ರಾಜಕೀಯ ತಂತ್ರಗಾರಿಕೆಗೆ ಮತ್ತೊಂದು ಹೆಸರೇ ಚಾಣಕ್ಯ. ಶತಮಾನಗಳ ಹಿಂದೆ ಚಾಣಕ್ಯನ ಮಾರ್ಗದರ್ಶನ ಪಡೆದ ಚಂದ್ರಗುಪ್ತ, ಮೌರ್ಯ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದ. ಈತನ ನೀತಿಗಳು ಚಾಣಕ್ಯನೀತಿ ಎಂದೂ, ಅರ್ಥಶಾಸವಂತೂ ಕೌಟಿಲ್ಯನ ಅರ್ಥಶಾಸ ಎಂದೇ ಪ್ರಸಿದ್ಧ. ಶತಮಾನಗಳ ಹಿಂದೆಯೇ ರೂಪಿಸಿದ್ದ ಚಾಣಕ್ಯನ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ ಎಂದರೆ ಆತನ ಬುದ್ಧಿಮತ್ತೆ ಮತ್ತು ಸಮಾಜಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಎಷ್ಟು ವ್ಯಾಪಕವಾಗಿರಬಹುದು ಎಂಬುದನ್ನು ಅಂದಾಜಿಸಬಹುದು. ಚಾಣಕ್ಯ ಮೂರನೇ ಶತಮಾನದಲ್ಲಿ ತಕ್ಷಶಿಲಾ ಎಂಬಲ್ಲಿ ಜನಿಸಿದ ಎಂದು ಹೇಳಲಾಗುತ್ತದೆಯಾದರೂ, ಈ ಬಗ್ಗೆ ಸ್ಪಷ್ಟತೆ ಇಲ್ಲ. ತಂದೆ ಹೆಸರು ಚಣಕ, ತಾಯಿ ಕಾನೇಶ್ವರಿ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಚಾಣಕ್ಯ, ಪುರಾತನ ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಶಿಕ್ಷಕನಾದ. ನಂದ ಸಾಮ್ರಾಜ್ಯದ ನಿಜವಾದ ರಾಜನನ್ನು ಚಾಣಕ್ಯ ಹುಡುಕಲಾರಂಭಿಸಿದ. ಆ ಹುಡುಕಾಟದ ವೇಳೆ ಧನನಂದನ ಆಳ್ವಿಕೆಯಲ್ಲಿ ನಂದ ಸಾಮ್ರಾಜ್ಯ ಸುಭಿಕ್ಷವಾಗಿಲ್ಲ ಎಂಬುದನ್ನು ಅರಿತ. ಅದೇ ವೇಳೆ ಕಣ್ಣಿಗೆ ಬಿದ್ದವನೇ ಬಾಲಕ ಚಂದ್ರಗುಪ್ತ. ಆತನಿಗೆ ಆಳ್ವಿಕೆ, ಸಮಾಜಕಲ್ಯಾಣದ ಪಾಠ ಹೇಳಿ ರಾಜಕೀಯ ತಂತ್ರಗಾರಿಕೆಗಳನ್ನೂ ಧಾರೆ ಎರೆದ. ಇವೆಲ್ಲದರ ಪರಿಣಾಮವೇ ಮೌರ್ಯ ಸಾಮ್ರಾಜ್ಯ ಸ್ಥಾಪನೆ. ಭಾರತದ ರಾಜಕೀಯ ಕ್ಷೇತ್ರದಲ್ಲಿ ಇಂದಿಗೂ ತಂತ್ರಗಾರಿಕೆ ವಿಷಯ ಬಂದಾಗ ನೆನಪಾಗುವುದು ಇವೇ ಚಾಣಕ್ಯ ನೀತಿಗಳು. ಹೀಗಾಗಿ, ಇಂದಿಗೂ ಇಂತಹ ತಂತ್ರಗಾರಿಕೆಗಳನ್ನು ನಡೆಸುವವರನ್ನು ‘ಅಭಿನವ ಚಾಣಕ್ಯ’ ಎಂದೋ, ಆಯಾ ಪಕ್ಷಗಳ ‘ಚಾಣಕ್ಯ’ರೆಂದೋ ಗುರುತಿಸುವುದುಂಟು. ಆಚಾರ್ಯ ಚಾಣಕ್ಯ ಭಾರತೀಯರ ಪಾಲಿಗೆ ಒಬ್ಬ ಗುರು, ತತ್ತ್ವಶಾಸಜ್ಞ, ಅರ್ಥಶಾಸಜ್ಞ, ರಾಜಕೀಯ ಸಲಹೆಗಾರನೆಂಬ ನೆಲೆಯಲ್ಲಿ ಇಂದಿಗೂ ಪ್ರಸ್ತುತವೆನಿಸುತ್ತಾನೆ. ಹೀಗಾಗಿ ಚಾಣಕ್ಯ ಸರ್ವರಿಗೂ ಸಾರ್ವಕಾಲಿಕ ಗುರು.