‘ಆಮ್‌ ಆದ್ಮಿ’ ವಿರುದ್ಧ `ಕಡಕ್‌ ಔರತ್‌’ !

VYAKHTI VISHESHA 25.1.15ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ನೇರ ಹಣಾಹಣಿ ಎಂದೇ ಬಿಂಬಿತವಾಗಿದೆ ದೆಹಲಿ ವಿಧಾನ ಸಭಾಚುನಾವಣೆ. ಇಲ್ಲಿ ಎಎಪಿ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್, ಬಿಜೆಪಿ ಅಭ್ಯರ್ಥಿ ಕಿರಣ್‍ಬೇಡಿ ಮುಖ್ಯಮಂತ್ರಿ ಅಭ್ಯರ್ಥಿಗಳಾದ್ದರಿಂದ ದೇಶದ ಗಮನಸೆಳೆದಿದ್ದಾರೆ. ಒಂದು ಹಂತದಲ್ಲಿ ಕಿರಣ್‍ಬೇಡಿ ಬಿಜೆಪಿ ಸೇರ್ಪಡೆಯಾದಾಗ ಅವರೇ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಹಾಗಾಗಲಿಲ್ಲ. ನವದೆಹಲಿ ಕ್ಷೇತ್ರದಲ್ಲಿ ಕೇಜ್ರಿವಾಲ್ ವಿರುದ್ಧ ನೂಪುರ್ ಶರ್ಮಾ ಎಂಬ 29 ವರ್ಷದ ಯುವತಿಯನ್ನು ಬಿಜೆಪಿ ಕಣಕ್ಕಿಳಿಸಿದ್ದು, ಅವರು ರಾತ್ರಿ ಬೆಳಗಾಗುವುದರೊಳಗೆ ದೇಶದ ಗಮನ ಸೆಳೆದರು. ಬಿಜೆಪಿಯ ಈ ನಡೆ, ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ವರಾಜ್ ಅವರನ್ನು ಹಾಗೂ ಅಮೇಠಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೈತಿ ಇರಾನಿಯವರನ್ನು ಕಣಕ್ಕಿಳಿಸಿದ್ದನ್ನು ನೆನಪಿಸಿದ್ದು ಸುಳ್ಳಲ್ಲ.

ನವದೆಹಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶೀಲಾ ದೀಕ್ಷಿತ್ (ನಿರಂತರ ಮೂರು ಅವಧಿಗೆ ಸಿಎಂ ಆಗಿದ್ದವರು) ಅವರನ್ನು ಕಳೆದ ಚುನಾವಣೆಯಲ್ಲಿ ಕೇಜ್ರಿವಾಲ್ ಸೋಲಿಸಿ `ಜೈಂಟ್ ಕಿಲ್ಲರ್’ ಎನಿಸಿಕೊಂಡಿದ್ದರು. ಇದೀಗ, ಅಂತಹ ಅವಕಾಶ ನೂಪುರ್ ಮುಂದಿದೆ. ಈ ಚುನಾವಣೆಯಲ್ಲಿ ನೂಪುರ್ ಗೆಲ್ಲುತ್ತಾರೋ, ಸೋಲುತ್ತಾರೋ ಗೊತ್ತಿಲ್ಲ. ಆದರೆ, ಚುನಾವಣಾ ಕಣದಲ್ಲಿ ಅವರು ಬಹಳ ಸದ್ದುಮಾಡತೊಡಗಿದ್ದಾರೆ.

ರಾಜಕೀಯವಾಗಿ ನೋಡಿದರೆ, ನೂಪುರ್ ಕಳೆದೊಂದು ದಶಕದಿಂದ ದೆಹಲಿ ಜನರಿಗೆ ಚಿರಪರಿಚಿತರು. ವಿದ್ಯಾರ್ಥಿ ಜೀವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತೆಯಾಗಿದ್ದ ಅವರು, 2008ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಅವರು, ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‍ಎಸ್‍ಯುಐ ಅಭ್ಯರ್ಥಿ ವಿರುದ್ಧ ಭರ್ಜರಿ ಜಯಗಳಿಸಿ ಅಧ್ಯಕ್ಷೆಯೂ ಆಗಿದ್ದರು.

ಅವರು ದೆಹಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆದ ಬಳಿಕ, ದೆಹಲಿ ವಿವಿಯಲ್ಲಿ ಅದೇ ವರ್ಷ ನ.6ರಂದು ‘Communalism, Fascism and Democracy: Rhetoric and Reality’ ಎಂಬ ವಿಷಯದ ಮೇಲೆ ನಡೆದ ಸೆಮಿನಾರ್‍ಗೆ ಝಕೀರ್ ಹುಸೇನ್ ಕಾಲೇಜಿನ ಪ್ರೊಫೆಸರ ಗಿಲಾನಿಯವರನ್ನು ಕೆಲವು ವಿದ್ಯಾರ್ಥಿಗಳು, ಉಪನ್ಯಾಸಕರು ಆಹ್ವಾನಿಸಿದ್ದರು. 2001ರ ಸಂಸತ್ ದಾಳಿ ಪ್ರಕರಣದ ಆರೋಪ ಗಿಲಾನಿ ಮೇಲಿತ್ತು. ಗಿಲಾನಿಯವರ ವಿರುದ್ಧ ಎಬಿವಿಪಿ ಕಾರ್ಯಕರ್ತರು ನಡೆಸಿದ ಭಾರಿ ಪ್ರತಿಭಟನೆಯ ನೇತೃತ್ವವನ್ನು ಇದೇ ನೂಪುರ್ ವಹಿಸಿದ್ದರು. ಈ ಘಟನೆ ದೇಶದ ಗಮನ ಸೆಳೆದಿದ್ದು, ನಂತರ ಟಿವಿ ಚಾನೆಲ್ ಒಂದರಲ್ಲಿ ನಡೆದ ಚರ್ಚೆಯಲ್ಲಿ ಸ್ವತಃ ನೂಪುರ್ ಭಾಗವಹಿಸಿದ್ದರು. ನ್ಯೂಸ್ ಆ್ಯಂಕರ್ ಘಟನೆ ಹಿನ್ನೆಲೆಯಲ್ಲಿ ಗಿಲಾನಿಯವರ ಕ್ಷಮೆ ಕೇಳಬೇಕು ಎಂದಾಗ, ನಾನೇಕೆ ಕ್ಷಮೆ ಕೇಳಲಿ.. ಇಡೀ ದೇಶಕ್ಕೆ ದೇಶವೇ ಗೀಲಾನಿ ಅವರತ್ತ ಉಗಿಯುತ್ತಿದ್ದರೆ, ಅವರನ್ನು ಭಯೋತ್ಪಾದನೆ ವಿಚಾರದಲ್ಲಿ ಮಾತನಾಡಲು ಆಹ್ವಾನಿಸಿದವರಾರು? ಈ ವಿಚಾರವಾಗಿ ನಾನು ಖಂಡಿತಾ ಕ್ಷಮೆ ಕೇಳಲಾರೆ ಎಂದು ಖಡಾಖಂಡಿತವಾಗಿ ಹೇಳಿದ್ದರು. ಈ ಘಟನೆ ಅವರ ಕಡಕ್ ರಾಷ್ಟ್ರೀಯ ವಿಚಾರಧಾರೆಗೊಂದು ಕೈಗನ್ನಡಿ.

ಈ ಚುನಾವಣೆ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ಅವರು, ಮುಂದೆ ಬಿಜೆಪಿ ಸೇರಿ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವೃತ್ತಿಯಲ್ಲಿ ವಕೀಲೆಯಾಗಿರುವ ಅವರು, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಹಕಾರ್ಯದರ್ಶಿಯಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಪ್ರಸ್ತುತ ಅವರು ಬಿಜೆಪಿಯ ದೆಹಲಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಾತ್ರವಲ್ಲ, ಪಕ್ಷದ ವಕ್ತಾರೆಯಾಗಿ ಸಾಕಷ್ಟು ಗಮನ ಸೆಳೆದಿದ್ದಾರೆ. ಇಂಗ್ಲಿಷ್ ಹಾಗೂ ಹಿಂದಿ ನ್ಯೂಸ್‍ಚಾನೆಲ್‍ಗಳ ಚರ್ಚೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಪಕ್ಷದ ಸದಸ್ಯತ್ವ ಅಭಿಯಾನದ ಮುಂಚೂಣಿಯಲ್ಲಿದ್ದು ಗುರುತಿಸಿಕೊಂಡಿದ್ದರು. ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಉತ್ತಮ ವಾಗ್ಮಿಯಾಗಿ ಪ್ರಸಿದ್ಧಿ ಪಡೆದಿದ್ದಾರೆ.

ರಾಜಕೀಯ ಅನುಭವದ ವಿಚಾರದಲ್ಲಿ ಅವರು ಕೇಜ್ರಿವಾಲ್‍ರಿಗಿಂತ ಒಂದು ತೂಕ ಹೆಚ್ಚೇ ಇದ್ದಾರೆ. ವಯಸ್ಸಿನಲ್ಲೂ ಕೇಜ್ರಿವಾಲ್‍ರಗಿಂತ ಕಿರಿಯರು. ಹೀಗಾಗಿಯೇ ಚುನಾವಣಾ ಕಣದಲ್ಲಿ ‘Youth v/s Inexperience’, “Student Leader v/s Ex.C.M’ ಎಂಬಿತ್ಯಾದಿ ವಿಶ್ಲೇಷಣೆ ಕೇಳತೊಡಗಿದೆ. ಅಷ್ಟೇ ಅಲ್ಲ, ಕೇಜ್ರಿವಾಲ್ ಹೊರಗಿನಿಂದ ಬಂದು ದೆಹಲಿಯಲ್ಲಿ ನೆಲೆ ಕಂಡಿದ್ದಾರೆ. ಆದರೆ, ನೂಪುರ್ ಹಾಗಲ್ಲ. ಹುಟ್ಟಿ ಬೆಳೆದಿದ್ದು ದೆಹಲಿಯಲ್ಲೇ.  ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ತನಕ ದೆಹಲಿಯಲ್ಲೇ ಶಿಕ್ಷಣ ಪಡೆದರು. ಬ್ರಿಟನ್‍ನ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‍ನಲ್ಲಿ ಕಾನೂನು ವಿಷಯದ ಸ್ನಾತಕೋತ್ತರ ಪದವಿ ಪಡೆದರು. ಚುನಾವಣೆಗೆ ಸ್ಪರ್ಧಿಸುತ್ತಿರುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಅವರ ನಿವಾಸವಿದೆ. ಚುನಾವಣೆ ಘೋಷಣೆಯಾದ ಬಳಿಕ ಅವರು ಟಿಕೆಟ್‍ಗಾಗಿ ಲಾಬಿ ನಡೆಸಿರಲಿಲ್ಲ. ತಮಗೆ ಪಕ್ಷ ವಹಿಸಿದ್ದ ಜವಾಬ್ದಾರಿಯನ್ನು ಚಾಚೂ ತಪ್ಪದೇ ನಿರ್ವಹಿಸುತ್ತಾ ಬಂದಿದ್ದರು.

ಇದೇ ಅವಧಿಯಲ್ಲಿ ಪಕ್ಷಕ್ಕೆ ಕಿರಣ್ ಬೇಡಿಯವರ ಪ್ರವೇಶವೂ ಆಗಿತ್ತು. ಅವರ ಪ್ರವೇಶದ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, ಕಿರಣ್ ಬೇಡಿಯವರನ್ನು ಪಕ್ಷದ ಸಾಂಪ್ರದಾಯಿಕ ವಿಧಾನ ಸಭಾ ಕ್ಷೇತ್ರ ಕೃಷ್ಣನಗರದಿಂದ ಕಣಕ್ಕಿಳಿಸುತ್ತಿದ್ದು, ಅವರು ದೆಹಲಿಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಲಿದ್ದಾರೆ ಎಂದಿದ್ದರು. ಈ ಮಾತಿನಲ್ಲಿ ಕೇಜ್ರಿವಾಲ್ ವಿರುದ್ಧ ಹೊಸಬರನ್ನು ಕಣಕ್ಕಿಳಿಸುವ ಮುನ್ಸೂಚನೆ ಕಂಡುಬಂದಿತ್ತು. ಅದರಂತೆ ಕೇಜ್ರಿವಾಲರನ್ನು ಎದುರಿಸುವ ಅವಕಾಶ ನೂಪುರ್ ಪಾಲಾಗಿತ್ತು. ಇದೊಂದು ರೀತಿಯಲ್ಲಿ ಬೋನಸ್ ಎಂದೇ ಹೇಳಬೇಕು. ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿವ ಮೂಲಕ ಮುಂಚೂಣಿಗೆ ಬಂದ ಅವರಿಗೆ ರಾಜಕೀಯ ಭವಿಷ್ಯ ರೂಪಿಸಲು ಸಿಕ್ಕ ಅವಕಾಶವಿದು ಎನ್ನಲಡ್ಡಿ ಇಲ್ಲ.

ಚುನಾವಣಾ ಕಣಕ್ಕೆ ಇಳಿದ ಕೂಡಲೇ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ಆರಂಭಿಸಿರುವ ನೂಪುರ, `ದೆಹಲಿ ನನ್ನ ಊರು, ನಾನಿಲ್ಲಿ ಸ್ಥಳೀಯಳು. ಕೇಜ್ರಿವಾಲ್ ಹೊರಗಿನಿಂದ ಬಂದು ಇಲ್ಲಿ ನೆಲೆಸಿದವರು ಎಂದು ಹೇಳಿಕೆ ನೀಡುವ ಮೂಲಕ ಪ್ರಬಲ ಪೈಪೋಟಿಯ ಸೂಚನೆ ನೀಡಿದ್ದಾರೆ. ಈ ನಡುವೆ, ಕೇಜ್ರಿವಾಲ್ ವಿರುದ್ಧ ಪಕ್ಷ ನಿಮ್ಮನ್ನು ಕಣಕ್ಕಿಳಿಸಿ `ಬಲಿಪಶು’ವನ್ನಾಗಿಸಿದೆಯಲ್ಲವೇ ಎಂಬ ಮಾಧ್ಯಮ ಮಂದಿಯ ಪ್ರಶ್ನೆಗೆ ಅವರು ನೀಡಿದ ಉತ್ತರ ಪುನಃ ಕೇಜ್ರಿವಾಲರನ್ನೇ ಗುರಿಯಾಗಿಸಿತ್ತು. `ಒಂದೊಮ್ಮೆ ನೀವು ನನ್ನ ಬಲಿಪಶು ಎಂದು ಹೇಳುವುದಾದರೆ, ಅದು ನಾನಲ್ಲ. ಕೇಜ್ರಿವಾಲ್ ಅವರು ಚುನಾವಣೆಯಲ್ಲಿ ಗೆದ್ದು ನಂತರ ಆಡಳಿತ ನಡೆಸಲಾರದೆ ಓಡಿ ಹೋದರು. ಜನರನ್ನು ವಂಚಿಸಿ ಓಡುವವರನ್ನ ಹಾಗೆ ಹೇಳಬಹುದೇ ಹೊರತು ನನ್ನನ್ನಲ್ಲ ಎಂದು ತಿರುಗೇಟು ನೀಡಿದ್ದರು.

ಚುನಾವಣಾ ಕಣದಲ್ಲಿ ಮಾತಿನ ವರಸೆಗಳೇನೇ ಇರಬಹುದು. ಕೇಜ್ರಿವಾಲರಗಿಂತ ಹೆಚ್ಚಿನ ರಾಜಕೀಯ ಅನುಭವವೂ ಇರಬಹುದು. ಪಕ್ಷದ ಬೆಂಬಲ ಜತೆಗಿರುವುದರಿಂದ ಆ ಅನುಭವದ ಮೂಲಕ ಗೆಲ್ಲುವ ಸಾಮಥ್ರ್ಯ ನೂಪುರ್ ಅವರಿಗಿದೆಯಾದರೂ, ಮತದಾರ ಪ್ರಭುವಿನ ಮನಗೆದ್ದು ಶಾಸಕರಾಗುವುದು, ಅಧಿಕಾರ ಹಿಡಿಯವುದು ಸುಲಭದ ಮಾತಲ್ಲ.

Leave a Reply

Your email address will not be published. Required fields are marked *