ..

ಸಿನಿಮಾ ಸಮಾಜದ ಕನ್ನಡಿ ಅನ್ನೋದು ಸುಳ್ಳಲ್ಲ. ಮಾಧ್ಯಮಗಳ ಟಿಆರ್‌ಪಿ ಹೆಚ್ಚಿಸುವ ಭರಾಟೆ.. ಯಥಾವತ್ ಸುದ್ದಿ ಬದಲು ವಿಶ್ಲೇಷಣೆಗೊಂಡ ಸುದ್ದಿ ವೀಕ್ಷಕರನ್ನು ತಲುಪುತ್ತಿರುವುದು.. ನತ್ತಾ ಬಹಿರ್ದೆಸೆಗೆ ಹೋದಾಗ ಒಂದೊಂದು ಚಾನೆಲ್‌ನ ವರದಿಗಾರರು ಮಾಡ್ತಾ ಇದ್ದ ವೀಕ್ಷಕ ವಿವರಣೆ ನಿಜಕ್ಕೂ ಮಾಧ್ಯಮಗಳನ್ನು ಅಪಹಾಸ್ಯ ಮಾಡಿದಂತಿತ್ತು.

೩ನೇ ಕಣ್ಣಲ್ಲಿ ರೈತನ ಆತ್ಮಹತ್ಯೆ

ರೈತ ಆತ್ಮಹತ್ಯೆ ನಿಯಂತ್ರಿಸೋದಕ್ಕೆ ಸರಕಾರ ಕೈಗೊಂಡ ಕ್ರಮವನ್ನೂ ಅಪಹಾಸ್ಯ ಮಾಡಿದಂತಿದೆ. ಸತ್ತ ರೈತರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ನೆರವು ನೀಡುವ ಘೋಷಣೆ.. ಯಾವೆಲ್ಲಾ ರೀತಿ ಪರಿಣಾಮ ಬೀರತ್ತೆ…ಯಾರೆಲ್ಲಾ ಇದರ ಲಾಭ ಪಡೆಯೋದಕ್ಕೆ ಪ್ರಯತ್ನಿಸ್ತಿದ್ದಾರೆ ? ನಿಜವಾಗ್ಲೂ ವಾಸ್ತವದ ಅರಿವು ಅಂದ್ರೆ ಇದೇ ಇರಬಹುದೇನೋ ?

ನತ್ತಾ ಆತ್ಮಹತ್ಯೆ ಬಗ್ಗೆ ಮಾತಾಡಿದ್ದನ್ನು ಪತ್ರಕರ್ತ ವರದಿ ಮಾಡ್ತಾನೆ. ಇದು ಮಾಧ್ಯಮಗಳ ಕಣ್ಣಿಗೆ ಬಿದ್ದು, ಟಿಆರ‍್ಪಿ ಹೆಚ್ಚಿಸುವ ಭರಾಟೆ ಕಂಡು ಬಂತು. ವರದಿಗಳು ಹೇಗೆ ಬದಲಾಗ್ತಾ ಇವೆ ಅನ್ನೋದು ಸ್ಪಷ್ಟವಾಗಿ ಗೊ‌ತ್ತಾಗ್ತಾ ಇತ್ತು. ಈ ನಡುವೆ ಮೊದಲು ವರದಿ ಮಾಡಿದ ಪತ್ರಕರ್ತ ಮಾಧ್ಯಮಕ್ಕೆ ಸೇರುವ ಇಚ್ಛೆ ವ್ಯಕ್ತಪಡಿಸ್ತಾನೆ.. ಟಿ.ವಿ.ಚಾನೆಲ್ ವರದಿಗಾರ್ತಿಯಿಂದ ಅವಮಾನಕ್ಕೆ ಒಳಗಾಗ್ತಾನೆ… ಈ ನಡುವೆ ರಾಜಕಾರಣಿಗಳ ಪೊಲಿಟಿಕಲ್ ಮೈಲೇಜ್ ಪಡ್ಕೊಳ್ಳೋ ಪ್ರಯತ್ನ… ಅದಕ್ಕೆ ಮಾಧ್ಯಮಗಳ ಮಸಾಲೆ…

ಈ ಗೊಂದಲದಿಂದ ಒಮ್ಮೆ ಪಾರಾದ್ರೆ ಸಾಕು.. ಯಾಕಾದ್ರೂ ಆತ್ಮಹತ್ಯೆ ಬಗ್ಗೆ ಮಾತಾಡಿದ್ನೋ ಎಂಬ ಭಾವ ನತ್ತಾದಾಸ್‌ನಲ್ಲಿ ಕಂಡು ಬಂದಿತ್ತು. ಇದ್ದಕ್ಕಿದಂತೆ ಬಹಿರ್ದೆಸೆಗೆ ತೆರಳಿದ ನತ್ತಾ ಮರೆಯಾಗ್ತಾನೆ. ಆದ್ರೆ ಆತ ಸ್ಥಳೀಯ ಪುಡಾರಿ ವಶದಲ್ಲಿರೋದು ಮತ್ತೆ ಬೆಳಕಿಗೆ ಬರತ್ತೆ. ಇಲ್ಲೂ ಪತ್ರಿಕಾ ವರದಿಗಾರನಿಗೇ ಮೊದಲ ಸುಳಿವು ಸಿಗತ್ತೆ. ಹಾಗೆ ಆತ ಚಾನೆಲ್ ವರದಿಗಾರ್ತಿಗೆ ಮಾಹಿತಿ ಕೊಡ್ತಾನೆ. ಬ್ರೇಕಿಂಗ್ ಮತ್ತು ಎಕ್ಸ್‌ಕ್ಲುಸಿವ್ ಸುದ್ದಿ ಕೊಡುವ ಭರಾಟೆ ಎಲ್ಲ ಚಾನೆಲ್‌ಗಳಿಗೂ… ಒಬ್ಬರ ಮೇಲೆ ಇನ್ನೊಬ್ಬರ ಕಣ್ಣು… ಸಾಲಾಗಿ ಹೊರಡ್ತಾರೆ… ನತ್ತಾನ ಕೂಡಿ ಹಾಕಿದ ಜಾಗಕ್ಕೆ… ಅಲ್ಲಿ ಅನಾಹುತ ನಡೆದು ಒಬ್ಬ ಸಾಯ್ತಾನೆ… ಸತ್ತವನು ನತ್ತಾ ಎಂದೇ ಮಾಧ್ಯಮಗಳು ವರದಿ ಮಾಡಿದ್ವು…

ಆದ್ರೆ, ಅಲ್ಲಿ ನಡೆದಿದ್ದು ಮಾತ್ರ ದುರಂತ.. ಯಾವ ಪತ್ರಕರ್ತ ನತ್ತಾ ಆತ್ಮಹತ್ಯೆ ಬಗ್ಗೆ ವರದಿ ಮಾಡಿದ್ದನೋ ಆತನೇ ದುರಂತದಲ್ಲಿ ಮಡಿದಿದ್ದ. ಇದನ್ನು ಯಾವ ಮಾಧ್ಯಮವೂ ಗುರುತಿಸಲಿಲ್ಲ. ಬದಲಾಗಿ ಟಿಆರ‍್ಪಿ ಹೆಚ್ಚಿಸುವ ಭರದಲ್ಲಿ ವಾಸ್ತವವನ್ನೇ ಮರೆಮಾಚಿದ್ದವು..
ಈ ಸಿನಿಮಾ ಸಮಾಜವನ್ನು ಎಚ್ಚರಿಸುವ ಪ್ರಯತ್ನವೇ ? ಅಥವಾ ಮಾಧ್ಯಮಗಳನ್ನು,ಮಾಧ್ಯಮ ಮಿತ್ರರನ್ನು ಎಚ್ಚರಿಸುವ ಪ್ರಯತ್ನವೇ ? ಯಾರು ಎಚ್ಚೆತ್ತುಕೊಳ್ಳದಿದ್ರೂ, ರೈತರು ಈ ಸಿನಿಮಾ ಪ್ರದರ್ಶನದ ವಿರುದ್ಧ ಪ್ರತಿಭಟನೆ ಮಾಡಿದ್ದು ನಡೆಸಿರೋದು ವರದಿಯಾಗಿದೆ.. ಏನೇ ಆಗ್ಲಿ… ಪೀಪ್ಲಿ ಲೈವ್ ಒಂದು ಉತ್ತಮ ಪ್ರಯತ್ನ… !

Tags :

0 thoughts on “ಪೀಪ್ಲಿ ಲೈವ್‌… ಉಫ್‌ !

Leave a Reply

Your email address will not be published. Required fields are marked *