“ರಕ್ತ” ಸಂಬಂಧಿಗಳಾಗುವ ವೇಳೆ.. !

ಆಯುಸ್ಸಿನ ಒಂದು ವರ್ಷ ಹೇಗೆ ಕಳೆದು ಹೋಯಿತೋ… ನೋ ಐಡಿಯ.. ವರ್ಷಗಳೇ ಹಾಗೆ ಬಹುಬೇಗ ಮರೆಯಾಗಿ ಬಿಡುತ್ತವೆ… ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲ ಇಲ್ಲ ಅನ್ನೋ ಹಾಗೆ ೩ ದಶಕ ಕಳೆದು ಹೋಗಿದೆ.. ಹಾಗೇ..  ಹಿಂತಿರುಗಿ ನೋಡಿದ್ರೆ ಒಂದಷ್ಟು ನೆನಪುಗಳು.. ಗೆಳೆಯರು.. ಹಿತೈಷಿಗಳು, ರಕ್ತ ಸಂಬಂಧಿಕರು.. ಅವರ ಹಾರೈಕೆ.. ಪದೆಪದೇ ಕಣ್ಣಿಗೆ ಕಟ್ಟುತ್ತವೆ..  ಜೀವನದಲ್ಲಿ ಹೆಜ್ಜೆ ಮುಂದಿಡೋದಕ್ಕೆ ಧೈರ್ಯ ಸಿಗತ್ತೆ.. ರಕ್ತ ಸಂಬಂಧಿಗಳು ಅಂದ್ರೆ ನೆನಪಾಗತ್ತೆ ಒಂದು ಘಟನೆ…
****

foto courtesy - vishalgadkari

ಐದು ವರ್ಷದ ಹಿಂದಿನ ಘಟನೆಯಿದು. ಉದಯವಾಣಿ ಪತ್ರಿಕೆಯ ಮಣಿಪಾಲ ಆವೃತ್ತಿಯಿಂದ ಕೆಲಸ ಬಿಟ್ಟು, ವಿಜಯಕರ್ನಾಟಕ ಚಿತ್ರದುರ್ಗ ಆವೃತ್ತಿಗೆ ಸೇರಿದ ಸಂದರ್ಭ ಅದು. ಚಿತ್ರದುರ್ಗದಲ್ಲಿ ಎಲ್ಲವೂ ಹೊಸತು. ಉದಯವಾಣಿಯಲ್ಲಿ ಡೆಸ್ಕ್‌ನಲ್ಲಿ ಕೆಲಸ ಮಾಡಿದ ಅನುಭವ, ಇನ್ನೊಂದೆಡೆ ಹೊಸದಿಗಂತ ಪತ್ರಿಕೆಗೆ ಉಡುಪಿಯಲ್ಲಿ ವರದಿ ಮಾಡಿದ ಅನುಭವ.. ಇವೆರಡೂ ಕೂಡಾ ವಿಜಯಕರ್ನಾಟಕದಲ್ಲಿ ನನ್ನ ಕೆಲಸವನ್ನು ಸಲೀಸಾಗಿಸಿತ್ತು.
ಚಿತ್ರದುರ್ಗದ ಜೆಸಿಆರ್ ಬಡಾವಣೆಯ ಕೊನೆಯಲ್ಲಿ ಅಂದ್ರೆ, ಬೈಪಾಸ್ ಹತ್ತಿರ ಎಂದು ಹೇಳಬಹುದು. ಅಲ್ಲೊಂದು ಬೀಡಾ ಅಂಗಡಿ ಇದೆ. ಬೀಡಾ ಅಂಗಡಿ ಹೇಳಿದರೆ ಸಾಕಲ್ಲವೇ.. ಒಂದೆಡೆ ಬೀಡಾ, ಇನ್ನೊಂದೆಡೆ ಗುಟ್ಕಾ…  ಎರಡು ಕೂಡಾ ಕ್ಯಾನ್ಸರ್‌ಗೆ  ಮುಕ್ತ ಆಹ್ವಾನ ಕೊಡುವಂಥಾದ್ದು.. ಇಂತಹ ಉದ್ಯೋಗ ಮಾಡುತ್ತಿರುವ ವ್ಯಕ್ತಿ ಇನ್ನೊಂದು ಕಡೆ, ರಕ್ತದಾನಿಗಳ ಡೈರೆಕ್ಟರಿ ರಚಿಸಿ ಇಟ್ಟುಕೊಂಡಿದ್ದರು. ಯಾರಿಗಾದರೂ ರಕ್ತ ಬೇಕಾದಲ್ಲಿ, ತಾನೇ ಸಂಗ್ರಹಿಸಿದ್ದ ರಕ್ತದಾನಿಗಳ ಹೆಸರು ಫೋನ್ ನಂಬರ್ ಕಡೆಗೆ ಕಣ್ಣು ಹಾಯಿಸಿ, ಅವರು ಯಾವಾಗ ರಕ್ತ ಕೊಟ್ಟಿದ್ದರು ಎಂದೆಲ್ಲಾ ಪರಿಶೀಲಿಸಿ, ರಕ್ತದಾನಿ ರಕ್ತ ನೀಡಿ ೩ ತಿಂಗಳು ಆಗಿದ್ದರೆ ಮಾತ್ರ ಅವರಿಗೆ ಕರೆ ಮಾಡಿ ರಕ್ತ ಬೇಕು ಎಂದು ಹೇಳುತ್ತಿದ್ದ. ಹಾಗೆ ಆತನ ಕುರಿತೇ ಒಂದು ವಿಶೇಷ ವರದಿ ಮಾಡಿದ್ದೂ ಆಗಿದೆ.
ಅದೊಂದು ದಿನ.. ಆತ ನನ್ನ ಮೊಬೈಲ್ ನಂಬರಿಗೆ ಕರೆ ಮಾಡಿ, ರಕ್ತ ಬೇಕಾಗಿದೆ ಎಂದ. ನಾನು ಆತ ಹೇಳಿದ ಆಸ್ಪತ್ರೆಗೆ ಹೋದರೆ, ಅಲ್ಲಿ ೬೫ ವರ್ಷ ವಯಸ್ಸಿನ ಹಿರಿಯರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಮಗ ನನ್ನನ್ನು ಬರಮಾಡಿಕೊಂಡರು. ನಾನು ಸಹಜವಾಗಿಯೇ ಕೇಳಿದೆ.. ಏನಾಗಿದೆ.. ಬೇರೆ ಯಾರು ರಕ್ತ ಕೊಟ್ಟಿದ್ದಾರೆ.. ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟೆ.. ಆತ, ಕೊಟ್ಟ ಉತ್ತರ ಕೇಳಿ ದಂಗಾಗಿ ಹೋದೆ..
“ನನ್ನದೂ ಅಪ್ಪಂದೂ ರಕ್ತದ ಗುಂಪು ಒಂದೇ.. ಆದರೆ, ನಾನು ಮಾತ್ರ ಅಪ್ಪನಿಗೆ ರಕ್ತ ಕೊಡಲ್ಲ.. ”
ಯಾಕೆ ಕೊಡಲ್ಲ ಎಂದು ಕೇಳಿದೆ..
ನಾನು ಯಾಕೆ ಕೊಡಬೇಕು.. ಬೇರೆಯವರು ಕೊಡ್ತಾರಲ್ಲ… ಅನ್ನೋ ಉಡಾಫೆ ಮಾತು ಕೇಳಿ ಸಿಟ್ಟು ಬಂದು ಬಿಟ್ಟಿತ್ತು.
ಈ ಉಡಾಫೆ ಮಾತಿನಷ್ಟೇ ಕೂಲಾಗಿ.. ನಿಮ್ಮ ಅಪ್ಪಂಗೆ ನಾನ್ಯಾಕೆ ರಕ್ತ ಕೊಡಬೇಕು.. ಅವರು ನನಗೇನಾಗಬೇಕು.. ಕೊಡಲ್ಲ ಅಷ್ಟೇ.. ಎಂದು ನಾನೂ ಹೊರಬಂದೆ..
ಆತ ಕಂಗಾಲಾಗಿ ಹೋದ.. ಗೋಗರೆದ.. ಮೊದಲು ನೀವು ರಕ್ತ ಕೊಡಿ.. ಆ ಮೇಲೆ ಉಳಿದವರ ಹತ್ರ ತಗೊಳ್ಳಿ ಎಂದು ಹೇಳಿದೆ..
ಕೊನೆಗೆ ಒಲ್ಲದ ಮನಸ್ಸಿನಿಂದ ಆತ ರಕ್ತ ಕೊಡಲು ಒಪ್ಪಿದ.. ನಾನು ಹೊರ ಬಂದೆ.. ಅದೇ ಕೊನೆ ಮತ್ತೆಂದೂ ನಾನು ರಕ್ತ ದಾನ ಮಾಡಿರಲಿಲ್ಲ…
****
ಆದರೆ, ಇಂದು ಬೆಳಗ್ಗೆ ಫೇಸ್ ಬುಕ್ ತೆರೆದು ಕುಳಿತಿದ್ದೆ. ಗೆಳೆಯರೊಬ್ಬರು ಒಬ್ಬರು ಮಹಿಳೆ ಹೆಸರು ಮತ್ತು ಮೊಬೈಲ್ ನಂಬರ್ ಕೊಟ್ಟು ಅರ್ಜೆಂಟ್ ೬ ಯುನಿಟ್  ಒ+ ರಕ್ತ ಬೇಕಾಗಿದೆ ಎಂದು ಬರೆದಿದ್ದರು. ಕೂಡಲೇ ಸಂಪರ್ಕಿಸಿದೆ. ಅವರಿದ್ದ ಖಾಸಗಿ ಆಸ್ಪತ್ರೆಗೆ ಹೋದೆ.. ಅವರಿಗೆ ಅಚ್ಚರಿಯಾಗಿತ್ತು.. ಬೇರೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಬಂದು ರಕ್ತ ಕೊಡಲು ಮುಂದಾಗಿರುವುದು ನೋಡಿ..
ನಾನು ಸುಮ್ಮನೆ ನಕ್ಕು… ನಿಮ್ಮ ತಂದೆಯವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಹಾರೈಸಿದೆ.. ಬಳಿಕ ಮೆಲ್ಲಗೆ ಹೇಳಿದೆ.. humble, humane, honest.. ಅಂದೆ… ಆಕೆ, ವಿಸಿಟಿಂಗ್ ಕಾರ್ಡ್ ಕಡೆ ನೋಡಿದ್ರು..
ಇಲ್ಲಿ ಚಿತ್ರದುರ್ಗದಲ್ಲಾದ ಘಟನೆ ಮರುಕಳಿಸಲಿಲ್ಲ. ಒಳರೋಗಿಯಾಗಿ ದಾಖಲಾಗಿದ್ದ ವ್ಯಕ್ತಿಯ ಸಂಬಂಧಿಯೊಬ್ಬರು ರಕ್ತ ಕೊಡುತ್ತಿದ್ದರು.. ಹಾಗಾಗಿ ಐದು ವರ್ಷದ ಬಳಿಕ ರಕ್ತದಾನ ಮಾಡಿದ ಖುಷಿಗೊಳಗಾಗಿದ್ದೆ…

0 thoughts on ““ರಕ್ತ” ಸಂಬಂಧಿಗಳಾಗುವ ವೇಳೆ.. !

  1. ರಕ್ತ ನೀಡುವುದರಲ್ಲಿ ಹಲವರಿಗೆ ಇನ್ನೂ ಮೀನಮೇಷ ಇದ್ದದ್ದೇ. ಇಂಥ ಅನುಭವ ನನಗೂ ಆಗಿದೆ. ಇನ್ನು ಮುಂದೆ ಹಾಗೆ ಸಿಟ್ಟಾಗಬೇಡಿ. ನೀವು ಕೊಡುವಂಥ ಸ್ಥಿತಿಯಲ್ಲಿ ಇದ್ದರೆ ಸುಮ್ಮನೆ ಕೊಟ್ಟುಬಿಡಿ.
    ಒಳ್ಳೆಯ ಕೆಲಸ ಮಾಡಿದಿರಿ ಇವತ್ತು 🙂

Leave a Reply

Your email address will not be published. Required fields are marked *