ಕೆನಡಾದ ರಕ್ಷಣೆಗೆ ಸೇನಾನಿಯ ಸಾರಥ್ಯ

harjit-sajjan
harjit-sajjan

ಯಾವುದೇ ದೇಶದ ಆಡಳಿತ ಗಮನಿಸಿದರೆ, ಜನರಿಂದ ಚುನಾಯಿತರಾಗಿ ಅಧಿಕಾರ ಚುಕ್ಕಾಣಿ ಹಿಡಿದ ರಾಜಕಾರಣಿಗಳೇ ರಕ್ಷಣಾ ಸಚಿವರಾಗಿರುತ್ತಾರೆ. ಆದರೆ, ಸಮರ ಸೇನಾನಿಯೊಬ್ಬನಿಗೆ ರಕ್ಷಣಾ ಸಚಿವ ಸ್ಥಾನ ಸಿಗುವುದು ವಿರಳ. ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ, ಬೇರೆ ದೇಶದವರು ಇಂತಹ ಆಯಕಟ್ಟಿನ ಹುದ್ದೆ ಅಲಂಕರಿಸುವುದು ಇನ್ನೂ ವಿರಳ. ಇದಕ್ಕೆ ಅಪವಾದ ಎಂಬಂತೆ ಭಾರತೀಯ ಮೂಲದ ಲೆಫ್ಟಿನೆಂಟ್ ಕರ್ನಲ್ ಹರ್​ಜಿತ್ ಸಿಂಗ್ ಸಜ್ಜನ್ ಬುಧವಾರ ಕೆನಡಾದ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದು ಜಗತ್ತಿನ ಗಮನ ಸೆಳೆದ ವಿದ್ಯಮಾನ.

ಕಳೆದ ತಿಂಗಳು ಕೆನಡಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಕನ್ಸರ್ವೆಟಿವ್ ಪಕ್ಷದ ವಿರುದ್ಧ ಲಿಬರಲ್ ಪಕ್ಷ ಭಾರಿ ಅಂತರದ ಗೆಲುವು ದಾಖಲಿಸಿತು. ಬದಲಾವಣೆಯ ಘೊಷಣೆಯೊಂದಿಗೆ ಚುನಾವಣಾ ಪ್ರಚಾರ ನಡೆಸಿದ್ದ ಲಿಬರಲ್ ನಾಯಕ 43 ವರ್ಷದ ಜಸ್ಟಿನ್ ಟ್ರೂಡೂ ಅ.19ರಂದು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1968ರಿಂದ 1984ರ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಕೆನಡಾವನ್ನು ಮುನ್ನಡೆಸಿದ್ದ ಪಿರ್ರೆ ಟ್ರೂಡು ಅವರ ಪುತ್ರ. ಕೆನಡಾದ ಹೌಸ್ ಆಫ್ ಕಾಮನ್ಸ್​ನಲ್ಲಿರುವ 338 ಸ್ಥಾನಗಳಿದ್ದು ಈ ಪೈಕಿ ಲಿಬರಲ್​ಗಳು 184ರಲ್ಲಿ ಗೆಲುವು ಸಾಧಿಸಿ ಸ್ಪಷ್ಟ ಬಹುಮತ ಗಳಿಸಿದರು. ಬದಲಾವಣೆ ಘೊಷಣೆಯೊಂದಿಗೆ ಚುನಾವಣೆ ಎದುರಿಸಿದ ಜಸ್ಟಿನ್ ಟ್ರೂಡೂ, 30 ಸಹೋದ್ಯೋಗಿಗಳ ಸಚಿವ ಸಂಪುಟ ರಚಿಸಿದ್ದು, ಇದರಲ್ಲಿ ಶೇಕಡ 50ರಷ್ಟು ಮಹಿಳೆಯರಿದ್ದಾರೆ. ಟ್ರೂಡೂ ಸಂಪುಟದಲ್ಲಿರುವ 18 ಸಚಿವರು ಇದೇ ಮೊದಲ ಬಾರಿ ಸಂಸದರಾದವರು ಎನ್ನುವುದು ಮತ್ತೊಂದು ವಿಶೇಷ. ಭಾರತೀಯ ಮೂಲದ ನಾಲ್ವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಈ ನಾಲ್ವರ ಪೈಕಿ ಇಬ್ಬರು ಸಿಖ್ ಸಮುದಾಯದವರು. ಇವರಲ್ಲೊಬ್ಬರಾದ ಲೆ.ಕ.ಹರ್​ಜಿತ್ ಸಿಂಗ್ ಸಜ್ಜನ್​ಗೆ ರಕ್ಷಣಾ ಸಚಿವ ಸ್ಥಾನ ಒಲಿದಿದೆ. ಸಜ್ಜನ್ ಕೂಡ ಇದೇ ಮೊದಲ ಬಾರಿಗೆ ಸಂಸದರಾದವರು.

ಹೆಸರಿನ ಆರಂಭದಲ್ಲೇ ಅವರ ಸೇನಾನುಭವಕ್ಕೆ ನಿದರ್ಶನ ಎನ್ನುವಂಥ ವಿಶೇಷಣವಿದೆ. ಸಜ್ಜನ್ ತೀರಾ ಇತ್ತೀಚಿನವರೆಗೂ ಕೆನಡಾ ಸಶಸ್ತ್ರ ದಳ ಲೆಫ್ಟಿನೆಂಟ್ ಕರ್ನಲ್ ಆಗಿ ಕರ್ತವ್ಯ ನಿಭಾಯಿಸಿದವರು. ಸೇನೆಯನ್ನು ಮುನ್ನಡೆಸುವ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಸಿಖ್ ಕೆನೆಡಿಯನ್ ಎಂಬ ಕೀರ್ತಿಗೂ ಅವರು ಭಾಜನರಾಗಿದ್ದರು. ನಲವತ್ತು ಪ್ಲಸ್ ವರ್ಷ ವಯಸ್ಸಿನ ಸಜ್ಜನ್​ಗೆ ಸೇನೆಯ ಅಂತರಂಗ ಬಹಿರಂಗ ಎರಡೂ ಗೊತ್ತಿರುವ ಕಾರಣ ಅವರು ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲರೆಂಬ ವಿಶ್ವಾಸ ಪ್ರಧಾನಿ ಟ್ರೂಡೂ ಅವರಲ್ಲಿದ್ದುದು ಸ್ಪಷ್ಟ ಎಂಬುದು ತಜ್ಞರ ವಿಶ್ಲೇಷಣೆ.

ಭಾರತೀಯ ಮೂಲದ ಸಜ್ಜನ್ ಅವರ ಶಿಕ್ಷಣವೆಲ್ಲ ಕೆನಡಾದಲ್ಲೇ ಆಗಿದ್ದು, ಶಿಕ್ಷಣ ಮುಗಿದ ಬಳಿಕ ವಾನ್​ಕೋವರ್ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿ ಹನ್ನೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ತರುವಾಯ 1989ರಲ್ಲಿ ಕೆನಡಾ ಸೇನೆಗೆ ಟ್ರೂಪರ್ ಆಗಿ ಕೆಲಸಕ್ಕೆ ಸೇರಿದ್ದರು. 1991ರಲ್ಲಿ ಸೇನಾ ಸೇವೆಗೆ ನಿಯುಕ್ತರಾದರು.

ಮುಂದೆ ಹಂತ ಹಂತವಾಗಿ ಸೇನೆಯಲ್ಲಿ ಮೇಲಕ್ಕೇರಿದ ಸಜ್ಜನ್ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಅಲಂಕರಿಸಿದ್ದರು. ಸೇವಾವಧಿಯಲ್ಲಿ ನಾಲ್ಕು ಬಾರಿ ಸಾಗರೋತ್ತರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 1996ರಲ್ಲಿ ಬೋಸ್ನಿಯಾ ಮತ್ತು ಹೆರ್ಝೆಗೋವಿನಾದಲ್ಲಿ ಒಂದು ಸಲ ಹಾಗೂ 2006, 2009 ಮತ್ತು 2011ರಲ್ಲಿ ಅಫ್ಘಾನಿಸ್ಥಾನದಲ್ಲಿ ತಾಲೀಬಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮೂರು ಸಲ ಶಾಂತಿ ಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2011ರಲ್ಲಿ ಕೆನೆಡಿಯನ್ ಆರ್ವಿು ರೆಜಿಮೆಂಟ್ -‘ಬ್ರಿಟಿಷ್ ಕೊಲಂಬಿಯಾ ರೆಜಿಮೆಂಟ್’ದ ಕಮಾಂಡರ್ ಆಗಿ ನೇಮಕಗೊಂಡಿದ್ದು ಅವರ ಸಾಧನೆಗೆ ಸಂದ ಗೌರವ. ಅಫ್ಘಾನಿಸ್ಥಾನದ ಕಂದಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ಪ್ರಾಬಲ್ಯವನ್ನು ತಗ್ಗಿಸುವ ಕಾರ್ಯಾಚರಣೆ ನಡೆಸಿದ್ದಕ್ಕಾಗಿ 2012ರಲ್ಲಿ ಪ್ರತಿಭಾನ್ವಿತ ಸೇವಾ ಪದಕ, ಕೆನಡಾದ ಶಾಂತಿಪಾಲನಾ ಪದಕ ಪಡೆದ ಕೀರ್ತಿ ಅವರದ್ದು.

ಗುಪ್ತಚರ ಕೆಲಸ ಮಾಡುವುದರಲ್ಲಿ ಸಜ್ಜನ್ ಅವರದ್ದು ಎತ್ತಿದ ಕೈ. ಅವರು ಈ ಕೌಶಲಗಳನ್ನು ಬೆಳೆಸಿಕೊಂಡ ಬಗೆಯೇ ಕುತೂಹಲಕರವಾದುದು. ಬ್ರಿಟಿಷ್ ಕೊಲಂಬಿಯಾದ ಲೆಫ್ಟಿನೆಂಟ್ ಗವರ್ನರ್​ಗೆ ಕಾರ್ಯದರ್ಶಿ (ಏಯ್್ಡ ಡಿ ಕ್ಯಾಂಪ್) ಆಗಿ ಸೇವೆ ಸಲ್ಲಿಸಿದ ಅನುಭವವೂ ಅವರದ್ದು. ಈ ಅವಧಿಯಲ್ಲಿ ಅವರು ಗುಪ್ತಚರ ಮಾಹಿತಿ ಸಂಗ್ರಹಿಸುವ ಕಲೆಯನ್ನು ಕಲಿತುಕೊಂಡರು. ಪರಿಣಾಮ ಬ್ರಿಗೇಡಿಯರ್ ಜನರಲ್ ಡೇವಿಡ್ ಫ್ರೇಸರ್ ಅವರಿಂದ ಕಂದಹಾರ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ‘ಕೆನಡಾದ ಏಕೈಕ ಅತ್ಯುತ್ತಮ ಗುಪ್ತಚರ ಸಂಪತ್ತು’ ಎಂಬ ಶ್ಲಾಘನೆಯೂ ಸಿಕ್ಕಿದೆ. ಸಿಖ್ ಸಮುದಾಯದವರು ಧಾರ್ವಿುಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು. ಹೀಗಾಗಿ ಸೇನೆ ಸೇರಿದರೂ ಸಜ್ಜನ್ ಗಡ್ಡ ಉಳಿಸಿಕೊಂಡದ್ದರಿಂದ ಸಾಮಾನ್ಯವಾಗಿ ಸೇನೆಯವರು ಬಳಸುವ ಗ್ಯಾಸ್ ಮಾಸ್ಕ್ ಧರಿಸುವುದು ಇವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಸಜ್ಜನ್ ಅವರೇ ಮುತುವರ್ಜಿ ವಹಿಸಿ ಸಿದ್ಧಪಡಿಸಿದ ಗ್ಯಾಸ್ ಮಾಸ್ಕ್ ಸಿಖ್ ಸೈನಿಕರಿಗೆ ಬಹಳ ಉಪಯೋಗಕ್ಕೆ ಬಂತು. ಅವರ ಈ ಆವಿಷ್ಕಾರಕ್ಕೆ 1996ರಲ್ಲಿ ಪೇಟೆಂಟ್ ಕೂಡ ಲಭಿಸಿದೆ.

ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯಗಳ ಕಾರ್ಯಾಚರಣೆಯಲ್ಲಿ ಮೂರನೇ ಬಾರಿ ನಿಯೋಜಿತರಾದಾಗ ಸಜ್ಜನ್ ಅವರು ಅಮೆರಿಕನ್ ಸೇನೆಯ ಕಮಾಂಡರ್ ಅವರ ಮನವಿ ಪುರಸ್ಕರಿಸಿ ಅದನ್ನು ಸೇರಿದ್ದರು. 2010ರಲ್ಲಿ ಅವರು ಅಮೆರಿಕನ್ ಸೇನೆಯ ಮೇಜರ್ ಜನರಲ್ ಜೇಮ್್ಸ ಎಲ್ ಟೆರ್ರಿ ಅವರ ವಿಶೇಷ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಎಲ್ಲ ಸೇನಾ ಇತಿಹಾಸವನ್ನು ಬಲ್ಲ ಕೆನೆಡಿಯನ್ನರು ಸಜ್ಜನ್​ರನ್ನು ‘ವಾರ್ ಹೀರೋ’ ಎಂದೂ, ‘ಟ್ರಯಲ್​ಬ್ಲೇಝುರ್’ ಎಂದೂ ಪ್ರೀತಿಯಿಂದ ಕರೆಯುತ್ತಾರೆ.

ಭಾರತದ ಪಂಜಾಬ್ ರಾಜ್ಯದ ಹೋಶಿಯಾರ್​ಪುರ ಜಿಲ್ಲೆಯ ಬೊಂಬೆಲಿ ಎಂಬ ಗ್ರಾಮದಲ್ಲಿ 1970ರ ಸೆ.6ರಂದು ಸಜ್ಜನ್ ಹುಟ್ಟಿದ್ದು. ಸಜ್ಜನ್ ಐದು ವರ್ಷದವರಿದ್ದಾಗ ಅವರ ಕುಟುಂಬ ಕೆನಡಾಕ್ಕೆ ವಲಸೆ ಹೋಯಿತು. ಕೆನಡಾದ ವಾನ್​ಕೋವರ್​ನಲ್ಲಿ ಮುಂದಿನ ಬೆಳವಣಿಗೆ. ತಂದೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರೆ, ತಾಯಿ ಬೆರ್ರಿ ಹಣ್ಣುಗಳನ್ನು ಮಾರಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದರು. ಹದಿಹರೆಯದಲ್ಲೇ ಅವರು ಸಿಖ್ ಧರ್ಮದ ದೀಕ್ಷೆ ಪಡೆದರು. ಮುಂದೆ ಶಿಕ್ಷಣ ಮುಗಿಸಿ, ಪೊಲೀಸ್ ಸೇವೆ ಸೇರಿದ ಬಳಿಕ ಕುಲ್​ಜಿತ್ ಕೌರ್ ಎಂಬಾಕೆಯನ್ನು ವಿವಾಹವಾದರು. ಕುಲ್​ಜಿತ್ ಕೌರ್ ವೃತ್ತಿಯಲ್ಲಿ ವೈದ್ಯರು. ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳಿದ್ದಾರೆ.

ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಸಜ್ಜನ್ ಎದುರು ದೇಶ ರಕ್ಷಣೆಯ ಬೃಹತ್ ಸವಾಲುಗಳಿವೆ. ಪ್ರಧಾನಿ ಟ್ರೂಡೂ ಸಿರಿಯಾ ಹಾಗೂ ಐಎಸ್​ಐಎಸ್ ವಿರುದ್ಧದ ಹೋರಾಟದ ಯೋಜನೆಯನ್ನು ಮರುರೂಪಿಸಲು ಚಿಂತನೆ ನಡೆಸಿದ್ದಾರೆ. ಈಗಾಗಲೇ, ಅಮೆರಿಕ ನೇತೃತ್ವದ ಮೈತ್ರಿಕೂಟ ತೊರೆದು ಇರಾಕ್​ನ ಸೇನಾಪಡೆಗೆ ತರಬೇತಿ ನೀಡುವುದಕ್ಕೆ ಕೆನಡಾ ಉತ್ತೇಜನ ನೀಡಲಿದೆ ಎಂದೂ ಟ್ರೂಡೂ ಸ್ಪಷ್ಟಪಡಿಸಿದ್ದಾರೆ. ಸೇನೆ ಒಳ ಹೊರಗನ್ನು ಬಲ್ಲ ಸೇನಾನಿಯಾಗಿ ಕರ್ತವ್ಯ ನಿಭಾಯಿಸಿದ್ದಕ್ಕಿಂತಲೂ ಹೆಚ್ಚು ಸಚಿವರಾಗಿ ಮುತುವರ್ಜಿ ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರು ಯಾವ ರೀತಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಕಾಡಿದೆ.

Leave a Reply

Your email address will not be published. Required fields are marked *