ಪುಟಾಣಿಗಳನ್ನು ಕಾಡುವ `ಪುಲ್ಡ್ ಎಲ್‍ಬೊ’

ಪುಟಾಣಿಗಳನ್ನು ಕಾಡುವ `ಪುಲ್ಡ್ ಎಲ್‍ಬೊ’

ಸಾಮಾನ್ಯವಾಗಿ ಒಂದೂವರೆ- ಎರಡು ವರ್ಷದ ಮಕ್ಕಳು ಆಗತಾನೆ ಸ್ವತಂತ್ರವಾಗಿ ನಡೆಯಲಾರಂಭಿಸಿರುತ್ತಾರೆ. ಅಂತಹ ಸಂದರ್ಭದಲ್ಲಿ ಪೋಷಕರು ಮಗುವಿನ ಕೈ ಹಿಡಿದುಕೊಂಡು ಹೆಜ್ಜೆ ಹಾಕಿದರೆ, ಮಗುವಿಗೆ ತನಗೆ ಬೇಕಾದಂತೆ ಎಲ್ಲೆಂದರಲ್ಲಿ ಅಡ್ಡಾಡಲಾಗದು. ಆಗ ಮಗು ಪೋಷಕರ ಹಿಡಿತದಿಂದ ಕೈ ಬಿಡಿಸಿ ಓಡಲು ಮುಂದಾಗಬಹುದು. ಬಿಡದಿದ್ದಾಗ ಅಲ್ಲೇ ಕುಸಿದು ರಚ್ಚೆ ಹಿಡಿದು ಅತ್ತು ಹೊರಳಾಡಲು ಪ್ರಯತ್ನಿಸಬಹುದು.
ಇಂತಹ ಪ್ರಯತ್ನದ ಬಳಿಕ, ಅಂದರೆ ಕೆಲವೇ ನಿಮಿಷಗಳ ಬಳಿಕ ಮಗು ಜೋರಾಗಿ ಅಳುವುದಕ್ಕೆ ಆರಂಭಿಸಬಹುದು. ಕೈಯನ್ನು ಅಲ್ಲಾಡಿಸದೇ ಹಿಡಿದು, ಮಣಿಗಟ್ಟಿನ ಬಳಿ ಅಥವಾ ಮೊಣಕೈ ಬಳಿ ನೋವು ಎಂದು ಆಂಗಿಕ ಭಾಷೆ ಮೂಲಕ ಅಥವಾ ತನ್ನದೇ ಆದ ಬಾಲ ಭಾಷೆಯಲ್ಲಿ ಹೇಳಬಹುದು. ಮಗು ಇದ್ದಕ್ಕಿದ್ದಂತೆ ಹೀಗೆ ಅಳುತ್ತಾ ನೋವು ಎನ್ನುತ್ತಿದ್ದರೆ, ಪೋಷಕರು ಗಾಬರಿಯಾಗಿ ಆತಂಕಕ್ಕೆ ಒಳಗಾಗುವುದು ಸಹಜ. ಇಂತಹ ಘಟನೆ ಬಹುತೇಕರ ಮನೆಗಳಲ್ಲಾಗಿರುತ್ತದೆ. ಆದರೆ, ಸಮಸ್ಯೆ ಏನು ಎಂಬುದರ ಅರಿವು ಇರುವುದಿಲ್ಲ.

ವಿಜಯವಾಣಿ ಪತ್ರಿಕೆಯ ಫೆ11ರ ಸಂಚಿಕೆಯ ಲಲಿತಾ ಪುರವಣಿಯ ಮೂರನೇ ಪುಟದಲ್ಲಿ ಪ್ರಕಟವಾದ ಲೇಖನ.. ಕೃಪೆ ವಿಜಯವಾಣಿ
ವಿಜಯವಾಣಿ ಪತ್ರಿಕೆಯ ಫೆ11ರ ಸಂಚಿಕೆಯ ಲಲಿತಾ ಪುರವಣಿಯ ಮೂರನೇ ಪುಟದಲ್ಲಿ ಪ್ರಕಟವಾದ ಲೇಖನ.. ಕೃಪೆ ವಿಜಯವಾಣಿ

ಏನೀ ಸಮಸ್ಯೆ?
ಮಗುವಿಗೆ ಆದ ಸಮಸ್ಯೆ ಬೇರೇನೂ ಅಲ್ಲ. ಅದನ್ನು `ಪುಲ್ಡ್ ಎಲ್‍ಬೊ ಅಥವಾ ನರ್ಸ್ ಮೈಡ್ ಎಲ್ಬೊ ‘ ಎನ್ನುತ್ತಾರೆ. ಇದು ಐದು ವರ್ಷದೊಳಗಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲೊಂದು. ಮೊಣಕೈಯ ಎಲುಬು ಭಾಗಶಃ ಸ್ಥಾನಪಲ್ಲಟವಾಗುವುದೇ ಈ ಸಮಸ್ಯೆ. ವೈದ್ಯಕೀಯ ಪರಿಭಾಷೆಯಲ್ಲಿ `ರೇಡಿಯಲ್ ಹೆಡ್ ಸಬ್ಲಕ್ಸೇಷನ್’ ಎನ್ನುತ್ತಾರೆ.
ಐದು ವರ್ಷದೊಳಗಿನ ಮಕ್ಕಳಲ್ಲಿ ಎಲುಬು ಪೂರ್ಣ ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಹೀಗಾಗಿ, ಮಗುವಿನ ಕೈ ಹಿಡಿದೆಳೆದಾಗ ಅಥವಾ ಎಳೆಯಲ್ಪಟ್ಟಾಗ, ಅಂತಹ ಮಗುವಿನ ಮೊಣಕೈಯ ಅಸ್ಥಿರಜ್ಜು ಅಥವಾ ಮೂಳೆನಾರಿನಿಂದ ಎಲುಬು ಭಾಗಶಃ ಜಾರುವುದರಿಂದ ಇಂತಹ ಸಮಸ್ಯೆ ಉಂಟಾಗುತ್ತದೆ. ಮಕ್ಕಳು ದೊಡ್ಡವರಾದಂತೆಲ್ಲ ಈ ಸಮಸ್ಯೆ ಪ್ರಮಾಣವೂ ಕಡಿಮೆಯಾಗುತ್ತದೆ.
ಸಮಸ್ಯೆ ಉಂಟಾಗುವುದು ಹೇಗೆ?
ತಂದೆ ಅಥವಾ ತಾಯಿ ಮಗುವಿನ ಕೈ ಹಿಡಿದು ವಿರುದ್ಧ ದಿಕ್ಕಿನಲ್ಲಿ ಎಳೆದಾಗ, ಮಗುವಿನ ಒಂದೇ ಕೈ ಹಿಡಿದು ಮೇಲೆತ್ತಿದಾಗ, ದಿಢೀರಾಗಿ ಕೈ ಹಿಡಿದೆಳೆದಾಗ, ಅಥವಾ ಪೋಷಕರ ಹಿಡಿತದಿಂದ ಮಗು ಜಾರಿದಾಗ, ಕೆಲವೊಮ್ಮೆ ನೆಲದ ಮೇಲೆ ಹೊರಳಾಡಿದಾಗ ಪುಲ್ಡ್ ಎಲ್ಬೊ ಸಮಸ್ಯೆ ಉಂಟಾಗಬಹುದು.
ಗುಣಲಕ್ಷಣಗಳೇನು?
ಆರಂಭದಲ್ಲಿ ಮಗು ಅಳಬಹುದು. ನೋವು ಎಂದು ಇನ್ನೊಂದು ಕೈಯಿಂದ ಮುಟ್ಟಿ ಹೇಳಬಹುದು. ಅಲ್ಲದೆ, ಕೆಲವೇ ನಿಮಿಷದಲ್ಲಿ ನೋವಾದ ಕೈಯ ಚಲನೆಯನ್ನು ನಿಲ್ಲಿಸಬಹುದು. ಕೆಲವೊಮ್ಮೆ `ಮುರಿದ’ ಶಬ್ದ ಕೇಳಿಸಬಹುದು. ಯಾವುದೇ ಕೆಲಸಕ್ಕೆ ನೋವು ಇರುವ ಕೈಯನ್ನು ಬಳಸಲು ಹಿಂದೇಟು ಹಾಕಬಹುದು. ಮಗುವಿನ ಕೈಯನ್ನು  ಪೋಷಕರು ಮೇಲೆತ್ತಿದರಷ್ಟೇ, ಪೆÇೀಷಕರ ಕೈಗಳ ಆಧಾರ ಇರುವ ಕಾರಣ ಮಗು ಕೈ ಮೇಲೆತ್ತಬಹುದು. ಅಷ್ಟೇ ಅಲ್ಲ, ಕೆಲವೊಮ್ಮೆ ಊತ ಕಾಣಿಸಬಹುದು ಇಲ್ಲವೇ ಮೊಣಕೈ ವಿರೂಪಗೊಳ್ಳಬಹುದು.ಈ ಸಮಸ್ಯೆ ಗಂಭೀರವಾದುದಲ್ಲದೇ ಹೋದರೂ, ಮಕ್ಕಳು ದಿಗ್ಭ್ರಾಂತರಾಗುವಂತೆ ಮಾಡುತ್ತದೆ.
ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ಹೇಗೆ?
ಇಂಥ ಸಮಸ್ಯೆ ಎದುರಾದಾಗ ಮಗುವನ್ನು ಎಲುಬು ತಜ್ಞರ ಬಳಿ ಕರೆದೊಯ್ಯಬೇಕು. ಪೆÇೀಷಕರು ಘಟನೆಯನ್ನು ವಿವರಿಸಿದ್ದನ್ನು ಅನುಸರಿಸಿ ಮಗುವಿನ ಸಮಸ್ಯೆ `ಪುಲ್ಡ್ ಎಲ್ಬೊ’ ಹೌದೋ ಅಲ್ಲವೋ ಎಂಬುದನ್ನು ಡಾಕ್ಟರ್ ದೃಢೀಕರಿಸುತ್ತಾರೆ. ಸಾಮಾನ್ಯವಾಗಿ ಎಕ್ಸ್‍ರೇ ತೆಗೆಸಬೇಕಾಗಿ ಬರುವುದಿಲ್ಲ.
ಬಳಿಕ ಎಲುಬು ತಜ್ಞರು ಮಗುವಿನ ಕೈ ಪರಿಶೀಲಿಸಿ, ನಿಧಾನವಾಗಿ ಮಗುವಿನ ಮೊಣಕೈ ಹಿಡಿದು ಸ್ಥಾನಪಲ್ಲಟವಾದ ಎಲುಬನ್ನು ಸರಿಯಾದ ಜಾಗದಲ್ಲಿ ಕೂರಿಸುತ್ತಾರೆ. ಬಳಿಕ ಮಗುವಿನ ಕೈ ಚಲನೆಯನ್ನು ಪರಿಶೀಲಿಸುತ್ತಾರೆ. ತಕ್ಷಣಕ್ಕೆ ಮಗು ನೋವಾದ ಕೈಯನ್ನು ಚಲಿಸಲು ಹಿಂದೇಟು ಹಾಕಬಹುದು. ಆದರೆ, ಕೆಲ ಹೊತ್ತಾದ ಬಳಿಕ ಮಗು ತನ್ನ ನೋವಾದ ಕೈಯನ್ನು ಬಳಸಲಾರಂಭಿಸಬಹುದು. ಕೆಲವೊಮ್ಮೆ ನೋವಾದ ಕೈಯನ್ನು ಬಳಸಲು ಮಗು ಒಂದು ದಿನ ತೆಗೆದುಕೊಳ್ಳಬಹುದು.
ಒಂದೊಮ್ಮೆ ಎರಡು ಮೂರು ದಿನಗಳ ಬಳಿಕವೂ ಸಮಸ್ಯೆ ಹಾಗೇ ಇದ್ದಲ್ಲಿ, ಆಗ ಮಗುವಿನ ಕೈಯ ಎಕ್ಸ್ ರೇ ತೆಗೆಸುವುದಕ್ಕೆ ಡಾಕ್ಟರ್ ಶಿಫಾರಸು ಮಾಡುತ್ತಾರೆ. ಎಲುಬು ಮುರಿದಿದೆಯೇ ಎಂಬುದನ್ನು ಎಕ್ಸ್ ರೇ ಮೂಲಕ ಪತ್ತೆ ಹಚ್ಚಿ ಚಿಕಿತ್ಸೆ ನೀಡುತ್ತಾರೆ.
ತಡೆಯುವುದು ಹೇಗೆ?: ಪುಲ್ಡ್ ಎಲ್ಬೊ ಸಮಸ್ಯೆಯನ್ನು ತಡೆಗಟ್ಟುವುದು ಕೆಲವೊಮ್ಮೆ ಸಾಧ್ಯವಾಗದೇ ಹೋಗಬಹುದು. ಕೆಲವು ಮಕ್ಕಳು ಬಹುಬೇಗ ಇಂತಹ ಸಮಸ್ಯೆಗಳಿಗೆ ಒಳಗಾಗಬಹುದು. ಅವರ ಅಸ್ಥಿ ಬೆಳವಣಿಗೆ ನಿಧಾನಗತಿಯಲ್ಲಿರುವುದರಿಂದ ಇಂತಹ ಸಮಸ್ಯೆಗಳು ಸಾಮಾನ್ಯ. ಆದರೆ, ಸಾಧ್ಯವಾದಷ್ಟು ಮಟ್ಟಿಗೆ  ಪೋಷಕರು ಜಾಗರೂಕರಾಗಿರುವ ಮೂಲಕ ಇದನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

ನೆನಪಿಡಬೇಕಾದ ಅಂಶಗಳು
* ಐದು ವರ್ಷದೊಳಗಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಪುಲ್ಡ್ ಎಲ್ಬೊ
* ಕೈ ಹಿಡಿದೆಳೆದಾಗ ಮೊಣಕೈಯ ಎಲುಬು ಸ್ಥಾನ ಪಲ್ಲಟವಾಗುವುದರಿಂದ ಉಂಟಾಗುವ ಸಮಸ್ಯೆ
* ಇದು ಗಂಭೀರವಾದ ಸಮಸ್ಯೆಯಲ್ಲ;
* ಮಗುವಿನ ಭವಿಷ್ಯದ ಆರೋಗ್ಯಸ್ಥಿತಿ ಬಗ್ಗೆ ಆತಂಕ ಬೇಡ
* ಮಗುವನ್ನು ಮೇಲೆತ್ತಿಕೊಳ್ಳುವಾಗ ಕೈ ಹಿಡಿದು ಮೇಲೆತ್ತಬೇಡಿ
* ಇಂಥ ಸಮಸ್ಯೆ ಉದ್ಭವಿಸಿದಾಗ ತಕ್ಷಣವೇ ಸಮೀಪದಲ್ಲಿರುವ ಎಲುಬು ತಜ್ಞ ಡಾಕ್ಟರ್‍ನ್ನು ಭೇಟಿ ಮಾಡಿ

Leave a Reply

Your email address will not be published. Required fields are marked *