ಬಾಲ್ಯದ ಅಂಗಳ…

foto courtesy- southernfemme.files.wordpress.com

ಆತನದು ಮುದ್ದು ಮುಖವಾದ್ರೂ  ತುಂಟುತನದ ಕಳೆ ಅಲ್ಲಿತ್ತು. ಆತನಿಗೋ ಇನ್ನೂ ಆರು ವರ್ಷ ತುಂಬಿಲ್ಲ. ಹುಡುಗಿಯರನ್ನು ಕಂಡ್ರ ಸಾಕು ತುಂಟು ನಗು ಚೆಲ್ಲಿ ಹಾಗೇ ಬಲೆಗೆ ಹಾಕಿ ಬಿಡ್ತಿದ್ದ. ಅವನಿಗೆ ಹತ್ತಿ ಕಂಡ್ರೆ ತುಂಬ ಇಷ್ಟ. ಹಾಗಾಗಿ ಆತ ತನ್ನ ನಾಸಿಕ ಬಳಿ ಹತ್ತಿ ಹಿಡಿದುಕೊಂಡು ಅದರ ಮೃದುತ್ವವನ್ನು ಅನುಭವಿಸುತ್ತಿದ್ದ. ದೀಪದ ಬತ್ತಿ ಎಂದು ಎತ್ತಿಟ್ಟ ಹತ್ತಿಯನ್ನು ಆತ ಬಿಡುತ್ತಿರಲಿಲ್ಲ.
ಅಪ್ಪ ಅಮ್ಮಂಗೆ ಆತ ಮುದ್ದಿನ ಮಗನಾಗಿದ್ದ. ಅವರೋ ಶಿಕ್ಷಕರು. ಬೆರಳಚ್ಚು ಶಾಲೆ ನಡೆಸುತ್ತಿದ್ದುದರಿಂದ ಎಲ್ಲರೂ ಅವರನ್ನು ಟೈಪ್ ಮಾಸ್ಟ್ರು, ಟೈಪ್ ಟೀಚರ್‍ ಎಂದೇ ಕರೆಯುತ್ತಿದ್ದರು.  ಅವರು ಬೆರಳಚ್ಚು ಶಾಲೆಗೆ ಮಗನನ್ನು ಕರೆದೊಯ್ಯುತ್ತಿದ್ದರು. ಹೀಗಾಗಿ ಅಲ್ಲಿ ಬರೋ ಸ್ಟೂಡೆಂಟ್‌ಗಳಿಗೆಲ್ಲಾ ಈ ಮುದ್ದು ಹುಡುಗ ಅಚ್ಚುಮೆಚ್ಚು.
ಅವರಲ್ಲಿ ಕೆಲವರು ಚಾಕಲೇಟ್‌ ಕೊಟ್ಟು ಆತನನ್ನು ಎತ್ತಿ ಮುದ್ದಾಡುತ್ತಿದ್ದರು. ಇನ್ನು ಪಕ್ಕದಲ್ಲೇ ಅಂಗಡಿ ಇಟ್ಟಿದ್ದ ರೇಡಿಯೋ ರಿಪೇರಿ ಮಾಡೋ ಅಂಕಲ್ ಅಂತೂ ಅಮೂಲ್‌ ಹಾಲಿನ ಪುಡಿ ಡಬ್ಬಾ ತಂದಿಟ್ಟಿದ್ದರು. ಅವರಿಗೊತ್ತು ಆತನಿಗೆ ಅಮೂಲ್ ಹಾಲಿನ ಪುಡಿ ಅಂದ್ರೆ ಪಂಚಪ್ರಾಣ ಅಂತ. ಕೆಲವರು ಈ ಮುದ್ದು ಪುಟಾಣಿಯ ವೀಕ್‌ನೆಸ್‌ ತಿಳ್ಕೊಂಡ್ರೆ… ಈ ಮುದ್ದು ಕಿಲಾಡಿ  ಆ ಹುಡುಗಿಗೆ ಏನ್‌ ಮಾಡ್ತಾ ಇದ್ದ ಗೊತ್ತಾ…
ಹ್ಞಾಂ..! ಅಷ್ಟೊಂದು ಕುತೂಹಲಾನಾ..? ತಡೀರಿ ಆ ಹುಡುಗಿ ಬಗ್ಗೆ ಹೇಳ್ಬೇಕಲ್ವಾ ? ಹೌದು ಆಗ ಆಕೆ ವಯಸ್ಸು ಒಂದು ಇಪ್ಪತ್ತು ಇರಬಹುದು. ಕ್ರಿಶ್ಚಿಯನ್ ಹುಡುಗಿ. ಹೆಸರು ಮೇರಿ. ತುಂಡು ಲಂಗ ಹಾಕಿಕೊಂಡು ಎರಡು ಜಡೆ ಹೆಣೆದುಕೊಂಡು ಆಕೆ ಬರೋದ್‌ ನೋಡ್‌ಬೇಕು.. ಅರೆ ಮರೆತೆ ನೋಡಿ.. ಕೈಯಲ್ಲೊಂದೆರಡು ಟೈಪ್‌ರೈಟಿಂಗ್‌ ಪುಸ್ತಕ ಹಿಡಿದು ಅದನ್ನು ಎದೆಗವಚಿಕೊಂಡು ಅಕೆ ಇನ್ನೇನು ಒಂದನೇ ಮಹಡಿಯಲ್ಲಿರೋ ಆ ಟೈಪ್ ರೈಟಿಂಗ್ ಶಾಲೆಗೆ ಮೆಟ್ಟಿಲೇರಿ ಬರುತ್ತಿದ್ದರೆ ಈ ತುಂಟ ಏನ್ ಮಾಡ್ತಿದ್ದ ಹೇಳಿ !
ದೂರದಿಂದಲೇ ಮೇರಿ ಬರೋದ್‌ ನೋಡಿದ್ರೆ ಸಾಕು. ಈ ಹುಡುಗ ಕೂಡಲೇ ಓಡ್‌ ಹೋಗ್ತಿದ್ದುದು ದೇವರ ಫೋಟೋ ಬಳಿಗೆ. ಅಲ್ಲಿರುವ ದೀಪದ ಬತ್ತಿ ಎತ್ತಿಕೊಂಡು ಕಳ್ಳ ಹೆಜ್ಜೆ ಹಾಕ್ತಿದ್ದ. ಅಮ್ಮ ಅಪ್ಪ ನೋಡಿದ್ರೆ ಮೇರಿನ ಗೋಳು ಹೊಯ್ಕೊಳ್ಳೋದು ಅಸಾಧ್ಯ ಎಂಬುದು ಗೊತ್ತು ಆತನಿಗೆ.
ಇನ್ನು ಮೇರಿನೋ… ಬೆದರಿದ ಜಿಂಕೆಯಂತೆ ಅತ್ತ ಇತ್ತ ನೋಡುತ್ತಾ ಹಾಗೇ ಮೆಟ್ಟಿಲೇರುತ್ತಾ ಬರುತ್ತಾಳೆ. ಬಾಗಿಲ ಸಂದಿಗಳನ್ನು ಪರಿಶೀಲಿಸುತ್ತಾಳೆ. ಈ ತುಂಟ ಎಲ್ಲಿದ್ದಾನೋ ಎಂಬ ಭಯದಿಂದ… ಹಾಗೇ ಟೀಚರ್‌ ಎಂದು ಕೂಗುತ್ತಲೇ ಒಳ ಕಾಲಿಡುತ್ತಾಳೆ. ಈ ಹುಡುಗ ಹತ್ತಿರ ಹೋದರೆ ಸಾಕು ಕೊಂಚ ಭಯಮಿಶ್ರಿತ ನೋಟ ಬೀರುತ್ತಾಳೆ ಆಕೆ.
ದಿನಕ್ಕೊಂದು ಬಾರಿಯಾದರೂ ಆಕೆಯನ್ನು ಕಾಡದೇ ಹೋದರೆ ಈ ತುಂಟನಿಗೂ ಸಮಾಧಾನವಿಲ್ಲ.  ಹಾಗೆ ಕಾಡಿದಾಗ ಮೇರಿ ಒಂದೋ ಟೀಚರ್‍ ಎಂದು ಕಿರಿಚುತ್ತಾ ಆತನ ಅಮ್ಮನ ಬಳಿಗೆ ಓಡಿ ಹೋಗ್ತಿದ್ದಳು. ಇಲ್ಲಾ ಪುಸ್ತಕ ಹಿಡಿದುಕೊಂಡು ಪಟಪಟ ಅಂತ ಮೆಟ್ಟಿಲಿಳಿದು ರಸ್ತೇಲಿ ಕೂಡಾ ಓಡುತ್ತಿದ್ದಳು.
ಆದರೂ ಈ ಪೋರನಿಗೆ ಕುತೂಹಲ.. ಮೇರಿ ಹತ್ತಿ ಕಂಡ್ರೆ ಯಾಕೆ ಮಾರು ದೂರ ಓಡೋಗ್ತಿದ್ದಾಳೆ ? ಅಂತ. ಆಕೆಯ ತೊಳಲಾಟ ನೋಡಲಾರದೆ ಕೊನೆಗೂ ಪೋರ ಕೇಳಿದ..
“ಮೇರಿ ಅಕ್ಕ, ನೀನ್ಯಾಕೆ ಹತ್ತಿ ಕಂಡ್ರೆ ಓಡೋಗ್ತೀಯಾ ? ಅದರಲ್ಲೇನಿದೆ ಅಂಥಾದ್ದು ! ”
ಮೇರಿ ಒಂದಕ್ಷರ ಮಾತಾಡ್ತಾ ಇರಲಿಲ್ಲ. ತುಂಬ ಸಂಕೋಚದ ಆಕೆ ತಲೆ ಅಡಿಗೆ ಹಾಕಿ ಹುಸಿ ನಗು ನಕ್ಕು ಹೋಗೋದು ನೋಡ್ತಾ ನಿಲ್ಲೋದಷ್ಟೇ ಈ ಪೋರನಿಗೆ ದಕ್ಕಿದ್ದು…! ಹತ್ತಿ ಕಂಡ್ರೆ ಆಕೆ ಮಾರು ದೂರ ಓಡಿಹೋಗೋದಕ್ಕೆ ಕಾರಣ ಏನು ಎಂಬುದಕ್ಕೆ ಉತ್ತರ ಕೊನೆಗೂ ಸಿಗಲಿಲ್ಲ…!

0 thoughts on “ಬಾಲ್ಯದ ಅಂಗಳ…

  1. ಧನ್ಯವಾದಗಳು.. ಬಹಳ ದಿನವಾಗಿತ್ತು ಬ್ಲಾಗ್ ಅಂಗಳಕ್ಕೆ ಕಾಲಿಟ್ಟು.. ತಡವಾಗಿ ಪ್ರತಿಕ್ರಿಯೆ ನೀಡುತ್ತಿರುವುದಕ್ಕೆ ಕ್ಷಮೆ ಇರಲಿ..

Leave a Reply

Your email address will not be published. Required fields are marked *