ಕಾಮನ್ವೆಲ್ತ್ ಕ್ರೀಡಾಕೂಟದಿಂದ ಭಾರತಕ್ಕೇನು ಸಿಕ್ತು ? ಸುರೇಶ್ ಕಲ್ಮಾಡಿ ಮತ್ತು ಸಂಗಡಿಗರು ನಡೆಸಿದ ಬಹುದೊಡ್ಡ ಕ್ರೀಡಾಕೂಟ ಯಶಸ್ವಿಯಾದ ಕೀರ್ತಿ ಸಿಕ್ತಾ ? ಅಥವಾ ಕೋಟ್ಯಂತರ ರೂಪಾಯಿ ಆದಾಯ ಬಂತಾ ? ಉಹೂಂ ಅದ್ಯಾವುದೂ ಅಲ್ಲ..
ಮತ್ತೇನು ಅಂದ್ರೆ, ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ 2010 ನೇ ಸಾಲಿನ ಭ್ರಷ್ಟಾಚಾರ ಸೂಚ್ಯಂಕ ಬಿಡುಗಡೆ ಮಾಡಿದೆ. ಇದ್ರಲ್ಲಿ ಒಟ್ಟು 178 ರಾಷ್ಟ್ರಗಳ ಪೈಕಿ ಭಾರತ 87ನೇ ಸ್ಥಾನಕ್ಕೇರಿದೆ. ನೋಡಿದ್ರೆ, ಅತೀ ಬಡತನ ಹೊಂದಿರುವ ಸೊಮಾಲಿಯ ಮೊದಲ ಸ್ಥಾನದಲ್ಲಿದೆ..

ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ ಬಿಡುಗಡೆ ಮಾಡಿದ 2010ನೇ ಸಾಲಿನ ಭ್ರಷ್ಟಾಚಾರ ಸೂಚ್ಯಂಕ ಪಟ್ಟಿಯ ಟಾಪ್ 5 ರಾಷ್ಟ್ರಗಳಲ್ಲಿ ಮೊದಲ ಸ್ಥಾನ ಸೊಮಾಲಿಯಗೆ. ಎರಡನೇ ಸ್ಥಾನದಲ್ಲಿ ಮ್ಯಾನ್ಮಾರ್, ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನ, ನಾಲ್ಕನೇ ಸ್ಥಾನದಲ್ಲಿ ಇರಾಕ್, 5ನೇ ಸ್ಥಾನದಲ್ಲಿ ಉಝ್ಬೇಕಿಸ್ತಾನ ಇದೆ.
ಇದರ ಬಗ್ಗೆ ಏನೂ ಹೇಳದೇ ಹೋದ್ರೂ ಪರವಾಗಿಲ್ಲ. ಆದ್ರೆ, ಭಾರತದಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿರುವುದು ಸ್ಪಷ್ಟವಾಗಿದೆ. ಭಾರತ ಪ್ರಸಕ್ತ ಸಾಲಿನಲ್ಲಿ 87ನೇ ಸ್ಥಾನ ಪಡೆದಿದೆ. 2009ರಲ್ಲಿ ಭಾರತ 84ನೇ ಸ್ಥಾನದಲ್ಲಿತ್ತು. ಅದೇ ರೀತಿ ನೆರೆಯ ಚೀನಾ 78ನೇ ಸ್ಥಾನದಲ್ಲಿದೆ. 2009ರಲ್ಲಿ ಚೀನಾ 79ನೇ ಸ್ಥಾನದಲ್ಲಿತ್ತು.
ಸಂಸ್ಥೆಯ ಪ್ರಾಮಾಣಿಕತೆಗೆ ಗರಿಷ್ಠ 10 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಇದರಲ್ಲಿ ಭಾರತ ಕೇವಲ 3.3 ಅಂಕಗಳನ್ನಷ್ಟೇ ಪಡೆದಿದೆ. ಇನ್ನುಳಿದಂತೆ ನೆರೆಯ ಪಾಕಿಸ್ತಾನ 143ನೇ ಸ್ಥಾನ, ಬಾಂಗ್ಲಾದೇಶ 134, ಶ್ರೀಲಂಕಾ 91, ನೇಪಾಳ 146ನೇ ಸ್ಥಾನ ಗಿಟ್ಟಿಸಿಕೊಂಡು ಪಾಕಿಸ್ತಾನಕ್ಕೆ ಸಾಥ್ ನೀಡಿದೆ.

ಇದೇ ರೀತಿ, ಇತ್ತೀಚೆಗಷ್ಟೇ ಫಿಫಾ ವಿಶ್ವಕಪ್ಗೆ ಆತಿಥ್ಯ ನೀಡಿದ ಸೌತ್ ಆಫ್ರಿಕಾ 54ನೇ ಸ್ಥಾನದಲ್ಲಿದೆ. ಅಂದ್ರೆ ಭಾರತಕ್ಕಿಂತ ಎಷ್ಟೋ ವಾಸಿ. ಆದ್ರೆ, ಭಾರತದ ಭ್ರಷ್ಟಾಚಾರ ಹೆಚ್ಚೋದಕ್ಕೆ ಈ ಸಲದ ಕಾಮನ್ ವೆಲ್ತ್ ಕ್ರೀಡಾಕೂಟ ಕಾರಣ ಅನ್ನೋದು ಸಮೀಕ್ಷೆಯಿಂದ ತಿಳಿದುಬಂದಿದೆ. ದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿರುವ ಭಾರೀ ಭ್ರಷ್ಟಚಾರಗಳು ಈ ವರ್ಷ ಭಾರತವನ್ನ ಭ್ರಷ್ಟಚಾರ ಪಟ್ಟಿಯಲ್ಲಿ 87ನೇ ಸ್ಥಾನಕ್ಕೆ ಇಳಿಯಲು ಮೂಲ ಕಾರಣ ಅನ್ನೋದು ಟ್ರಾನ್ಸ್ ಪರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆ ಪದಾಧಿಕಾರಿ ಪಿ.ಎಸ್.ಬಾವಾ ಅವ್ರ ಸ್ಪಷ್ಟ ನುಡಿ. ಪ್ರಾದೇಶಿಕ ಪಟ್ಟಿಯಲ್ಲಿ ಕೂಡಾ ಭಾರತ ಮುಂದೆಯೇ ಇದೆ. ನ್ಯೂಜಿಲೆಂಡ್ ಮೊದಲ ಸ್ತಾನದಲ್ಲಿದ್ರೆ, ನಮ್ಮ ದೇಶ ಭಾರತ 16ನೇ ಸ್ಥಾನದಲ್ಲಿದೆ.
ಇದೆಲ್ಲಾ ನೋಡಿದ್ ಮೇಲೆ ಇಂಥದ್ದೊಂದು ಕೋಟ್ಯಂತರ ರೂಪಾಯಿ ವೆಚ್ಚದ ಬೃಹತ್ ಕ್ರೀಡಾಕೂಟ ಸಂಘಟನೆ ಜವಾಬ್ದಾರಿ ಬೇಜವಾಬ್ದಾರಿ ವ್ಯಕ್ತಿಗಳ ತಲೆ ಮೇಲೆ ಹೊರಿಸಬೇಕಿತ್ತಾ ? ಅನ್ನೋ ಪ್ರಶ್ನೆ ಮೂಡಿದೆ.
ವ್ಯಕ್ತಿಗಳು ಮಾಡಿದ ತಪ್ಪಿಗೆ ದೇಶದ ಹೆಸರ ಮುಂದೇಕೆ ಈ ಕೆಂಪು ಪಟ್ಟಿ ? ಭ್ರಷ್ಟ ವ್ಯವಸ್ಥೆಗೆ ಕಾರಣರಾದವರಿಗೆ ನಂಬರ್ ವನ್, ಟು, ತ್ರೀ ಎಂದು ಕಟ್ಟುವುದು ಬಿಟ್ಟು ದೇಶಗಳಿಗೇಕೆ ಈ ರೀತಿ ಹಣೆ ಪಟ್ಟಿ ಕಟ್ಟುತ್ತಾರೆ ? ದೇಶದ ಜವಾಬ್ದಾರಿಯುತ ಸ್ಥಾನದಲ್ಲಿರುವ ಡಾ.ಮನಮೋಹನ್ ಸಿಂಗ್, ಶೀಲಾ ದೀಕ್ಷೀತ್, ಬಹುಕೋಟಿ ಕ್ರೀಡಾಕೂಟ ಸಂಘಟನೆಯ ಜವಾಬ್ದಾರಿ ಹೊತ್ತಿದ್ದ ಸುರೇಶ್ ಕಲ್ಮಾಡಿ ಮೊದಲಾದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಏನೇ ಹೇಳಿ… ಕಾಮನ್ವೆಲ್ತ್ ಕ್ರೀಡಾಕೂಟ ಭಾರತಾಂಬೆಯ ಮುಕುಟಕ್ಕೆ 87ನೇ ಭ್ರಷ್ಟ ರಾಷ್ಟ್ರ ಅನ್ನುವ ಹಣೆ ಪಟ್ಟಿ ಕಟ್ಟಿಸಿಕೊಳ್ಳಬೇಕಾ ?
ವಿವರಗಳಿಗೆ – http://www.transparency.org/ ನೋಡಬಹುದು..