ಹಗರಣದಿಂದ ಕಾಮನ್ ವೆಲ್ತ್ ಗೇಮ್ಸ್ ಸಿದ್ಧತೆಗೆ ಏನು ಉಪಯೋಗ ಆಗಿದೆ ? ಈ ವಿಚಾರದತ್ತ ಗಮನಿಸಿದ್ರೆ, ಆತಂಕ ಕಾರಿ ಅಂಶಗಳು ಬಹಿರಂಗಗೊಳ್ತಾ ಇವೆ. ಹಣಕಾಸಿನ ಅವ್ಯವಹಾರಗಳು, ಅವ್ಯವಸ್ಥಿತ ಟೆಂಡರ್ ಪದ್ಧತಿ ಆಯೋಜಕರನ್ನು ಕಂಗೆಡಿಸಿವೆ. ಈಗಾಗಲೇ ನೀಡಿದ ಭರವಸೆಯಂತೆ ಹಣ ಒದಗಿಸೋದಕ್ಕೆ ಆಯೋಜಕರೂ ಹಿಂದೆ ಮುಂದೆ ನೋಡತೊಡಗಿದ್ದಾರೆ.
ಅಕ್ಬೋಬರ್ 3ರಿಂದ ನವದೆಹಲಿಯಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಗೇಮ್ಸ್ ಅನ್ನೋ ಮೆಗಾ ಸ್ಪೋರ್ಟ್ಸ್ ಇವೆಂಟ್ಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ . ಈ ಕ್ರೀಡಾ ಹಬ್ಬಕ್ಕೆ ಸರಕಾರ ಕೂಡಾ ಸಾಕಷ್ಟು ಖರ್ಚು ಮಾಡುತ್ತಿದೆ. ಸಾವಿರಾರು ಕೋಟಿ ರೂಪಾಯಿಗಳ ಬಜೆಟ್ ಹೊಂದಿರೋ ಈ ಕ್ರೀಡಾ ಹಬ್ಬಕ್ಕೆ ಈಗ ಹಗರಣಗಳ ಗ್ರಹಣ ಮುಸುಕಿದೆ. ಕೋಟಿ ಕೋಟಿ ರೂಪಾಯಿ ಪ್ರಾಯೋಜಕತ್ವ ವಹಿಸ್ತೇವೆ ಅಂದ ಕಂಪೆನಿಗಳೆಲ್ಲ ಈಗ ಹಣ ಹೂಡೋದಕ್ಕೆ ಮೀನ ಮೇಷ ಎಣಿಸ್ತಿವೆ. ಕಾಮಗಾರಿಗಳೂ ಕುಂಠುತ್ತಾ ಸಾಗಿವೆ. .
ಕಾಮನ್ ವೆಲ್ತ್ ಗೇಮ್ಸ್ ಆಯೋಜನೆಗೆ ಹಣಕಾಸಿನ ನೆರವು ಒದಗಿಸುವುದಾಗಿ ಹೇಳಿದ್ದ, ಪ್ರಾಯೋಜಕರೆಲ್ಲಾ ಒಬ್ಬೊಬ್ಬರಾಗಿಯೇ ಹಿಂದೆ ಸರಿಯ ತೊಡಗಿದ್ದಾರೆ. ಹೀಗೆ ಹಿಂದೆ ಸರಿಯುತ್ತಿರುವ ಪ್ರಾಯೋಜಕರು ಬೇರಾರೂ ಅಲ್ಲ. ಎಲ್ಲವೂ ಸರಕಾರಿ ಸ್ವಾಮ್ಯದ ಸಂಸ್ಥೆಗಳೇ…
ಗೇಮ್ಸ್ನಿಂದ ಹಿಂದೆ ಸರಿದ ಪ್ರಾಯೋಜಕರು
ಸಂಸ್ಥೆ ಮೊತ್ತ
ಬಿಸಿಸಿಐ 100 ಕೋಟಿ ರೂ.
ಭಾರತೀಯ ರೈಲ್ವೇ 100 ಕೋಟಿ ರೂ.
ಪವರ್ ಗ್ರಿಡ್ ಕಾರ್ಪೋರೇಷನ್ 10 ಕೋಟಿ ರೂ.
ಎನ್ಟಿಪಿಸಿ 30 ಕೋಟಿ ರೂ.
ಬಿಸಿಸಿಐ 100 ಕೋಟಿ ರೂಪಾಯಿ ಭರವಸೆ ನೀಡಿತ್ತಾದ್ರೂ, ಹಗರಣ ಬಯಲಿಗೆ ಬಂದ ತಕ್ಷಣವೇ ಎಚ್ಚೆತ್ತು ಕೊಂಡು ಕಾಮನ್ ವೆಲ್ತ್ ಗೇಮ್ಸ್ ಗೆ ಹಣ ನೀಡೋದಿಲ್ಲ ಎಂದು ಖಡಾಖಂಡಿತವಾಗಿ ಹೇಳಿತ್ತು. ಇತ್ತೀಚಿನ ಬೆಳವಣಿಗೆಯಲ್ಲಿ, ಹಗರಣಗಳ ಆಳ ಕಂಡು ಕಂಗೆಟ್ಟಿರೋ ಇಂಡಿಯನ್ ರೈಲ್ವೇ ಕೂಡ ಭರವಸೆ ನೀಡಿದಂತೆ 100 ಕೋಟಿ ರೂಪಾಯಿ ಕೊಡೋದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದ್ರ ಬೆನ್ನಲ್ಲೆ ಪವರ್ ಗ್ರಿಡ್ ಕಾರ್ಪೋರೇಷನ್ ಸಹ ತಾನು ಕೊಡಬೇಕು ಎಂದಿದ್ದ 10 ಕೋಟಿ ರೂಪಾಯಿಯನ್ನ ತಡೆಹಿಡಿದಿದೆ. ಇನ್ನು ಎನ್ಟಿಪಿಸಿ ಭರವಸೆ ನೀಡಿದ್ದ 50 ಕೋಟಿಯಲ್ಲಿ 20 ಕೋಟಿ ಈಗಾಗಲೇ ಬಿಡುಗಡೆ ಮಾಡಿತ್ತಾದ್ರೂ, ಉಳಿದ 30 ಕೋಟಿ ಬಿಡುಗಡೆ ಸದ್ಯಕ್ಕಿಲ್ಲ ಎಂದು ಹೇಳಿದೆ.
ಕಾಮನ್ ವೆಲ್ತ್ ಗೇಮ್ಸ್ ನ ಆಯೋಜನೆಯಲ್ಲಿ ಹಣ ಹೂಡಿಕೆ ಬಗ್ಗೆ ಸರಕಾರಿ ಸಾಮ್ಯದ ಸಂಸ್ಥೆಗಳಿಗೆ ಈಗ ಆತಂಕ ಹೆಚ್ಚಾಗಿದೆ. ಈಗಾಗಲೇ ಕೆಲವು ಸಂಸ್ಥೆಗಳು ಹಣವನ್ನು ಪಾವತಿ ಮಾಡಿವೆ.
ಕಾಮನ್ವೆಲ್ತ್ ಹೂಡಿಕೆ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 50 ಕೋಟಿ ರೂ.
ಏರ್ ಇಂಡಿಯಾ 50 ಕೋಟಿ ರೂ.
ಎನ್ಟಿ ಪಿಸಿ 20 ಕೋಟಿ ರೂ.
ಕಾಮನ್ವೆಲ್ತ್ ಗೇಮ್ಸ್ ಆಯೋಜನೆಗೆ ಒಟ್ಟು 1,600 ಕೋಟಿ ರೂಪಾಯಿಗಳ ಬಜೆಟ್ ಅನ್ನ ರೂಪಿಸಲಾಗಿತ್ತು. ಇದಕ್ಕೆ ಪ್ರಾಯೋಜಕತ್ವ ಪಡೆಯೋದಕ್ಕೂ ಸರಕಾರವೂ ಅನುಮತಿ ನೀಡಿತ್ತು,. ಇದಕ್ಕೆ ಕೂಡಲೇ ಸ್ಪಂದಿಸಿದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 50 ಕೋಟಿ ರೂಪಾಯಿ, ಏರ್ ಇಂಡಿಯಾ 50 ಕೋಟಿ ರೂಪಾಯಿ, ಎನ್ಟಿಪಿಸಿ ಸಂಸ್ಥೆ 20 ಕೋಟಿ ರೂಪಾಯಿಗಳನ್ನ ಪಾವತಿ ಮಾಡಿತ್ತು.
ಆದ್ರೆ ಈಗ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಈ ಎಲ್ಲಾ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಈಗ ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿಗೆ ಪತ್ರ ಬರೆದು ತಾವು ನೀಡುವ ಮತ್ತು ನೀಡಿದ ಹಣ ಸದುಪಯೋಗ ಆಗಿದೆ ಎಂಬುದಕ್ಕೆ ಖಾತ್ರಿ ಪತ್ರ ಬರೆದು ಕೊಡಿ ಎಂದು ದಂಬಾಲು ಬಿದ್ದಿವೆ. ಈ ಬಗ್ಗೆ ಕಲ್ಮಾಡಿಗೆ ಪತ್ರವನ್ನೂ ಬರೆದಿದ್ದಾರೆ ಎಂದು ಕಾಮನ್ ವೆಲ್ತ್ ಗೇಮ್ಸ್ ಮೂಲಗಳು ಬಹಿರಂಗಗೊಳಿಸಿವೆ.
ಒಟ್ಟಿನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನ ಹಗರಣಗಳು ಭಾರತದ ಪ್ರತಿಷ್ಠೆಗೆ ದಕ್ಕೆಯನ್ನುಂಟು ಮಾಡಿವೆ. ಸಾವಿರಾರು ಕೋಟಿರೂಪಾಯಿ ವೆಚ್ಚ ಮಾಡಿ ಸಂಘಟಿಸುತ್ತಿರುವ ಪ್ರತಿಷ್ಠಿತ ಕ್ರೀಡಾಹಬ್ಬದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.