ಡಿಪ್ಲೊಮ್ಯಾಟ್ ಶೇಖ್

ಭಾರತೀಯ ಮಾಧ್ಯಮಗಳಲ್ಲಿ ಇತ್ತೀಚೆಗೆ ಪದೇಪದೆ ಸುದ್ದಿಯಾಗುತ್ತಿರುವುದು ಇರಾನ್ನ ಚಾಬಹಾರ್ ಬಂದರು. ದಕ್ಷಿಣ ಏಷ್ಯಾ ಭಾಗದಲ್ಲಿ ಚೀನಾ ಹಾಗೂ ಪಾಕಿಸ್ತಾನದ ಪ್ರಾಬಲ್ಯ ಎದುರಿಸುವುದಕ್ಕಾಗಿ ಇರಾನ್ ಜೊತೆಗಿನ ಬಾಂಧವ್ಯ ವೃದ್ಧಿ ಭಾರತಕ್ಕೆ ಅನಿವಾರ್ಯ. ಮಹತ್ವದ ರಾಜತಾಂತ್ರಿಕ ಮತ್ತು ವ್ಯೂಹಾತ್ಮಕ ನಡೆಯೊಂದರಲ್ಲಿ 3,372 ಕೋಟಿ ರೂಪಾಯಿ ವೆಚ್ಚದ ಚಾಬಹಾರ್ ಬಂದರು ಅಭಿವೃದ್ಧಿ ಯೋಜನೆಗೆ ಸಹಿ ಹಾಕುವ ಮೂಲಕ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ವಿಶ್ವದ ಗಮನ ಸೆಳೆದಿದ್ದಾರೆ. 2013ರಲ್ಲಿ ಇರಾನ್ ಅಧ್ಯಕ್ಷರಾಗಿರುವ ಹಸನ್ ರೌಹಾನಿ ತಮ್ಮ ರಾಜತಾಂತ್ರಿಕ ನಡೆಗಳಿಂದಲೇ ಪ್ರಸಿದ್ಧರು. ಹೀಗಾಗಿ ಇರಾನಿನ ಪತ್ರಿಕೆಗಳಂತೂ ಅವರನ್ನು ‘ಡಿಪ್ಲೊಮ್ಯಾಟ್ ಶೇಖ್’ ಎಂದೇ ಸಂಬೋಧಿಸುವುದು.

Hassan_Rouhani2013ರಲ್ಲಿ ಅವರು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದ ಸಂದರ್ಭ ಹೇಗಿತ್ತು ಎಂದರೆ- ಸುಧಾರಣಾವಾದಿ ಹಸನ್ರನ್ನು ಶತ್ರುವಿನಂತೆ ನೋಡುತ್ತಿದ್ದ ತೀವ್ರಗಾಮಿಗಳು ಆಡಳಿತದಲ್ಲಿದ್ದರು. ಹಸನ್ರ ಪ್ರತಿನಡೆಯನ್ನೂ ಅವರು ಸಂದೇಹದಿಂದಲೇ ನೋಡುತ್ತಿದ್ದರು. ಇಂತಹ ವಾತಾವರಣದಲ್ಲಿ, ‘ಮಂದಗಾಮಿ ನೀತಿ ಮತ್ತು ವಿವೇಕ’ ಎಂಬುದನ್ನು ಚುನಾವಣಾ ಪ್ರಚಾರದ ಘೊಷಣೆಯನ್ನಾಗಿಸಿದರು. ಈ ಘೊಷಣೆ ಇರಾನಿನಾದ್ಯಂತ ‘ಅನುರಣನ’ಗೊಂಡಿತು. ಅಂದಿನ ಅಧ್ಯಕ್ಷ ಮೊಹಮ್ಮದ್ ಅಹಮದಿನೆಜಾದ್ ಆಳ್ವಿಕೆಯಲ್ಲಿ ಕುಸಿದಿದ್ದ ದೇಶದ ಘನತೆ, ಬದುಕಿನ ಮಟ್ಟ ಮೇಲೆತ್ತುವ ಸಾಮರ್ಥ್ಯ ಹಸನ್ ಅವರಲ್ಲಿದೆ ಎಂಬ ನಂಬಿಕೆ ಇರಾನಿಯನ್ನರಲ್ಲಿ ಬೇರೂರಿತು. ಇದೇ ವೇಳೆ, ಅಧಿಕಾರಕ್ಕೆ ಬಂದರೆ ಇರಾನಿನ ಅಣ್ವಸ್ತ್ರ ಸಮಸ್ಯೆಯನ್ನು ಮೂರರಿಂದ ಆರು ತಿಂಗಳ ಅವಧಿಯಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಇದೇ ವೇಳೆ ಇರಾನಿನ ಮಾಜಿ ಅಧ್ಯಕ್ಷ, ಪ್ರಭಾವಿ ನಾಯಕ ಅಯೋತೊಲ್ಹಾ ಖಮೇನಿ ಅವರು ಹಸನ್ಗೆ ಬೆಂಬಲ ವ್ಯಕ್ತಪಡಿಸಿದರು. ಈ ಬೆಳವಣಿಗೆಯಿಂದಾಗಿ ಅಲ್ಲಿದ್ದ ಸರ್ಕಾರಿ ವ್ಯವಸ್ಥೆಗೆ ಏನೂ ಭಂಗ ಉಂಟಾಗದ ರೀತಿಯಲ್ಲಿ ಬದಲಾವಣೆಗಳಾದವು. ಚುನಾವಣೆಯಲ್ಲಿ ಗೆದ್ದು ಅಧಿಕಾರವನ್ನೂ ಸ್ವೀಕರಿಸಿದರು. ಆ ಸಂದರ್ಭದಲ್ಲಿ ಅವರು ‘ಪರಸ್ಪರ ವಿಶ್ವಾಸದ ಹೊಸ ಅಧ್ಯಾಯ ತೆರೆಯಬೇಕಾದರೆ ಅದಕ್ಕೆ ಪಾರದರ್ಶಕತೆಯೇ ಕೀಲಿ ಕೈ. ಪಾರದರ್ಶಕತೆ ಎಂದರೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಂಬಂಧಗಳಲ್ಲಿ ಅದು ಏಕಮುಖಿ ಪಾರದರ್ಶಕತೆಯಾಗಬಾರದು’ ಎಂಬ ಮಾತನ್ನು ಹೇಳಿದ್ದರು.

ಅಧಿಕಾರ ಸ್ವೀಕರಿಸಿದ ಕೆಲವೇ ವಾರಗಳಲ್ಲಿ ಹಸನ್ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಇರಾನ್-ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಅದೊಂದು ಐತಿಹಾಸಿಕ ಕ್ಷಣ. 1979ರಿಂದ 2013ರ ತನಕ ಆ ಎರಡೂ ದೇಶಗಳ ಉನ್ನತ ನಾಯಕರ ನಡುವೆ ಅಂಥದ್ದೊಂದು ನೇರ ಮಾತುಕತೆ ನಡೆದಿರಲಿಲ್ಲ. ಇದು ಆ ದೇಶಗಳ ಬಾಂಧವ್ಯ ಸುಧಾರಿಸುವುದಕ್ಕೆ, ಚುನಾವಣಾ ಭರವಸೆ ಈಡೇರಿಸುವುದಕ್ಕೆ ನಾಂದಿಯಾಯಿತು. ಇತರೆ ದೇಶಗಳ ಜೊತೆಗಿನ ಬಾಂಧವ್ಯ ವೃದ್ಧಿಗೂ ಸಹಕಾರಿಯಾಯಿತು. ವಾಸ್ತವದಲ್ಲಿ ಇರಾನಿನ ನ್ಯೂಕ್ಲಿಯರ್ ಸಮಸ್ಯೆಗೆ ಒಂದು ರ್ತಾಕ ಅಂತ್ಯ ಕಾಣಿಸಲು ಅವರಿಗೆ ಎರಡು ವರ್ಷ ಬೇಕಾಯಿತು. ಇದಾದ ಕೂಡಲೇ 2015ರ ಜುಲೈನಲ್ಲಿ ಟೆಲಿವಿಷನ್ ಮುಂದೆ ಕಾಣಿಸಿಕೊಂಡಿದ್ದ ಹಸನ್ ಅವರು, ಚುನಾವಣಾ ಭರವಸೆ ಈಡೇರಿಸಿದ್ದಾಗಿ ಘೊಷಿಸಿದರು. ಇರಾನಿನ ಅಭಿವೃದ್ಧಿಯ ಮಟ್ಟಿಗೆ ಇದೊಂದು ಐತಿಹಾಸಿಕ ಸಾಧನೆಯೇ ಸರಿ. ಇದೇ ರೀತಿ, ಅರಬ್ ಜಗತ್ತಿನ ಜೊತೆಗಿನ ಬಾಂಧವ್ಯ ವೃದ್ಧಿಯ ಭರವಸೆಯನ್ನೂ ಅವರು ನೀಡಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇರಾಕ್, ಸಿರಿಯಾ, ಯೆಮನ್ ಮತ್ತು ಇತರೆಡೆ ಸಮರ ಸ್ಥಿತಿ ಇರುವ ಕಾರಣ ಅದು ಸಾಧ್ಯವಾಗಿಲ್ಲ.

ಇಂತಹ ಹಸನ್ ರಾಜಕೀಯ ಪ್ರವೇಶಿಸಿದ್ದು 1960ರ ದಶಕದಲ್ಲಿ. ಯುವ ಧರ್ಮಗುರುವಾಗಿದ್ದ ಅವರು ಅಯೋತೊಲ್ಹಾ ರುಹೋಲ್ಹಾ ಖೊಮೇನಿ ಅವರ ಬೆಂಬಲಿಗರಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಇರಾನಿಯನ್ ಇಸ್ಲಾಮಿಸ್ಟ್ ಮೂವ್ವೆುಂಟ್ ಆರಂಭವಾದಾಗ ಮೊಹಮ್ಮದ್ ರೆಝಾ ಶಾ ಪಹ್ಲವಿ ಸರ್ಕಾರದ ವಿರುದ್ಧ ಅಲ್ಲಲ್ಲಿ ಭಾಷಣ ಮಾಡಲಾರಂಭಿಸಿ, ಅನೇಕ ಬಾರಿ ಸೆರೆವಾಸ ಅನುಭವಿಸಿದರು. 1977ರ ನವೆಂಬರ್ನಲ್ಲಿ ಅಯೋತೊಲ್ಹಾ ಖೊಮೇನಿ ಸಹೋದರ ಮುಸ್ತಾಫಾ ಖೊಮೇನಿ ಸಾವು ಸಂಭವಿಸಿದಾಗ, ತೆಹ್ರಾನ್ನ ಆರ್ಕ್ ಮಸೀದಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಯೋತೊಲ್ಹಾ ಅವರನ್ನು ‘ಇಮಾಂ’ ಎಂದು ಸಂಬೋಧಿಸಿದರು. ಖೊಮೇನಿ ಪರವಾಗಿ ಕೆಲಸ ಮಾಡಲಾರಂಭಿಸಿದ್ದರಿಂದ ಇರಾನಿನ ಕ್ರಾಂತಿ ಪೂರ್ವದ ಗುಪ್ತಚರ ದಳ ಸಾವಾಕ್ ನಿಗಾ ಇವರ ಮೇಲೆ ಇತ್ತು. ಅಂದು ದೇಶ ಬಿಟ್ಟು ಹೊರಡುವಂತೆ ಇಬ್ಬರು ಸ್ನೇಹಿತರು ಹಸನ್ಗೆ ಸಲಹೆ ನೀಡಿದರು. ಅದರಂತೆ ದೇಶದ ಹೊರಗಿದ್ದು ಇರಾನಿಯನ್ನರನ್ನು, ಇರಾನಿನ ವಿದ್ಯಾರ್ಥಿಗಳನ್ನು ಸರ್ಕಾರದ ವಿರುದ್ಧ ಸಂಘಟಿಸುವ ಕೆಲಸ ಮಾಡಿದರು. ಪರಿಣಾಮ ಖೋಮೇನಿ ಫ್ರಾನ್ಸ್ಗೆ ಹೋದಾಗ ಅಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಇರಾನಿಯನ್ನರು ಸೇರಿದ್ದರು. ಈ ನಡುವೆ, ಅಧಿಕಾರಕ್ಕಾಗಿ ದೇಶದಲ್ಲಿ ತೀವ್ರಗಾಮಿಗಳು ಹಾಗೂ ಮಂದಗಾಮಿಗಳ ನಡುವೆ ಸಂಘರ್ಷ ಹೆಚ್ಚಾಗಿದ್ದರಿಂದ ಹಸನ್ ಹೊಣೆಗಾರಿಕೆ ಹೆಚ್ಚುತ್ತ ಹೋಯಿತು.

ಕೊನೆಗೆ 1980ರಲ್ಲಿ ಶಾ ಸರ್ಕಾರ ಪತನಗೊಂಡ ಬಳಿಕ, ಹಸನ್ ಇರಾನಿಗೆ ಆಗಮಿಸಿ ಅಲ್ಲಿಂದೀಚೆಗೆ 2000ನೇ ಇಸವಿವರೆಗೆ ಐದು ಅವಧಿಗೆ ನ್ಯಾಷನಲ್ ಅಸೆಂಬ್ಲಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಇರಾನ್- ಇರಾಕ್ ಯುದ್ಧದ ಸಂದರ್ಭದಲ್ಲಿ 1983-88ರ ತನಕ ಸುಪ್ರೀಂ ಡಿಫೆನ್ಸ್ ಕೌನ್ಸಿಲ್ನ ಸದಸ್ಯ, 85-91ರ ತನಕ ಇರಾನಿಯನ್ ಏರ್ಡಿಫೆನ್ಸ್ನ ಕಮಾಂಡರ್, 88-89ರಲ್ಲಿ ಇರಾನಿನ ಸಶಸ್ತ್ರ ದಳದ ಡೆಪ್ಯುಟಿ ಕಮಾಂಡರ್, 89-97 ಹಾಗೂ 2000-05ರ ತನಕ ಅಧ್ಯಕ್ಷರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ, 89-2005ರ ತನಕ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ನ ಕಾರ್ಯದರ್ಶಿ, 2003-05ರ ತನಕ ಮುಖ್ಯ ಅಣ್ವಸ್ತ್ರ ಸಂಧಾನಕಾರರಾಗಿ ಹಾಗೂ ಇತರೆ ಪ್ರಮುಖ ಹೊಣೆಗಾರಿಕೆಗಳನ್ನು ನಿಭಾಯಿಸಿ, ನಿರ್ವಹಿಸಿದ್ದಾರೆ. ಇರಾನ್- ಇರಾಕ್ ಯುದ್ಧ ಸೇರಿ ದೇಶದ ಪ್ರಮುಖ ರಾಜತಾಂತ್ರಿಕ ಹೆಜ್ಜೆಗಳ ನಿರ್ಣಯದ ಸಂದರ್ಭದಲ್ಲೆಲ್ಲ, ನಿರ್ಣಯ ಕೈಗೊಳ್ಳುತ್ತಿದ್ದ ತಂಡದ ಭಾಗವೇ ಆಗಿದ್ದರು ಹಸನ್ ರೌಹಾನಿ. ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿರುವ ಅವರು, ಸಾರ್ವಜನಿಕವಾಗಿ ಮಾನವಹಕ್ಕುಗಳ ಬಗ್ಗೆ ಮಾತನಾಡಿದ್ದಿಲ್ಲ. ಈ ಬಗ್ಗೆ ಟೀಕೆಗಳನ್ನೂ ಅವರು ಎದುರಿಸಿದ್ದಾರೆ.

ಹಸನ್ ಅವರ ಖಾಸಗಿ ಬದುಕಿನ ಬಗ್ಗೆ ಹೇಳುವುದಾದರೆ, ಅವರಿಗೀಗ 67 ವರ್ಷ(1948ರ ನ.12). ಇರಾನಿನ ಸೆಮ್ನನ್ ಪ್ರಾಂತ್ಯದ ಸೊರ್ಖೇಹ್ನಲ್ಲಿ ಜನನ. ಹಸನ್ ಫೆರೆಯ್ಡೋನ್ ರೌಹಾನಿ ಎಂಬುದು ಪೂರ್ಣ ಹೆಸರು. ಧಾರ್ವಿುಕ ಹಾಗೂ ರಾಜಕೀಯ ಹಿನ್ನೆಲೆಯ ಕುಟುಂಬ. ತಂದೆ ಹಜ್ ಅಸಾದೊಲ್ಹಾ ಫೆರೆಯ್ಡೋನ್. ಇವರು ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. ಹಸನ್ ಆರಂಭದಲ್ಲಿ ಧಾರ್ವಿುಕ ಶಿಕ್ಷಣ ಪಡೆದರಲ್ಲದೇ, ಜೊತೆಜೊತೆಗೆ ಸಾಮಾನ್ಯ ಶಿಕ್ಷಣವನ್ನೂ ಪಡೆದರು. 1972ರಲ್ಲಿ ತೆಹ್ರಾನ್ ವಿವಿಯಿಂದ ಕಾನೂನು ಪದವಿ ಪಡೆದರು. ಮರುವರ್ಷ ಸೇನಾ ಸೇವೆಗೆ ನಿಯೋಜಿತರಾದರು. ಹಸನ್ಗೆ ಒಟ್ಟು ಮೂವರು ಸಹೋದರಿಯರು, ಒಬ್ಬ ಸಹೋದರ(ಹುಸೈನ್ ಫೆರೆಯ್ಡೋನ್- ರಾಜತಂತ್ರಜ್ಞ, ರಾಜಕಾರಣಿ). ಅವರು ವಿವಾಹವಾಗಿದ್ದು ಸೋದರ ಸಂಬಂಧಿ ಸಾಹೇಬಿ ಇರಾಬಿ(ರೌಹಾನಿ). ವಿವಾಹವಾದಾಗ ಅವರಿಗೆ 20 ವರ್ಷ, ಅವರ ಪತ್ನಿಗೆ 14 ವರ್ಷ. ದಂಪತಿಗೆ ಒಟ್ಟು ಐವರು ಮಕ್ಕಳು.

ಪರ್ಷಿಯನ್, ಇಂಗ್ಲಿಷ್, ಅರೇಬಿಕ್ ಭಾಷೆಗಳಲ್ಲಿ ಅನೇಕ ಸಂಶೋಧನಾ ಪ್ರಬಂಧ, ಗ್ರಂಥಗಳನ್ನು ರಚಿಸಿರುವ ಹಾಗೂ ಸಂಪಾದಿಸಿರುವ ಹಸನ್ ರೌಹಾನಿ ಅಧಿಕಾರಾವಧಿ ಇನ್ನೊಂದು ವರ್ಷ ಇದೆ. ಸದ್ಯ ಅವರ ವಿರುದ್ಧ ತೀವ್ರಗಾಮಿಗಳ ಆಕ್ರೋಶ ಇದ್ದರೂ, ಸತತ ಎರಡನೇ ಅವಧಿಗೆ ಆಯ್ಕೆಯಾಗುವ ಅವಕಾಶವೂ ಇದೆ. ಏನೇ ಆದರೂ ರಾಜಕೀಯ ಬೆಳವಣಿಗೆಗಳು ಇಂದು ಇದ್ದಂತೆ ನಾಳೆ ಇರಲ್ಲವಲ್ಲ!

Leave a Reply

Your email address will not be published. Required fields are marked *