ಅಮೆರಿಕ ರಾಜಕಾರಣದ ‘ಭಗೀರಥ’ ಜ್ಯೋ ಬೈಡೆನ್

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗುವುದರೊಂದಿಗೆ ಆ ದೇಶದ ಆಡಳಿತ ಚುಕ್ಕಾಣಿ ಹಿಡಿಯುವವರಾರು ಎಂಬ ಜಾಗತಿಕ ಕುತೂಹಲಕ್ಕೂ ತೆರೆಬಿದ್ದಿದೆ. ಅಮೆರಿಕದ ಆಡಳಿತ ಹೊಣೆಗಾರಿಕೆ ಮತ್ತೆ ಡೆಮಾಕ್ರಟಿಕ್ ಪಕ್ಷದ ಹೆಗಲೇರಿದೆ. ಒಬಾಮಾ ನೇತೃತ್ವದಲ್ಲಿ ಎರಡು ಅವಧಿಯ ಡೆಮಾಕ್ರಟಿಕ್ ಆಡಳಿತ ನೋಡಿದ್ದ ಅಮೆರಿಕ, ಬದಲಾವಣೆ ಬಯಸಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಉದ್ಯಮಿ ಡೊನಾಲ್ಡ್ ಟ್ರಂಪ್‍ಗೆ ಆಡಳಿತ ಚುಕ್ಕಾಣಿ ನೀಡಿತ್ತು. ವಿವಾದಗಳೊಂದಿಗೇ ಆಡಳಿತ ಚುಕ್ಕಾಣಿ ಹಿಡಿದಿದ್ದ ಟ್ರಂಪ್‍ಗೆ ಮೊದಲ ಅವಧಿಯ ಆಡಳಿತ ಮುಗಿಯುತ್ತಿರುವಂತೆ ಎರಡನೇ ಅವಧಿಯ ಆಸೆ ಹುಟ್ಟಿಕೊಂಡಿತ್ತು. ಆದರೆ ಜನಾದೇಶ ಮೂರನೇ ಬಾರಿ ಅದೃಷ್ಟ ಪರೀಕ್ಷೆ ಇಳಿದ ಅಮೆರಿಕದ ರಾಜಕಾರಣದ ‘ಭಗೀರಥ’ ಜ್ಯೋ ಬೈಡೆನ್ ಕಡೆಗೆ ವಾಲಿತ್ತು.

 

ಐದು ದಶಕಗಳ ರಾಜಕಾರಣ ಮಾಡಿದ ಅನುಭವಿ ಬೈಡೆನ್‍. ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಯುವ ಸೆನಟರ್ ಎಂಬ ಕೀರ್ತಿಗೆ ಭಾಜನರಾಗಿದ್ದ ಬೈಡೆನ್ ಇದೀಗ ಅಮೆರಿಕದ ಅಧ್ಯಕ್ಷ ಹುದ್ದೆಗೇರುತ್ತಿರುವ ಅತ್ಯಂತ ಹಿರಿಯ ವ್ಯಕ್ತಿ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಬೈಡೆನ್ ಅವರಿಗೆ ಈಗ 77 ವರ್ಷ ವಯಸ್ಸು. ಅಮೆರಿಕದ ಅಧ್ಯಕ್ಷ ಹುದ್ದೆಗೇರಬೇಕು ಎಂಬುದು ಅವರ ಬಾಲ್ಯದ ಕನಸು. ಅದನ್ನು ಈಡೇರಿಸುವುದಕ್ಕೆ ಅವರು ಸತತವಾಗಿ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಎರಡು ಬಾರಿ ಸ್ಪರ್ಧಿಸಿ ಸೋತಿದ್ದ ಅವರು ಮೂರನೇ ಬಾರಿ ಸ್ಪರ್ಧಿಸುವುದಕ್ಕೆ ಮುನ್ನ ಗೊಂದಲಕ್ಕೆ ಒಳಗಾಗಿದ್ದರು. ಕೊನೆಗೆ ನಾನು ನಡೆಯಬಲ್ಲೆನಾದರೆ ಓಡಬಲ್ಲೆ ಕೂಡ ಎಂದು ಹೇಳುತ್ತ 2018ರಲ್ಲೇ ಸ್ಪರ್ಧೆಗೆ ಅಣಿಯಾದರಲ್ಲದೆ ಈ ಪ್ರಯತ್ನದಲ್ಲವರು ಯಶ ಕಂಡರು ಕೂಡ. ಸೆನೆಟ್‍ನಲ್ಲಿ ಡೆಲಾವೇರ್ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದವರು.  ಅವರ ಬದುಕಿನ ಕಿರು ಚಿತ್ರಣ ಕೊಡುವ ಪ್ರಯತ್ನವಿದು.

 

ಒಬಾಮಾ ಹೇಳಿದ ಮಾತು ನಿಜವಾಯಿತು

ಬೈಡನ್ ನನ್ನ ಸೋದರ. ಜ್ಯೋ ಬೈಡೆನ್‍ ಅನ್ನು ನಾನು ಪ್ರೀತಿಸುತ್ತೇನೆ. ಆತ ಎಲ್ಲರ ಜತೆಗೂ ಘನತೆ ಮತ್ತು ಗೌರವದೊಂದಿಗೆ ನಡೆದುಕೊಳ್ಳುತ್ತಿದ್ದು, ಮುಂದೆ ಗ್ರೇಟ್ ಪ್ರೆಸಿಡೆಂಟ್ ಆಗಲಿದ್ದಾನೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು 2017ರಲ್ಲಿ ಅಧಿಕೃತವಾಗಿ ಬೆನ್ನುತಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಆ ಮಾತುಗಳೀಗ ನಿಜವಾಗುತ್ತಿದ್ದು, ಬೈಡನ್ ವ್ಯಕ್ತಿತ್ವಕ್ಕೂ ಹಿಡಿದ ಕೈಗನ್ನಡಿಯಂತೆ ಗೋಚರಿಸುತ್ತಿದೆ.

 

ಜೋಸೆಫ್ ರೋಬಿನೆಟ್‍ ಬೈಡೆನ್ ಜ್ಯೂನಿಯರ್ ಎಂಬುದು ಅವರ ಪೂರ್ಣ ಹೆಸರು. ಜ್ಯೋ ಬೈಡೆನ್ ಎಂದೇ ಜನಪ್ರಿಯರಾಗಿದ್ದಾರೆ. ಅಮೆರಿಕದ ಪೆನ್‍ಸಿಲ್ವೇನಿಯಾದ ಸ್ಕ್ರಾನ್ಟನ್ ನಲ್ಲಿ 1942ರ ನವೆಂಬರ್ 20ರಂದು ಸ‍್ಥಳೀಯ ಸೇಂಟ್ ಮೇರೀಸ್ ಹಾಸ್ಪಿಟಲ್‍ನಲ್ಲಿ ಜನಿಸಿದರು. ಅಪ್ಪ ಉದ್ಯಮಿ ಜೋಸೆಫ್‍ ರೋಬಿನೆಟ್ ಬೈಡೆನ್ ಸೀನಿಯರ್ (1915-2002), ಅಮ್ಮ ಕ್ಯಾಥರೀನ್ ಯುಗೆನಿಯಾ ಫಿನ್ನೆಗಾನ್ ಬೈಡನ್‍ (1917-2010). ಒಬ್ಬಳು ಸಹೋದರಿ ವಲೆರಿ. ಇಬ್ಬರು ಸಹೋದರರು ಫ್ರಾನ್ಸಿಸ್ ಮತ್ತು ಜೇಮ್ಸ್. ಜ್ಯೋ ಬೈಡೆನ್ ಹುಟ್ಟಿದ ಸಂದರ್ಭದಲ್ಲಿ ಬೈಡೆನ್ ಸೀನಿಯರ್ ಅನೇಕ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಜ್ಯೋ ಬೈಡೆನ್ ಬಾಲ್ಯ ಸಂಕಷ್ಟದಿಂದಲೇ ಕೂಡಿತ್ತು. ಹೀಗಾಗಿ ಬಾಲ್ಯ ಡೆಲಾವೇರ್ ನ ನ್ಯೂ ಕ್ಯಾಸೆಲ್‍ ಕೌಂಟಿಯಲ್ಲಿ ಕಳೆದಿತ್ತು. ಆರಂಭದ ಕೆಲವು ವರ್ಷಗಳ ಬಳಿಕ ಸೀನಿಯರ್ ಬೈಡೆನ್ ಮಧ್ಯಮ ವರ್ಗದ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾದರು. ಶಾಲಾ ದಿನಗಳಲ್ಲಿ ಬಡತನವಿದ್ದರೂ ಶಾಲೆಯಲ್ಲಿ ಕ್ಲಾಸ್ ಲೀಡರ್ ಆಗಿದ್ದು ಜ್ಯೋ ಬೈಡೆನ್, ಆಗಲೇ ನಾಯಕತ್ವದ ರುಚಿ ಉಂಡವರು. 1968ರಲ್ಲಿ ನ್ಯೂಯಾರ್ಕ್‍ನ ಸೈರಾಕಸ್ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆಯುವ ಮುನ್ನ ಡೆಲಾವೇರ್‍ ಯೂನಿವರ್ಸಿಟಿಯಲ್ಲೂ ವ್ಯಾಸಂಗ ಮಾಡಿದ್ದರು. 1970ರಲ್ಲಿ ನ್ಯೂ ಕ್ಯಾಸೆಲ್ ಕೌಂಟಿಯ ಕೌನ್ಸಿಲರ್ ಆಗಿ ಆಯ್ಕೆಯಾದರು. ಮುಂದೆ 1972ನೇ ಇಸವಿಯಲ್ಲಿ 29 ವರ್ಷದವನಿದ್ದಾಗ ಡೆಲಾವೇರ್‍ ಕ್ಷೇತ್ರದಿಂದ ಅಮೆರಿಕದ ಸೆನೆಟ್‍ಗೆ ಆಯ್ಕೆಯಾಗಿ, ಅಮೆರಿಕದ ಇತಿಹಾಸದಲ್ಲಿ ಆರನೇ ಯುವ ಸೆನೆಟರ್ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಇದಾಗಿ ರಾಜಕೀಯವಾಗಿ ಹಂತ ಹಂತವಾಗಿ ಬೆಳೆವಣಿಗೆ ದಾಖಲಿಸುತ್ತ ಹೋದ ಬೈಡೆನ್‍, 1988ರಲ್ಲಿ ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ 1987ರ ಜೂನ್ 9ರಂದು ಘೋಷಿಸಿದರು.

 

ಬೈಡೆನ್‍ ಆ ಸಂದರ್ಭದಲ್ಲಿ ಗೆಲ್ಲುವ ಅಭ್ಯರ್ಥಿಯಾಗಿ ಗೋಚರಿಸಿದ್ದರು. ಅವರ ವ್ಯಕ್ತಿತ್ವ, ವಾಕ್ಪಟುತ್ವ ಮತ್ತು ಸೆನೆಟ್ ಜ್ಯುಡಿಷಿಯರಿ ಕಮಿಟಿಯ ಮುಖ‍್ಯಸ್ಥರ ಸ್ಥಾನದಲ್ಲಿದ್ದುಕೊಂಡು ಅವರ ನಡವಳಿಕೆ ಇವೆಲ್ಲವೂ ಅವರನ್ನು ಜಾನ್ ಎಫ್‍ ಕೆನಡಿ ನಂತರ ಅಧ್ಯಕ್ಷ ಪಟ್ಟವೇರುವ ಯುವ ಅಭ್ಯರ್ಥಿ ಎಂಬ ಚಿತ್ರಣವನ್ನೇ ನೀಡಿತ್ತು. ಆರಂಭದ ನಾಲ್ಕು ತಿಂಗಳು ಇದ್ದಂತಹ ಈ ಇಮೇಜ್‍ಗೆ ಆಗಸ್ಟ್ ನಲ್ಲಿ ಅವರ ಅಭಿಯಾನ ನಡೆಸುತ್ತಿದ್ದವರ ನಡುವೆ ವೈರತ್ವ, ಭಿನ್ನಮತ ಹುಟ್ಟಿಕೊಂಡ ಕಾರಣ ಧಕ್ಕೆ ಉಂಟಾಯಿತು. ಇದಾಗಿ ಸೆಪ್ಟೆಂಬರ್ ತಿಂಗಳಲ್ಲಿ ಅವರು ಮಾಡಿದ ಭಾಷಣಕ್ಕೆ ಕೃತಿ ಚೌರ್ಯದ ಆರೋಪ ಎದುರಾಯಿತು. ಬ್ರಿಟಿಷ್ ಲೇಬರ್ ಪಾರ್ಟಿ ನಾಯಕ ನೀಲ್ ಕಿನ್ನೋಕ್ ಅವರ ಭಾಷಣದ ಸಾಲುಗಳನ್ನೇ ಹೋಲುವ ಮಾತುಗಳನ್ನು ಬೈಡನ್ ಮಾಡಿದ್ದಾರೆ ಎಂಬುದು ಆರೋಪ. ಇದು ವಿವಾದಕ್ಕೀಡಾಗಿ ಗೊಂದಲ ಏರ್ಪಟ್ಟಿತು. ಕೊನೆಗೆ 1987ರ ಸೆಪ್ಟೆಂಬರ್ 23ರಂದು ತಪ್ಪುಗಳನ್ನು ಒಪ್ಪಿಕೊಂಡು ಅಭ್ಯರ್ಥಿತನದಿಂದ ಹಿಂದೆ ಸರಿದರು. 1988ರ ಫೆಬ್ರವರಿಯಲ್ಲಿ ತೀವ್ರವಾದ ಕುತ್ತಿಗೆ ನೋವು ಹೆಚ್ಚಾಗಿ ಸರ್ಜರಿಗೆ ಒಳಗಾಗಬೇಕಾಯಿತು. ಇದರ ಜತೆಗೆ ಇತರೆ ಆರೋಗ್ಯ ಸಮಸ್ಯೆಗಳು ಕಾಡಿದವು. ಹೀಗಾಗಿ ಏಳು ತಿಂಗಳು ಸೆನೆಟ್‍ಗೆ ಹಾಜರಾಗುವುದು ಅವರಿಂದಾಗಲಿಲ್ಲ.

 

ಆದಾಗ್ಯೂ ಅವರೇನೂ ರಾಜಕಾರಣದಿಂದ ದೂರ ಸರಿಯಲಿಲ್ಲ. ಹಾಗೆಯೇ ಪ್ರಯತ್ನ ಮುಂದುವರಿಸಿದ್ದು, 20 ವರ್ಷಗಳ ಬಳಿಕ 2008ರಲ್ಲಿ ಮತ್ತೊಮ್ಮೆ ಪ್ರಯತ್ನಿಸಿದರು. ಆದರೆ ಈ ಸಲ ಬರಾಕ್ ಒಬಾಮಾರಿಂದ ಪರಾಜಿತರಾದರು. ಆದಾಗ್ಯೂ ಒಬಾಮಾ ಅವರು ಬೈಡೆನ್ ಅವರನ್ನೇ ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಂಡರು. ಎರಡು ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2016ರ ಚುನಾವಣೆಗೆ ಬೈಡೆನ್ ಸ್ಪರ್ಧಿಸಬಹುದು ಎಂಬ ಸುದ್ದಿಗಳಿದ್ದರೂ, 2015ರಲ್ಲಿ ಮಗ ಬ್ಯೂ ತೀರಿಕೊಂಡ ಕಾರಣ ಹಿಂದುಳಿದರು. ಆದರೆ, 2019ರ ಏಪ್ರಿಲ್ 25ರಂದು ಈ ಸಲದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದರು. ಪಕ್ಷದೊಳಗೇ 28 ಜನ ಆಕಾಂಕ್ಷಿಗಳಿದ್ದರು. ಆದಾಗ್ಯೂ ಆಗಸ್ಟ್ 17ರಂದು ಬೈಡೆನ್ ಆಯ್ಕೆ ಅಧಿಕೃತವಾಗಿ ಘೋಷಣೆಯಾಯಿತು. ಅವರು ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರು. ನಂತರದ್ದೆಲ್ಲವೂ ಈಗ ಇತಿಹಾಸ. ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಜನವರಿ 20ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ.

 

ಅವಮಾನ, ಕಷ್ಟಗಳನ್ನು ಸಹಿಸಿಕೊಂಡವರು..

ಬಿಕ್ಕಳಿಕೆ ಬಹುದೊಡ್ಡ ಸಮಸ್ಯೆಯಾಗಿತ್ತು ಬೈಡೆನ್‍ಗೆ. ಅದರಿಂದ ಹೊರಬರಲು ಸಾಕಷ್ಟು ಶ್ರಮವಹಿಸಿದ ಅವರು, ಅವಮಾನವನ್ನೆಲ್ಲ ಸಹಿಸಿಕೊಂಡಿದ್ದಾರೆ. ಈ ಸಲದ ಚುನಾವಣೆಯಲ್ಲೂ ಬೈಡೆನ್ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀರಾ ವೈಯಕ್ತಿಕ ಟೀಕೆಗಳನ್ನೂ ಮಾಡಿದ್ದರು, ಅವಮಾನಿಸಿದ್ದರು. ಜೀವನ ಪೂರ್ತಿ ಕಷ್ಟ, ಅವಮಾನಗಳನ್ನು ಎದುರಿಸಿದ್ದ ಬೈಡೆನ್‍ ಕುಟುಂಬ ಜೀವನದ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ದಾಖಲೆಗಳಿವೆ. 1972ರಲ್ಲಿ ಮೊದಲ ಪತ್ನಿ ನೈಲಿಯಾ ಮತ್ತು 13 ತಿಂಗಳ ಮಗಳು ಕಾರು ಅಪಘಾತದಲ್ಲಿ ಮೃತರಾಗಿದ್ದರು. ಮಗಂದಿರಾದ ಬ್ಯೂ ಮತ್ತು ಹಂಟರ್ ಗಂಭೀರ ಗಾಯಗೊಂಡರೂ ಬದುಕಿ ಉಳಿದಿದ್ದರು. ಈ ಅವಧಿಯಲ್ಲಿ ಅವರು ಸೆನೆಟ್‍ಗೆ ಆಯ್ಕೆಯಾಗಿದ್ದರಷ್ಟೆ. ತಾತ್ಕಾಲಿಕವಾಗಿ ರಾಜಕೀಯ ನಿವೃತ್ತಿಯ ಚಿಂತನೆಯನ್ನೂ ಅವರು ಆ ಸಂದರ್ಭದಲ್ಲಿ ಮಾಡಿದ್ದರು. ಆದರೆ, ಸ್ನೇಹಿತರ ಒತ್ತಾಯಕ್ಕೆ ಕಟ್ಟುಬಿದ್ದು ಹಾಗೆ ಮಾಡಿರಲಿಲ್ಲ. ಎರಡನೇ ಮದುವೆ 1977ರಲ್ಲಿ ಆಗಿದ್ದು, ಜಿಲ್‍ ಜೇಕಬ್ಸ್ ರನ್ನು 1975ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಅವರೇ ಈಗ ಅಮೆರಿಕದ ಫಸ್ಟ್ ಲೇಡಿ. ಈ ದಾಂಪತ್ಯದಲ್ಲಿ ಅವರಿಗೆ ಆಶ್ಲೇ ಎಂಬ ಮಗಳು 1981ರಲ್ಲಿ ಜನಿಸಿದ್ದಾಳೆ.  ಮೊದಲ ಪತ್ನಿಯಲ್ಲಿ ಜನಿಸಿದ್ದ ಮಗ ಬ್ಯೂ ಇರಾಕ್ ಯುದ್ಧದಲ್ಲಿ ಭಾಗವಹಿಸಿದ್ದಾತ ಮಿದುಳಿನ ಕ್ಯಾನ್ಸರ್ ಗೆ ತುತ್ತಾಗಿ ಮೃತಪಟ್ಟ. ಇನ್ನೋರ್ವ ಮಗ ಹಂಟರ್ ಮಾದಕ ವಸ್ತು ವ್ಯಸನಿಯಾಗಿ ಬದುಕಿನಲ್ಲಿ ಹೋರಾಡುತ್ತಿದ್ದಾನೆ. 1988ರ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ತನ್ನ ವೈಯಕ್ತಿಕ ಹಾನಿಗಳನ್ನು, ನಷ್ಟಗಳನ್ನು ಹೇಳಿದರು. ಆದರೂ ಇವೆಲ್ಲವೂ ನನ್ನ ಖಾಸಗಿ ವಿಚಾರಗಳೆಂದೂ ಹೇಳಿಕೊಂಡಿದ್ದರು.

 

 

Leave a Reply

Your email address will not be published. Required fields are marked *