ದಣಿವರಿಯದ ಕಾರ್ಯ

Prof SS Katagihallimath
Prof SS Katagihallimath

ಶ್ರೀಮಂತ ಇರ್ಲಿ, ಬಡವ ಇರ್ಲಿ, ಕಿಂಗ್ ಇರ್ಲಿ, ಹಿಟ್ಲರ್ ಇರ್ಲಿ, ಯಾಂವನೇ ಆಗಿರ್ಲಿ, ಅವಾ ಖಡ್ಗಾ ಹಿಡಕಂಡ್ ಕಾದಿರಲಿ, ಐವತ್ ಮಂದೀನ್ ಕೊಂದಿರ್ಲಿ, ಒಂದೇ ಒಂದ್ ಹೆಣ್ ಅನಾಫಿಲೀಸ್ ಸೊಳ್ಳಿ ಕಡದರ ಮುಗೀತ್ರಿ.. ಎಂಥಾ ಧೀರರಿಗೂ ಬಿಡೂದಿಲ್ರಿ.. ಮಲೇರಿಯಾ ಬರತೈತ್ರಿ’

ಯಾರಾದರೂ ಮಲೇರಿಯಾ ಸುದ್ದಿ ಎತ್ತಿದರೆ ಸಾಕು ಇಂತಹದೊಂದು ಮಾತು ಹೇಳಿ ಅದರ ತೀವ್ರತೆಯನ್ನು ಎಚ್ಚರಿಸುವುದರ ಜತೆಗೆ ಮುಖದ ಮೇಲೊಂದು ನಗು ಅರಳುವಂತೆಯೂ ಮಾಡುತ್ತಾರೆ ಪ್ರೊ.ಎಸ್.ಎಸ್.ಕಟಗಿಹಳ್ಳಿಮಠ. ರಾಜ್ಯದ ಪ್ರಸಿದ್ಧ ಕೃಷಿ ಕೀಟ ವಿಜ್ಞಾನಿಗಳಲ್ಲೊಬ್ಬರು. 97ರ ಹರೆಯದಲ್ಲೂ ಸತತ ಕ್ರಿಯಾಶೀಲರು. ಕೃಷಿ ಶಿಕ್ಷಣ, ಕೃಷಿ ಸಂಶೋಧನೆ ಮತ್ತು ಕೃಷಿ ವಿಸ್ತರಣೆ ಎಂಬ ಮೂರು ವಿಭಾಗಗಳಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿ ಅನುಭವ ಪಡೆದ ವಿರಳ ವಿಜ್ಞಾನಿಗಳ ಪೈಕಿ ಇವರೂ ಒಬ್ಬರು. ಹೀಗಾಗಿಯೇ ಈಗಲೂ ಕೃಷಿ- ಕೀಟದ ವಿಚಾರ ಪ್ರಸ್ತಾಪವಾದರೆ ಕೂಡಲೇ ಅವರ ಕಿವಿ ಚುರುಕಾಗುತ್ತದೆ, ದಶಕಗಳ ಅನುಭವದ ಮಾತು ಹೊರಹೊಮ್ಮುತ್ತದೆ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ಮುಖ್ಯ ಕೃಷಿ ಅಧಿಕಾರಿಯಾಗಿ, ಸಹಾಯಕ ಕೃಷಿ ನಿರ್ದೇಶಕರಾಗಿ, ಕೃಷಿ ಉಪನಿರ್ದೇಶಕರಾಗಿ ಅವಿಸ್ಮರಣೀಯ ಕೆಲಸ ಮಾಡಿ ಜನಮೆಚ್ಚುಗೆಗೆ ಪಾತ್ರರಾದವರು. ಅನೇಕ ಸರ್ಕಾರಿ ಅಧಿಕಾರಿಗಳಂತೆ ಕಚೇರಿಗೆ ಅಂಟಿಕೊಂಡು ಕೂಡ್ರದೆ ಕ್ಷೇತ್ರಕಾರ್ಯದಲ್ಲಿ ನಂಬಿಕೆಯಿಟ್ಟವರು.

ಬಾಗಲಕೋಟೆಯ ಗ್ರಾಮೀಣಾಭಿವೃದ್ಧಿ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಅವರು ಮಾಡಿದ ಅನೇಕ ಕಾರ್ಯಗಳು ಕೃಷಿ ವಿಜ್ಞಾನರಂಗದಲ್ಲಿ ಮಹತ್ವದ ಮೈಲಿಗಲ್ಲುಗಳಾಗಿವೆ. ಕೃಷಿ ವಿಜ್ಞಾನಕ್ಕೆ ಸೀಮಿತವಾಗಿದ್ದ ತಮ್ಮ ಕಾರ್ಯವ್ಯಾಪ್ತಿಯನ್ನು ಅವರು ಸಮಗ್ರ ಕೃಷಿ, ತೋಟಗಾರಿಕೆ, ಪಶುಪಾಲನೆ ಮುಂತಾದ ಕ್ಷೇತ್ರಗಳಿಗೂ ವಿಸ್ತರಿಸಿ ಯಶ ಕಂಡರು. ವಿಶ್ವಸಂಸ್ಥೆಯ ಆಹಾರ ಕೃಷಿ ವಿಭಾಗದ ನೆರವಿನೊಂದಿಗೆ ನಡೆಸಲ್ಪಟ್ಟ ಪೌಷ್ಟಿಕ ಆಹಾರ ಯೋಜನೆಯ ಪ್ರಕಾರ ಬಿಡಿಒ, ತಾಲೂಕು ಅಭಿವೃದ್ಧಿ ಮಂಡಲದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಶಾಲಾ ಶಿಕ್ಷಕರಿಗೆ, ಸಂಬಂಧಪಟ್ಟ ಇಲಾಖಾ ಸಿಬ್ಬಂದಿಗೆ ತರಬೇತಿ ನೀಡಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಿವೃತ್ತಿಯಾಗುವ ವೇಳೆ ಅವರು ಕೃಷಿ ಕೀಟಶಾಸ್ತ್ರ ವಿಜ್ಞಾನಿಯಾಗಿ ಪ್ರಸಿದ್ಧರಾಗಿದ್ದರು. ಸೇವಾವಧಿಯ ಕೊನೆಯ ವರ್ಷಗಳಲ್ಲಿ ಸಸ್ಯ ರೋಗ ವಿಜ್ಞಾನಿಯಾಗಿ, ಪ್ರಭಾರ ಬೇಸಾಯ ತಜ್ಞರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. 1974ರಲ್ಲಿ ವೃತ್ತಿಯಿಂದ ನಿವೃತ್ತರಾದ ಇವರು ಸಾಮಾನ್ಯ ಸರ್ಕಾರಿ ಅಧಿಕಾರಿಗಳಂತೆ ಮುಖ್ಯವಾಹಿನಿಯಿಂದ ಹಿಂದೆ ಸರಿಯಲಿಲ್ಲ. ಇನ್ನಷ್ಟು ಕ್ರಿಯಾಶೀಲರಾಗಿ ಕೃಷಿಕರಿಗೆ ಹತ್ತಿರವಾದರು. ನಿವೃತ್ತಿಯ ನಂತರ ಇವರು ಚರ್ಚ್ ಆಫ್ ಸೌತ್ ಇಂಡಿಯಾದವರು ಧಾರವಾಡದ ಗುಮ್ಮಗೋಳ ಗ್ರಾಮದಲ್ಲಿ ಆರಂಭಿಸಿದ ಕೃಷಿ ಶಿಕ್ಷಣ ಕೇಂದ್ರದ ಪ್ರಥಮ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದರು. ಇದಲ್ಲದೆ, ಧಾರವಾಡ ಜಿಲ್ಲೆಯ ಸಮ್ಮಿಶ್ರ ತಳಿ ಮತ್ತು ಆರ್ಥಿಕ ಇಳುವರಿ ತಳಿಗಳ ಬೀಜೋತ್ಪಾದಕರ ಸಹಕಾರಿ ಸಂಘದ ತಾಂತ್ರಿಕ ಸಲಹೆಗಾರ, ಬೆಂಗಳೂರಿನ ಭಾರತೀಯ ಸಾಮಾಜಿಕ ಆರ್ಥಿಕ ಅಧ್ಯಯನ ಸಂಸ್ಥೆಯ ಕೃಷಿ ಸಲಹಾ ವಿಭಾಗದ ಗೌರವ ಸಂಘಟಕರಾಗಿ, ಅದೇ ಸಂಸ್ಥೆಯ ‘ಕೃಷಿ ವಾರ್ತೆ’ ಮಾಸಿಕದ ಸಂಪಾದಕ, ಬೆಂಗಳೂರಿನ ಇನ್​ಫೆಸ್ಟೇಷನ್ ಕಂಟ್ರೋಲ್ ಕಾರ್ಪೆರೇಷನ್ ಹಾಗೂ ಮುಂಬೈನ ಇಮ್ರ್ ಕಂಪನಿಗೆ ಬೆಳೆ ಸಂರಕ್ಷಣೆಯ ತಾಂತ್ರಿಕ ಸಲಹೆಗಾರರಾಗಿ ಹೀಗೆ ಬಹುವಿಧದ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದರು.

ಈಗಲೂ ಅವರು ಬೆಂಗಳೂರು, ಕೋಲಾರ, ಧಾರವಾಡ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಗೌರವ ತಾಂತ್ರಿಕ ಸಲಹೆಗಾರರಾಗಿ ರೈತರಿಗೆ ನೂರಾರು ತೋಟ ನಿರ್ವಣದಲ್ಲಿ ನೆರವಾಗಿದ್ದಾರೆ, ನೆರವಾಗುತ್ತಿದ್ದಾರೆ ಕೂಡ. ಬಹುಮಹಡಿ, ಬಹುಬೆಳೆ ಹಾಗೂ ರಿಲೇ ಬೆಳೆ ಯೋಜನೆಗಳ ನಿರ್ಮಾಣ ಅವುಗಳನ್ನು ಕಾರ್ಯರೂಪದಲ್ಲಿ ಯಶಸ್ವಿಯಾಗಿ ನಿರ್ವಹಿಸುವ ಅವರ ಕಾರ್ಯತಂತ್ರ ಮೆಚ್ಚುಗೆಗೆ ಪಾತ್ರವಾಗಿದೆ.

ಇವರ ವೃತ್ತಿ ಜೀವನ ಆರಂಭವಾಗಿದ್ದು 1945ರಲ್ಲಿ ಪುಣೆಯ ಕೃಷಿ ಮಹಾವಿದ್ಯಾಲಯದಲ್ಲಿ ಬೋಧಕ ವೃತ್ತಿಯ ಮೂಲಕ. ನಂತರ 1947ರಲ್ಲಿ ಧಾರವಾಡದಲ್ಲಿ ಹೊಸದಾಗಿ ಕೃಷಿ ಮಹಾವಿದ್ಯಾಲಯ ಆರಂಭವಾದಾಗ ಉಪನ್ಯಾಸಕರಾಗಿ ಮುಂಬಡ್ತಿ ಪಡೆದು ಪ್ರಾಣಿಶಾಸ್ತ್ರ ಮತ್ತು ಕೃಷಿ ಕೀಟಶಾಸ್ತ್ರ ವಿಭಾಗಕ್ಕೆ ವರ್ಗಾವಣೆ ಪಡೆದುಕೊಂಡರು. 1953ರಲ್ಲಿ ಕೃಷಿ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಅದೇ ಮಹಾವಿದ್ಯಾಲಯದಲ್ಲಿ ಸೇವೆ ಮುಂದುವರಿಸಿದ್ದಲ್ಲದೇ, ಅದ್ಭುತವಾದ ಪ್ರಾಣಿಶಾಸ್ತ್ರ ಮತ್ತು ಕೃಷಿ ಕೀಟಶಾಸ್ತ್ರದ ವಸ್ತು ಸಂಗ್ರಹಾಲಯ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಸಂಶೋಧನಾ ಕ್ಷೇತ್ರದಲ್ಲಿ ದಶಕಗಳ ಸಾಧನೆ ಅವರದ್ದು. 1993ರ ಅವಧಿಯಲ್ಲೇ ಅವರು ಆರು ಸಂಶೋಧನಾ ಗ್ರಂಥ, 16 ಸಂಶೋಧನಾ ಪ್ರಬಂಧ, 200ಕ್ಕಿಂತ ಹೆಚ್ಚು ಕೃಷಿ ಸಂಬಂಧಿ ಲೇಖನಗಳನ್ನು ಪ್ರಕಟಿಸಿದ್ದರು. ಹೀಗೆ ಕೃಷಿ ಕ್ಷೇತ್ರದ ನುಡಿಸೇವೆಯಲ್ಲೂ ಇವರ ಕಾರ್ಯ ಗಮನಾರ್ಹವಾದುದು. ಸೇವಾ ಅವಧಿಯ ಅನುಭವಗಳನ್ನಾಧರಿಸಿ ಸಾವಯವ ಕೃಷಿಯ ಕುರಿತಾದ ಮೂರು ಹೊತ್ತಿಗೆಗಳನ್ನು- ‘ಅನುಭವ ಸಿದ್ಧ ಕೃಷಿ ಕೈಪಿಡಿ’, ‘ಸಾವಯವ ಕೃಷಿ ದಿಕ್ಸೂಚಿ ಲೇಖನಗಳು’, ‘ಅನುಭವ ಸಿದ್ಧ ಸಾವಯವ ಕೃಷಿ ಸಿದ್ಧಾಂತಗಳು’- ಬೇರೆ ಬೇರೆ ಪ್ರಕಾಶಕರ ಮೂಲಕ ಪ್ರಕಟಿಸಿದ್ದಾರೆ.

ಇವರ ಸಾಧನೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1993)- ವಿಜ್ಞಾನ(ಕೃಷಿ ಮತ್ತು ತೋಟಗಾರಿಕೆ)ದ ಬೆಳವಣಿಗೆಗಾಗಿ, ಇಕಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಪ್ರಶಸ್ತಿ (1995)- 5ನೇ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಬಂಧ ಮಂಡನೆಗಾಗಿ, ಜಮ್ನಾಲಾಲ್ ಪ್ರಶಸ್ತಿ (1997)- ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ತಂತ್ರಜ್ಞಾನ ಬಳಕೆಗಾಗಿ, ಅಲ್ಲಮ ಶ್ರೀ ಪ್ರಶಸ್ತಿ (1999)- ವೈಜ್ಞಾನಿಕ ಕೃಷಿಯ ಸಂಶೋಧನಾ ಪರಿಣಾಮಗಳನ್ನು ಕೃಷಿಭೂಮಿಗೆ ತಲುಪಿಸಿದ್ದಕ್ಕಾಗಿ ಸಂದಿದ್ದು, ಪ್ರಶಸ್ತಿ ಪುರಸ್ಕಾರಗಳ ಪೈಕಿ ಪ್ರಮುಖವಾದವು.

ಅಂದ ಹಾಗೆ, ಪ್ರೊ.ಸಿದ್ಧಲಿಂಗ ಸ್ವಾಮಿ ಕಟಗಿಹಳ್ಳಿಮಠ ಎಂಬುದು ಪ್ರೊ.ಎಸ್.ಎಸ್.ಕಟಗಿಹಳ್ಳಿಮಠರ ಪೂರ್ಣಹೆಸರು. ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮ ಇವರ ಹುಟ್ಟೂರು. 1919ರ ಮೇ 4ರಂದು ಗೌರವಾನ್ವಿತ ಕೃಷಿಕ ಮನೆತನದ ಸೋಮಯ್ಯ-ಬಸಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಫಕೀರಯ್ಯ, ಶಿವಗಂಗಾದೇವಿ, ಫಕೀರವ್ವ ಇವರ ಒಡಹುಟ್ಟಿದವರು. ಇವರೇ ಕೊನೆಯವರು. 1945ರಲ್ಲಿ ಶಶಿಕಲಾರನ್ನು ವಿವಾಹವಾದ ಇವರಿಗೆ ಕುಮಾರಸ್ವಾಮಿ, ಶಕುಂತಲಾ, ಅನ್ನಪೂರ್ಣ ಮತ್ತು ಸೋಮಶೇಖರ ಎಂಬ ನಾಲ್ವರು ಮಕ್ಕಳು.

ಈ ಇಳಿವಯಸ್ಸಿನಲ್ಲೂ ಮತ್ತೊಂದು ಪುಸ್ತಕ ರಚಿಸಿ ಪ್ರಕಟಿಸುವುದಕ್ಕೆ ಅಣಿಯಾಗಿದ್ದಾರೆ. ‘ಸಾವಯವ ಕೃಷಿಯ ಒಂದು ಅಧ್ಯಯನ’ ಎಂಬ ಶೀರ್ಷಿಕೆಯಲ್ಲಿ 800 ಪುಟಗಳ ಪುಸ್ತಕ ಪ್ರಕಟಣೆಗೆ ಸಿದ್ಧವಾಗಿದ್ದು, ಈ ಕುರಿತು ನಾಡಿನ ಪ್ರಸಿದ್ಧರ ಅಭಿಪ್ರಾಯ ಸಂಗ್ರಹಿಸಿ ಆ ಪುಸ್ತಕದ ಜತೆ ಸೇರಿಸಿ ಪ್ರಕಟಿಸುವ ಇರಾದೆ ಅವರದ್ದು. ಇಂತಹ ಕ್ರಿಯಾಶೀಲತೆಯಿಂದಾಗಿಯೇ ಈಗಲೂ ಅವರು ನಾಡಿನ ಗಮನಸೆಳೆಯುತ್ತಿರುವುದು. ಅವರ ಈ ಕ್ರಿಯಾಶೀಲ ಸಾಧನೆಯ ಹಾದಿ ಇಂದಿನ ಹಾಗೂ ಮುಂದಿನ ಯುವಪೀಳಿಗೆಗೆ ಮಾದರಿಯೇ ಸರಿ.

Leave a Reply

Your email address will not be published. Required fields are marked *