ದೆಹಲಿ ಬಿಜೆಪಿಯ ಹೊಸ ಆಶಾಕಿರಣ

VYAKTHIVISHESHA KIRAN BEDI - VIJAYAVANI EDIT PAGE - 18.1.15ದೆಹಲಿಯಲ್ಲೀಗ ಮೈ ನಡುಗಿಸುವ ಚಳಿ ಇದ್ದರೂ, ವಿಧಾನಸಭಾ ಚುನಾವಣೆಯ ಕಾವು ಅಲ್ಲಿನ ವಾತಾವರಣವನ್ನು ಬೆಚ್ಚಗಿರುವಂತೆ ಮಾಡಿದೆ. ವಿವಿಧ ನಾಯಕರ ಪಕ್ಷಾಂತರ ಪರ್ವ ನಡೆದಿದೆ. ಅವುಗಳ ನಡುವೆ ಗಮನ ಸೆಳೆದುದು ಅಣ್ಣಾ ಹಜಾರೆ ಅವರ `ಭ್ರಷ್ಟಾಚಾರ ವಿರೋಧಿ ಭಾರತ’ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ರಾಜಕೀಯ ಪ್ರವೇಶ.

2012ರಲ್ಲಿ ಅಣ್ಣಾ ಆಂದೋಲನದ ವೇಳೆ ರಾಜಕೀಯದಿಂದ ದೂರವೇ ಉಳಿದಿದ್ದರೂ ಕಿರಣ್ ಬೇಡಿ ಬಿಜೆಪಿ ಪರ ಒಲವು ಹೊಂದಿದ್ದರು. `ರಾಜಕೀಯ ವ್ಯವಸ್ಥೆಯಲ್ಲಿ ದಶಕಗಳಿಂದ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ವಿರುದ್ಧದ ನಿಲುವೇನೋ ಸರಿ. ಆದರೆ, ಬಿಜೆಪಿಯನ್ನೂ ಇತರೆ ಪಕ್ಷಗಳನ್ನೂ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಅವುಗಳಿಗೂ ಆಡಳಿತ ನಡೆಸಲು ಅವಕಾಶ ನೀಡಬೇಕು’ ಎಂಬುದು ಅವರ ವಾದವಾಗಿತ್ತು. ಹೀಗಾಗಿ ಅಣ್ಣಾ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದ ಅರವಿಂದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಮೊದಲಾದವರು ರಾಜಕೀಯ ಪಕ್ಷ ಕಟ್ಟಲು ನಿರ್ಧರಿಸಿದಾಗ ಅದನ್ನು ವಿರೋಧಿಸಿದ್ದರಲ್ಲದೆ ರಾಜಕಾರಣದಿಂದ ದೂರವೇ ಉಳಿದಿದ್ದರು. ಆದರೆ ದಿಲ್ಲಿ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಕಿರಣ್ ಬೇಡಿ ಅವರು ಬಿಜೆಪಿಗೆ ಸೇರ್ಪಡೆಯಾದ ಕೂಡಲೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಹೀಗೆ- `I have been fond of Kiran Bedi ji. I always tried to convince her that she should join politics. I am happy she did it today’.

ಹೌದು, ಕೇಜ್ರಿವಾಲ್ ಹಾಗೂ ಬೇಡಿ ನಡುವೆ ಕೆಲವು ಸಾಮ್ಯತೆಗಳೂ ಇವೆ. ಇಬ್ಬರೂ ಸರ್ಕಾರಿ ಅಧಿಕಾರಿಗಳಾಗಿದ್ದವರು. ಕೇಜ್ರಿವಾಲ್ ಹೊಸದಾಗಿ ಆಮ್ ಆದ್ಮಿ ಪಕ್ಷವನ್ನು ಹುಟ್ಟುಹಾಕಿ ಅಲ್ಪಾವಧಿಗೆ ಮುಖ್ಯಮಂತ್ರಿಯಾದವರು. ಈಗ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. `ಕಮಲ’ ಪಾಳಯ ಸೇರಿರುವ ಬೇಡಿ ಕೂಡ ದೆಹಲಿಯ ಮುಖ್ಯಮಂತ್ರಿಯಾಗುವ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಈ ಮಧ್ಯೆ ಫೆ.7ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೇಡಿಯವರನ್ನೇ ಕೇಜ್ರಿವಾಲ್ ಎದುರು ಕಣಕ್ಕಿಳಿಸಿ ಸಿಎಂ ಅಭ್ಯರ್ಥಿಯಾಗಿ ಬಿಂಬಿಸುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿ ಸೇರಿದ್ದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಬೇಡಿ, “ಕಳೆದ ನಾಲ್ಕು ದಶಕಗಳ ನನ್ನ ಜೀವನ ಪೂರ್ತಿಯಾಗಿ ದೇಶ ಹಾಗೂ ಸಾರ್ವಜನಿಕರಿಗಾಗಿ ಮೀಸಲಾಗಿತ್ತು. ಅದು ನನ್ನ ಆಡಳಿತಾತ್ಮಕ ಅನುಭವವೂ ಹೌದು. ದೆಹಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಹೇಗೆ ಕೆಲಸ ಮಾಡಬೇಕು ಮತ್ತು ಹೇಗೆ ಕೆಲಸ ಮಾಡಿಸಬೇಕು ಎಂಬುದನ್ನೂ ನಾನರಿತೆ. ನನ್ನ ಸೇವಾನುಭವ, ಆಡಳಿತಾನುಭವಗಳನ್ನು ಕೊಡುಗೆ ರೂಪದಲ್ಲಿ ದೆಹಲಿ ಹಾಗೂ ನನ್ನ ದೇಶಕ್ಕೆ ಕೊಡುವುದಕ್ಕಾಗಿ ರಾಜಕೀಯ ರಂಗ ಪ್ರವೇಶಿಸಿದ್ದೇನೆ. ದೆಹಲಿಗೆ ಈಗ ಸ್ಥಿರ ಸರ್ಕಾರದ ಅವಶ್ಯಕತೆ ಇದೆ. ದಿಲ್ಲಿಯನ್ನು ದೇಶದ `ದಿಲ್’ ಆಗಿ ಪರಿವರ್ತಿಸುವೆ” ಎಂದು ಹೇಳಿದ್ದಾರೆ.
ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹಿರಿಮೆ ಹೊಂದಿರುವ ಕಿರಣ್ ಬೇಡಿ ಹೊಸ ಆಶಯದೊಂದಿಗೆ ರಾಜಕೀಯ ರಂಗ ಪ್ರವೇಶಿಸಿದ್ದು, ಅವರ ಸಾಧನೆಯ ಹಾದಿ ನಿಜಕ್ಕೂ ಇತರರಿಗೆ ಮಾದರಿ.

1949ರ ಜೂನ್ 9ರಂದು ಪಂಜಾಬಿನ ಅಮೃತಸರದಲ್ಲಿ ಜನಿಸಿದ ಕಿರಣ್ ಪದವಿ ತನಕದ ಶಿಕ್ಷಣವನ್ನು ಹುಟ್ಟೂರಲ್ಲೇ ಪಡೆದರು. ಬಳಿಕ ಚಂಡೀಗಢದ ಪಂಜಾಬ್ ವಿವಿಯಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪೊಲೀಸ್ ಇಲಾಖೆಗೆ ಕೆಲಸಕ್ಕೆ ಸೇರಿದ ಬಳಿಕವೂ 1988ರಲ್ಲಿ ದೆಹಲಿ ವಿವಿಯಿಂದ ಕಾನೂನು ಪದವಿ ಪರೀಕ್ಷೆ ಉತ್ತೀರ್ಣರಾದರು. 1993ರಲ್ಲಿ ಕಿರಣ್ ಬೇಡಿಯವರು `Drug Abuse and Domestic Violence’ ಎಂಬ ವಿಷಯದ ಮೇಲೆ ಸಲ್ಲಿಸಿದ್ದ ಸಂಶೋಧನಾ ಪ್ರಬಂಧಕ್ಕೆ ನವದೆಹಲಿ ಐಐಟಿಯ ಸಮಾಜಶಾಸ್ತ್ರ ವಿಭಾಗವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇನ್ನು ವೃತ್ತಿಜೀವನಕ್ಕೆ ಸಂಬಂಧಿಸಿ ಹೇಳುವುದಾದರೆ, 1970ರಲ್ಲಿ ಅಮೃತಸರದ ಖಾಲ್ಸಾ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಎರಡು ವರ್ಷಗಳ ತರುವಾಯ ಐಪಿಎಸ್ ಸೇರಿದರು. ನವದೆಹಲಿಯ ಟ್ರಾಫಿಕ್ ಪೊಲೀಸ್ ಆಯುಕ್ತೆ, ಮಿಜೋರಂನ ಡಿಜಿಪಿ, ಚಂಡೀಗಢದ ಲೆಫ್ಟಿನಂಟ್ ಗವರ್ನರ್ ಅವರ ಸಲಹೆಗಾರ್ತಿ, ಮಾದಕವಸ್ತು ನಿಯಂತ್ರಣ ಮಂಡಳಿಯ ಡಿಜಿ, ತಿಹಾರ್ ಜೈಲಿನ ಮುಖ್ಯಸ್ಥೆ ಸೇರಿದಂತೆ ಇನ್ನಿತರೆ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು.

ಕರ್ತವ್ಯನಿಷ್ಠೆ ವಿಷಯಕ್ಕೆ ಬಂದಾಗ ದೆಹಲಿ ಜನ ಅವರನ್ನು ನೆನಪಿಸೋದು `ಕ್ರೇನ್ ಬೇಡಿ’ ಎಂದೇ! ಅವರು ದೆಹಲಿಯ ಸಂಚಾರ ನಿಯಂತ್ರಣ ವಿಭಾಗದಲ್ಲಿದ್ದಾಗ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಕಾರನ್ನೇ ಎತ್ತೊಯ್ದಿದ್ದರು. ಹೀಗಾಗಿ ಅವರಿಗೆ `ಕ್ರೇನ್ ಬೇಡಿ’ ಎಂಬ ಅಡ್ಡ ಹೆಸರು ಬಿತ್ತು.

ತಿಹಾರ್ ಜೈಲಿನ ಮುಖ್ಯಸ್ಥರಾಗಿದ್ದಾಗ ಅವರು ಅಲ್ಲಿ ಜಾರಿಗೊಳಿಸಿದ ಸುಧಾರಣಾ ಕ್ರಮಗಳು ಸಾಕಷ್ಟು ಪ್ರಶಂಸೆಗೆ ಪಾತ್ರವಾದವು. ಕೈದಿಗಳು ಕೂಡಾ ಮನುಷ್ಯರೇ, ಅವರಲ್ಲೂ ಪರಿವರ್ತನೆ ತರುವುದು ಸಾಧ್ಯ ಎಂಬುದನ್ನು ಪ್ರತಿಪಾದಿಸಿದ ಅವರು, ಕೈದಿಗಳಿಗಾಗಿ ಯೋಗ, ಧ್ಯಾನ ಮತ್ತಿತರೆ ವಿಶೇಷ ಪುನಶ್ಚೇತನಾ ಕ್ರಮಗಳನ್ನು ಕೈಗೊಂಡು ಗಮನ ಸೆಳೆದರು. ಅವರ ಈ ಸಾಧನೆಗೆ ಅರ್ಹವಾಗಿಯೇ ಮ್ಯಾಗ್ಸೆಸೆ ಪುರಸ್ಕಾರವೂ ಲಭಿಸಿತು. 2005ರಲ್ಲಿ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿ ಡಿಜಿಯಾಗಿ ನೇಮಕಗೊಂಡ ಅವರು, 2007ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು. ಸೇವಾ ಹಿರಿತನ ಇದ್ದಾಗ್ಯೂ ತನ್ನನ್ನು ಕಡೆಗಣಿಸಿ ಎರಡು ವರ್ಷ ಕಿರಿಯ ಅಧಿಕಾರಿಗೆ ಬಡ್ತಿ ಕೊಟ್ಟು ಕಮಿಷನರ್ ಆಗಿ ನೇಮಕ ಮಾಡಿದ್ದು ಅವರ ಮನಸ್ಸನ್ನು ಘಾಸಿಗೊಳಿಸಿತ್ತು. ಹೀಗಾಗಿಯೇ ಅವರು ನಿವೃತ್ತಿ ಪಡೆದರು ಎನ್ನುತ್ತಾರೆ ಅವರ ಆಪ್ತರು. ಈಶಾನ್ಯ ರಾಜ್ಯ ವಿದ್ಯಾರ್ಥಿಗಳ ಕೋಟಾದಲ್ಲಿ ಮಗಳಿಗೆ ಎಂಬಿಬಿಎಸ್ ಸೀಟು ಕೊಡಿಸಿದ್ದು ಸೇರಿದಂತೆ ಕೆಲವು ವಿವಾದಗಳೂ ಇವರ ಬೆನ್ನಿಗಿವೆ.
ಸಂತೃಪ್ತಿಯ ಕೌಟುಂಬಿಕ ಬದುಕು ಸಾಗಿಸುತ್ತಿರುವ ಕಿರಣ್ ಬೇಡಿ ತಮ್ಮ ಪತಿ ಬ್ರಿಜ್ ಬೇಡಿ ಅವರನ್ನು ಮೊದಲಬಾರಿ ಭೇಟಿ ಮಾಡಿದ್ದು ಟೆನ್ನಿಸ್ ಕೋರ್ಟ್‍ನಲ್ಲಿ! ಹಾಗೆ ಆರಂಭವಾದ ಆ ಪರಿಚಯ ಮುಂದೆ ಸಂಬಂಧ ಬೆಸೆಯಲು ಕಾರಣವಾಯಿತು. ಈ ವಿಷಯವನ್ನು ಬೇಡಿ ಪುತ್ರಿ ಸೈನಾ ಬಹಿರಂಗಪಡಿಸಿದ್ದಾರೆ. ಪತ್ರಕರ್ತೆಯಾಗಿರುವ ಸೈನಾ ತನ್ನ ತಾಯಿಯ ಬಗ್ಗೆ ಧಾರವಾಹಿಯನ್ನೂ ನಿರ್ಮಿಸಿದ್ದರು.

ಸಾಮಾಜಿಕ ಆಂದೋಲನಗಳಿಂದ ಈಗ ರಾಜಕೀಯ ಪ್ರವೇಶಿಸಿರುವ ಕಿರಣ್ ಬೇಡಿ, ದೆಹಲಿಯ ಸಮಸ್ಯೆ ಪರಿಹಾರಕ್ಕಾಗಿ ಆರು `ಪಿ'(Prisons, Prosecution, Outreach to People, Parents, Improving Policing, and Press) ಮಂತ್ರ ಜಪಿಸ ತೊಡಗಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರ ಬೆಂಬಲವಿದೆಯಾದರೂ, ರಾಜಕೀಯ ಅನುಭವ ಇಲ್ಲ. ದೆಹಲಿಗೆ ಹೊರಗಿನವರು ಎಂಬ ಆರೋಪವೂ ಇದ್ದು, ರಾಜಕಾರಣದಲ್ಲಿ ಯಾವ ರೀತಿ ಸಾಧನೆ ತೋರಲಿದ್ದಾರೆ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *