ಕ್ರಿಕೆಟ್ ರಂಗದಲ್ಲೂ ಎದುರಾಳಿಗಳನ್ನು ಮಣಿಸೋದಕ್ಕೆ ಸಾಕಷ್ಟು ತಾಲೀಮು ನಡೆಸ್ತಾರೆ ಪ್ರತಿಯೊಂದು ಕ್ರಿಕೆಟ್ ತಂಡದವರು. ಬ್ಯಾಟಿಂಗ್ ಚಾಕಚಕ್ಯತೆ ಮತ್ತು ಕೌಶಲ್ಯ ಚುರುಕುಗೊಳಿಸಲು ಬೌಲಿಂಗ್ ಯಂತ್ರಗಳನ್ನು ಬಳಸುವ ಪರಿಪಾಠವಿದೆ. ಈಗ ಇಂಗ್ಲೆಂಡ್ ತಂಡ ಹೊಸ ಪ್ರಯೋಗ ನಡೆಸುತ್ತಿದೆ.
ಸಾಮಾನ್ಯವಾಗಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಅಂದ್ರೆ, ಆಷಸ್ ಸರಣಿಯಲ್ಲಿ ಇಂಗ್ಲೆಂಡ್ ಪರವಾಗಿ ಆಡೋದು. ಇದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಆದ್ರೆ, ಇದು ನನಸಾಗೋದು ಕಷ್ಟ. ಆಸೆ ನೆರವೇರಿಸಲೇ ಬೇಕು ಅಂತಿದ್ರೆ ನೆರವಿಗೆ ಬರತ್ತೆ ಈ ಬೌಲಿಂಗ್ ಮೆಷಿನ್.
ನವೆಂಬರ್ ಮೊದಲ ವಾರದಿಂದ ಆಷಸ್ ಸರಣಿ ಆರಂಭವಾಗತ್ತೆ. ಇಂಗ್ಲೆಂಡ್ ತಂಡದ ಕ್ರಿಕೆಟಿಗರು ಈಗಾಗಲೇ ತಾಲೀಮು ನಿರತರಾಗಿದ್ದಾರೆ. ಹೊಸ ತಂತ್ರಜ್ಞಾನದ ಪ್ರೋಬ್ಯಾಟರ್ ಬೌಲಿಂಗ್ ಮೆಷಿನ್ ಮೂಲಕ ಆಸೀಸ್ ಪಡೆಯ ಬೆನ್ನೆಲುಬು ಮುರಿಯಲು ಸಿದ್ಧತೆ ನಡೆಸಿದ್ದಾರೆ. ವಿಡಿಯೋ ಅಳವಡಿಸಿದ ಬೌಲಿಂಗ್ ಮೆಷಿನ್ ಅನ್ನು ಇಂಗ್ಲೆಂಡ್ ಆಟಗಾರರು ಈ ಬಾರಿ ತಾಲೀಮಿಗೆ ಬಳಸಿದ್ದಾರೆ. ಈ ಬೌಲಿಂಗ್ ಮೆಷಿನ್ ವಿಶೇಷತೆಗಳು ನಿಜಕ್ಕೂ ಗಮನ ಸೆಳೆಯುವಂಥಾದ್ದು.
ಪ್ರೋ ಬ್ಯಾಟರ್ ವಿಶೇಷತೆಗಳು
- ಬೌಲಿಂಗ್ ನಿಯಂತ್ರಣಕ್ಕೆ ಎಲೆಕ್ಟ್ರಾನಿಕ್ ವ್ಯವಸ್ಥೆ
- ಲೆಗ್ ಸ್ಪಿನ್, ಆಫ್ ಸ್ಪಿನ್, ಟಾಪ್ ಸ್ಪಿನ್ ಎಸೆತ
- ಎಲೆಕ್ಟ್ರಾನಿಕ್ ವೇಗ ನಿಯಂತ್ರಣ ವ್ಯವಸ್ಥೆ
- ಕ್ರಿಕೆಟ್ ಬಾಲ್ ಎಸೆಯೋದಕ್ಕೂ ಸೈ
- ಸೋಲೋ ಪ್ರಾಕ್ಟೀಸ್ಗೂ ಅನುಕೂಲ
ಪ್ರೋಬ್ಯಾಟರ್ ಬೌಲಿಂಗ್ ಮೆಷಿನ್ ಉಳಿದ ಬೌಲಿಂಗ್ ಮೆಷಿನ್ಗಳಿಗಿಂತ ಮೇಲ್ದರ್ಜೆಯದ್ದು. ಇದ್ರಲ್ಲಿ ಬೌಲಿಂಗ್ ನಿಯಂತ್ರಣಕ್ಕಾಗಿ ಎಲೆಕ್ಟ್ರಾನಿಕ್ ವ್ಯವಸ್ಥೆ ಅಳವಡಿಸಲಾಗಿದೆ. ಇನ್ನೊಂದು ವಿಶೇಷ ಅಂದ್ರೆ, ಲೆಗ್ ಸ್ಪಿನ್, ಆಫ್ ಸ್ಪಿನ್ ಮತ್ತು ಟಾಪ್ ಸ್ಪಿನ್ ಎಸೆತಕ್ಕೆ ಬೇಕಾದ ವ್ಯವಸ್ಥೆ ಕೂಡಾ ಇದೆ. ವೇಗವನ್ನು 30 ಮೈಲಿಯಿಂದ 60 ಮೈಲಿ ತನಕ ನಿಯಂತ್ರಿಸುವ ಎಲೆಕ್ಟ್ರಾನಿಕ್ ನಿಯಂತ್ರಣ ವ್ಯವಸ್ಥೆ ಇದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಳಸುವ ಬಾಲ್ಗಳನ್ನೆ ಈ ಮೆಷಿನ್ಗೂ ಬಳಸಲಾಗುತ್ತಿದೆ. ಇನ್ನು ಒಬ್ಬನೇ ತಾಲೀಮು ನಡೆಸಬೇಕಾದ್ರೂ, ಈ ಮೆಷಿನ್ನಲ್ಲಿ 28 ಬಾಲ್ಗಳನ್ನು ತಾನೇ ತಾನಾಗಿ ಬಳಸುವ ವ್ಯವಸ್ಥೆ ಕೂಡಾ ಇದೆ. ಈ ಪ್ರಯೋಗ ಒಂದು ರೀತಿಯಲ್ಲಿ ನೆಟ್ ಪ್ರಾಕ್ಟೀಸ್ ಮತ್ತು ವಿಡಿಯೋ ಗೇಮ್ಗಳ ಸಮ್ಮಿಲನ. ಬೃಹತ್ ವಿಡಿಯೋ ಪರದೆ ಮೇಲೆ ಬೌಲರ್ ಬಾಲ್ ಎಸೆಯುವ ದೃಶ್ಯ ಬರತ್ತೆ. ಪರದೆಯಲ್ಲಿ ಇರುವ ರಂಧ್ರದ ಮೂಲಕ ಬಾಲ್ ಹೊರ ಬರತ್ತೆ. ಅದು ಕೂಡಾ ಆಯಾ ಬೌಲರ್ಗಳು ಎಸೆಯುವ ಶೈಲಿಯಲ್ಲೇ… ಇಂಗ್ಲೆಂಡ್ ತಂಡದವರು ಆಸೀಸ್ ಬೌಲರ್ಗಳ ಬೌಲಿಂಗ್ ಶೈಲಿ ಎದುರಿಸಿ ಬ್ಯಾಟಿಂಗ್ ಮಾಡೋದು ಹೇಗೆ ಎಂಬುದನ್ನು ಅಭ್ಯಾಸ ಮಾಡ್ತಿದ್ದಾರೆ. ಬೇಸ್ಬಾಲ್ ಅಭ್ಯಾಸಕ್ಕಾಗಿ ಸಿದ್ಧಪಡಿಸಲಾದ ಪ್ರೋ ಬ್ಯಾಟರ್ ಬೌಲಿಂಗ್ ಮೆಷಿನ್ ಈಗ ಇಂಗ್ಲೆಂಡ್ ಕ್ರಿಕೆಟಿಗರ ತಾಲೀಮಿಗೂ ಬಳಕೆ ಯಾಗ್ತಿದೆ.
ಒಟ್ಟಿನಲ್ಲಿ ಆಷಸ್ ಸರಣಿಗೆ ಪೂರ್ವಭಾವಿಯಾಗಿ ಭಾರತ ಪ್ರವಾಸದಲ್ಲಿನ ಕಹಿ ಅನುಭವ ಆಸೀಸ್ ಎದೆಗುಂದುವಂತೆ ಮಾಡಿದೆ. ಈ ನಡುವೆ ಇಂಗ್ಲೆಂಡ್ನ ಸಿದ್ಧತೆ ಕೂಡಾ ಆಸೀಸ್ ತಂಡದ ಧೃತಿಗೆಡಿಸುವುದೇ ನೋಡಬೇಕಿದೆ.