
ವಿಜ್ಞಾನ-ತಂತ್ರಜ್ಞಾನ ಮುಂದುವರಿದಂತೆ ಎಲ್ಲ ಅನೇಕ ಹೊಸ ಹೊಸ ಸಂಶೋಧನೆಗಳು, ಆವಿಷ್ಕಾರಗಳಿಗೂ ಇದು ವೇದಿಕೆಯಾಗುತ್ತಿದೆ. ರಕ್ಷಣಾ ವ್ಯವಸ್ಥೆ ಕಡೆಗೆ ಎಲ್ಲ ದೇಶಗಳು ಕೂಡಾ ಗಮನ ಹರಿಸುವುದರಿಂದ, ಸೈನ್ಯಕ್ಕೆ ಬೇಕಾದ ಅಗತ್ಯ ವಸ್ತುಗಳ ಬಗ್ಗೆ ಸಂಶೋಧನೆ ನಡೆಯುತ್ತಲೇ ಇದೆ. ಹೀಗಾಗಿ ಹೊಸ ಹೊಸ ಯುದ್ಧ ಸಾಮಗ್ರಿಗಳು ಕಾಣುತ್ತಿದ್ದೇವೆ. ಪುರಾತನ ಆಯುಧಗಳು ಮೂಲೆಗುಂಪು ಆಗುತ್ತಿರುವಂತೆ ಹೊಸ ಹೊಸ ಆಯುಧಗಳು ಕಾಣಿಸುತ್ತಿವೆ. ಮಾನವ ರಹಿತ ವಿಮಾನಗಳು ಕೂಡಾ..
ಇಷ್ಟೆಲ್ಲ ಪೀಠಿಕೆ ಯಾಕೆ ಎಂದರೆ, ಮಾನವ ರಹಿತ ವಿಮಾನ ಕ್ಷೇತ್ರದಲ್ಲೊಂದು ಮಹತ್ವದ ಮೈಲುಗಲ್ಲು ನೆಟ್ಟಿದ್ದಾರೆ ಸೌತ್ಆಮ್ಟನ್ ವಿಶ್ವವಿದ್ಯಾಲಯದ ಎಂಜಿನಿಯರ್ ಗಳು. ಇತ್ತೀಚೆಗಷ್ಟೇ ವಿಶ್ವದ ಪ್ರಥಮ “ಪ್ರಿಂಟೆಡ್” ಏರ್ ಕ್ರಾಫ್ಟ್ ಇತ್ತೀಚೆಗೆ ಬಾನಂಗಳದಲ್ಲಿ ಹಾರಾಟ ನಡೆಸಿದೆ. ಸೌತ್ಆಮ್ಟನ್ ವಿಶ್ವವಿದ್ಯಾಲಯದ ಎಂಜಿನಿಯರ್ ಗಳು ಇಂಥದ್ದೊಂದು ಹೊಸ ಆವಿಷ್ಕಾರಕ್ಕೆ ಕಾರಣ. ಏರ್ ಕ್ರಾಫ್ಟ್ ವಿನ್ಯಾಸದಲ್ಲೊಂದು ಮಹತ್ವದ ನಡೆ ಎಂದು ಇದನ್ನು ಬಣ್ಣಿಸಲಾಗುತ್ತಿದೆ.
ಸಲ್ಸಾ (SULSA – Southampton University Laser Sintered Aircraft) ಎಂಬುದು ಈ ಮಾನವ ರಹಿತ ಏರ್ ಕ್ರಾಫ್ಟ್ ಹೆಸರು. ರೆಕ್ಕೆಗಳು, ಇಂಟೆಗ್ರಲ್ ಕಂಟ್ರೋಲ್ ಸರ್ಫೇಸ್ ಮತ್ತು ಆಕ್ಸಸ್ ಹ್ಯಾಚಸ್ ಸೇರಿದಂತೆ ಈ ಏರ್ ಕ್ರಾಫ್ಟ್ ನ ಸಂಪೂರ್ಣ ರಚನೆಯೇ ಮುದ್ರಿತವಾಗಿದೆ. EOS EOSINT P730 ನೈಲಾನ್ ಲೇಸರ್ ಸಿಂಟರಿಂಗ್ ಮೆಷಿನ್ ಬಳಸಿ ಈ ರಚನೆ ನಿರ್ಮಿಸಲಾಗಿದೆ. ಈ ಮೆಷಿನ್ ಮೂಲಕ ಪ್ಲಾಸ್ಟಿಕ್ ಅಥವಾ ಲೋಹ ವಸ್ತುಗಳನ್ನು ಬೇಕಾದ ಆಕಾರಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು.
ಈ ಏರ್ ಕ್ರಾಫ್ಟ್ ರೆಕ್ಕೆ ಮತ್ತು ಇತರೆ ಬಿಡಿಭಾಗಗಳನ್ನು ಜೋಡಿಸುವುದಕ್ಕೆ ಯಾವುದೇ ರೀತಿಯ ಅಂಟು ಅಥವಾ ಇನ್ನಾವುದೇ ಸಲಕರಣೆಗಳನ್ನು ಬಳಸಿಕೊಂಡಿಲ್ಲ. ಬಹಳ ಸುಲಭವಾಗಿ ಎಳೆದು ಜೋಡಿಸುವ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಿದ್ದು, ಕೆಲವೇ ನಿಮಿಷಗಳಲ್ಲಿ ಯಾವುದೇ ಸಲಕರಣೆ ಇಲ್ಲದೇ ಏರ್ ಕ್ರಾಫ್ಟ್ ನಿರ್ಮಿಸುವುದು ಸುಲಭವೆನಿಸಿದೆ.
ಈ ಏರ್ ಕ್ರಾಫ್ಟ್ ವಿದ್ಯುತ್ ಚಾಲಿತ ವ್ಯವಸ್ಥೆ ಹೊಂದಿದೆ. ಇದರ ರೆಕ್ಕೆಗಳ ಉದ್ಧ ೨ ಮೀಟರ್ ಆಗಿದ್ದು, ಗರಿಷ್ಠ ವೇಗ ಗಂಟೆಗೆ ೧೦೦ ಮೈಲಿ ದಾಖಲಾಗಿದೆ. ಇದರಲ್ಲಿ ಅತ್ಯಂತ ಸೂಕ್ಷ್ಮ ಅಟೋ ಪೈಲೆಟ್ ಒಂದನ್ನು ಅಳವಡಿಸಲಾಗಿದೆ. ಡಾ.ಮಟ್ಬೆನ್ನೆಟ್ ಈ ಅಟೋ ಪೈಲೆಟ್ ರೂವಾರಿ. ಇವರು ಸೌತ್ಆಮ್ಟನ್ ವಿಶ್ವವಿದ್ಯಾಲಯದ ಎಂಜಿನಿಯರ್ ಗಳ ತಂಡದ ಸದಸ್ಯರಲ್ಲೊಬ್ಬರು.
ಇನ್ನು ಲೇಸರ್ ಸಿಂಟರಿಂಗ್ ಬಗ್ಗೆ ಹೇಳುವುದಾದಲ್ಲಿ, ವಿನ್ಯಾಸಕಾರನಿಗೆ ವಿಮಾನದ ಆಕಾರ ಮತ್ತು ರಚನೆಗಳನ್ನು ಸಿದ್ಧಪಡಿಸುವಲ್ಲಿ ನೆರವಾಗುತ್ತಿದೆ. ಸಾಮಾನ್ಯವಾಗಿ ಇಂತಹ ರಚನೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮಾಡ ಹೊರಟರೆ ದುಬಾರಿ ವೆಚ್ಚ ಖಂಡಿತ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಹೊಸ ತಂತ್ರಜ್ಞಾನದ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಏರ್ ಕ್ರಾಫ್ಟ್ ರಚನೆ ಸಾಧ್ಯ. ಸಾಂಪ್ರದಾಯಿಕ ವಸ್ತುಗಳು ಮತ್ತು ತಂತ್ರಗಾರಿಕೆ ಬಳಸಿ ಒಂದು ಏರ್ ಕ್ರಾಫ್ಟ್ ರಚಿಸಬೇಕಾದರೆ ಸಾಮಾನ್ಯವಾಗಿ ತಿಂಗಳುಗಳ ಅವಧಿಯೇ ಬೇಕು. ಈ ಹೊಸ ತಂತ್ರಜ್ಞಾನದಲ್ಲಿ ಏರ್ ಕ್ರಾಫ್ಟ್ ನ ರಚನೆ ಮತ್ತು ವಿನ್ಯಾಸಕ್ಕಾಗಿ ಪ್ರತ್ಯೇಕ ಟೂಲ್ಗಳ ಅವಶ್ಯಕತೆ ಇಲ್ಲದಿರುವುದು ವೆಚ್ಚ ಕಡಿತಕ್ಕೆ ಕಾರಣವಾಗಿದೆ. ಇದು ಪ್ಲಸ್ ಪಾಯಿಂಟ್ ಎಂದೇ ಹೇಳಬೇಕು.
ಸೌತ್ಆಮ್ಟನ್ ವಿಶ್ವವಿದ್ಯಾಲಯದ ಕಂಪ್ಯೂಟೇಶನಲ್ ಎಂಜಿನಿಯರಿಂಗ್ ಮತ್ತು ಡಿಸೈನ್ ರೀಸರ್ಚ್ ಗ್ರೂಪ್ ನ ಪ್ರೊಫೆಸರ್ ಗಳಾದ ಆಂಡಿ ಕೆನೆ ಮತ್ತು ಜಿಮ್ ಸ್ಕನ್ಲಾನ್ ಈ ಯೋಜನೆಯ ಉಸ್ತುವಾರಿ ಹೊತ್ತಿದ್ದವರು. ಪ್ರೊಫೆಸರ್ ಸ್ಕನ್ಲಾನ್ ಪ್ರಕಾರ, ಲೇಸರ್ ಸಿಂಟರಿಂಗ್ ಪ್ರಕ್ರಿಯೆ ಎಲ್ಲ ರೀತಿಯ ನಮನೀಯತೆ ಗುಣ ಹೊಂದಿದ್ದು, ವಿನ್ಯಾಸದ ಜವಾಬ್ಧಾರಿ ಹೊತ್ತ ತಂಡಕ್ಕೆ ಐತಿಹಾಸಿಕ ತಂತ್ರಜ್ಞಾನ ಮತ್ತು ಐಡಿಯಗಳನ್ನು ಮೆಲುಕು ಹಾಕುವುದಕ್ಕೂ ಅವಕಾಶ ನೀಡಿತ್ತು. ಇದರಿಂದಲೇ, ಸಾಂಪ್ರದಾಯಿಕ ವಸ್ತುಗಳ ಬಳಕೆ ಮತ್ತು ತಂತ್ರಜ್ಞಾನ ದುಬಾರಿ ಎಂಬುದು ಮನವರಿಕೆ ಆಯಿತು. ಮಾನವ ರಹಿತ ವಿಮಾನದ ವಿನ್ಯಾಸ ಮೊದಲ ಬಾರಿಗೆ, ಬಾರ್ನೆಸ್ ವಲ್ಲಿಸ್ ಸಿದ್ಧಪಡಿಸಿದ್ದಲ್ಲದೇ, ವಿಕ್ಕರ್ಸ್ ವೆಲ್ಲಿಂಗ್ಟನ್ ಬಾಂಬರ್ ಆಗಿ ೧೯೩೬ ರಲ್ಲಿ ಬಳಸಲ್ಪಟ್ಟಿತು. ಈ ರಚನೆ ದೃಢವಾದುದು, ಹಗುರ ಭಾರ ಹೊಂದಿರುವಂಥದ್ದು ಮಾತ್ರವಲ್ಲದೇ ಕ್ಲಿಷ್ಟ ರಚನೆ ಹೊಂದಿತ್ತು. ಇದೇ ರೀತಿ ಈ ಪ್ರಿಂಟೆಡ್ ಏರ್ ಕ್ರಾಫ್ಟ್ ಕೂಡಾ ಸಾಂಪ್ರದಾಯಿಕ ಶೈಲಿಯಲ್ಲೇ ಮಾಡಿದ್ದರೆ, ಜೋಡಣೆಗಾಗಿ ಹೆಚ್ಚಿನ ಹಣ ವ್ಯಯಿಸಬೇಕಾಗಿತ್ತು.
ಪ್ರೊಫೆಸರ್ ಸ್ಕನ್ಲಾನ್ ಅಭಿಪ್ರಾಯಕ್ಕೆ ಸಹಮತ ಸೂಚಿಸಿರುವ ಪ್ರೊಫೆಸರ್ ಕೆನೆ, ಲೇಸರ್ ಸಿಂಟರಿಂಗ್ ವಿನ್ಯಾಸದಿಂದಾಗಿ ಏರ್ ಕ್ರಾಫ್ಟ್ ನ ರೆಕ್ಕೆಗೆ ಎಲಿಪ್ಟಿಕಲ್ ಆಕಾರ ಸುಲಭವಾಗಿ ಸಿಕ್ಕಿದೆ. ಇಲ್ಲದೇ ಹೋದಲ್ಲಿ, ಏರ್ ಕ್ರಾಫ್ಟ್ ರಚನೆಯ ಸಂಕೀರ್ಣತೆಗೆ ತಕ್ಕಂತೆ ಅದನ್ನು ರೂಪಿಸಲು ಹೆಚ್ಚಿನ ವೆಚ್ಚ ಮಾಡಬೇಕಿತ್ತು ಎಂದು ತಿಳಿಸಿದ್ದಾರೆ.
[youtube http://www.youtube.com/watch?v=aFFFiB_if18]