ಮಾರ್ನಿಂಗ್ ಸ್ಟಾರ್ ಕಿಂಗ್

Jong-Un
Kim Jong un

ಕಿಮ್ ಜಾಂಗ್ ಉನ್. ಈ ಹೆಸರು ಕೇಳಿದಾಕ್ಷಣ ವಿಲಕ್ಷಣ ವ್ಯಕ್ತಿಚಿತ್ರ ಮನಸ್ಸಿನಲ್ಲಿ ಮೂಡಿ, ಮುಖದಲ್ಲಿ ಕಿರುನಗು ಮೂಡುವುದು ಸಹಜ. ಎರಡು ದಿನಗಳ ಹಿಂದಷ್ಟೇ ಜನ್ಮದಿನ ಆಚರಿಸಿಕೊಂಡ ವಿಚಿತ್ರ ಆಸಾಮಿ. ಅದಕ್ಕೂ ಎರಡು ದಿನ ಹಿಂದೆ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದೇವೆ ಎನ್ನುವ ಮೂಲಕ ಇಡೀ ಜಗತ್ತು ಬೆಚ್ಚಿಬಿದ್ದು ಗಮನಿಸುವಂತೆ ಮಾಡಿದ `ಯುವ ನಾಯಕ’ನೀತ! ಯಾವುದು ನಿಜ, ಯಾವುದು ಸುಳ್ಳು ಎಂಬುದನ್ನು ಅಂದಾಜಿಸುವುದೇ ಕಷ್ಟ. ಈತನ ಚಲನವಲನ, ನಡೆ ನುಡಿ ಎಲ್ಲವನ್ನೂ ಜಗತ್ತು ವಿಚಿತ್ರವೆಂಬಂತೆ ವೀಕ್ಷಿಸುತ್ತಿದೆ. ಇದೀಗ ಈ ಪ್ರಮಾಣದಲ್ಲಿ ಜಾಗತಿಕ ಗಮನ ಸೆಳೆಯುವ ವ್ಯಕ್ತಿಯಾಗಿರುವ ಕಿಮ್ ಜಾಂಗ್ ಉನ್ ಬಗ್ಗೆ ನಾಲ್ಕು ವರ್ಷಗಳ ಹಿಂದೆ ಹೊರ ಜಗತ್ತಿಗೆ ಏನೇನೂ ಮಾಹಿತಿ ಇರಲಿಲ್ಲ. ಈಗಂತೂ ತರಹೇವಾರಿ ಕಥೆಗಳು, ಮಾಹಿತಿಗಳು ಪ್ರಕಟವಾಗುತ್ತಿವೆ.
ಅದು 2011ನೇ ಇಸವಿ. ಉತ್ತರ ಕೊರಿಯಾದಲ್ಲಿ `ಡಿಯರ್ ಲೀಡರ್’ ಎಂದ ಜನಪ್ರಿಯರಾಗಿದ್ದ ಕಿಮ್ ಜಾಂಗ್ ಇಲ್ ಅವರ ಆಳ್ವಿಕೆ. ಜನಮನ್ನಣೆ ಪಡೆದಿದ್ದ ನಾಯಕ ಡಿಸೆಂಬರ್ 17ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದ ಕ್ಷಣವದು. ಇಡೀ ದೇಶ ಶೋಕ ಸಾಗರದಲ್ಲಿ ಮುಳುಗಿತ್ತು. ಮುಂದಿನ ಹದಿನೈದು ದಿನಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ಬಳಿಕ ಕಿಮ್ ಜಾಂಗ್ ಉನ್ ಕೈಗೆ ಆಡಳಿತ ಚುಕ್ಕಾಣಿ ಬಂದಿತ್ತು. ಅಂದು ಕಿಮ್ ಜಾಂಗ್ ಉನ್ ವಯಸ್ಸು ಮೂವತ್ತರ ಆಸುಪಾಸು.
ಕಿಮ್ ಸಾಮ್ರಾಜ್ಯದ ಮೂರನೇ ತಲೆಮಾರಿನ ಆಡಳಿತದ ಆರಂಭವಾಗಿತ್ತು. ಎರಡನೇ ವಿಶ್ವ ಯುದ್ಧದ ಬಳಿಕ ಎರಡನೇ ಕಿಮ್ ಸಂಗ್ ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿ 1948ರಲ್ಲಿ ಅಧಿಕಾರ ವಹಿಸಿಕೊಂಡರು. ಅತ್ತ ದಕ್ಷಿಣ ಕೊರಿಯಾದಲ್ಲಿ ಸ್ಯಾಂಗ್‍ಮಾನ್ ರ್ಹೀ ಮೊದಲ ಅಧ್ಯಕ್ಷರಾದರು. ಉತ್ತರ ಕೊರಿಯಾದಲ್ಲಿ ಕಿಮ್ ವಂಶಾಡಳಿತಕ್ಕೆ ಇದು ನಾಂದಿಯಾಯಿತು.
2010ರ ಕೊನೆಯ ಭಾಗದಲ್ಲೇ `ಭವಿಷ್ಯದ ನಾಯಕ’ ಎಂದು ಉನ್ ಗುರುತಿಸಲ್ಪಟ್ಟಿದ್ದ. ಕಿಮ್ ಜಾಂಗ್ ಇಲ್ ಅಂತ್ಯಕ್ರಿಯೆ 2011ರ ಡಿಸೆಂಬರ್ 28ರಂದು ನಡೆದ ಬೆನ್ನಲ್ಲೇ, ಕಿಮ್ ಜಾಂಗ್ ಉನ್ `ಸುಪ್ರೀಂ ಲೀಡರ್’ ಎಂಬುದನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಉತ್ತರ ಕೊರಿಯಾದ ಸುಪ್ರೀಂ ಪೀಪಲ್ಸ್ ಅಸೆಂಬ್ಲಿಯ ಅಧ್ಯಕ್ಷರಾಗಿದ್ದ ಕಿಮ್ ಯಾಂಗ್ ನಾಮ್ (ಕಿಮ್ ಜಾಂಗ್ ಉನ್ ಸಹೋದರ),`ಗೌರವಾನ್ವಿತ ಕಾಮ್ರೇಡ್ ಕಿಮ್ ಜಾಂಗ್ ಉನ್ ಅವರು ಇನ್ನು ಮುಂದೆ ನಿಕಟಪೂರ್ವ ಅಧ್ಯಕ್ಷರಾಗಿದ್ದ ಇಲ್ ಅವರ ಸಿದ್ಧಾಂತಕ್ಕೆ ಬದ್ಧರಾಗಿ ಈ ದೇಶದ ನಾಯಕತ್ವವನ್ನು ಮುಂದುವರಿಸಲಿದ್ದಾರೆ’ ಎಂದು ಘೋಷಿಸಿದ್ದರು. ಮುಂದೆ ಡಿಸೆಂಬರ್ 30ರಂದು ಪಕ್ಷದ ಪಾಲಿಟ್‍ಬ್ಯೂರೋ ಉನ್ ಅವರನ್ನು ಕೊರಿಯನ್ ಪೀಪಲ್ಸ್ ಆರ್ಮಿಯ ಸುಪ್ರೀಂ ಕಮಾಂಡರ್ ಎಂದು ಅಧಿಕೃತವಾಗಿ ನೇಮಿಸಿತು. 2012ರ ಮಾರ್ಚ್ ಅಂತ್ಯದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಹೊಸದಾಗಿ ರಚಿಸಲಾದ `ಫಸ್ಟ್ ಸೆಕ್ರಟರಿ’ ಹುದ್ದೆಗೂ ಉನ್ ಅವರನ್ನು ಆಯ್ಕೆ ಮಾಡಲಾಯಿತು. ಮುಂದೆ ಏ.13ರಂದು ದೇಶದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರಿಗೆ, ಜುಲೈ 18ರಂದು ಆರ್ಮಿಯ ಮಾರ್ಷಲ್ ದರ್ಜೆಗೆ ಬಡ್ತಿ ಸಿಕ್ಕಿತ್ತು. ಇದು ಸಶಸ್ತ್ರ ದಳಗಳ ಉನ್ನತ ಹುದ್ದೆಯಾಗಿದ್ದು, ಸೇನಾ ವಿಭಾಗವನ್ನೆಲ್ಲ ನಿಯಂತ್ರಿಸುವ ಅಧಿಕಾರವೂ ಉನ್ ಪಾಲಾಯಿತು. ಮುಂದಿನ ಒಂದೇ ವರ್ಷದ ಅವಧಿಯಲ್ಲಿ ಪ್ರಭಾವಿಯಾಗಿ ಬೆಳೆದ ಉನ್, ಫೋರ್ಬ್ಸ್‌ ನಿಯತಕಾಲಿಕೆ ಪ್ರಕಟಿಸಿದ `2013ರ ಜಗತ್ತಿನ ಪ್ರಭಾವಿ’ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಕೊರಿಯನ್ನರ ಪೈಕಿ ಬಾನ್ ಕಿ ಮೂನ್, ಲೀ ಕುನ್ ಹೀ ನಂತರ ಉನ್ ಅಂತಹ ಪ್ರಭಾವಿ ಎಂದು ಗುರುತಿಸಲ್ಪಟ್ಟಿದ್ದಾನೆ.
ಕಿಮ್ ಜಾಂಗ್ ಉನ್ ಆಳ್ವಿಕೆ ಆರಂಭವಾದ ಕೆಲವೇ ದಿನಗಳಲ್ಲಿ ಇಡೀ ದೇಶದ ಚಿತ್ರಣ ಬದಲಾಗತೊಡಗಿದೆ ಎಂದು ಕೆನ್ಜಿ ಫುಜಿಮೊಟೊ ಎಂಬ ಜಪಾನಿ ಪ್ರಜೆ 2012ರ ಆಗಸ್ಟ್‍ನಲ್ಲಿ ಹೇಳಿದ್ದ. ಅದಕ್ಕೂ ಮೊದಲು ಆತ 2010ರಲ್ಲಿ ಕಿಮ್ ಜಾಂಗ್ ಉನ್ ಅವರೇ ಉತ್ತರ ಕೊರಿಯಾದ ಮುಂದಿನ ಅಧ್ಯಕ್ಷ ಎಂದು ಘೋಷಿಸಿದ್ದ. ಅದು ನಿಜವಾದ ಬಳಿಕ ಫುಜಿಮೊಟೊ ಮಾತಿಗೆ ಜಾಗತಿಕ ಮಟ್ಟದಲ್ಲಿ ಬೆಲೆ ಬಂತು. ಕಿಮ್ ಜಾಂಗ್ ಇಲ್ ಅವರ ಅಡುಗೆಮನೆಯಲ್ಲಿ 13 ವರ್ಷ ಕಾಲ ಸೇವೆ ಸಲ್ಲಿಸಿದ್ದ ಕೆನ್ಜಿ ಫುಜಿಮೊಟೊ 2001ರಲ್ಲಿ ತಲೆಮರೆಸಿಕೊಂಡು ಟೋಕಿಯೋಗೆ ಪರಾರಿಯಾಗಿದ್ದ. ತರುವಾಯ ಉತ್ತರ ಕೊರಿಯಾಕ್ಕೆ ಕಾಲಿರಿಸಿದ್ದು 2012ರಲ್ಲೇ, ಅದೂ ಕಿಮ್ ಜಾಂಗ್ ಉನ್ ಒತ್ತಾಸೆ ಮೇರೆಗೆ ಎಂಬುದು ವಿಶೇಷ.
ಈಗಾಗಲೇ ಹೇಳಿದಂತೆ ವಿಲಕ್ಷಣ ವ್ಯಕ್ತಿ ಉನ್. ಅಧಿಕಾರಕ್ಕೆ ಬಂದ ನಂತರ ಇಡೀ ದೇಶದ ಪುರುಷರಿಗೆ ಹಾಗೂ ಮಹಿಳೆಯರು ಅನುಸರಿಸಬೇಕಾದ ಕೇಶ ವಿನ್ಯಾಸದ ಬಗ್ಗೆಯೂ ಕಾನೂನು ಹೊರಡಿಸಿದ. ಪುರುಷರು ಉನ್ ಕೇಶ ವಿನ್ಯಾಸವನ್ನೂ, ಮಹಿಳೆಯರು ಆತನ ಪತ್ನಿ ರಿ ಸೋಲ್ ಜು ಕೇಶ ವಿನ್ಯಾಸವನ್ನೂ ಅನುಸರಿಸಬೇಕು ಎಂದು ಆದೇಶಿಸಿ ಜಗತ್ತಿನ ಗಮನ ಸೆಳೆದ. ಇದಾಗಿ, ಸಚಿವ ಸಂಪುಟದಲ್ಲಿ ಪ್ರಮುಖ ನೀತಿ ನಿರೂಪಕನಾಗಿದ್ದ ಮಾವ ಚಾಂಗ್ ಸಾಂಘ್ ಥೇಕ್ ಅವರನ್ನು 2013ರ ಡಿಸೆಂಬರ್‍ನಲ್ಲಿ ಮರಣದಂಡನೆ ಶಿಕ್ಷೆಗೊಳಪಡಿಸಿ ವಿಶ್ವದ ಗಮನಸೆಳೆದಿದ್ದ.
ಇಂತಹ ಕಿಮ್ ಜಾಂಗ್ ಉನ್ ಹುಟ್ಟಿದ್ದು 1982ರ ಜನವರಿ 8 ಎನ್ನುತ್ತಿವೆ ಉತ್ತರ ಕೊರಿಯಾದ ಅಧಿಕೃತ ದಾಖಲೆಗಳು. ಆದರೆ, ಸಮೀಪವರ್ತಿಗಳ ಪ್ರಕಾರ 1983ರ ಜನವರಿ 8 ಸರಿಯಾದ ಜನ್ಮದಿನ. ಈತನ ತಾಯಿ ಕೊ ಯಾಂಗ್ ಹುಯೀ ಅವರು ಇಲ್‍ಗೆ ಮೂರನೇ ಪತ್ನಿ. ಈ ದಾಂಪತ್ಯದಲ್ಲಿ ಇಲ್ ಅವರಿಗೆ ಮೂವರು ಮಕ್ಕಳಿದ್ದು ಇಬ್ಬರು ಪುತ್ರರು ಒಬ್ಬ ಪುತ್ರಿ ಹಾಗೂ ಮೊದಲ ಪತ್ನಿಯಲ್ಲಿ ಒಬ್ಬ ಪುತ್ರ, ಒಬ್ಬಳು ಪುತ್ರಿ ಸೇರಿ ಒಟ್ಟು ಐದು ಮಕ್ಕಳು ಮೂವರು ಗಂಡು ಮಕ್ಕಳ ಪೈಕಿ ಇಲ್ ಕಿರಿಯ.
ಇಲ್ ಪಾಲಿಗೆ ಕೊ ಯಾಂಗ್ ಹುಯೀ ಮೂರನೆ ಪತ್ನಿಯಾದರೂ ಮನಮೆಚ್ಚಿದ ಪತ್ನಿಯಾಗಿದ್ದ ಕಾರಣ, ಆಕೆಗೆ ಬೆಳೆಯುವ ಸಿರಿ ಮೊಳಕೆಯಲ್ಲೇ ಕಾಣಿಸಿತ್ತು. ಕಿಮ್ ಜಾಂಗ್ ಉನ್ ಅಪ್ಪನದ್ದೇ ಪಡಿಯಚ್ಚು ಎಂಬುದನ್ನು ಗುರುತಿಸಿದ್ದ ಆಕೆ `ಮಾರ್ನಿಂಗ್ ಸ್ಟಾರ್ ಕಿಂಗ್’ ಎಂದೇ ಕೂಗುತ್ತಿದ್ದಳು. ಇಲ್‍ಗೂ ಉನ್ ಎಂದರೆ ಅಚ್ಚುಮೆಚ್ಚು ಎಂಬ ಈ ವಿಷಯವನ್ನು ಫುಜಿಮೊಟೊ ತಮ್ಮ ಪುಸ್ತಕ `I Was Kim Jong-il’s Chef‘ ನಲ್ಲಿ ಉಲ್ಲೇಖಿಸಿದ್ದಾರೆ.
ಸ್ವಿಜರ್‍ಲೆಂಡ್‍ನಲ್ಲಿ ಉನ್ನತ ಶಿಕ್ಷಣ ಪಡೆದಿರುವ ಉನ್ ಉತ್ತಮ ಆರ್ಥಿಕ ತಜ್ಞನೂ ಹೌದು. ದೇಶದ ಆರ್ಥಿಕ ಸ್ಥಿತಿ ಸುಧಾರಿಸುವುದಕ್ಕೆ ತಂದೆ ಇಲ್, ಅಜ್ಜ ಕಿಮ್ ಸಂಗ್ ಅವರಂತೆ ಸೇನೆಗೆ ಮೊದಲ ಆದ್ಯತೆ ನೀಡುವುದನ್ನು ಮುಂದುವರಿಸಿದ್ದಾನೆ. ಅಷ್ಟೇ ಅಲ್ಲ, ರಕ್ಷಣಾ ತಂತ್ರಜ್ಞಾನ ಸುಧಾರಣೆ ಕ್ರಮ ಕೈಗೊಂಡು, ಶಸ್ತ್ರಾಸ್ತ್ರಗಳನ್ನು ನಿರ್ಮಿಸಿ ಇತರೆ ರಾಷ್ಟ್ರಗಳಿಗೆ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿರುವುದು ಅಮೆರಿಕ, ಚೀನಾಗಳ ಕಣ್ಣು ಕೆಂಪಾಗಿಸಿದೆ. ಒಟ್ಟಿನಲ್ಲಿ, ಕಿಮ್ ಜಾಂಗ್ ಉನ್ ಒಬ್ಬ ವಿಲಕ್ಷಣ ನಾಯಕನಾಗಿ, ಕುತೂಹಲಕರ ವ್ಯಕ್ತಿಯಾಗಿ ಗಮನಸೆಳೆಯುತ್ತಿರುವುದಂತೂ ವಾಸ್ತವ.

Leave a Reply

Your email address will not be published. Required fields are marked *