ಯಡಿಯೂರಪ್ಪ ವಿಚಾರದಲ್ಲಿ ಕನ್ನಡಾಂಬೆಯ ಕೈ ಮೇಲಾಯಿತೇ.. ?

“ಯಡಿಯೂರಪ್ಪ ಅವರ ಭವಿಷ್ಯ ಇಂದೇ ಅಂತ್ಯ” ಹೀಗಂತ ಕನ್ನಡ ಸುದ್ದಿವಾಹಿನಿಯೊಂದರಲ್ಲಿ ಖ್ಯಾತ ಜ್ಯೋತಿಷಿ ಒಬ್ಬರು ತಮ್ಮ ಕಾರ್ಯಕ್ರಮದ ಉದ್ದಕ್ಕೂ ಹೇಳುತ್ತಿದ್ದರು. ನಿರೂಪಕಿ ಕೂಡಾ ಅವಕಾಶ ಸಿಕ್ಕಿದಾಗ ಎಲ್ಲ ಅದೇ ಪ್ರಶ್ನೆ ಕೇಳುತ್ತಿದ್ದರು. ಕನಿಷ್ಟ ಪಕ್ಷ ೨೦ ಸಲ “ಯಡಿಯೂರಪ್ಪ ಅವರ ಭವಿಷ್ಯ ಇಂದೇ ಅಂತ್ಯ” ಎಂಬ ಮಾತು ಉದುರಿದೆ. ಇದೇ ಜ್ಯೋತಿಷಿಯದ್ದೇ ಇನ್ನೊಂದು ಅಣಿ ಮುತ್ತು… “ಯಡಿಯೂರಪ್ಪ ಅಧಿಕಾರಕ್ಕೆ ಏರುವಲ್ಲಿ ತೆರೆಮರೆಯಲ್ಲಿ ಇರುವ ಜ್ಯೋತಿಷಿಗಳ ಮತ್ತು ದೇವರ ಪಾತ್ರ ಕೂಡಾ ಮಹತ್ವದ್ದು.. ಕಡೆಗಣಿಸುವಂತೆ ಇಲ್ಲ..”

ಈ ಕಾರ್ಯಕ್ರಮ ನೋಡುವಾಗ ಮನಸಿನಲ್ಲಿ ಎದ್ದ ಪ್ರಶ್ನೆ ಇಷ್ಟೇ.. ನಾಳೆಯಿಂದ ಯಡಿಯೂರಪ್ಪ ಅವರಿಗೆ “ಭವಿಷ್ಯ”ವೇ ಇಲ್ವಾ..? ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ “ಭವಿಷ್ಯ” ಹೇಗೆ ಇಲ್ಲದಾಗುತ್ತದೆ..? ಆದರೆ ಒಂದು ಮಾತಂತೂ ಸತ್ಯ…
ಯಡಿಯೂರಪ್ಪ ಸಾರಥ್ಯದಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಕೂಡಲೇ ಒಂದಿಲ್ಲೊಂದು ಕಂಟಕ ಎದುರಿಸುತ್ತಲೇ ಬಂದಿದ್ದಾರೆ. ಅದಕ್ಕಾಗಿ ಅವರು ಹೋಗದ ದೇವಸ್ಥಾನಗಳೇ ಇಲ್ಲ… ಮೊರೆ ಹೋಗದ ಜ್ಯೋತಿಷಿಗಳೇ ಇಲ್ಲ.. ಈಗಲೂ ಅಷ್ಟೇ.. ಸಂಕಟ ಬಂದಾಗ ವೆಂಕಟರಮಣ…

ಕಳೆದ ಮೂರು ವರ್ಷದಲ್ಲಿ ಸಂಕಷ್ಟ ಎದುರಾದಾಗ ಬಹುತೇಕ ಎಲ್ಲ ಸಂದರ್ಭಗಳಲ್ಲಿ ಯಡಿಯೂರಪ್ಪ ಭೇಟಿ ನೀಡಿದ್ದು ಕೇರಳದ ದೇವರ ಬಳಿಗೆ.. ಜೊತೆಗೆ ಸಚಿವರು ಕೂಡಾ ತೆರಳಿದ್ದರು ಎಂಬುದು ಈಗ ಇತಿಹಾಸ.. ಆದರೆ ಈ ಬಾರಿ ಯಡಿಯೂರಪ್ಪ ಕೇರಳದ ದೇವರ ಬಳಿಗೆ ಹೋಗಿಲ್ಲ..

ಇವೆಲ್ಲ ಘಟನೆಗಳನ್ನು ನೋಡಿದಾಗ ಅನಿಸಿದ್ದು ಇಷ್ಟು.. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಬಹುದೊಡ್ಡ ಹೋರಾಟ ದೇವಲೋಕದಲ್ಲಿ ಕೂಡಾ ನಡೆದಿರ ಬಹುದೇನೋ.. ? ಯಾಕೆಂದರೆ, ಕಳೆದ ೩ ವರ್ಷಗಳಲ್ಲಿ ಯಡಿಯೂರಪ್ಪ ಅಷ್ಟೊಂದು ಭಕ್ತಿ ಕಾಣಿಕೆಗಳನ್ನು ದೇವರಿಗೆ ಸಲ್ಲಿಸಿದ್ದಾರೆ. ಬಹುತೇಕ ಭಕ್ತಿ ಕಾಣಿಕೆಗಳು ಹೊರ ರಾಜ್ಯದ ದೇವರಿಗೆ ಸಲ್ಲಿಸಲ್ಪಟ್ಟಿದೆ. ಅದರಲ್ಲೂ ಕೇರಳದ ದೇವರಿಗೆ ಸಲ್ಲಿಸಲ್ಪಟ್ಟಿದೆ.

ಜೆಡಿಎಸ್ ಮುಖಂಡರು, ಕಾಂಗ್ರೆಸ್ ಮುಖಂಡರು ಕರ್ನಾಟಕದ ಮತ್ತು ಆಂಧ್ರದ ದೇವರ ಮೊರೆ ಹೋದರೆ, ಯಡಿಯೂರಪ್ಪ ಮತ್ತು ಬಳಗ ಆಂಧ್ರ ಮತ್ತು ಕೇರಳದ ದೇವರ ಮೊರೆ ಹೋಗುತ್ತಿದ್ದರು.. ಇತ್ತೀಚೆಗೆ ಧರ್ಮಸ್ಥಳಕ್ಕೂ ಭೇಟಿ ನೀಡಿದ್ದರು.. ಒಟ್ಟಿನಲ್ಲಿ ಮೂರು ವರ್ಷ ಎಲ್ಲ ದೇವರುಗಳು ಕೂಡಾ ಈ ಎಲ್ಲ ಆಟವನ್ನು ಗಮನಿಸುತ್ತಲೇ ಇದ್ದಾರೆ. ಅವರಿಗೆ ಸಿಕ್ಕಿದ ಭಕ್ತಿ ಕಾಣಿಕೆಗಳ ಪಟ್ಟಿ ಕೂಡಾ ಇಟ್ಟುಕೊಂಡಿರಬಹುದು.. ತನ್ನ ಪ್ರಕೃತಿ ಸಂಪತ್ತನ್ನು ಲೂಟಿ ಮಾಡುತ್ತಿರುವುದನ್ನು ಗಮನಿಸಿ ಕನ್ನಡಾಂಬೆ ಮುನಿಸಿಕೊಂಡು ಯಡಿಯೂರಪ್ಪ ಅವರನ್ನು ಕೆಳಕ್ಕಿಳಿಸಲು ಪ್ರಯತ್ನಿಸಿದರೆ, ಉಳಿದ ದೇವರು ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ ಎಂದೆನಿಸುತ್ತದೆ. ಹೀಗಾಗಿ ಪಾಪ.. ಕನ್ನಡಾಂಬೆ.. ಇವರ ಪಾಪದ ಕೊಡ ಯಾವಾಗ ತುಂಬುತ್ತೆ ಎಂಬ ನಿರೀಕ್ಷೆಯಲ್ಲಿ ಇದ್ದರೂ ಇರಬಹುದು…

ದುಡ್ಡು ಮತ್ತು ಅಧಿಕಾರ ಇದ್ದರೆ ಏನು ಬೇಕಾದರೂ ಸಾಧಿಸಬಹುದು.. ಹೀಗಂತ ಈಗಾಗಲೇ, ಅನೇಕ ಸಂದರ್ಭಗಳಲ್ಲಿ ಯಡಿಯೂರಪ್ಪ ಸಾಧಿಸಿ ತೋರಿಸಿದ್ದಾರೆ ಕೂಡಾ.. ಕಾಂಗ್ರೆಸ್, ಜೆಡಿಎಸ್‌ ಶಾಸಕರು ಕಣ್ಣು ಮುಚ್ಚುವುದರೊಳಗೆ ಬಿಜೆಪಿ ಶಾಸಕರಾಗಿದ್ದರು.. ಇಂದು ಈ ಸಂಕಷ್ಟದ ಹಂತದಲ್ಲಿ ಅವರ ಜೊತೆಗೆ ಇರುವ ಶಾಸಕರ, ಸಚಿವರ ಪಟ್ಟಿ ತೆಗೆದು ನೋಡಿದರೆ, ಸಂಘ ಪರಿವಾರದ ಹಿನ್ನೆಲೆ ಉಳ್ಳವರು ಕಡಿಮೆ.. ಬೇರೆ ಪಕ್ಷದಿಂದ ಬಂದು ಯಡಿಯೂರಪ್ಪ ಪರಿವಾರ ಸೇರಿದವರೇ ಹೆಚ್ಚು.. ಹೀಗಾಗಿ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಬಿಜೆಪಿಯ ಮೂಲ ಸಿದ್ಧಾಂತಕ್ಕೆ ಇಲ್ಲಿ ಕೊಂಚ ಹಿನ್ನಡೆ ಆಗಿದೆ. ಅಧಿಕಾರ ಹಿಡಿಯಲು ಯಾವ ಅಡ್ಡದಾರಿ ಹಿಡಿದರೂ ಪರವಾಗಿಲ್ಲ ಎಂದು ಸಂಘ ಪರಿವಾರದವರು ಸುಮ್ಮನೆ ಕುಳಿತಿದ್ದೇ ಇದಕ್ಕೆಲ್ಲ ಕಾರಣ ಎಂದರೆ ತಪ್ಪಾಗಲ್ಲ.. ಹೀಗಾಗಿ “ಪಾರ್ಟಿ ವಿತ್ ಎ ಡಿಫರೆನ್ಸ್‌” ಎಂಬುದು ಈಗ ವ್ಯತಿರಿಕ್ತ ಅರ್ಥದಲ್ಲಿ ಕಾಣುತ್ತಿದೆ.

ಅದೇನೇ ಇರಲಿ.. ಕಳೆದ ಒಂದು ವಾರದಿಂದ ಜನರಿಗೆ ಪುಕ್ಸಟೆ ಮನರಂಜನೆ.. ಮೊಬೈಲ್ ಇನ್‌ಬಾಕ್ಸ್‌ ಸೇರುವ ಎಸ್‌ಎಂಎಸ್‌ಗಳಿಗೆ ಲೆಕ್ಕವೇ ಇಲ್ಲ.. ಲೋಕಾಯುಕ್ತರ ಗಣಿವರದಿ ತಂದಿಟ್ಟ ತಲ್ಲಣ ಇದು.. ಹೇಗಾದರೂ ಮಾಡಿ ಇಲ್ಲೂ ರಾಜಕೀಯ ಪಂಡಿತರ ಲೆಕ್ಕಾಚಾರ ತಲೆ ಕೆಳಗೆ ಮಾಡುವುದಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ ಯಡಿಯೂರಪ್ಪ. ದೆಹಲಿ, ತಿರುಪತಿ, ಜಯನಗರ ಮತ್ತು ಸ್ಥಳೀಯ ದೇವರುಗಳ ಮೊರೆ ಹೋಗಿದ್ದಾರೆ.. ಜ್ಯೋತಿಷಿಗಳನ್ನು, ಪುರೋಹಿತರನ್ನು ಕೂಡಾ ಬರಮಾಡಿಕೊಂಡಿದ್ದಾರೆ…

ಆದರೆ ಏನು ಫಲ.. ಶ್ರಾವಣ ಮಾಸದ ಆರಂಭದ ದಿನವೇ ರಾಜೀನಾಮೆ ಕೊಡಬೇಕು ಎಂಬ ಸಂದೇಶ ರವಾನೆ ಆಗಿದೆ. ಅದಕ್ಕೆ ಒಪ್ಪಿಗೆ ಸೂಚಿಸಿಯೂ ಆಗಿದೆ.. ಆದರೂ, ಸೋಲು ಒಪ್ಪಬಾರದು ಎಂಬ ಒಂದೇ ಕಾರಣಕ್ಕೆ ಸ್ಥಳೀಯ ದೇವರ ಮೊರೆ ಹೋಗಿದ್ದಾರೆ.. ಈ ಬಾರಿ ಹೊರರಾಜ್ಯದ ದೇವರುಗಳನ್ನು ಮರೆತಿದ್ದಾರೆ. ಹೀಗಾಗಿ ಬಹುಶಃ ಕನ್ನಡಾಂಬೆಯ ಕೈ ಮೇಲಾದಂತೆ ಕಾಣುತ್ತಿದೆ..

ಏನಾದರೆ ಏನು.. ? ಕಾಂಗ್ರೆಸಿಗರು ೪೦ ವರ್ಷದಲ್ಲಿ ಮಾಡಿದ್ದನ್ನು ರಾಜ್ಯದಲ್ಲಿ ಬಿಜೆಪಿಯವರು ೩ ವರ್ಷದಲ್ಲಿ ಮಾಡಿದ್ದಾರೆ.. ಹೀಗಾಗಿ ಯಡಿಯೂರಪ್ಪ ಕೆಳಗಿಳಿದರೆ.. ಈಗಾಗಲೇ ಇವರು ಹಾಕಿ ಕೊಟ್ಟ ದಾರಿ ಇದೆಯಲ್ಲ.. ಇನ್ನೂ ಕಡಿಮೆ ಅವಧಿಯಲ್ಲಿ ಇನ್ನಷ್ಟು ಸಾಧಿಸಬಹುದು.. ಒಟ್ಟಿನಲ್ಲಿ ಜೈ ಹೋ ಕನ್ನಡಾಂಬೆ… !

2 thoughts on “ಯಡಿಯೂರಪ್ಪ ವಿಚಾರದಲ್ಲಿ ಕನ್ನಡಾಂಬೆಯ ಕೈ ಮೇಲಾಯಿತೇ.. ?

  1. ಅಪರೇಷನ್ ಕಮಲ ಇವರ ಮುಳುವಿಗೆ ಕಾರಣ ,ಇನ್ನಾದರೂ ಬುದ್ದಿ ಬರಲಿ ,ಯಾರೂ ಬಂದರೂ ಪರವಾಗಿಲ್ಲ ,ನಮ್ಮ ಕರ್ನಾಟಕ ಅಭಿವ್ರದ್ದಿ ಆಗಬೇಕು ,ಅದೇ ನಮ್ಮ ಆಶಯ

  2. ಮಂತ್ರಕ್ಕೆ ಮಾವಿನಕಾಯಿ ಉದುರೋಲ್ಲ.ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣಬಹುದು.ಭಾರತಿಯ ಜನತಾ ಪಾರ್ಟಿಯಲ್ಲಿ ಒಳ್ಳೆಯ ನಾಯಕರು ಬಂದು ಹೋಗಿದ್ದಾರೆ.ಅವರ ಆದರ್ಶದಲ್ಲಿ ಇನಿತಾದರೂ ಇವರಿಗಿದದ್ರೆ ಈ ದಿನ ಬರುತ್ತಿರಲಿಲ್ಲ.ಒಂದು ಸಂಗಟನೆಯಲ್ಲಿ ಹತ್ತು ಜನರಿಗೆ ಒಪ್ಪುವಂತೆ ನಡೆಯಬೇಕದ್ದು. ನಾಯಕನ ಕರ್ತವ್ಯ.ಅದನ್ನು ಮರೆತು ಅಹಂಕಾರದಲ್ಲಿ ಮೆರದರೆ ಅಧೋಗತಿ ಖಂಡಿತ.ಇನ್ನಾದರೂ ಮಾಡಿದತಪ್ಪನ್ನು ಅರಿತು ತಿದ್ದಿಕೊಂಡು ಸರಿಯಾದ ದಾರಿಯಲ್ಲಿ ನಡೆದರೆ ಗೆಲುವು ನಿಶ್ಚಯ.

Leave a Reply

Your email address will not be published. Required fields are marked *