ಅಬುಧಾಬಿಯ ಕ್ರೌನ್‍ಪ್ರಿನ್ಸ್

ಶೇಖ್ ಮೊಹಮ್ಮದ್ ಬಿನ್ ಜಾಯದ್ ಅಲ್ ನಹ್ಯಾನ್
ಶೇಖ್ ಮೊಹಮ್ಮದ್ ಬಿನ್ ಜಾಯದ್ ಅಲ್ ನಹ್ಯಾನ್

ಅಂದು 2016ರ ಫೆ.10. ಮುಸ್ಸಂಜೆ ಸಮಯ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ಅತಿಥಿಯನ್ನು ಬರಮಾಡಿಕೊಳ್ಳುವುದಕ್ಕಾಗಿ ದೆಹಲಿಯ ಪಾಲಂ ಟೆಕ್ನಿಕಲ್ ವಿಮಾನ ನಿಲ್ದಾಣದತ್ತ ಹೋಗಿದ್ದರು. ಸಾಮಾನ್ಯವಾಗಿ ಯಾವ ಅತಿಥಿ ಬಂದರೂ ಅವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಪ್ರಧಾನಮಂತ್ರಿ ಹೋಗುವ ಕ್ರಮವಿಲ್ಲ. ಆದರೆ, ಮೋದಿಯವರು ಸುಖಾಸುಮ್ಮನೆ ಶಿಷ್ಟಾಚಾರ ಮುರಿವವರಲ್ಲ. ಆ ವಿಶೇಷ ಆತಿಥ್ಯ ಸಿಕ್ಕಿದ್ದು ಬೇರಾರಿಗೂ ಅಲ್ಲ, ಅಬುಧಾಬಿಯ ಉತ್ತರಾಧಿಕಾರಿ(ಕ್ರೌನ್‍ಪ್ರಿನ್ಸ್) ಶೇಖ್ ಮೊಹಮ್ಮದ್ ಬಿನ್ ಜಾಯದ್ ಅಲ್ ನಹ್ಯಾನ್ ಅವರಿಗೆ!.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ವರ್ಷ ಆಗಸ್ಟ್‍ನಲ್ಲಿ ಯುಎಇ ಪ್ರವಾಸ ಮಾಡಿದ್ದರು. ಭಾರತದ ಪ್ರಧಾನಮಂತ್ರಿ ಸ್ಥಾನದಲ್ಲಿರುವವರು ಮೂವತ್ತನಾಲ್ಕು ವರ್ಷಗಳ ನಂತರ ಮೊದಲ ಬಾರಿ ಕೈಗೊಂಡ ಪ್ರವಾಸ ಇದಾಗಿತ್ತು. ಅಂದು ಶೇಖ್ ಮೊಹಮ್ಮದ್ ಬಿನ್ ಜಾಯದ್ ಸ್ವತಃ ವಿಮಾನ ನಿಲ್ದಾಣಕ್ಕೆ ಬಂದು ಮೋದಿಯವರನ್ನು ಸ್ವಾಗತಿಸಿದ್ದರು. ಇದಾಗಿ ಆರು ತಿಂಗಳ ಬಳಿಕ ಶೇಖ್ ಭಾರತಕ್ಕೆ ಆಗಮಿಸಿರುವುದು ಉಭಯದೇಶಗಳ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಮಟ್ಟಿಗೆ ಮಹತ್ವದ ಬೆಳವಣಿಗೆ. ಈ ಭೇಟಿ ಅವರ ಮೊದಲ ಭಾರತ ಭೇಟಿ ಎಂಬುದೂ ಗಮನಾರ್ಹ.
ಶೇಖ್ ಮೊಹಮ್ಮದ್ ಬಿನ್ ಜಾಯದ್ ಯುಎಇಯ ಸಶಸ್ತ್ರ ದಳದ ಡೆಪ್ಯುಟಿ ಸುಪ್ರೀಂ ಕಮಾಂಡರ್ ಕೂಡ ಹೌದು. ಅವರು ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ ವೇಳೆ, ಅವರ ಜೊತೆಗೆ ಪ್ರಮುಖ ಸಚಿವರು, ನೂರಕ್ಕೂ ಹೆಚ್ಚು ವಾಣಿಜ್ಯೋದ್ಯಮಿಗಳು ಮತ್ತು ವಿವಿಧ ಉನ್ನತ ಕಂಪನಿಗಳ ಸಿಇಒಗಳ ನಿಯೋಗವನ್ನೂ ಕರೆತಂದಿದ್ದರು. ವಾಣಿಜ್ಯ ಕ್ಷೇತ್ರ, ಭದ್ರತಾ ಸಹಕಾರ, ಭಯೋತ್ಪಾದನೆ ನಿಗ್ರಹ, ಅಣುಶಕ್ತಿ, ಇಂಧನ ಉತ್ಪಾದನೆ, ಬಾಹ್ಯಾಕಾಶ ಸೇರಿ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ 16 ಒಪ್ಪಂದಗಳು ಏರ್ಪಟ್ಟವು. ಇದೇ ವೇಳೆ, ಮಂಗಳೂರಿನಲ್ಲಿ ಯುಎಇಯ 7.5 ಲಕ್ಷ ಟನ್ ಕಚ್ಚಾ ತೈಲ ಸಂಗ್ರಹಕ್ಕೆ ಅನುಕೂಲ ಕಲ್ಪಿಸಿದರೆ, ಅದರ ಮೂರನೇ ಎರಡರಷ್ಟನ್ನು ಉಚಿತವಾಗಿ ಭಾರತ ಬಳಸಿಕೊಳ್ಳಬಹುದೆಂಬ ಆಫರನ್ನು ಕೂಡ ಶೇಖ್ ನೀಡಿದರು. ಭಾರತದ ಇಂಧನ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ 80,000 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಯುಎಇ ಆಸಕ್ತಿ ತೋರಿದೆ.
ಉಗ್ರವಾದದ ಬಗ್ಗೆ ಸ್ಪಷ್ಟ ನಿಲುವು ಹೊಂದಿರುವ ಅವರು, `ಧರ್ಮದ ಹೆಸರಿನಲ್ಲಿ ಭಯೋತ್ಪಾದನಾ ನೀತಿಯನ್ನು ಸಮರ್ಥಿಸಿಕೊಳ್ಳುತ್ತ ಇತರೆ ರಾಷ್ಟ್ರಗಳ ವಿರುದ್ಧ ಉಗ್ರತ್ವವನ್ನು ಬೆಂಬಲಿಸುವುದು, ಪ್ರಾಯೋಜಿಸುವುದು ಸರ್ವಾಥಾ ಸಲ್ಲದು. ಉಗ್ರ ಚಟುವಟಿಕೆಯನ್ನು ರಾಜ್ಯನೀತಿಯನ್ನಾಗಿಯೂ ಮಾಡಕೂಡದು’ ಎಂದು ಭಾರತ ಪ್ರವಾಸದ ವೇಳೆ ಜಂಟಿ ಹೇಳಿಕೆ ನೀಡಿದ್ದರು. ಅವರು ರಾಜಕೀಯ ವಿಷಯ ತಜ್ಞರಷ್ಟೇ ಅಲ್ಲ, ಯುದ್ಧ ತಂತ್ರ, ಸೇನಾ ವಿಷಯ ನಿಪುಣರೂ ಹೌದು. ಹೀಗಾಗಿಯೇ, ಪಾಕಿಸ್ತಾನ ಹಾಗೂ ಭಾರತದ ಜತೆಗೆ ಬಿಕ್ಕಟ್ಟು ಏರ್ಪಡದಂತಹ ಸಂಬಂಧವನ್ನು ಯುಎಇ ನಿರ್ವಹಿಸುತ್ತಿದೆ.
ಈ ಎಲ್ಲ ವಿಷಯಗಳಿಂದಾಗಿಯೇ ಕಳೆದ ವಾರ ಶೇಖ್ ನಾಡಿನ ಗಮನಸೆಳೆದಿದ್ದರು. ಇದು ಅವರ ಪೂರ್ವಾಪರ ತಿಳಿದುಕೊಳ್ಳುವುದಕ್ಕೆ ಒಂದು ನಿಮಿತ್ತವಾಯಿತು. ಶೇಖ್ ಮೊಹಮ್ಮದ್ ಬಿನ್ ಜಾಯದ್ ಅಲ್ ನಹ್ಯಾನ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಪ್ರಥಮ ಅಧ್ಯಕ್ಷ, ರಾಷ್ಟ್ರಪಿತ ದಿವಂಗತ ಶೇಖ್ ಜಾಯದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಮೂರನೆ ಪುತ್ರ. ಶೇಖಾ ಫಾತಿಮಾ ಬಿನ್ಟ್ ಮುಬಾರಕ್ ತಾಯಿ. 1961ರ ಮಾರ್ಚ್ 11 ಅವರ ಜನ್ಮದಿನ. ಶೇಖ್ ಮೊಹಮ್ಮದ್ ಬಿನ್ ಜಾಯದ್ ಬಿನ್ ಸುಲ್ತಾನ್ ಬಿನ್ ಜಾಯದ್ ಬಿನ್ ಖಲೀಫಾ ಬಿನ್ ಶಖ್ಬೂತ್ ಬಿನ್ ತಾಯೆಬ್ ಬಿನ್ ಇಸ್ಸಾ ಬಿನ್ ನಹ್ಯಾನ್ ಬಿನ್ ಫಲಾಹ್ ಬಿನ್ ಯಾಸ್ ಎಂಬುದು ಅವರ ಪೂರ್ಣ ಹೆಸರು. ಅಲ್ ಐನ್ ಮತ್ತು ಅಬುಧಾಬಿಗಳಲ್ಲೇ ಪ್ರಾಥಮಿಕ ಶಿಕ್ಷಣ. ಹದಿನೆಂಟು ವರ್ಷ ಪೂರ್ತಿಯಾದ ಬಳಿಕ 1979ರಲ್ಲಿ ಅವರು ಪ್ರತಿಷ್ಠಿತ ರಾಯಲ್ ಮಿಲಿಟರಿ ಅಕಾಡೆಮಿ ಸ್ಯಾಂಧ್ರಸ್ಟ್(ಬ್ರಿಟನ್)ಗೆ ಸೇರ್ಪಡೆಗೊಂಡು, ಅಲ್ಲಿ ಸೇನಾ ತರಬೇತಿ ಪಡೆದರು. ಪದವಿ ಪಡೆದು ಯುಎಇಗೆ ಮರಳಿದ ಅವರು, ಶಾರ್ಜಾದ ಆಫೀಸರ್ಸ್ ಟ್ರೇನಿಂಗ್ ಕೋರ್ಸ್‍ಗೆ ಸೇರಿದರು. ಮುಂದೆ, ತಂದೆಯ ಅಣತಿಯಂತೆ ಸೇನೆ ಸೇರಿ, ಸೇನೆಯ ಒಟ್ಟಾರೆ ಸುಧಾರಣೆಗೆ ಕ್ರಮ ತೆಗೆದುಕೊಂಡರು. ಸೇನೆಯ ವ್ಯೂಹಾತ್ಮಕ ಯೋಜನೆ, ತರಬೇತಿ, ಸಂಘಟನಾ ರಚನೆಗಳ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇವಲ್ಲದೆ, ಯುಎಇಯ ರಾಜಕೀಯ ಹಾಗೂ ಆರ್ಥಿಕ ಅಭಿವೃದ್ಧಿ ವಿಷಯದಲ್ಲಿ ಪ್ರಮುಖ ಹೊಣೆಗಾರಿಕೆಗಳನ್ನೂ ನಿಭಾಯಿಸಿದರು. ಅಬುಧಾಬಿಯ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಿದ ಅವರು, ಶಿಕ್ಷಣದ ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಬುಧಾಬಿ ಶಿಕ್ಷಣ ಸಮಿತಿಯ ಮುಖ್ಯಸ್ಥರಾಗಿ ನೇಮಕವಾದ ಬಳಿಕ ಅವರು, ವಿಶ್ವದರ್ಜೆ ಶಿಕ್ಷಣ, ಸಂಶೋಧನಾ ಸಂಸ್ಥೆಗಳ ಜತೆಗೆ ಪಾಲುದಾರಿಕೆ ಹೊಂದಲು ಅವಿಶ್ರಾಂತವಾಗಿ ದುಡಿದರು. ಪರಿಣಾಮ ಅವರ ಕೊಡುಗೆಗಳು ಜಗತ್ತಿನ ಗಮನಸೆಳೆದವು.
ನವೆಂಬರ್ 2004ರಿಂದೀಚೆಗೆ ಅಬುಧಾಬಿಯ ಉತ್ತರಾಧಿಕಾರಿ, 2004ರ ಡಿಸೆಂಬರ್‍ನಿಂದೀಚೆಗೆ ಕಾರ್ಯಕಾರಿ ಸಮಿತಿಯ ಅಧ್ಯಕ್ಷ, 2005ರ ಜನವರಿಯಿಂದೀಚೆಗೆ ಯುಎಇಯ ಸಶಸ್ತ್ರ ಪಡೆಯ ಡೆಪ್ಯುಟಿ ಸುಪ್ರೀಂ ಕಮಾಂಡರ್ ಆಗಿ, 2005ರ ಸೆಪ್ಟೆಂಬರ್‍ನಿಂದ ಅಬುಧಾಬಿ ಶಿಕ್ಷಣ ಸಮಿತಿಯ ಮುಖ್ಯಸ್ಥರಾಗಿ, 2002ರಿಂದ ಮುಬಾಡಲ ಡೆವಲಪ್‍ಮೆಂಟ್ ಕಂಪನಿಯ ಮುಖ್ಯಸ್ಥರಾಗಿ, 1992ರಿಂದ ಯುಎಇ ಆಫ್‍ಸೆಟ್ ಪ್ರೋಗ್ರಾಂ ಬ್ಯೂರೋ ಮುಖ್ಯಸ್ಥರಾಗಿ ಶೇಖ್ ಮೊಹಮ್ಮದ್ ಕಾರ್ಯನಿರ್ವಹಿಸುತ್ತಿದ್ದಾರೆ.
ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ, 1981ರಲ್ಲಿ ಶೇಖಾ ಸಲಾಮ ಬಿನ್ಟ್ ಹಮ್ದಾನ್ ಅಲ್ ನಹ್ಯಾನ್ ಅವರನ್ನು ವಿವಾಹವಾದರು. ನಾಲ್ವರು ಪುತ್ರರು ಹಾಗೂ ಐವರು ಪುತ್ರಿಯರನ್ನೊಳಗೊಂಡ ಸುಖಿ ಸಂಸಾರ ಅವರದ್ದು.
ಇವೆಲ್ಲದರ ಹೊರತಾಗಿ ಶೇಖ್ ಮೊಹಮ್ಮದ್ ಅವರಿಗೆ ಬೇಟೆ ಅದರಲ್ಲೂ ವಿಶೇಷವಾಗಿ ಡೇಗೆಬೇಟೆ ಬಗ್ಗೆ ವಿಶೇಷ ಆಸಕ್ತಿ. ಡೇಗೆಬೇಟೆ ಅಂದರೆ ಗಿಡುಗಗಳ ಸಹಾಯದಿಂದ ಹಕ್ಕಿ ಬೇಟೆಯಾಡುವ ಒಂದು ಆಟ. ಈ ರೀತಿ ಬೇಟೆಯಾಡುವ ಹವ್ಯಾಸ ಅವರಿಗೆ ತಂದೆಯಿಂದ ಬಳುವಳಿಯಾಗಿ ಬಂದದ್ದು. ಈ ರೀತಿ ಹವ್ಯಾಸ ಹೊಂದಿದ್ದ ಮಾತ್ರಕ್ಕೆ ಅವರು ಭಾವಶೂನ್ಯರು ಎಂದು ಭಾವಿಸಬೇಕಾಗಿಲ್ಲ. ಸ್ಥಳೀಯ ಜಾನಪದ ಕವಿತೆಗಳ ಬಗ್ಗೆ ಅವರಿಗೆ ಎಲ್ಲಿಲ್ಲದ ಪ್ರೀತಿ. ನಬತಿ ಶೈಲಿಯ ಕವಿತೆಗಳನ್ನು ಅವರು ಹೆಚ್ಚಾಗಿ ಇಷ್ಟಪಡುತ್ತಾರೆ. ಅಷ್ಟೇ ಅಲ್ಲ, ಕವಿತಾ ರಚನೆ ಮತ್ತು ಇತರೆ ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸುತ್ತಾರೆ. ಇದಲ್ಲದೆ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾಯೋಜಿಸುವುದಷ್ಟೇ ಅಲ್ಲ, ಸ್ವತಃ ಅದರಲ್ಲಿ ಪಾಲ್ಗೊಳ್ಳುತ್ತಾರೆ ಕೂಡ. ಜನರೊಂದಿಗೆ ಬೆರೆತು ಸಾಮುದಾಯಿಕ ಯೋಜನೆಗಳನ್ನು ಹೊಸ ಹೊಸ ಸಾಧ್ಯತೆಗಳನ್ನು ಅರಸುವುದಷ್ಟೇ ಅಲ್ಲ, ಅಂತಹ ಪ್ರಯತ್ನಗಳಿಗೆ ಉತ್ತೇಜನವನ್ನೂ ಕೊಡುತ್ತಿರುವ ಕಾರಣ ಜನಮನ್ನಣೆ, ಜನಪ್ರೀತಿಯನ್ನೂ ಅವರು ಗಳಿಸಿದ್ದಾರೆ. ಕ್ರೀಡಾ ಚಟುವಟಿಕೆಗಳಿಗೂ ಉತ್ತಮ ಪೆÇ್ರೀತ್ಸಾಹ ನೀಡುತ್ತಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಅವರನ್ನು ಜಾಗತಿಕ ಮಟ್ಟದಲ್ಲೂ ಗುರುತಿಸುವಂತಾಗಿದೆ.

Leave a Reply

Your email address will not be published. Required fields are marked *