ಅರವತ್ತಾರರಲ್ಲೂ ಹಕ್ಕಿಯಂತೆ ಹಾರುತ್ತಿರುವ ಮಚೋವಾ !

ವಿಜಯವಾಣಿ ಪತ್ರಿಕೆಯ ಫೆ.೨೨ರ ಸಂಚಿಕೆಯಲ್ಲಿ ಪ್ರಕಟವಾದ ವ್ಯಕ್ತಿವಿಶೇಷ
ವಿಜಯವಾಣಿ ಪತ್ರಿಕೆಯ ಫೆ.೨೨ರ ಸಂಚಿಕೆಯಲ್ಲಿ ಪ್ರಕಟವಾದ ವ್ಯಕ್ತಿವಿಶೇಷ

`ನಾನು 15 ವರ್ಷದವಳಾಗಿದ್ದಾಗ ಮೊದಲ ಬಾರಿ ಪ್ಯಾರಾಚೂಟ್‌ ಮೂಲಕ ಸ್ಕೈಡೈವ್ ಮಾಡಿದೆ. ಪ್ಯಾರಾಚೂಟ್ ಮೂಲಕ ಕೆಳಕ್ಕೆ ಹಾರುವುದು ನನ್ನ ಕನಸಾಗಿರಲಿಲ್ಲ. ನಾನು ವಿಮಾನವನ್ನು ನಿಯಂತ್ರಿಸಿ, ಹಕ್ಕಿಯಂತೆ ಹಾರಾಡಬಯಸಿದ್ದೆ. ನನಗೆ 22 ವರ್ಷ ಆದಾಗ ಮೊದಲ ಬಾರಿ ವಿಮಾನ ಚಲಾಯಿಸಿದೆ. 1971ರಿಂದೀಚೆಗೆ ಇಲ್ಲಿವರೆಗೆ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇನೆ ಕೂಡಾ!’.

ಇದಾರ ಮಾತಪ್ಪಾ ಎಂದು ಹುಬ್ಬೇರಿಸಬೇಡಿ.. ರೆಡ್‍ಬುಲ್‍ನ ಏರೋಬ್ಯಾಟಿಕ್ಸ್ (ವೈಮಾನಿಕ ಸಾಹಸ ಪ್ರದರ್ಶನ) ತಂಡದ ನಾಯಕಿ ರಾಡ್ಕಾ ಮಚೋವಾ ಅವರ ಮಾತುಗಳಿವು. ಜಗತ್ತಿನ ಬೆರಳೆಣಿಕೆ ಸಾಹಸಿ ಮಹಿಳಾ ಪೈಲಟ್‍ಗಳ ಪೈಕಿ ಇವರೂ ಒಬ್ಬರು. ಬೆಂಗಳೂರಿನಲ್ಲಿ ಸದ್ಯ ನಡೆಯುತ್ತಿರುವ ಹತ್ತನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ(ಫೆ.18-22,2015)ದ ವೇಳೆ ಈ ಬಾರಿ ಜಗತ್ತಿನ ಗಮನ ಸೆಳೆದವರು.

ಕಳೆದ ವರ್ಷದಂತೆ ಅವರು ಈ ಬಾರಿಯೂ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ, ರೆಡ್‍ಬುಲ್ ವಿಮಾನಗಳ ತಂಡವನ್ನು ಮುನ್ನಡೆಸಿದ್ದರು. ಫೆ.19ರಂದು ಆಗಸದಲ್ಲಿ ಏರೋಬ್ಯಾಟಿಕ್ಸ್ ಮಾಡುತ್ತಿರುವಾಗ `Mirror Flight'(ಪ್ರತಿಬಂಬದ ಮಾದರಿಯಲ್ಲಿ ಅಂದರೆ ಸಂಚರಿಸುತ್ತಿರುವ ವಿಮಾನಕ್ಕೆ ಸಮಾನಂತರವಾಗಿ ಅದರ ಮೇಲ್ಭಾಗದಲ್ಲಿ ಒಂದಷ್ಟು ಅಂತರದಲ್ಲಿ ತಾನು ಚಲಾಯಿಸುತ್ತಿದ್ದ ವಿಮಾನವನ್ನು ತಲೆಕೆಳಗಾಗಿ ಚಲಾಯಿಸುವುದು) ಸಾಹಸಕ್ಕೆ ಅಣಿಯಾಗುತ್ತಿದ್ದಾಗ ಆ ವಿಮಾನಗಳ ನಡುವೆ ಘರ್ಷಣೆ ಸಂಭವಿಸಿತ್ತು. ವಿಮಾನಗಳ ಪ್ರದರ್ಶನ ನೋಡುತ್ತಿದ್ದವರು ಒಂದು ಕ್ಷಣ ದಿಗ್ಭ್ರಾಂತರಾಗಿ ಮುಂದೆ ನಡೆಯಲಿರುವ ದುರಂತವನ್ನು ಊಹಿಸಿ ಕುಳಿತಲ್ಲಿಂದ ಜಿಗಿದೆದ್ದು ಕಿರುಚತೊಡಗಿದ್ದರು. ಹಲವರು ತಲೆ ಮೇಲೆ ಕೈ ಹೊತ್ತುಕೊಂಡರು. ಇನ್ನೇನು ಎಲ್ಲವೂ ಮುಗಿದೇ ಹೋಯಿತು ಅಂದುಕೊಂಡಿದ್ದರು.

ಅಷ್ಟಾದರೂ ಎರಡೂ ವಿಮಾನಗಳ ಪೈಲಟ್‍ಗಳು ದೃತಿಗೆಡದೇ ತಮ್ಮ ತಮ್ಮ ವಿಮಾನದ ಮೇಲೆ ನಿಯಂತ್ರಣ ಸಾಧಿಸಿದ್ದಲ್ಲದೇ ಯಾವುದೇ ಅಪಾಯವಾಗದಂತೆ ವಿಮಾನಗಳನ್ನು ಭೂಸ್ಪರ್ಷ ಮಾಡಿಸಿದ್ದರು. ವಿಮಾನಗಳಿಂದ ಹೊರಗಿಳಿದ ಇಳಿವಯಸ್ಸಿನ ಪೈಲಟ್‍ಗಳನ್ನು ನೋಡಿ ಎಲ್ಲರೂ ದಂಗಾಗಿ ಹೋಗಿದ್ದರು. ತಲೆಕೆಳಗಾಗಿ ಹಾರಿದ್ದ ವಿಮಾನದಿಂದ ಇಳಿದ ಪೈಲಟ್ ಒಬ್ಬ ಮಹಿಳೆಯಾಗಿದ್ದರು. ಅದ್ಭುತ ಸಮಯಪ್ರಜ್ಞೆಯೊಂದಿಗೆ, ಚಾಕಚಕ್ಯತೆಯ ಸಾಹಸ ತೋರಿಸಿದ ಅವರು ಅರವತ್ತರ ವಯೋಮಾನದವರಾಗಿದ್ದರು!

ಈ ಘಟನೆಯೊಂದಿಗೆ ವಿಮಾನಗಳ ತಂಡ ಮುನ್ನಡೆಸುತ್ತಿದ್ದವರು ರಾಡ್ಕಾ ಮಚೋವಾ ಎಂಬ ಮಹಿಳಾ ಪೈಲಟ್ ಎಂಬುದು ಬಹಿರಂಗವಾಯಿತು. ರಾಡ್ಕಾ ಅವರಿಗೀಗ 66ರ ಹರೆಯ. ನಾಲ್ಕು ದಶಕಗಳ ಏರೋಬ್ಯಾಟಿಕ್ಸ್ ಅನುಭವ ಹೊಂದಿರುವ ರಾಡ್ಕಾ ಅವರು ಹುಟ್ಟಿದ್ದು 1949ರ ಜನವರಿ 14ರಂದು. ಝೆಕ್ ಗಣರಾಜ್ಯದ ಪ್ರಜೆಯಾದ ಅವರಿಗೆ ಬಾಲ್ಯದಲ್ಲೇ ಏವಿಯೇಷನ್(ವಾಯು ಯಾನ) ಮತ್ತು ಆರ್ಕಿಟೆಕ್ಚರ್(ಕಟ್ಟಡ ವಿನ್ಯಾಸ)ದ ಬಗ್ಗೆ ಆಸಕ್ತಿ ಇತ್ತು. ಪೆರುಗ್ವೆಯಲ್ಲಿ ಉನ್ನತ ಶಿಕ್ಷಣ ಪಡೆದ ಅವರು, ಸ್ಥಳೀಯ ಯುನಿವರ್ಸಿಟಿ ಆಫ್ ಟ್ರಾನ್ಸ್‌ಪೋರ್ಟ್‌ ಆ್ಯಂಡ್ ಟ್ರೇಡ್‍ನಿಂದ ವಾಯು ಸಾರಿಗೆ ಮತ್ತು ವಾಯು ಯಾನವನ್ನು ವಿಶೇಷ ವಿಷಯವಾಗಿ ಅಭ್ಯಸಿಸಿ ಪದವಿ ಪಡೆದರು. 1971ರಲ್ಲಿ ವಿಮಾನ ಚಾಲನೆಗೆ ಪರವಾನಗಿ ಪಡೆದು, 1976ರಲ್ಲಿ ಏರೋಬ್ಯಾಟಿಕ್ಸ್ ತಂಡವನ್ನು ಸೇರಿದರು. ವೃತ್ತಿಪರ ವಿಮಾನ ಚಾಲನಾ ಪರವಾನಗಿ ಹೊಂದಿದ್ದ ಅವರು ಉದ್ಯಮಿಗಳು, ವಿಐಪಿಗಳ ಜೆಟ್ ವಿಮಾನ ಚಾಲನೆಯ ಪುಟ್ಟ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. 2001ರಲ್ಲಿ ರೆಡ್‍ಬುಲ್ ಕಂಪನಿಯ ಫ್ಲೈಯಿಂಗ್ ಬುಲ್ಸ್ ಏರೋಬ್ಯಾಟಿಕ್ಸ್ ತಂಡ ಸೇರಿದ ಅವರು 2002ರ ಅಂತ್ಯಕ್ಕೆ ಅದೇ ತಂಡದ ನಾಯಕಿಯಾದರು. ಅಲ್ಲಿಂದೀಚೆಗೆ ಅವರು ತಂಡವನ್ನು ಮುನ್ನಡೆಸುತ್ತಾ ಹಲವಾರು ಯಶಸ್ವಿ ಪ್ರದರ್ಶನ ನೀಡಿದ್ದಾರೆ. ತಂಡದ ಸುರಕ್ಷತೆ ಬಗ್ಗೆ ತೋರುವ ಕಾಳಜಿಯಿಂದಾಗಿ ರಾಡ್ಕಾ ಅವರು ತಂಡದ ಎಲ್ಲ ಸದಸ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದು ಬೆಂಗಳೂರಿನಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಮತ್ತೊಮ್ಮೆ ಸಾಬೀತಾಯಿತು.

ವಿಮಾನ ಚಾಲನೆ ಅದರಲ್ಲೂ ಏರೋಬ್ಯಾಟಿಕ್ಸ್‍ದ ಬಗ್ಗೆ ವಿಶೇಷ ಒಲವು ಹೊಂದಿರುವ ಅವರು, ತಮ್ಮ ಜೀವನವನ್ನು ಅದಕ್ಕಾಗಿ ಮುಡಿಪಾಗಿರಿಸಿದ್ದಾರೆ. ಕೆಲಸವನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅವರು, ಏರೋಬ್ಯಾಟಿಕ್ಸ್ ಬಗ್ಗೆ ವಿವರಣೆ ನೀಡುವುದು ಹೀಗೆ: “ನೀವು ಸಾಮಾನ್ಯ ವಿಮಾನ ಚಲಾಯಿಸುತ್ತೀರಿ ಎಂದಾದರೆ ಅದು ಸಾಮಾನ್ಯ ಕೆಲಸ. ಆದರೆ, ಏರೋಬ್ಯಾಟಿಕ್ಸ್ ವಿಚಾರಕ್ಕೆ ಬಂದರೆ, ಅದು ನೀವು ರಸ್ತೆಯಲ್ಲಿ ಟ್ರಾಫಿಕ್ ನಡುವೆ ಕಾರು ಚಲಾಯಿಸಿದಂತೆ. ನೀವು ಆಗಸದಲ್ಲಿ ಹಾರಾಡುತ್ತಾ ವಿಮಾನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬೇಕು. ಇದಕ್ಕೆ ಏಕಾಗ್ರತೆ ಸ್ವಲ್ಪ ಹೆಚ್ಚೇ ಬೇಕು. ಕಾರು ಚಲಾಯಿಸುವಾಗ ಒಂದು ತಪ್ಪು ಮಾಡಿದರೆ ಹೇಗೋ ಸುಧಾರಿಸಿಕೊಳ್ಳಬಹುದು. ಆದರೆ, ಆಗಸದಲ್ಲಿ ವಿಮಾನ ಚಲಾಯಿಸುವಾಗ ಅಂತಹ ತಪ್ಪೆಸಗಿದರೆ ಅದರ ಪರಿಣಾಮ ಬಹುದೊಡ್ಡದು, ಕೆಲವೊಮ್ಮೆ ಜೀವಕ್ಕೇ ಅಪಾಯ ಉಂಟಾಗಬಹುದು”.

ವೈಮಾನಿಕ ಸಾಹಸದ ಬಗ್ಗೆ ಅದರಲ್ಲೂ ಮಿರರ್ ಫ್ಲೈಟ್ ಪ್ರದರ್ಶನದ ಬಗ್ಗೆ ಕೇಳಿದರೆ, `ವೈಮಾನಿಕ ಸಾಹಸ ಎನ್ನುವಂಥದ್ದು ಒಂದು ಅದ್ಭುತ ಅನುಭವ. ಹಕ್ಕಿಯಂತೆ ಸ್ವಚ್ಛಂದವಾಗಿ ಆಗಸದಲ್ಲಿ ವಿಹರಿಸುವ ಅನುಭವವನ್ನು ಅದು ಕೊಡುತ್ತದೆ. ವೈಮಾನಿಕ ಸಾಹಸ ಪ್ರದರ್ಶನ 15 ನಿಮಿಷಗಳ ಅವಧಿಗೆ ಸೀಮಿತವಾಗಿರುತ್ತದೆ. ಅದಕ್ಕಿಂತ ಹೆಚ್ಚುಹೊತ್ತು ಅಂತಹ ಪ್ರದರ್ಶನ ನೀಡಲಾಗದು. ಆದರೆ, ಇಂತಹ ಹಾರಾಟದ ಸಂದರ್ಭದಲ್ಲಿ ನೀವು ಚಲಾಯಿಸುತ್ತಿರುವ ವಿಮಾನದ ಸಾಮಥ್ರ್ಯದ ಅರಿವೂ ನಿಮಗಿರಬೇಕಾಗುತ್ತದೆ’ ಎನ್ನುತ್ತಾರೆ.

ಅವರ ವೃತ್ತಿಜೀವನದ ಕಡೆಗೆ ಗಮನಹರಿಸಿದರೆ, 2001ರಲ್ಲಿ ಫ್ಲೈಯಿಂಗ್ ಬುಲ್ಸ್ ತಂಡ ಸೇರ್ಪಡೆಯಾದ ಬಳಿಕ ಮೊದಲ ಬಾರಿ ತಂಡವನ್ನು ಜಪಾನಿನಲ್ಲಿ 2002ರಲ್ಲಿ ನಡೆದ ಎಫ್‍ಐಎ ಏರೋಬ್ಯಾಟಿಕ್ಸ್ ಗ್ರಾಂಡ್‍ಪ್ರಿಕ್ಸ್‌ ಮುನ್ನಡೆಸಿ ಯಶ ಸಾಧಿಸಿದ್ದರು. 2011ರಲ್ಲಿ ಬೆಂಗಳೂರಿನಲ್ಲಿ, 2012ರಲ್ಲಿ ಆಸ್ಟ್ರಿಯಾದಲ್ಲಿ ನಡೆದ ಸ್ಕಲರಿಯಾ ಏರ್ ಚಾಲೆಂಜ್‍ನಲ್ಲಿ ತಂಡವನ್ನು ಮುನ್ನಡೆಸಿದ ಕೀರ್ತಿ ಅವರದ್ದು. ಭಾರತ ಸರ್ಕಾರದ ಆಹ್ವಾನದ ಮೇರೆಗೆ 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಪ್ರದರ್ಶನದಲ್ಲೂ ಅವರ ತಂಡ ಸಾಹಸ ಪ್ರದರ್ಶನ ನೀಡಿತ್ತು. 2002ರಿಂದೀಚೆಗೆ 32 ದೇಶಗಳಲ್ಲಾಗಿ ಅವರು ನೀಡಿದ ಪ್ರದರ್ಶನಗಳ ಸಂಖ್ಯೆ 400ಕ್ಕೂ ಅಧಿಕ.

ಪತಿ ಮತ್ತು ಇಬ್ಬರು ಪುತ್ರರನ್ನೊಳಗೊಂಡ ಸುಖೀಸಂಸಾರ ಅವರದ್ದು. ಛಾಯಾಗ್ರಹಣ, ಸ್ಕೂಬಾ ಡೈವಿಂಗ್, ಸೈಕ್ಲಿಂಗ್ ಮತ್ತು ಪ್ರವಾಸ ಹೋಗುವುದು ಅವರ ಇಷ್ಟ ಹವ್ಯಾಸಗಳು. ಶಾಸ್ತ್ರೀಯ ಸಂಗೀತ ಮತ್ತು ಜಾಝ್‌ ಆಲಿಸುವುದೆಂದರೆ ಪಂಚಪ್ರಾಣ. ಈ ಇಳಿವಯಸ್ಸಿನಲ್ಲೂ ಯುವಜನರನ್ನೂ ನಾಚಿಸುವಂತೆ ಕ್ರಿಯಾಶೀಲರಾಗಿರುವ ಅವರು,`ನಿಮ್ಮ ಭವಿಷ್ಯದ ವಿಚಾರಕ್ಕೆ ಬಂದರೆ ನೀವು ಕಾಣುವ ಕನಸು ಬಹಳ ಪ್ರಾಮುಖ್ಯತೆ ಪಡೆಯುತ್ತವೆ. ನಿಮ್ಮ ಕನಸುಗಳನ್ನೇ ಈಡೇರಿಸುವುದು ಅಂತಿಮ ಗುರಿಯಾದಾಗ ಎಲ್ಲವೂ ಸುಲಭ ಸಾಧ್ಯ. ಉದಾಹರಣೆಗೆ ಹೇಳುವುದಾದರೆ, ನಾನು ಚಿಕ್ಕವಳಿದ್ದಾಗ, ಪೈಲಟ್ ಆಗುವ ಕನಸು ಕಂಡೆ. ವಾಯು ಯಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಕಾರಣ ಪೈಲಟ್ ಆದೆ. ಮುಂದೆ ಏರೋಬ್ಯಾಟಿಕ್ಸ್ ತಂಡ ಸೇರಬೇಕೆಂದು ಕನಸು ಕಂಡೆ.. ಅದನ್ನೂ ಸಾಧಿಸಿದ ತೃಪ್ತಿ ನನಗಿದೆ.. ನೀವೂ ಕನಸು ಕಾಣಿ.. ಅದನ್ನು ನನಸಾಗಿಸುವತ್ತ ಪ್ರಯತ್ನವೂ ಇರಲಿ’ ಎಂಬ ಸಂದೇಶ ನೀಡುತ್ತಾರೆ.

Leave a Reply

Your email address will not be published. Required fields are marked *