ಸ್ಮಾರ್ಟ್ ಸಿಟಿ: ಹೈಟೆಕ್ ಸ್ಪರ್ಶ, ಉತ್ಕರ್ಷ

ಇಡೀ ಜಗತ್ತು `ಸ್ಮಾರ್ಟ್ ಸಿಟಿ’ ಎಂಬ ಕನಸಿನ ಬೆನ್ನೇರಿದೆ. ಹಲವು ದೇಶಗಳು ಈ ಕನಸನ್ನು ನನಸಾಗಿಸುವ ಪ್ರಯತ್ನ ನಡೆಸಿವೆ. ಕೆಲವು ದೇಶಗಳಲ್ಲಿ ಇದು ಆಗಲೇ ನನಸಾಗಿದೆ. ಇದೀಗ ಭಾರತವೂ ಈ ಕನಸಿನೊಳಕ್ಕೆ ಜಾರಿದ್ದು, 100 ಸ್ಮಾರ್ಟ್ ಸಿಟಿ ನಿರ್ಮಿಸುವ ಯೋಜನೆ ಸಿದ್ಧಪಡಿಸಿದೆ.
GIFT`ಸ್ಮಾರ್ಟ್ ಸಿಟಿ’ ಎಂಬ ಆ ಹೆಸರಿನಲ್ಲೇ ಏನೋ ಮೋಡಿ ಇದೆ. ನಮ್ಮ ದೇಶದ ಮಟ್ಟಿಗೆ ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು. ಅದನ್ನು ನನಸು ಮಾಡುವ ಕೆಲಸ ಗುಜರಾತ್‍ನಲ್ಲಿ ಈಗಾಗಲೇ ಆರಂಭವಾಗಿದೆ. ದೇಶದ ಆಯ್ದ ಪ್ರದೇಶಗಳಲ್ಲಿ ಇಂತಹ 100 ನಗರಗಳನ್ನು ನಿರ್ಮಿಸುವುದಾಗಿ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲೂ ಘೋಷಿಸಲಾಗಿತ್ತು. ಈಗ ಅದನ್ನು ಈಡೇರಿಸುವ ಕೆಲಸಕ್ಕೆ ಸರ್ಕಾರ ಮುಂದಡಿ ಇರಿಸಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಇದರ ನೀಲನಕಾಶೆ ಸಿದ್ಧಗೊಳಿಸುತ್ತಿದ್ದು, ಈ ಯೋಜನೆ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ (ಜೆನರ್ಮ್) ಯೋಜನೆಯ ಸ್ಥಾನದಲ್ಲಿ ಅನುಷ್ಠಾನಕ್ಕೆ ಬರಲಿದೆ. `ನವ-ಮಧ್ಯಮವರ್ಗ’ದ ಜನರ ಜೀವನಮಟ್ಟವೂ ಇದರೊಂದಿಗೆ ಸುಧಾರಿಸಬಹುದೆಂಬ ಆಶಯ ಸರ್ಕಾರದ್ದು.

ಭಾರತದಲ್ಲಿ ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಸಿಂಗಾಪುರ ಆಸಕ್ತಿ ತೋರಿದ್ದು ಎಲ್ಲ ರೀತಿ ನೆರವು ಒದಗಿಸಲು ಮುಂದಾಗಿದೆ. ಸಿಂಗಾಪುರ ಈಗಾಗಲೇ ಸ್ಮಾಟ್ ಸಿಟಿಗಳನ್ನು ನಿರ್ಮಿಸಿದ್ದು ಅದರ ಬಗ್ಗೆ ಮೋದಿ ಸರ್ಕಾರ ಕೂಡಾ ಆಸಕ್ತಿ ತೋರಿದೆ. ಅವುಗಳನ್ನೇ ಮಾದರಿಯನ್ನಾಗಿ ಪರಿಗಣಿಸಿದೆ ಕೂಡಾ. 2019ರ ವೇಳೆಗೆ ದೆಹಲಿ-ಮುಂಬೈ ನಡುವಿನ ಕೈಗಾರಿಕಾ ಕಾರಿಡಾರ್‍ಗೆ ತಾಗಿಕೊಂಡಂತೆ ಧೊಲೇರಾ, ಶೇಂದ್ರಾ ಬಿಡ್ಕಿನ್ ಮತ್ತು ಗ್ಲೋಬಲ್ ಸೇರಿದಂತೆ ಏಳು ಸ್ಮಾರ್ಟ್ ಸಿಟಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಸಿಸ್ಕೊ, ಐಬಿಎಂ ಸೇರಿದಂತೆ ಹಲವು ಪ್ರಮುಖ ಐಟಿ ಕಂಪನಿಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಹಭಾಗಿತ್ವ ಹೊಂದಿವೆ.

ಅವಶ್ಯಕತೆಯಾದರೂ ಏನು?
ಭಾರತ ಮಿತಿಮೀರಿದ ವೇಗದಲ್ಲಿ ನಗರೀಕರಣಕ್ಕೆ ಒಳಗಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, 2030ರ ವೇಳೆಗೆ ಭಾರತದ 60 ಕೋಟಿ ಜನ ಬೃಹತ್ ನಗರಗಳಿಗೆ ವಲಸೆ ಬಂದು ನೆಲೆಸಲಿದ್ದಾರೆ. ಇದನ್ನು ತಪ್ಪಿಸಿ ದ್ವಿತೀಯ ದರ್ಜೆ ನಗರಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸಿ ಸ್ಮಾರ್ಟ್ ಸಿಟಿ ಯೋಜನೆ ಕಾರ್ಯಗತಗೊಳಿಸಿದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು. 2001ರ ಜನಗಣತಿ ಪ್ರಕಾರ, ಭಾರತದ ನಗರವಾಸಿಗಳ ಸಂಖ್ಯೆ 29 ಕೋಟಿ. ಮೆಕ್‍ಕಿನ್ಸೇ ಗ್ಲೋಬಲ್ ಇನ್‍ಸ್ಟಿಟ್ಯೂಟ್ ಅಧ್ಯಯನ ವರದಿ ಪ್ರಕಾರ, 2030ರ ವೇಳೆಗೆ ಭಾರತದ ನಗರಗಳಲ್ಲಿ ಶೇಕಡ 70ರಷ್ಟು ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು, ಜಿಡಿಪಿಗೆ ಶೇಕಡ 70ಕ್ಕಿಂತ ಹೆಚ್ಚಿನ ಕೊಡುಗೆ ನೀಡಲಿವೆ. ದೇಶದ ತಲಾ ಆದಾಯ ಕೂಡಾ ನಾಲ್ಕು ಪಟ್ಟು ಹೆಚ್ಚಾಗಲಿದೆ. ನಗರೀಕರಣದ ಈ ವೇಗಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ಒದಗಿಸುವ ಕಡೆಗೆ ಕೇಂದ್ರ ಸರ್ಕಾರ ಒತ್ತು ನೀಡಬೇಕಿದೆ. ಇದಕ್ಕೆ ಅಗತ್ಯ ನೀತಿ ನಿಯಮಗಳು ಹಾಗೂ ನಿರ್ವಹಣಾ ಕೌಶಲ್ಯಗಳನ್ನೂ ರೂಢಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಇಂತಹ ಸ್ಮಾರ್ಟ್ ಸಿಟಿ ಯೋಜನೆಗಳು ಮಹತ್ವ ಪಡೆದುಕೊಳ್ಳುತ್ತವೆ.

ಏನೀ ಪರಿಕಲ್ಪನೆ
ಹಳೆಯ ನಗರೀಕರಣದ ಪರಿಕಲ್ಪನೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವುದೇ `ಸ್ಮಾಟ್ ಸಿಟಿ’ ಎಂದು ಸರಳವಾಗಿ ಹೇಳಬಹುದು. ಇಲ್ಲಿ ಪ್ರಮುಖವಾಗಿ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವಂತಹ ಮೂಲಸೌಕರ್ಯಗಳ ಜತೆಗೆ ಮಾಹಿತಿ, ಸಂವಹನ ಹಾಗೂ ತಂತ್ರಜ್ಞಾನಕ್ಕೆ ಮೊದಲ ಆದ್ಯತೆ.
ಇದೊಂದು 6ಡಿ ಪರಿಕಲ್ಪನೆಯಾಗಿದ್ದು, ಪ್ರಾದೇಶಿಕ ಸ್ಪರ್ಧಾತ್ಮಕತೆ, ಸಾರಿಗೆ ಸೌಲಭ್ಯ, ಐಸಿಟಿ (ಇನ್ಫರ್ಮೇಷನ್, ಕಮ್ಯುನಿಕೇಷನ್, ಟೆಕ್ನಾಲಜಿ), ಆರ್ಥಿಕತೆ, ಪ್ರಾಕೃತಿಕ ಸಂಪನ್ಮೂಲಗಳು, ಮಾನವ ಹಾಗೂ ಸಾಮಾಜಿಕ ಸಂಪನ್ಮೂಲ ಅಥವಾ ಬಂಡವಾಳ ಇವನ್ನು ಒಳಗೊಂಡಿದೆ. ಜೀವನ ಗುಣಮಟ್ಟ ಹೆಚ್ಚಳದ ಉz್ದÉೀಶದೊಂದಿಗೆ, ನಗರಗಳ ಆಡಳಿತದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಇದು ಆಧರಿಸಿದೆ.
ಇನ್ನೂ ವಿಸ್ತೃತವಾಗಿ ಹೇಳುವುದಾದರೆ, ಐಸಿಟಿ ಸೌಲಭ್ಯಗಳನ್ನು ಬಳಸಿಕೊಂಡು ನಗರಗಳ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳುವ ಸಾಮಥ್ರ್ಯ ಹೊಂದುವುದು.

ಏನೇನಿರಬೇಕು ಗೊತ್ತಾ…
ಒಂದು ನಗರ `ಸ್ಮಾರ್ಟ್ ಸಿಟಿ’ ಎನಿಸಿಕೊಳ್ಳಬೇಕಾದರೆ ಕೆಲವು ಮೂಲಸೌಕರ್ಯಗಳು ಅಲ್ಲಿರಬೇಕು. ಪ್ರಮುಖವಾಗಿ ಇಂಧನ, ತಂತ್ರಜ್ಞಾನ ಮತ್ತು ಅನ್ವೇಷಣೆ, ಸಾರಿಗೆ ಸಂಪರ್ಕ, ಸಹಕಾರಿ ನಗರ, ಉತ್ತಮ ಆಡಳಿತ ಹಾಗೂ ಆರ್ಥಿಕ ವ್ಯವಸ್ಥೆ ಇರಬೇಕು. ಮತ್ತೂ ಹೇಳುವುದಾದರೆ, ನವೀಕರಿಸಬಹುದಾದ ಇಂಧನ, ಕಾರ್ಯಕ್ಷಮತೆಯ, ಇಂಗಾಲ ಹೊರಸೂಸದ ಇಂಧನಗಳ ಬಳಕೆ, ಪ್ರತಿಯೊಂದು ಕೆಲಸದಲ್ಲೂ ತಂತ್ರಜ್ಞಾನದ ಬಳಕೆ ಇರಬೇಕು. ಸಾರಿಗೆ ವ್ಯವಸ್ಥೆ ಕೂಡಾ ಉತ್ತಮ ರೀತಿಯಲ್ಲಿದ್ದು, ಅವುಗಳ ಕಾರ್ಯಕ್ಕೆ ಪ್ರತ್ಯೇಕ ಇಂಧನ ವ್ಯವಸ್ಥೆ ಇರಬೇಕು. ಇಂಥ ನಗರಗಳಲ್ಲಿ ಸಹಭಾಗಿತ್ವ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಆಡಳಿತ ವಿಚಾರವೂ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲೇ ನಡೆಯಬೇಕಾಗುತ್ತದೆ.

ಗುಜರಾತಿನ ಗಿಫ್ಟ್
GIFT ದೇಶದ ಮೊದಲ ಸ್ಮಾರ್ಟ್ ಸಿಟಿ. ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ 2011ರಲ್ಲಿ ಇದಕ್ಕೆ ಚಾಲನೆ ನೀಡಿದ್ದರು. 2021ರಲ್ಲಿ ಇದು ಪೂರ್ಣಗೊಳ್ಳಲಿದೆ. 70 ಸಾವಿರ ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು, ಅಹಮದಾಬಾದ್ ಹಾಗೂ ಗಾಂಧಿನಗರದ ನಡುವೆ ಇರುವ 886 ಎಕರೆ ಪ್ರದೇಶವನ್ನು ವ್ಯಾಪಿಸಿದೆ. ಇದರಿಂದಾಗಿ 5 ಲಕ್ಷ ನೇರ ಉದ್ಯೋಗಾವಕಾಶ, ಅಷ್ಟೇ ಪ್ರಮಾಣದ ಪರೋಕ್ಷ ಉದ್ಯೋಗ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಇಲ್ಲಿನ ಸೌಕರ್ಯಗಳ ಬಗ್ಗೆ ಹೇಳುವುದಾದರೆ, ಘನತ್ಯಾಜ್ಯಗಳು ಆಯಾ ಮನೆ ಹಾಗೂ ಕಚೇರಿಗಳಿಂದಲೇ ನೇರವಾಗಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ರವಾನೆಯಾಗುತ್ತವೆ. ತ್ಯಾಜ್ಯ ನಿರ್ವಹಣೆಯಿಂದ ಹಿಡಿದು ದಿನನಿತ್ಯದ ಕೆಲಸ ಕಾರ್ಯಗಳನ್ನು ಗಿಫ್ಟ್ ಸಿಟಿಯ ಕೇಂದ್ರ ಭಾಗದಿಂದಲೇ ಮಾಹಿತಿ ತಂತ್ರಜ್ಞಾನದ ಮೂಲಕ ನಿಯಂತ್ರಿಸಲಾಗುತ್ತದೆ. ಈ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಗರಿಷ್ಠ ಮಟ್ಟದಲ್ಲಿದ್ದು, ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಟಚ್‍ಸ್ಕ್ರೀನ್ ಮೂಲಕ ಬಸ್ ಸೇವೆಗಳು ಹಾಗೂ ನಗರದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.
ಏನೇನಿರುತ್ತವೆ: 110 ಕಟ್ಟಡಗಳು, 2 ಬೃಹದಾಕಾರದ ಕಟ್ಟಡ (350 ಮೀಟರ್‍ಗೂ ಹೆಚ್ಚಿನ ಎತ್ತರ), 19 ಮಧ್ಯಮ ಗಾತ್ರದ ಕಟ್ಟಡ (150-300 ಮೀ. ಎತ್ತರ), 73 ಸಾಮಾನ್ಯಗಾತ್ರದ ಕಟ್ಟಡ (100-150 ಮೀ. ಎತ್ತರ), 2 ಶಾಲೆಗಳು (ಒಂದು ಅಂತಾರಾಷ್ಟ್ರೀಯ, ಇನ್ನೊಂದು ಪ್ರಾದೇಶಿಕ), 214 ಬೆಡ್‍ಗಳ ಸುಸಜ್ಜಿತ ಆಸ್ಪತ್ರೆ, 5 ಸಾವಿರ ಕೊಠಡಿಗಳ ಹೋಟೆಲ್‍ಗಳು, ವಸತಿ ಸಮುಚ್ಚಯಗಳು ಕೂಡಾ ಇರುತ್ತವೆ.

ದೇಶದಲ್ಲಿ ನೂರು ಸುಂದರ ನಗರಿ

ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಕೇಂದ್ರದ ಬಿಜೆಪಿ ಸರ್ಕಾರ ಈ ಬಾರಿ ಬಜೆಟ್‍ನಲ್ಲಿ 100 ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕಾಗಿ 7,060 ಕೋಟಿ ರೂ. ಮೀಸಲಿಟ್ಟಿದೆ. ಒಂದೊಂದು ಸ್ಮಾರ್ಟ್ ಸಿಟಿ ಅಭಿವೃದ್ಧಿಪಡಿಸಬೇಕಾದರೂ ಕನಿಷ್ಠ 20-30 ವರ್ಷಗಳ ಅವಧಿ ಬೇಕು. ಈಗಾಗಲೇ ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್‍ಗೆ ತಾಗಿಕೊಂಡಂತೆ ಏಳು ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸುವ ಕೆಲಸ ಪ್ರಗತಿಯಲ್ಲಿದೆ. ಇದರಲ್ಲಿ ಗುಜರಾತಿನ ಗಿಫ್ಟ್ ಸಿಟಿ ಕೂಡಾ ಒಂದು.
ಈ ಮಹತ್ವಾಕಾಂಕ್ಷೆಯ ಯೋಜನೆ ಮೂಲಕ ಸರ್ಕಾರ, ದ್ವಿತೀಯ ದರ್ಜೆ ನಗರಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ. ಅತ್ಯುತ್ತಮ ಕ್ಷಮತೆಯ ಇಂಧನ ವ್ಯವಸ್ಥೆ, ಪರಿಶುದ್ಧ ಕುಡಿಯುವ ನೀರು, ಸಮರ್ಪಕ ತ್ಯಾಜ್ಯವಿಲೇವಾರಿ, ಚರಂಡಿ ವ್ಯವಸ್ಥೆ ನಿರ್ವಹಣೆಗೂ ಮಾಹಿತಿ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಇದಕ್ಕೆ ಪೂರಕವಾಗಿ, ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 2014-15ನೇ ಸಾಲಿನ ಬಜೆಟ್‍ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ 17, 628 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಕಳೆದ ಹಣಕಾಸು ವರ್ಷ 7,548 ಕೋಟಿ ರೂಪಾಯಿಗಳನ್ನಷ್ಟೇ ಮೂಲಸೌಕರ್ಯಕ್ಕೆ ಮೀಸಲಿರಿಸಲಾಗಿತ್ತು. ಇದೆಲ್ಲವೂ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರೈಸುವುದಕ್ಕೆ ಪೂರಕವಾಗಿದೆ ಎಂಬ ಅಭಿಪ್ರಾಯ ತಜ್ಞರ ವಲಯದಲ್ಲಿ ವ್ಯಕ್ತವಾಗಿದೆ.

ಸ್ಮಾರ್ಟ್ ಆಗಲಿದೆ ತುಮಕೂರು
ಏಳು ರಾಜ್ಯಗಳನ್ನು ಹಾದು ಹೋಗುವ ಅಮೃತಸರ-ಕೋಲ್ಕತ ಕೈಗಾರಿಕಾ ಕಾರಿಡಾರ್ ಆಸುಪಾಸಿನಲ್ಲಿ ಸೇರಿದಂತೆ ಕೆಲವೆಡೆ ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ದೆಹಲಿ-ಮುಂಬೈ ಕಾರಿಡಾರ್‍ನ ಆಸುಪಾಸಿನಲ್ಲಿರುವ ಹರಿಯಾಣದ ಮಣಿಸರ, ರಾಜಸ್ಥಾನದ ಖುಷ್‍ಕೇರ, ಗುಜರಾತಿನ ಧೋಲೆರಾ, ಮಹಾರಾಷ್ಟ್ರದ ಶೇಂದ್ರಾ, ಚೆನ್ನೈ-ಬೆಂಗಳೂರು ಕಾರಿಡಾರ್‍ನ ಆಸುಪಾಸಿನಲ್ಲಿರುವ ಕರ್ನಾಟಕದ ತುಮಕೂರು, ತಮಿಳುನಾಡಿನ ಪೆನ್ನೇರಿ, ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಹೆಸರುಗಳು ಸ್ಮಾಟ್ ಸಿಟಿ ಯೋಜನೆಯ ಪಟ್ಟಿಯಲ್ಲಿವೆ.

Tags :

Leave a Reply

Your email address will not be published. Required fields are marked *