ಸೊಳ್ಳೆ ಬಗ್ಗೆ ಗೊತ್ತಿಲ್ಲದವರು ಯಾವ ದೇಶದಲ್ಲಿ ಕೂಡಾ ಇರಲಾರರು. ಬಹುಶಃ ಸೊಳ್ಳೆ ಇಲ್ಲದ ಜಾಗವೇ ಇಲ್ಲ ಎನ್ನಬಹುದು. ಇದರಿಂದ ಹರಡುವ ರೋಗಗಳ ಸಂಖ್ಯೆ ಕೂಡಾ ಕಡಿಮೆಯೇನಲ್ಲ. ಮಲೇರಿಯಕ್ಕೂ ಸೊಳ್ಳೆಗೂ ಎಲ್ಲಿಲ್ಲದ ನಂಟು. ಈ ತಿಂಗಳ ೨೫ನೇ ತಾರೀಕು ವಿಶ್ವ ಮಲೇರಿಯ ನಿವಾರಣಾ ದಿನ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ಭಾರತದಲ್ಲೂ ಮಲೇರಿಯ ನಿವಾರಣಾ ದಿನಾಚರಣೆ ಆಯೋಜಿತವಾಗಿದೆ. ಅನೇಕ ಆಸ್ಪತ್ರೆಗಳು ಕೂಡಾ ಬೇರೆ ಬೇರೆ ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ.
ಇಷ್ಟೆಲ್ಲ ಪ್ರಸ್ತಾಪ ಮಾಡಿದ್ದು ಮಲೇರಿಯ ಬಗ್ಗೆ ಹೇಳೋದಕ್ಕಲ್ಲ. ಸೊಳ್ಳೆ ಬಗ್ಗೆ ಹೇಳೋದಕ್ಕೆ. ಸೊಳ್ಳೆಯ ಸಂಗೀತ ಕೇಳದೇ ನಿದ್ದೆ ಹೋಗುವವರೇ ಅಪರೂಪ. ಸೊಳ್ಳೆಗೆ ಗುಡ್ನೈಟ್ ಹೇಳಿಯೋ ಅಥವಾ ಟಾರ್ಟಯ್ಸ್ ಬತ್ತಿ ತೋರಿಸಿಯೋ ನಿದ್ದೆ ಹೋಗುವುದು ಸಾಮಾನ್ಯ ಜನರ ವಾಡಿಕೆ. ಹೀಗಾಗಿ ಸೊಳ್ಳೆ ಎಂದ ಕೂಡಲೇ ಜನರ ಕಿವಿ, ಕಣ್ಣು ಚುರುಕಾಗತ್ತೆ. ಹೊಡೆದು ಕೊಲ್ಲೋದಕ್ಕೆ ಕೈ ಕೂಡಾ ಚುರುಕಾಗತ್ತೆ. ಆದ್ರೆ, ನೀವು ಒಂದು ವಿಷಯ ಗಮನಿಸಿದ್ದೀರಾ.. ಸೊಳ್ಳೆ ಗುಂಯ್ ಗುಡುತ್ತಾ ಹತ್ತಿರ ಬರತ್ತೆ. ಅದಷ್ಟೇ ಗೊತ್ತಾಗತ್ತೆ. ಹಾಗೆ ಸೊಳ್ಳೆ ಹಾರಿ ಬಂದು ಶರೀರದ ಮೇಲೆ ಕುಳಿತಾಗ ಏನಾದ್ರೂ ಗೊತ್ತಾಗತ್ತಾ ? ನಮಗದರ ಪರಿವೆಯೇ ಇರೋದಿಲ್ಲ. ಅದು ತನ್ನ ಸೂಜಿಯನ್ನು ಚುಚ್ಚಿದಾಗಲೂ ಗೊತ್ತಾಗಲ್ಲ. ಸ್ವಲ್ಪ ಹೊತ್ತಾದ ಬಳಿಕ ತುರಿಕೆ ಆರಂಭವಾದಾಗ ಸೊಳ್ಳೆ ಕಡಿತ ಅರಿವಿಗೆ ಬರತ್ತೆ. ನೋಡು ನೋಡುತ್ತಲೇ ಸೊಳ್ಳೆ ಆ ಭಾಗದಿಂದ ಹಾರುತ್ತಿರುವುದೂ ಕಾಣತ್ತೆ..
ಇಂತಹ ಸೊಳ್ಳೆ ಸಂಶೋಧನೆಗೂ ಪ್ರೇರಣೆ ನೀಡಿದೆ ಅಂದರೆ ಅಚ್ಚರಿ ಅಲ್ಲವೇ ? ಸೊಳ್ಳೆ ಸಾಂಕ್ರಾಮಿಕ ರೋಗಗಳನ್ನು ಹರಡತ್ತೆ. ಅದಕ್ಕೆ ಔಷಧ ಕಂಡು ಹಿಡಿಯುವುದೇ ಸಂಶೋಧನೆ ಎಂದು ಭಾವಿಸಿದರೆ ತಪ್ಪಾದೀತು. ಈ ಮೊದಲೇ ಹೇಳಿದಂತೆ ಸೊಳ್ಳೆ ಕಡಿತ ಇದೆಯಲ್ಲಾ ಅದುವೇ ಒಂದು ಸಂಶೋಧನೆಗೆ ಪ್ರೇರಣೆಯಾದ ಬಗೆ ಇದು..
ಸಾಮಾನ್ಯವಾಗಿ ಆಸ್ಪತ್ರೆಗೆ ಹೋದರೆ ಸಾಕು. ಸಣ್ಣ ಜ್ವರ ಬಂದರೆ ಸಾಕು ಚುಚ್ಚುಮದ್ದು ಗ್ಯಾರೆಂಟಿ. ಡಾಕ್ಟರ್ ಅಥವಾ ನರ್ಸ್ ಚುಚ್ಚುಮದ್ದು ಹಿಡಿದು ಮುಂದೆ ಬರುವ ಹೊತ್ತಿಗೆ ನಮ್ಮ ಕಣ್ಣು ಅರಿವಿಗೆ ಬಾರದಂತೆ ನೋವಿನ ಭಯದಿಂದ ಮುಚ್ಚಿಹೋಗಿರತ್ತೆ. ಈ ರೀತಿಯ ಭೀತಿ ಇನ್ನು ಮೇಲೆ ಬೇಕಾಗಿಲ್ಲ. ಹೊಸ ಇಂಜೆಕ್ಷನ್ ಸೂಜಿ ನಿಮಗೆ ಸೊಳ್ಳೆ ಚುಚ್ಚಿದ ಅನುಭವ ನೀಡಲಿದೆ.
ಸೊಳ್ಳೆಗಳು ಉಪದ್ರವ ಕೊಟ್ಟರೂ ಅನೇಕ ಸಂದರ್ಭಗಳಲ್ಲಿ ಉಪಕಾರಿಯಾಗಿಯೇ ಪರಿಣಮಿಸುತ್ತಿವೆ. ಸೊಳ್ಳೆಗಳು ಕಪ್ಪೆಯ ಪ್ರಮುಖ ಆಹಾರ. ಇದೇ ಸೊಳ್ಳೆಗಳ ಕಡಿತ, ಆ ಸೂಜಿ.. ಜಪಾನ್ನ ಒಸಾಕ ಕನ್ಸಾಯ್ ಯುನಿವರ್ಸಿಟಿಯ ಮೆಕಾನಿಕಲ್ ಎಂಜಿನಿಯರ್ ಸೈಜಿ ಓಯಗಿ ಸಂಶೋಧನೆಗೆ ಕಾರಣವಾಯ್ತು. ನೋವು ಅನುಭವಕ್ಕೆ ಬಾರದ ಸಿರಿಂಜ್ ಸೂಜಿ ಸಿದ್ಧವಾಗೋದಕ್ಕೆ ಸೊಳ್ಳೆ ಕಡಿತ ಪ್ರೇರಣೆಯಾಗಿದ್ದು ವಾಸ್ತವ. ಸೊಳ್ಳೆ ಚರ್ಮದ ಮೇಲೆ ಕುಳಿತು ಸೂಜಿಯನ್ನು ಒಳಕ್ಕೆ ತಳ್ಳುವಾಗ ಯಾವುದೇ ರೀತಿಯ ಸ್ಪರ್ಶಾನುಭವ ಆಗೋದಿಲ್ಲ. ಆದರೆ, ಬಳಿಕ ಉಂಟಾಗುವ ತುರಿಕೆ ಸೊಳ್ಳೆ ಕಡಿತದ ಅರಿವು ನೀಡುತ್ತದೆ.
ಸೊಳ್ಳೆಯ ಮೂತಿ ಅಥವಾ ಸೂಜಿಯ ಒಳಭಾಗದಲ್ಲಿ ಕೊಳವೆಯಾಕಾರಾದ ತುಟಿ ಇದೆ. ರಕ್ತ ಹೀರುವುದಕ್ಕೆ ಈ ಕೊಳವೆಯಾಕಾರದ ತುಟಿ ಸಹಕಾರಿ. ಇದು ಎರಡು ಪ್ರತ್ಯೇಕ ಮೇಲುದವಡೆಯ ಮಧ್ಯಭಾಗದಲ್ಲಿದೆ. ಮೇಲುದವಡೆ ಮೊದಲು ಚರ್ಮವನ್ನು ಸ್ಪರ್ಶಿಸಿ ಒಳಭಾಗಕ್ಕೆ ತೂರಿಕೊಳ್ಳುತ್ತದೆ. ಮೇಲುದವಡೆಯ ಚೂಪಾದ ಹೊರಪದರ ಇದಕ್ಕೆ ಸಹಕರಿಸುತ್ತದೆ. ಬಳಿಕ ತುಟಿಯ ಮೂಲಕ ರಕ್ತ ಹೀರುವ ಕೆಲಸ ಸಾಗುತ್ತದೆ.
ಇದೇ ತಾಂತ್ರಿಕತೆ ಹೊಂದಿದರೆ, ಈಗ ಇರುವ ಸಿರೆಂಜ್ ಸೂಜಿಯಿಂದ ಆಗುತ್ತಿರುವ ಅನಾನುಕೂಲ ಕಡಿಮೆಯಾದೀತು ಅನ್ನೋ ಅಭಿಪ್ರಾಯ ವ್ಯಕ್ತವಾಗಿದ್ದೇ ತಡ.. ಹೊಸ ಸಂಶೋಧನೆಗೆ ಅದುವೇ ನಾಂದಿಯಾಯಿತು.
ಪ್ರೊಫೆಸರ್ ಓಯಗಿ ಕಂಡು ಹಿಡಿದಿರುವ ಸೂಜಿಗೆ ಸಿಲಿಕಾನ್, ಮಿಮಿಕ್ಸ್ ಗಳೇ ತುಟಿ ಮತ್ತು ಮೇಲುದವಡೆ. ಮೊದಲು ಚೂಪಾದ ಹೊರತುದಿ ಹೊಂದಿರುವ ಎರಡು ತುದಿಗಳು ಚರ್ಮದೊಳಕ್ಕೆ ಸೇರುತ್ತವೆ. ಬಳಿಕ ಚುಚ್ಚುಮದ್ದು ನಿಧಾನವಾಗಿ ಶರೀರದೊಳಕ್ಕೆ ಸೇರತ್ತೆ ಅಥವಾ ರಕ್ತ ಹೀರುವ ಕೆಲಸ ಸಾಗತ್ತೆ. ಸೊಳ್ಳೆ ರಕ್ತ ಹೀರುವಾಗ ದವಡೆಗಳನ್ನು ಜೋರಾಗಿ ಅಲ್ಲಾಡಿಸುತ್ತಾ ಇರತ್ತೆ. ಇದೇ ತಂತ್ರಜ್ಞಾನ ಇಲ್ಲಿ ೧೫ ಹರ್ಟ್ಸ್ ಶಕ್ತಿಯ ಕ್ರಿಸ್ಟಲ್ ಯಂತ್ರ ಬಳಸಿ ತಯಾರಿಸಲಾಗಿದೆ. ಈಗ ಸಿದ್ಧವಾಗಿರುವ ಸೂಜಿ ಬಹಳ ಚಿಕ್ಕದಾಗಿದ್ದು, ಅಂದರೆ ಒಂದು ಮಿಲಿ ಮೀಟರ್ ಉದ್ದ, ೦.೧ ಮಿಲಿ ಮೀಟರ್ ವ್ಯಾಸ ಮತ್ತು ೧.೬ ಮೈಕ್ರೋ ಮೀಟರ್ ದಪ್ಪ ಹೊಂದದೆ. ಸಿರಿಂಜ್ ೫ ಮಿಲಿಮೀಟರ್ ಗಾತ್ರ ಹೊಂದಿದೆ. ಪರೀಕ್ಷಾರ್ಥವಾಗಿ ಓಯಗಿ ಮತ್ತು ತಂಡ ಪಂಕ್ಚರ್ ಸಿಲಿಕಾನ್ ರಬ್ಬರ್ ಅನ್ನು ಬಳಸಿಕೊಂಡಿದೆ. ಅದರ ಕೆಳಗೆ ಕೆಂಪು ದ್ರವ ಇರಿಸಿ ಈ ಸೂಜಿ ಮೂಲಕ ರಕ್ತ ಹೀರುವ ಕೆಲಸ ಯಶಸ್ಸು ಸಾಧಿಸಿದೆ.
ಮನುಷ್ಯರ ಮೇಲೂ ಈ ಸೂಜಿಯ ಪ್ರಯೋಗ ನಡೆದಿದೆ. ಸಾಂಪ್ರದಾಯಿಕವಾಗಿ ಬಳಸುತ್ತಿರುವ ಸೂಜಿಗಿಂತ ಇದನ್ನು ಚುಚ್ಚಿದರೆ ನೋವು ಕಡಿಮೆ ಅನ್ನೋದು ಸಾಬೀತಾಗಿದೆ. ಈ ಸೂಜಿಯ ಅಭಿವೃದ್ಧಿಗಾಗಿ ಇನ್ನಷ್ಟು ಸಂಶೋಧನೆ ನಡೆದಿದೆ. ಒಟ್ಟಿನಲ್ಲಿ ನೋವು ರಹಿತ ಸಿರಿಂಜ್ ಸೂಜಿಯ ಕನಸು ನನಸಾಗುವ ಕಾಲ ಹತ್ತಿರದಲ್ಲೇ ಇದೆ.