ಅಚ್ಚರಿಯ ಆಗರ ಆಮೀರ್..

“Life is a race … if you don’t run fast … you will be like a broken undaa….’ ಹೌದು.. ನೀವಂದುಕೊಂಡಂತೆ ಇದು `ಥ್ರೀ ಇಡಿಯಟ್ಸ್’ ಸಿನಿಮಾದ ಸಂಭಾಷಣಾ ಸಾಲು. ಬಹುಶಃ ಬಾಲಿವುಡ್‍ನ ದೈತ್ಯ ಪ್ರತಿಭೆ ಆಮಿರ್ ಖಾನ್ ಬಾಲ್ಯದಲ್ಲೇ ಈ ವಾಕ್ಯವನ್ನು ಧ್ಯೇಯವನ್ನಾಗಿ ಸ್ವೀಕರಿಸಿದ್ದರೇನೋ.. ಅವರ ಜೀವನದ ಸಾಧನೆಗಳನ್ನು ಗಮನಿಸಿದರೆ ಹಾಗನಿಸುವುದು ಸಹಜ. ಸದಾ ಹೊಸತನ, ಪ್ರಯೋಗಶೀಲತೆಗಳಿಂದಲೇ ಹೆಸರುವಾಸಿಯಾಗಿರುವ ಆಮಿರ್ ಬಾಲಿವುಡ್‍ನಲ್ಲಿ ದಶಕಗಳಿಂದ ಚಾಲ್ತಿಯಲ್ಲಿರುವ `ಕಪ್ಪು ಕುದುರೆ’!.
amir-khanಅಂದ ಹಾಗೆ, ಆಮಿರ್ ಖಾನರ `ಪಿಕೆ’ ಸಿನಿಮಾ ಜಗತ್ತಿನಾದ್ಯಂತ ಮುಂದಿನ ಶುಕ್ರವಾರ(ಡಿ.19)ದಂದು ತೆರೆ ಕಾಣಲಿದ್ದು, ಅದಕ್ಕೂ ಮೊದಲೇ ಬಹಳ ಕುತೂಹಲ ಮೂಡಿಸಿದೆ. ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಸೇರಿದಂತೆ ಜಗತ್ತಿನ ಹಲವು ಖ್ಯಾತ ನಾಮರು ಈ ಸಿನಿಮಾವನ್ನು ವೀಕ್ಷಿಸಬೇಕೆಂಬ ಕುತೂಹಲವನ್ನೂ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಲ್ಲೂ ಇಂತಹ ಕುತೂಹಲ ನಿರೀಕ್ಷೆ ಯಾಕೆ ಎಂದರೆ, ಆಮಿರ್ ಏನೇ ಮಾಡಿದರೂ ಅದರಲ್ಲಿ ಪರಿಪೂರ್ಣತೆ ಕಾಣಬಯಸುತ್ತಾರೆ. ಪ್ರಯೋಗಶೀಲತೆ, ಸಾಮಾಜಿಕ ಕಳಕಳಿಯ ಸಂದೇಶಗಳನ್ನೂ ಅವರ ಸಿನಿಮಾದಲ್ಲಿ ಕಾಣಬಹುದು ಎನ್ನುತ್ತಾರೆ ಅಭಿಮಾನಿಗಳು.
`ಸತ್ಯಮೇವ ಜಯತೇ’ ಎಂಬ ಟೆಲಿ ಸೀರಿಯಲ್ ಮೂಲಕ ಸಾಮಾಜಿಕ ಕಳಕಳಿಯ ಸಂದೇಶವನ್ನು ಸಾರಿದ್ದ ಆಮಿರ್, ನಾಲ್ಕು ದಿನಗಳ ಹಿಂದಷ್ಟೇ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ನಮ್ಮ ದೇಶದ ಸಾರಿಗೆ ಸಚಿವಾಲಯದ ರಾಯಭಾರಿಯಾಗಿ ಸಹಿ ಹಾಕಿದ್ದಾಗಿ ಸುದ್ದಿಯಾಗಿದೆ. ತನ್ಮೂಲಕ ಆಮಿರ್, ತಾನು ಬಾಲಿವುಡ್‍ನ ಇತರೆ ನಟರಂತಲ್ಲ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಸಾಬೀತು ಮಾಡುತ್ತಾ ಮುನ್ನಡೆಯುತ್ತಿದ್ದಾರೆ.
ಇಂಥ ಆಮೀರ್ ಹುಟ್ಟಿದ್ದು 1965ರ ಮಾರ್ಚ್ 14ರಂದು. ಮುಂಬೈನ ಸಿನಿಮಾ ನಿರ್ಮಾಪಕ ತಾಹಿರ್ ಹುಸೈನ್ ಹಾಗೂ ಜೀóನತ್ ಹುಸೈನ್ ಅವರ ಅಪ್ಪ, ಅಮ್ಮ. ಇವರ ಅನೇಕ ಬಂಧುಗಳು ಬಾಲಿವುಡ್ ಸಿನಿ ಇಂಡಸ್ಟ್ರಿಯಲ್ಲಿದ್ದಾರೆ. ಹೀಗೆ ಸಿನಿಮಾ ಹಿನ್ನೆಲೆಯಲ್ಲಿ ಬೆಳೆದ ಆಮಿರ್‍ಗೆ ಅಪ್ಪ ಅಮ್ಮ ಬಾಲ್ಯದಲ್ಲಿ ಇಟ್ಟ ಹೆಸರು ಮೊಹಮ್ಮದ್ ಆಮಿರ್ ಹುಸೈನ್ ಖಾನ್. 1973ರಲ್ಲಿ ನಾಸಿರ್‍ಹುಸೈನ್ ನಿರ್ದೇಶಿಸಿದ್ದ `ಯಾದೋಂ ಕಿ ಬಾರಾತ್’ ಸಿನಿಮಾದ ಹಾಡಿನ ಮೂಲಕ ನಟನಾ ರಂಗ ಪ್ರವೇಶಿಸಿದ್ದರು ಆಮಿರ್. ಆಗ ಅವರ ವಯಸ್ಸು 8. ಅದರ ಮರುವರ್ಷವೇ ಮಧೋಷ್ ಎಂಬ ಸಿನಿಮಾದಲ್ಲಿ ಮಹೇಂದ್ರ ಸಾಧು ಅವರು ನಿಭಾಯಿಸಿದ್ದ ಪಾತ್ರದ, ಬಾಲಕನ ಪಾತ್ರವನ್ನು ಆಮಿರ್ ನಿಭಾಯಿಸಿದ್ದರು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವೀಪೂರ್ವ ಶಿಕ್ಷಣದ ತನಕ ಮುಂಬೈನಲ್ಲೇ ವ್ಯಾಸಂಗ ಮಾಡಿದ ಆಮಿರ್ ಬಾಲ್ಯ ಸಂಕಷ್ಟಗಳಿಂದ ಕೂಡಿತ್ತು. ಸಿನಿಮಾಗಳಿಗೆ ಹಾಕಿದ ಹಣ ವಾಪಸ್ ಬರದೇ ಇದ್ದುದರಿಂದಾಗಿ ಅಪ್ಪ ಸಾಲದ ಸುಳಿಗೆ ಸಿಲುಕಿದ್ದರು. ಹೀಗಾಗಿ ಶಿಕ್ಷಣವೂ ಪೂರ್ಣಗೊಳ್ಳಲಿಲ್ಲ.
ಹೈಸ್ಕೂಲ್ ಶಿಕ್ಷಣ ಮುಗಿಯುತ್ತಿದ್ದಂತೆ ಪದವೀಪೂರ್ವ ಶಿಕ್ಷಣ ವ್ಯಾಸಂಗಕ್ಕೆ ಹೋಗದೆ ಪೋಷಕರ ವಿರೋಧ ಕಟ್ಟಿಕೊಂಡರು. ಇದೇ ಅವಧಿಯಲ್ಲಿ ಅವರು ನಾಸಿರ್ ಹುಸೈನ್ ಅವರ ಮನ್ಜಿಲ್ ಮನ್ಜಿಲ್(1984) ಮತ್ತು ಝಬರ್‍ದಸ್ತ್(1985) ಎಂಬ ಎರಡು ಹಿಂದಿ ಸಿನಿಮಾಗಳ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಎಷ್ಟೇ ಸಂಕಷ್ಟಗಳು ಎದುರಾದರೂ ಸಿನಿಮಾ ಕ್ಷೇತ್ರದ ನಂಟು ಅವರ ಕೈಬಿಡಲಿಲ್ಲ. ಶಾಲಾ ಗೆಳೆಯ ಆದಿತ್ಯ ಭಟ್ಟಾಚಾರ್ಯ ನಿರ್ದೇಶಿಸಿದ `ಪರನೋಯಿಯಾ’ ಎಂಬ 40 ನಿಮಿಷದ ಸಿನಿಮಾ ತಯಾರಿಕೆಯಲ್ಲೂ ಹದಿನಾರು ವರ್ಷದ ಆಮಿರ್ ಪಾಲ್ಗೊಂಡಿದ್ದರು. ಮನೆಯವರ ವಿರೋಧದ ನಡುವೆಯೇ ಆಮಿರ್ ಈ ಸಿನಿಮಾದಲ್ಲಿ ಮುಖ್ಯಪಾತ್ರಧಾರಿಯಾಗಿದ್ದರು. ಅವರ ಪಾಲಿಗೆ ಅದೊಂದು ಪ್ರಯೋಗವಾಗಿತ್ತು. ಹೀಗೆ ಪ್ರಾಯೋಗಿಕವಾಗಿ ಆರಂಭವಾದ ಅವರ ನಟನೆ, ನಿದೇರ್ಶನದ ಪಯಣ ರಂಗಭೂಮಿ ಕಡೆಗೂ ಕೊಂಡೊಯ್ಯಿತು. ಅವಂತರ್ ಎಂಬ ನಾಟಕ ತಂಡಕ್ಕೆ ಸೇರಿದ ಅವರು, ಒಂದೂವರೆ ವರ್ಷ ಕಾಲ ಹಿನ್ನೆಲೆಯಲ್ಲಿದ್ದು ಕೆಲಸ ಮಾಡಿದರು. ಕೊನೆಗೆ ಕೇಸರಬಿನಾ ಎಂಬ ಗುಜರಾತಿ ನಾಟಕದಲ್ಲಿ ಸಣ್ಣ ಪಾತ್ರದ ಮೂಲಕ ರಂಗಪ್ರವೇಶ ಮಾಡಿದ ಆಮಿರ್, ಎರಡು ಹಿಂದಿ, ಒಂದು ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿದರು.
ಆದರೂ, 1988ರಲ್ಲಿ `ಖಯಾಮತ್ ಸೇ ಖಯಾಮತ್ ತಕ್’ ಸಿನಿಮಾ ಮೂಲಕ ನಾಯಕನಟನಾಗಿ ಬಾಲಿವುಡ್ ಅಂಗಳದಲ್ಲಿ ಮಿಂಚಿದರು. ನಾಸಿರ್ ಹುಸೈನ್ ಪುತ್ರ ಮನ್ಸೂರ್ ಖಾನ್ ಇದರ ನಿರ್ದೇಶಕ. ಆಮಿರ್ ನಟನಾ ಸಾಮಥ್ರ್ಯ ಅರಿತಿದ್ದ ಮನ್ಸೂರ್ ಈ ಚಿತ್ರದಲ್ಲಿ ಅವರಿಗೆ ಅವಕಾಶ ನೀಡಿದ್ದರು. ಸುಂದರ ಪ್ರೇಮಕಥೆಯ ಹಂದರವಿದ್ದ ಆ ಸಿನಿಮಾದಲ್ಲಿ ಜೂಹಿ ಚಾವ್ಲಾ ನಾಯಕಿಯಾಗಿದ್ದರು. ಅದು ಸೂಪರ್ ಹಿಟ್ ಆಗಿತ್ತು. ಅಲ್ಲಿ ಅವರ ನಟನಾ ಚಾತುರ್ಯ ವ್ಯಾಪಕ ಪ್ರಶಂಸೆಗೆ ಒಳಗಾಯಿತು.
ಈ ನಡುವೆ ಅವರು ದಾಂಪತ್ಯ ಜೀವನಕ್ಕೂ ಕಾಲಿರಿಸಿದರು. ಖಯಾಮತ್ ಸೇ ಖಯಾಮತ್ ತಕ್ ಸಿನಿಮಾದಲ್ಲಿ ಸಣ್ಣ ಪಾತ್ರವೊಂದನ್ನು ಮಾಡಿದ್ದ ರೀನಾ ದತ್ತ ಎಂಬ ನಟಿಯನ್ನು ಪ್ರೀತಿಸಿ 1986ರ ಏಪ್ರಿಲ್ 18ರಂದು ಮದುವೆಯಾದ ಆಮಿರ್, ಅವರಿಂದ ಜುನೈದ್ ಎಂಬ ಮಗ, ಇರಾ ಎಂಬ ಪುತ್ರಿಯನ್ನು ಪಡೆದರು. ಸುಮಾರು ಹದಿನಾರು ವರ್ಷಗಳ ಕಾಲ ಇವರ ದಾಂಪತ್ಯ ಸುಗಮವಾಗಿ ಸಾಗಿತ್ತು. 2002ರಲ್ಲಿ ವಿಚ್ಛೇದನ ಪಡೆದುಕೊಂಡರು. ಮಕ್ಕಳಿಬ್ಬರೂ ತಾಯಿ ರೀನಾ ಜತೆ ಹೋದರು. ಇದಾಗಿ 2005ರ ಡಿಸೆಂಬರ್ 28ರಂದು ಲಗಾನ್ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿದ್ದ ಕಿರಣ್ ರಾವ್‍ರನ್ನು ಆಮಿರ್ ವಿವಾಹವಾದರು. ಬಾಡಿಗೆ ತಾಯಿ ಮೂಲಕ ಆಜಾದ್ ರಾವ್ ಎಂಬ ಮಗನನ್ನು ಪಡೆದುಕೊಂಡರು.
2000ದ ವರೆಗೆ ನಟನೆಗಷ್ಟೇ ತಮ್ಮನ್ನು ಸೀಮಿತಗೊಳಿಸಿದ್ದ ಆಮಿರ್, ಆವಾರ ನಂಬರ್, ತುಮ್ ಮೇರೆ ಹೋ, ದೀವಾನಾ ಮುಜ್ ಸಾ ನಹೀಂ, ಜವಾನಿ ಜಿಂದಾಬಾದ್, ದಿಲ್, ದಿಲ್ ಹೈ ಕೆ ಮಾನ್ತಾ ನಹೀಂ, ಜೋ ಜೀತಾ ವಹೀ ಸಿಖಂದರ್, ಹಮ್ ಹೈ ರಹೀ ಪ್ಯಾರ್ ಕೇ, ಅಂದಾಜ್ ಅಪ್ನಾ ಅಪ್ನಾ, ರಾಜಾ ಹಿಂದೂಸ್ಥಾನಿ, ಗುಲಾಮ್, ಸರ್ಫರೋಜ್ ಮುಂತಾಗಿ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದರು.
2001ರಲ್ಲಿ ತಮ್ಮದೇ ಹೆಸರಿನ ಪ್ರೊಡಕ್ಷನ್ ಹೌಸ್ ಆರಂಭಿಸಿದ ಅವರು, `ಲಗಾನ್’ ಸಿನಿಮಾವನ್ನು ಜನರ ಮುಂದಿರಿಸಿದರು. ಅಶುತೋಷ್‍ಗೌರಿಕರ್ ನಿರ್ದೇಶನದ ಈ ಸಿನಿಮಾದಲ್ಲಿ ಆಮಿರ್ ನಾಯಕನಟರಾಗಿದ್ದರು. ಈ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ವಿಭಿನ್ನ ಕಥಾವಸ್ತು, ನಿರೂಪಣೆ ಹಾಗೂ ಆಮಿರ್ ನಟನೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು.
2007ರಲ್ಲಿ `ತಾರೇ ಜಮೀನ್ ಪರ್’ ಎಂಬ ಚಿತ್ರವನ್ನು ನಿರ್ದೇಶಿಸಿ, ನಟಿಸಿದ ಆಮಿರ್ ಅದರ ನಿರ್ಮಾಣದ ಹೊಣೆಯನ್ನೂ ತಾವೇ ಹೊತ್ತುಕೊಂಡಿದ್ದರು. ಇದು ಕೂಡಾ ವಿಭಿನ್ನ ಕಥಾಹಂದರ ಸಿನಿಮಾವಾಗಿದ್ದು, ಮಕ್ಕಳ ಬೆಳವಣಿಗೆ ಹಾಗೂ ಅವರ ಆಸಕ್ತಿಯನ್ನು ಪೋಷಕರು ಮತ್ತು ಶಿಕ್ಷಕರು ಹೇಗೆ ಗುರುತಿಸಿ ಬೆಳೆಸಬೇಕೆಂಬುದನ್ನು ತಿಳಿಸಿತ್ತು.
2012ರಲ್ಲಿ ಸಾಮಾಜಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಜಾಗೃತಿ ಮೂಡಿಸುವಂಥ ಟಿವಿ ಕಾರ್ಯಕ್ರಮವೊಂದನ್ನು ಆಮಿರ್ ಜನರ ಮುಂದಿರಿಸಿದರು. `ಸತ್ಯಮೇವ ಜಯತೇ’ ಎಂಬ ಹೆಸರಿನ ಆ ಸರಣಿ ಕಾರ್ಯಕ್ರಮ ಇಡೀ ದೇಶದಲ್ಲಿ ಸಂಚಲನ ಉಂಟುಮಾಡಿದ್ದಲ್ಲದೇ, ಹೆಣ್ಣು ಭ್ರೂಣ ಹತ್ಯೆ ಕುರಿತು ವ್ಯಾಪಕ ಜಾಗೃತಿ ಮೂಡಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದು ಸುದ್ದಿಯಾಗಿತ್ತು. ಪ್ರಸಾರಕ್ಕೂ ಮೊದಲೇ ವಿವಾದ ಎಬ್ಬಿಸಿದ್ದ ಕಾಯಕ್ರಮ ಇದಾಗಿದ್ದು, ಇದಕ್ಕೆ ಟಿಆರ್‍ಪಿ ಸಿಗಲ್ಲ ಎಂದೇ ಹಲವರು ವಾದಿಸಿದ್ದರು. ಪ್ರತಿಯೊಂದರಲ್ಲೂ ಪರಿಪೂರ್ಣತೆಯನ್ನು ಪ್ರತಿಪಾದಿಸುವ ಆಮಿರ್, ಇದನ್ನು ಸವಾಲಾಗಿ ತೆಗೆದುಕೊಂಡು ಅತಿ ಹೆಚ್ಚು ಟಿಆರ್‍ಪಿ ಈ ಕಾರ್ಯಕ್ರಮಕ್ಕೆ ಬರುವಂತೆ ನೋಡಿಕೊಂಡರು. ಅಷ್ಟೇ ಅಲ್ಲ, ಸಾಮಾಜಿಕವಾಗಿಯೂ ತಮ್ಮ ಕಳಕಳಿ ಏನು ಎಂಬುದನ್ನು ನಿರೂಪಿಸಿದರು. ಹೀಗೆ ಸದಾ ಪ್ರಯೋಗಶೀಲತೆ, ಪರಿಪೂರ್ಣತೆ, ತೊಡಗಿಸಿಕೊಂಡ ಕೆಲಸದಲ್ಲಿ ಬದ್ಧತೆ ತೋರುವ ಹಾಗೂ ಸಿನಿಮಾ, ಟೆಲಿವಿಷನ್ ಹಾಗೂ ಸಾಮಾಜಿಕವಾಗಿಯೂ ಪ್ರತಿ ಕೆಲಸದಲ್ಲೂ ಕುತೂಹಲ, ನಿರೀಕ್ಷೆಗಳನ್ನು ಹುಟ್ಟಿಸುವ ಆಮಿರ್ ಬಾಲಿವುಡ್‍ನ ಇತರೆ ನಟರಿಗಿಂತ ಭಿನ್ನವಾಗಿ ಗೋಚರಿಸುತ್ತಾರೆ, ಮೆಚ್ಚುಗೆಗೂ ಪಾತ್ರರಾಗುತ್ತಾರೆ.

Leave a Reply

Your email address will not be published. Required fields are marked *