ದೇಶಪ್ರೇಮದ ಪಾಠ ಹೇಳಿದ ನ್ಯಾಯಪೀಠ

ನ್ಯಾ.ಪ್ರತಿಭಾರಾಣಿ
ನ್ಯಾ.ಪ್ರತಿಭಾರಾಣಿ

ಅಂದು 2016ರ ಮಾರ್ಚ್ 2. ದೆಹಲಿ ಹೈಕೋರ್ಟ್‍ನ ಮೇಲಿತ್ತು ಎಲ್ಲರ ಗಮನ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‍ಯು) ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದ ತೀರ್ಪು ಹೊರಬರುವುದಿತ್ತು. ನ್ಯಾಯಮೂರ್ತಿ ಪ್ರತಿಭಾರಾಣಿ ನ್ಯಾಯಪೀಠದಲ್ಲಿದ್ದರು. ಕನ್ಹಯ್ಯ ಕುಮಾರ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ತಂಡ ಹಾಗೂ ಸರ್ಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರ ವಾದಗಳನ್ನು ಆಲಿಸಿದ್ದ ನ್ಯಾಯಮೂರ್ತಿಯವರು ತೀರ್ಪು ನೀಡಿದ ಪರಿ ವಿಶೇಷವಾಗಿತ್ತು. ಅವರ ಮಾತುಗಳು ಆರಂಭವಾಗಿದ್ದೇ ದೇಶಪ್ರೇಮದ ಹಾಡಿನೊಂದಿಗೆ..
`ರಂಗ್ ಹರಾ ಹರಿ ಸಿಂಗ್ ನಾವ್ಲೆ ಸೆ/ ರಂಗ್ ಲಾಲ್ ಹೇ ಲಾಲ್ ಬಹಾದೂರ್ ಸೇ/ರಂಗ್ ಬನಾ ಬಸಂತಿ ಭಗತ್ ಸಿಂಗ್ / ರಂಗ್ ಅಮನ್ ಕಾ ವೀರ್ ಜವಾಹರ್ ಸೇ / ಉಗ್ಲೇ ಹೀರೇ ಮೋತಿ ಮೇರೆ ದೇಶ್ ಕಿ ಧರ್ತಿ’
“ಅರವತ್ತರ ದಶಕದಲ್ಲಿ ಬಿಡುಗಡೆಯಾಗಿದ್ದ `ಉಪಕಾರ್’ ಹಿಂದಿ ಸಿನಿಮಾದ ರಾಷ್ಟ್ರಪ್ರೇಮದ ಹಾಡಿನ ಸಾಲುಗಳಿವು. ಸಾಹಿತಿ ಇಂದೀವರ್(ಶ್ಯಾಮಲಾಲ್ ಬಾಬು ರೈ) ರಚನೆ ಇದಾಗಿದ್ದು, ಈ ಸಾಲುಗಳ ಮೂಲಕ ಅವರು ತಾಯ್ನೆಲಕ್ಕಾಗಿ ಪ್ರೀತಿ ತೋರುವ ವಿವಿಧ ಜಾತಿ ವರ್ಗಗಳಿಗೆ ಸೇರಿದ ವ್ಯಕ್ತಿಗಳನ್ನು ಪ್ರತಿಬಿಂಬಿಸಿದ್ದಾರೆ” ಎಂಬ ಸಾಲುಗಳೊಂದಿಗೆ ತೀರ್ಪು ಹೇಳಲಾರಂಭಿಸಿದ ಅವರು, 23 ಪುಟಗಳ ಆದೇಶದಲ್ಲಿ, ಸಂಸತ್ ಮೇಲೆ ದಾಳಿ ಆಯೋಜಿಸಿದ ಸಂಚುಕೋರ ಅಫ್ಜಲ್‍ನನ್ನು ಗಲ್ಲಿಗೇರಿಸಿದ್ದರ ವಿರುದ್ಧ ಕಾರ್ಯಕ್ರಮ ಆಯೋಜಿಸಿ, ದೇಶ ವಿರೋಧಿ ಘೋಷಣೆ ಕೂಗುವುದಕ್ಕೆ ವಿದ್ಯಾರ್ಥಿಗಳು ಮುಂದಾಗಿದ್ದೇಕೆ ಎಂಬುದನ್ನು ಜೆಎನ್‍ಯುನ ಬೋಧನಾ ಸಿಬ್ಬಂದಿ ಕಂಡುಕೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಜೆಎನ್‍ಯು ಕ್ಯಾಂಪಸ್‍ನಲ್ಲಿ ಆಗದಂತೆ ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಹೇಳಿ ಕನ್ಹಯ್ಯ ಅವರಿಗೆ ಆರು ತಿಂಗಳ ಮಧ್ಯಂತರ ಜಾಮೀನನ್ನು ಒದಗಿಸಿದ್ದಾರೆ.
ಈ ನಡೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಅವರು, `ದೇಶದ ಸಮಗ್ರತೆಗೆ ಧಕ್ಕೆ ತರುವ ಘೋಷಣೆಗಳನ್ನು ದೂರುದಾರರು ಕೂಗಿಲ್ಲ ಎಂದು ಹೇಳಲಾಗುತ್ತಿದೆಯಾದರೂ, ರಿಟ್ ದೂರಿನಲ್ಲಿರುವ 14ನೇ ಅಂಶಗಳು ದೇಶವಿರೋಧಿ ಘೋಷಣೆಗಳನ್ನು ಕೂಗಿರುವುದನ್ನು ಪುಷ್ಟೀಕರಿಸುತ್ತವೆ. ಅಗತ್ಯಕ್ಕೆ ತಕ್ಕಷ್ಟು ಹೇಳುವುದಾದರೆ, ಅಂತಹ ದೇಶವಿರೋಧಿ ಘೋಷಣೆಗಳನ್ನು ಕೂಗುವುದಕ್ಕೆ ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳೇ ಸುರಕ್ಷಿತವೆಂದು ಅರಿತೇ ಇಂತಹ ವ್ಯಕ್ತಿಗಳು ಭಾವಿಸಿದಂತಿದೆ. ಆದರೆ, ಆ ಕ್ಯಾಂಪಸ್‍ಗಳು ಅಷ್ಟು ಸುರಕ್ಷಿತವಾಗಿರುವುದಕ್ಕೆ ಯೋಧರು ನೀಡಿರುವ ಕೊಡುಗೆಯನ್ನು ಅವರು ಅರ್ಥ ಮಾಡಿಕೊಂಡಿಲ್ಲ. ಹೀಗಾಗಿಯೇ ಕ್ಯಾಂಪಸ್‍ಗಳಲ್ಲಿ ಅಫ್ಜಲ್ ಮತ್ತು ಮಖ್‍ಬೂಲ್ ಭಟ್ ಮುಂತಾದವರ ಪೋಸ್ಟರ್‍ಗಳು, ಅವರ ಪರ ಘೋಷಣೆಗಳು ಮೊಳಗುತ್ತವೆ. ಇಂತಹ ಘೋಷಣೆಗಳು ಹುತಾತ್ಮರಾದವರ ಕುಟುಂಬದ ಸದಸ್ಯರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಬಹುದು. ದೂರುದಾರ ಬುದ್ಧಿವಂತರ ವರ್ಗಕ್ಕೆ ಸೇರಿದವರಾಗಿದ್ದು, ಅವರು ಯಾವುದೇ ಸಿದ್ಧಾಂತ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೂ, ಸಂವಿಧಾನಬದ್ಧವಾಗಿ ಭಾರತೀಯರಿಗೆ ಇರುವ ಎಲ್ಲ ಹಕ್ಕುಗಳು ಇವರಿಗೂ ಇದೆ. ಆದಾಗ್ಯೂ, ಇಂತಹ ಘಟನೆಗಳು ನಡೆದಾಗ, ವಿವಿಯ ವಿದ್ಯಾರ್ಥಿಗಳನ್ನು ಸರಿಯಾದ ದಿಸೆಯನ್ನು ಮುನ್ನಡೆಸಬೇಕಾದ ಹೊಣೆಗಾರಿಕೆ ಬೋಧನಾ ಸಿಬ್ಬಂದಿಯದ್ದಾಗಿರುತ್ತದೆ. ಸದರಿ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ದೂರುದಾರರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ವೇಳೆ ಸಾಕಷ್ಟು ಆತ್ಮಾವಲೋಕನ ಮಾಡಿರಬಹುದು. ಜಾಮೀನು ಪಡೆದು ಹೊರಹೋದ ಮೇಲೆ ದೇಶದ್ರೋಹದ ಕೆಲಸಗಳಲ್ಲಿ ಭಾಗವಹಿಸದೆ, ಒಬ್ಬ ವಿದ್ಯಾರ್ಥಿ ನಾಯಕನಾಗಿ ಎಲ್ಲರನ್ನೂ ಸರಿಯಾದ ದಿಶೆಯಲ್ಲಿ ಕರೆದೊಯ್ಯುತ್ತಾರೆ ಎಂಬ ಆಶಾವಾದವಿದೆ” ಎಂದು ಅವರು ಆದೇಶದಲ್ಲಿ ತಿಳಿಸಿದ್ದರು.
ಆದೇಶದ ಈ ಅಭಿಪ್ರಾಯಗಳು ಇದೀಗ ಚರ್ಚೆಗೆ ಗ್ರಾಸವಾಗಿರುವುದಲ್ಲದೆ, ಟೀಕೆಗೂ ಗುರಿಯಾಗಿವೆ. ಅದೇನೇ ಇದ್ದರೂ,ತೀರ್ಪಿನಲ್ಲಿ ಅವರು ಉಲ್ಲೇಖಿಸಿದ ಅಭಿಪ್ರಾಯಗಳು ನಿಜಕ್ಕೂ ಸಾರ್ವಜನಿಕವಾಗಿ ಅನೇಕರಲ್ಲಿರುವ ಭಾವನೆಗಳೂ ಹೌದು. ಇತ್ತೀಚೆಗೆ ಮಲೆಯಾಳಂ ಚಿತ್ರನಟ ಮೋಹನ್‍ಲಾಲ್ ಅವರ ಮಾತುಗಳೂ ಇದೇ ಅರ್ಥದಲ್ಲಿದ್ದವು ಎಂಬುದನ್ನು ಸ್ಮರಿಸಬಹುದು. ಭಾವನಾತ್ಮಕವಾದ ಈ ವಿಚಾರಗಳನ್ನು ಅಲ್ಲಗಳೆಯಲಾಗದು. ಅಭಿವ್ಯಕ್ತಿ ಸ್ವಾತಂತ್ರೃದ ಹೆಸರಿನಲ್ಲಿ ಯಾರು ಏನೇ ಹೇಳಿದರೂ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಬಾರದು ಎನ್ನುವಂತಿಲ್ಲ. ಆದರೆ, ತೀರ್ಪು ನೀಡುವಾಗ ಇಂತಹ ಭಾವನೆಗಳನ್ನು ವ್ಯಕ್ತಪಡಿಸುವ ಅಧಿಕಾರ ನ್ಯಾಯಾಧೀಶರಿಗೆ ಇz್ದÉೀ ಇರುತ್ತದೆ. ಆದರೆ, ಆ ಭಾವನೆಗಳ ಆಧಾರದಲ್ಲಿ ತೀರ್ಪು ನೀಡಲಾಗುತ್ತಿಲ್ಲ ಎಂಬುದು ವಾಸ್ತವ. ಸಾಕ್ಷೃಗಳು ಮತ್ತು ಕಾನೂನಿನ ಅಂಶಗಳೇ ನ್ಯಾಯ ತೀರ್ಮಾನಕ್ಕೆ ಪರಿಗಣಿಸಲ್ಪಡುವುದು. ಇದಕ್ಕೆ ಇಂಥ ಭಾವನೆಗಳನ್ನು ವ್ಯಕ್ತಪಡಿಸಿದ್ದಾಗ್ಯೂ ನ್ಯಾ. ಪ್ರತಿಭಾರಾಣಿ ಅವರು ಕನ್ಹಯ್ಯ ಅವರಿಗೆ ನೀಡಿರುವ ಆರು ತಿಂಗಳ ಮಧ್ಯಂತರ ಜಾಮೀನೇ ಸಾಕ್ಷಿ.
ಈ ಮೂಲಕ ಸಂಚಲನ ಸೃಷ್ಟಿಸಿದ ನ್ಯಾ.ಪ್ರತಿಭಾರಾಣಿ ತೀರ್ಪಿನ ಜತೆಗೆ ಇಂತಹ ಮನಸ್ಸಿಗೆ ತಟ್ಟುವಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರಾಗಿ ಗುರುತಿಸಿಕೊಂಡಿದ್ದಾರೆ. ನೇರನಡೆ ನುಡಿ, ಮುಕ್ತ ಮತ್ತು ನ್ಯಾಯ ಸಮ್ಮತ ರೀತಿಯಲ್ಲಿ ವಿಚಾರಣೆ ನಡೆಸುವವರಾಗಿಯೂ ಖ್ಯಾತಿ ಪಡೆದಿದ್ದಾರೆ. 2012ರ ಡಿಸೆಂಬರ್‍ನಲ್ಲಿ ದೆಹಲಿಯಲ್ಲಿ ಸಂಭವಿಸಿದ್ದ ಗ್ಯಾಂಗ್ ರೇಪ್ ಪ್ರಕರಣದ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠದಲ್ಲಿ ನ್ಯಾ.ರೇವಾ ಖೇತ್ರಪಾಲ್ ಜತೆಗೂ ಕೆಲಸ ಮಾಡಿದ್ದರು. ಈ ಪ್ರಕರಣದ ವಿಚಾರಣೆ ವೇಳೆಯಲ್ಲೂ, ಅವರು ನೀಡಿದ್ದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದ್ದ ಅಭಿಪ್ರಾಯಗಳು ಪ್ರಚೋದನಕಾರಿಯೇ ಆಗಿದ್ದವು. ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಬೇಕು ಎಂದು ತೀರ್ಪು ನೀಡಿದ್ದ ವಿಭಾಗೀಯ ಪೀಠ, `ಮನುಷ್ಯ ಜೀವ ಎಷ್ಟು ಮೌಲ್ಯಯುತವಾದುದು ಎಂಬುದನ್ನು ಇಂತಹ ಅಪರಾಧಿಗಳಿಗೆ ಮನವರಿಕೆಯಾಗಬೇಕು ಎಂದಾದರೆ ಇಂಥ ಶಿಕ್ಷೆಯನ್ನೇ ನೀಡಬೇಕು. ಇಂತಹ ಕೃತ್ಯಗಳಿಗೆ ಮುಂದಾಗುವವರಿಗೂ ಇದೊಂದು ಎಚ್ಚರಿಕೆ ಘಂಟೆಯಾಗಬೇಕು’ ಎಂದು ಅಭಿಪ್ರಾಯ ಪಟ್ಟಿತ್ತು.
ಇದೇ ರೀತಿ, ದೆಹಲಿಯ ಮಹಿಳಾ ಪೊಲೀಸ್ ಪೇದೆ ಮೇಲಿನ ಲೈಂಗಿಕ ಹಲ್ಲೆ ಪ್ರಕರಣದ ವಿಚಾರಣೆ ವೇಳೆ ನ್ಯಾ.ಪ್ರತಿಭಾರಾಣಿ, `ದೆಹಲಿಯು ಮಹಿಳಾ ಪೊಲೀಸ್‍ಗೇ ಸುರಕ್ಷಿತವಲ್ಲ ಎಂದಾದ ಬಳಿಕ ಸಾಮಾನ್ಯ ಹುಡುಗಿಯರ ಗತಿ ಏನು?’ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಮಹಿಳೆಯರನ್ನು ಅಗೌರವದಿಂದ ನೋಡುವ ಯುವಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಡಿಸೆಂಬರ್ 16 ಗ್ಯಾಂಗ್‍ರೇಪ್ ಘಟನೆ ಬಳಿಕ ಶೇಕಡ 35ರಷ್ಟು ಇಂತಹ ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಇವರು ಹುಟ್ಟಿದ್ದು 1956ರ ಆಗಸ್ಟ್ 25ರಂದು. 1975ರಲ್ಲಿ ದೆಹಲಿ ವಿವಿಯ ಮಹಿಳಾ ಶ್ರೀರಾಮ ಕಾಲೇಜ್‍ನಲ್ಲಿ ಪದವಿ, 1978ರಲ್ಲಿ ದೆಹಲಿಯ ವಿವಿಯಿಂದ ಕಾನೂನು ಪದವಿ ಪಡೆದರು. 1979ರಲ್ಲಿ ದೆಹಲಿಯ ಕಾನೂನು ಸೇವಾ ವಿಭಾಗಕ್ಕೆ ಸೇರ್ಪಡೆಗೊಂಡ ಇವರು, ಆರಂಭದಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ಸಿವಿಲ್ ಜಡ್ಜ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ತರುವಾಯ 1996ರ ಜುಲೈನಲ್ಲಿ ದೆಹಲಿಯ ಉನ್ನತ ನ್ಯಾಯಾಂಗ ಸೇವೆಗೆ ಬಡ್ತಿ ಪಡೆದರು. ವಿಶೇಷ ನ್ಯಾಯಾಧೀಶರಾಗಿ(ಎನ್‍ಡಿಪಿಎಸ್), ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ, ಸಿಬಿಐನ ವಿಶೇಷ ನ್ಯಾಯಾಧೀಶರಾಗಿ, ಪಶ್ಚಿಮ ಜಿಲ್ಲಾ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು. 2011ರ ಅಕ್ಟೋಬರ್ 17ರಿಂದ ದೆಹಲಿ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *