Myself

ಹೆಸರು ಉಮೇಶ್ ಕುಮಾರ್ ಶಿಮ್ಲಡ್ಕ. ವಿದ್ಯಾರ್ಥಿಯೂ ಹೌದು… ಪತ್ರಕರ್ತನೂ ಹೌದು. ಮೂಲತಃ ಕಾಸರಗೋಡು ಜಿಲ್ಲೆಯವನು. 2000ನೇ ಇಸವಿಯಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶ. ಹೊಸದಿಗಂತ ಅದಕ್ಕೆ ಹೆಬ್ಬಾಗಿಲು. ಮುಂದೆ ಉದಯವಾಣಿಯ ಮಣಿಪಾಲ ಆವೃತ್ತಿಯಲ್ಲಿ ಪಿಟಿಐ ಡೆಸ್ಕ್ ನಲ್ಲಿ ಹೆಚ್ಚು ಕಡಿಮೆ ಒಂದು ವರ್ಷ ಕೆಲಸ. ಅಲ್ಲಿಂದ ಚಿತ್ರದುರ್ಗಕ್ಕೆ ಪಯಣ. ಅಲ್ಲಿ ವಿಜಯಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ/ವರದಿಗಾರನಾಗಿ ಕರ್ತವ್ಯ ನಿರ್ವಹಣೆ. ಇದು ಹೆಚ್ಚು ಕಡಿಮೆ ಮೂರು ವರ್ಷ.

ಅಲ್ಲಿಂದ ಬೆಂಗಳೂರು. ಸುವರ್ಣನ್ಯೂಸ್ 24X7 ನ್ಯೂಸ್ ಚಾನೆಲ್‍ನಲ್ಲಿ ವರದಿಗಾರನಾಗಿ ಕೆಲಸ ಶುರು. ಬೆಂಗಳೂರು ಜೀವನಕ್ಕೆ ಮತ್ತೊಮ್ಮೆ ಚಾಲನೆ. ರಾಜಕೀಯ ವರದಿಗಾನಾಗಿ ಹೊಸ ಅಧ್ಯಾಯ ಶುರು. 2008ನೇ ಇಸವಿ ಅದು. ವಿಧಾನಸಭೆ ಚುನಾವಣೆ ಸಮೀಪದಲ್ಲೇ ಇತ್ತು. ಚುನಾವಣಾ ಸಮೀಕ್ಷೆ ನಡೆಸುವ ಹೊಣೆಗಾರಿಕೆ ಹೆಗಲೇರಿತ್ತು. 72 ಕ್ಷೇತ್ರಗಳ ಸಮೀಕ್ಷೆ ನಡೆಸಿತ್ತು ನಮ್ಮ ತಂಡ. 92% ನಿಖರತೆಯೊಂದಿಗೆ ಸಮೀಕ್ಷಾ ಫಲಿತಾಂಶ ಸುವರ್ಣನ್ಯೂಸ್ 24X7 ನ್ಯೂಸ್ ಚಾನೆಲ್ ಪ್ರಕಟಿಸಿ ದೇಶದ ಗಮನಸೆಳೆದಿತ್ತು. ಆ ಸಾಧನೆಯ ಭಾಗವಾದ ಹೆಮ್ಮೆ.

ಮುಂದೆ ಕನ್ನಡ ಸುದ್ದಿವಾಹಿನಿಗಳ ಚರಿತ್ರೆಯಲ್ಲೇ ಮೊದಲ ಸಲ ಸಿಎಂ ಬೀಟ್‍ ಆರಂಭಿಸಿದ ಖ್ಯಾತಿ ಸುವರ್ಣನ್ಯೂಸ್‍ 24X7 ನ್ಯೂಸ್‍ ಚಾನೆಲ್‍ದಾಯಿತು. ಈ ಪ್ರಥಮ ಸಾಧನೆಯ  ಹೊಣೆಗಾರಿಕೆ ಹೆಗಲೇರಿದ್ದು ಕೂಡ ನನ್ನ ಅದೃಷ್ಟ. ಜನವರಿ ತಿಂಗಳಲ್ಲಿ ಮಕರ ಜ್ಯೋತಿ ನೇರ ಪ್ರಸಾರ ಕೊಡುವ ನಿರ್ಧಾರವನ್ನು ಚಾನೆಲ್ ಮ್ಯಾನೇಜ್‍ಮೆಂಟ್ ನಿರ್ಧರಿಸಿತ್ತು. ಆ ವರದಿಗಾರಿಕೆಗಾಗಿ ಶಬರಿಮಲೆಗೆ ತೆರಳುವ ಸದಾವಕಾಶ. ಇದು ಕನ್ನಡ ಸುದ್ದಿವಾಹಿನಿಗಳ ಚರಿತ್ರೆಯಲ್ಲಿ ಪ್ರಥಮ ಪ್ರಯತ್ನವಾಗಿದ್ದು, ಅದರ ಭಾಗವಾದ ಸಂಭ್ರಮ, ಖುಷಿ ಚಿರಸ್ಮರಣೀಯ.