ಡಾಕ್ಟರ್ ರಾಜಕೀಯ ಭವಿಷ್ಯಕ್ಕೆ ಬುನಾದಿಯಾದ ಪಿಎಂಒ

ಈಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಪೈಕಿ ಬಿಜೆಪಿ ಅಸ್ಸಾಂ ಕಡೆಗೆ ವಿಶೇಷ ಆಸ್ಥೆ ವಹಿಸಿತ್ತು. ಮಾನಸಿಕವಾಗಿ ನಮ್ಮಿಂದ ದೂರವಾಗುತ್ತಿರುವ ಈಶಾನ್ಯ ರಾಜ್ಯಗಳನ್ನು ಮತ್ತೆ ಜೊತೆಜೊತೆಗೆ ಮುನ್ನಡೆಸುವ ನಿಟ್ಟಿನಲ್ಲಿ ಅದು ಅನಿವಾರ್ಯವೂ ಆಗಿತ್ತು. ಅಸ್ಸಾಂನಲ್ಲಿ ಆಡಳಿತ ಚುಕ್ಕಾಣಿ ಹಿಡಿವ ಹೊಣೆಗಾರಿಕೆಯನ್ನು ಬಿಜೆಪಿ ವರಿಷ್ಠರು ಅಲ್ಲಿನವDr-Jitendra-Singhರೇ ಆದ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವರಾಗಿದ್ದ ಸರ್ಬಾನಂದ ಸೋನೊವಾಲ್ ಹೆಗಲೇರಿಸಿದ್ದರು. ಅವರು ಅದರಲ್ಲಿ ಯಶಸ್ಸನ್ನೂ ಸಾಧಿಸಿದರು. ಸಚಿವ ಸ್ಥಾನ ಆಕಾಂಕ್ಷಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಸೋನೊವಾಲ್ರಿಂದ ತೆರವಾದ ಯುವಜನ ವ್ಯವಹಾರ ಹಾಗೂ ಕ್ರೀಡೆಯ ಸ್ವತಂತ್ರ ಖಾತೆಯ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ಜಿತೇಂದ್ರ ಸಿಂಗ್ ಅವರಿಗೆ ವಹಿಸಿದರು. ಅದಾಗಲೇ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಸಂಬಂಧಿಸಿದ ಸ್ವತಂತ್ರ ಖಾತೆಯ ಸಚಿವರಾಗಿ ಜಿತೇಂದ್ರ ಸಿಂಗ್ ಗಮನಸೆಳೆದಿದ್ದಾರೆ. ಇದಲ್ಲದೇ, ಪಿಎಂಒ (ಪ್ರಧಾನಮಂತ್ರಿ ಕಾರ್ಯಾಲಯ) ಅಧೀನದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಖಾತೆಯ ರಾಜ್ಯ ಸಚಿವ (ಸ್ವತಂತ್ರ ಖಾತೆ), ಸಿಬ್ಬಂದಿ ಸಾರ್ವಜನಿಕ ಅಹವಾಲು ಹಾಗೂ ಪಿಂಚಣಿ, ಅಣುಶಕ್ತಿ ಹಾಗೂ ಬಾಹ್ಯಾಕಾಶ ಖಾತೆಯ ರಾಜ್ಯ ಸಚಿವರಾಗಿ ಪ್ರಧಾನಮಂತ್ರಿಗೆ ನೆರವಾಗುತ್ತಿರುವವರು. ಈ ಹಿನ್ನೆಲೆಯಲ್ಲಿ ಜಿತೇಂದ್ರ ಸಿಂಗ್ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಮೋದಿ ಸಂಪುಟದಲ್ಲಿರುವ ಉಳಿದ ಸಚಿವರಂತಲ್ಲ ಜಿತೇಂದ್ರ ಸಿಂಗ್. ಹೀಗಾಗಿಯೇ ಅನೇಕ ಸಚಿವರಿಗೆ ಅವರ ಬಗ್ಗೆ ಒಂದು ರೀತಿಯ ಈರ್ಷ್ಯೆ. ರಾಜ್ಯ ಸಚಿವರಾಗಿದ್ದರೂ ಪಿಎಂಒ ಕಚೇರಿಯಲ್ಲಿರುವುದೇ ಅವರಿಗಿದ್ದ ಪ್ಲಸ್ ಪಾಯಿಂಟ್. ಹೀಗಾಗಿ ಅವರ ಕಾರ್ಯಶೈಲಿ ಬಗ್ಗೆ ಮೋದಿಯವರಿಗೆ ಸಂಪೂರ್ಣ ಅರಿವಿದೆ. ಸಂಸತ್ತಿನಲ್ಲಿ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಹೇಳುವಲ್ಲಿ ಪ್ರಧಾನಿಯವರಿಗೆ ಮಾಹಿತಿಗಳನ್ನು ಒಗ್ಗೂಡಿಸಿ ಕೊಡುತ್ತಿದ್ದವರು ಅವರೇನೆ. ಸಿಬ್ಬಂದಿ, ಪಿಂಚಣಿ ಹಾಗೂ ಆಡಳಿತ ಸುಧಾರಣೆ ಇಲಾಖೆಯಲ್ಲಿ ಸಂಕೀರ್ಣವಾಗಿದ್ದ ಆಡಳಿತ ವ್ಯವಸ್ಥೆಯನ್ನು ತ್ವರಿತವಾಗಿ ಸರಳಗೊಳಿಸಿದ ಕೀರ್ತಿ ಅವರದ್ದು. ಇದಲ್ಲದೆ, ಪ್ರಧಾನಿ ಕಚೇರಿ ಅಧೀನದಲ್ಲೇ ಇರುವ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಆಡಳಿತವನ್ನೂ ಗಮನಿಸುತ್ತಿದ್ದಾರೆ. ಪಿಎಂಒಗೆ ಸಂಬಂಧಿಸಿದಂತೆ ಅವರೇ ಔಪಚಾರಿಕ ಸಂವಹನಕಾರ. ಅಷ್ಟೇ ಅಲ್ಲ, ಪಿಎಂಒ ವಕ್ತಾರರ ಅನುಪಸ್ಥಿತಿಯಲ್ಲಿ ಆ ಕೆಲಸವನ್ನೂ ಅವರು ನಿರ್ವಹಿಸುತ್ತಾರೆ. ಅಷ್ಟರ ಮಟ್ಟಿನ ಕಾರ್ಯವ್ಯಸನಿ ಅವರು. ಯಾವ ಕೆಲಸವನ್ನು ಹಿಡಿದರೂ ಬೆನ್ನತ್ತಿ ಅದನ್ನು ಪೂರೈಸುವಂಥ ಛಾತಿ ಉಳ್ಳವರು. ಅವರ ಈ ಗುಣವೇ ಮೋದಿಯವರ ಗಮನಸೆಳೆದಿರುವುದು.

ಲೋಕಸಭೆ ಚುನಾವಣೆ ಬೆನ್ನಲ್ಲೇ ಜಮ್ಮು-ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆದಾಗ ಅಲ್ಲಿ ಪಕ್ಷದ ಪ್ರಚಾರ ಉಸ್ತುವಾರಿ ನೋಡಿಕೊಂಡಿದ್ದು ಇದೇ ಜಿತೇಂದ್ರ ಸಿಂಗ್. ಅದು ಅವರ ತವರು ರಾಜ್ಯ. ಚುನಾವಣೆಯಲ್ಲಿ ಜಮ್ಮು ಭಾಗದಲ್ಲಿ ಪಕ್ಷ ಸಾಧಿಸಿದ ಗೆಲುವಿನ ಹಿಂದೆ ಅವರು ಪ್ರಮುಖ ಪಾತ್ರವಹಿಸಿದ್ದರು. ಮೋದಿಯವರಂತೆ ಅವರು ಮಾಧ್ಯಮದಿಂದ ದೂರ ಇರುವಂಥವರಲ್ಲ. ಜಮ್ಮು ಕಾಶ್ಮೀರದಲ್ಲಿ ಪಕ್ಷದ ವಕ್ತಾರರಾಗಿ ಕೆಲಸ ಮಾಡಿದವರು. ಅದೇ ರೀತಿ, ಹಿಂದೆ ಪತ್ರಿಕೆಯ ಅಂಕಣಕಾರರೂ ಆಗಿದ್ದರು. ಇತರೆ ರಾಜಕಾರಣಿಗಳಿಗಿಂತ ಭಿನ್ನವಾಗಿ ಕೃತಿಯ ಮೂಲಕವೇ ತಮ್ಮದೇ ಆದ ಛಾಪು ಮೂಡಿಸುತ್ತಿರುವವರು.

ಹಾಗೆ ನೋಡಿದರೆ ಜಿತೇಂದ್ರ ಸಿಂಗ್ ಅವರು ರಾಜಕೀಯವಾಗಿ ಬಹುಬೇಗ ಪ್ರವರ್ಧಮಾನಕ್ಕೆ ಬಂದವರು. ಅವರೇನೂ ಹಲವು ಬಾರಿ ಸಂಸದರಾಗಿ ಆಯ್ಕೆಯಾದವರೇನಲ್ಲ. ಇದೇ ಮೊದಲ ಸಲ ಜಮ್ಮು ಕಾಶ್ಮೀರದ ಉಧಂಪುರದಿಂದ ಲೋಕಸಭೆಗೆ ಆಯ್ಕೆಯಾದವರು. ಕಾಂಗ್ರೆಸ್ನ ಘಟಾನುಘಟಿ ನಾಯಕ ಗುಲಾಂ ನಬಿ ಆಜಾದ್ರನ್ನು ಸೋಲಿಸುವ ಮೂಲಕ ರಾಜಕಾರಣದಲ್ಲಿ ‘ಜೈಂಟ್ ಕಿಲ್ಲರ್’ ಎನಿಸಿಕೊಂಡವರು. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಪ್ರಧಾನಿ ಮೋದಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಕಡೆಗೆ ಗಮನಹರಿಸಿದ್ದರು. ಈ ಬಗ್ಗೆ ಸಚಿವಾಲಯವನ್ನೇ ರಚಿಸಿ ಅದರ ಹೊಣೆಗಾರಿಕೆಯನ್ನು ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಅವರಿಗೆ ವಹಿಸಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಆ ಖಾತೆಯ ಹೊಣೆಗಾರಿಕೆ ಜಿತೇಂದ್ರ ಸಿಂಗ್ ಅವರಿಗೆ ವರ್ಗಾವಣೆಗೊಂಡಿತ್ತು. ವಿ.ಕೆ. ಸಿಂಗ್ ಕೂಡ ರಾಜಕೀಯ ವಲಯಕ್ಕೆ ಹೊಸಬರಾದರೂ ಜಿತೇಂದ್ರ ಸಿಂಗ್ಗಿಂತ ಹೆಚ್ಚು ಪರಿಚಿತರಾಗಿದ್ದರು. ಇಷ್ಟಾಗ್ಯೂ ಆ ಹೊಣೆಗಾರಿಕೆ ಜಿತೇಂದ್ರ ಸಿಂಗ್ಗೆ ಸಿಕ್ಕಿದ್ದು ಅವರ ಕಾರ್ಯಶೈಲಿಯ ಹೆಚ್ಚುಗಾರಿಕೆ ಎಂದೇ ಹೇಳಬೇಕು.

2008ರಲ್ಲಿ ಅಮರನಾಥ ಜಮೀನು ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಮುಂಚೂಣಿಗೆ ಬಂದರು. ಮರುವರ್ಷವೇ ಉದ್ಯೋಗ ತ್ಯಜಿಸಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು. ಬಿಜೆಪಿ ಸೇರ್ಪಡೆಗೊಂಡು ತಮ್ಮ ವಾಕ್ಚಾತುರ್ಯದಿಂದಲೇ ಛಾಪು ಮೂಡಿಸಲಾರಂಭಿಸಿದರು. ಪರಿಣಾಮ ಪಕ್ಷದ ರಾಷ್ಟ್ರೀಯ ವಕ್ತಾರ, ಟಿವಿ ಪ್ಯಾನೆಲಿಸ್ಟ್ ಜವಾಬ್ದಾರಿ ಅರಸಿಬಂತು.

ಬಹುಮುಖಿ ವ್ಯಕ್ತಿತ್ವದ ಜಿತೇಂದ್ರ ಅವರ ಪಾಲಿಗೆ ಯುವಜನ ವ್ಯವಹಾರ ಹಾಗೂ ಕ್ರೀಡಾ ಖಾತೆ ಹೊಣೆಗಾರಿಕೆ ಬಹುಶಃ ಅಲ್ಪಕಾಲದ್ದಿರಬಹುದು. ಆದರೆ, ಜೂನ್ 23ರಂದು ನಡೆಯಬಹುದು ಎನ್ನಲಾಗುತ್ತಿರುವ ಸಂಪುಟ ಪುನಾರಚನೆಯಲ್ಲಿ ಮಹತ್ವದ ಮುಂಬಡ್ತಿ ದೊರೆಯಬಹುದೆಂಬ ನಿರೀಕ್ಷೆಯಿದೆ.

ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಅಂಶವಿದೆ. ಅದು ಪಿಎಂಒ ಇತಿಹಾಸದ ಪುಟಗಳು. ರಾಜಕೀಯ ಭವಿಷ್ಯಕ್ಕೆ ಪಿಎಂಒವನ್ನು ಅದರಲ್ಲೂ ವಿಶೇಷವಾಗಿ ಸಿಬ್ಬಂದಿ ಖಾತೆಯನ್ನು ಬುನಾದಿಯಾಗಿಸಿಕೊಂಡ ಅನೇಕ ರಾಜಕಾರಣಿಗಳಿದ್ದಾರೆ. ಪಿ.ಚಿದಂಬರಂ ಆರಂಭದಲ್ಲಿ ಸಿಬ್ಬಂದಿ ಖಾತೆಯನ್ನೇ ಹೊಂದಿದ್ದರು. ಕಾಲಾನುಕ್ರಮದಲ್ಲಿ ಕೇಂದ್ರ ವಿತ್ತ ಸಚಿವರಾದರು, ಗೃಹ ಸಚಿವರೂ ಆದರು. ವಸುಂಧರಾ ರಾಜೇ ಅವರನ್ನು ತೆಗೆದುಕೊಳ್ಳಿ. ಅವರು ಎರಡನೇ ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದಾರೆ. ಪೃಥ್ವಿರಾಜ್ ಚೌಹಾಣ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. ಶೀಲಾ ದೀಕ್ಷಿತ್ ಪಿಎಂಒದಲ್ಲಿ ರಾಜ್ಯ ಸಚಿವರಾಗಿದ್ದವರು ಮುಂದೆ ಮೂರು ಬಾರಿ ದೆಹಲಿ ಮುಖ್ಯಮಂತ್ರಿ ಗಾದಿ ಅಲಂಕರಿಸಿದರು. ಇವರೆಲ್ಲರ ಉಜ್ವಲ ರಾಜಕೀಯ ಭವಿಷ್ಯಕ್ಕೆ ಪಿಎಂಒ ಭದ್ರ ಬುನಾದಿ ಒದಗಿಸಿದ್ದು ಸುಳ್ಳಲ್ಲ. ಜಿತೇಂದ್ರ ಸಿಂಗ್ ರಾಜಕೀಯ ಜಿಗಿತಕ್ಕೂ ಇದು ಕಾರಣವಾಗಬಹುದಾ? ಉತ್ತರಕ್ಕೆ ಬಹಳ ದಿನವೇನೂ ಕಾಯಬೇಕಿಲ್ಲ.

ದೇಶದ ಜನರಿಗೆ ಸಚಿವರಾಗಿ ಪರಿಚಿತರಾಗಿರುವ ಜಿತೇಂದ್ರ ಸಿಂಗ್ ಅವರು ವೃತ್ತಿಯಲ್ಲಿ ವೈದ್ಯರು. ಮೂಲತಃ ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯವರು. 1956ರ ನವೆಂಬರ್ 6ರಂದು ನವದೆಹಲಿಯಲ್ಲಿ ಜನನ. ತಂದೆ ದಿವಂಗತ ರಾಜೇಂದ್ರ ಸಿಂಗ್. 1972ರಲ್ಲಿ ಜಮ್ಮು ಕಾಶ್ಮೀರ ಶಿಕ್ಷಣ ಮಂಡಳಿಯಿಂದ ಹೈಯರ್ ಸೆಕಂಡರಿ ಶಿಕ್ಷಣ, ಮದ್ರಾಸ್ ಹಾಗೂ ಜಮ್ಮು ವಿಶ್ವವಿದ್ಯಾಲಯಗಳಿಂದ ವೈದ್ಯಕೀಯ ಶಿಕ್ಷಣ ಪಡೆದರು. ತರುವಾಯ ಸರ್ಕಾರಿ ಉದ್ಯೋಗಕ್ಕೆ ಸೇರ್ಪಡೆಯಾದರು. ವೈದ್ಯಕೀಯ ಕಾಲೇಜೊಂದರಲ್ಲಿ ಮೆಡಿಸಿನ್/ಎಂಡೋಕ್ರಿನೋಲಜಿ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸಿದರು.

ಐದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರು, ಐದು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ವೈದ್ಯ ಲೇಖನಗಳು ಪಠ್ಯಗಳೂ ಆಗಿವೆ. ಅವರು ಬರೆದ ‘ಡಯಾಬಿಟಿಸ್ ಮೇಡ್ ಈಸಿ’ ಎಂಬ ಶೀರ್ಷಿಕೆಯ ಪುಸ್ತಕ 2002ರಲ್ಲಿ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ‘ವಿಶ್ವ ಪುಸ್ತಕ ಮೇಳ’ದಲ್ಲಿ ಬೆಸ್ಟ್ ಸೆಲ್ಲರ್ ಖ್ಯಾತಿ ಗಳಿಸಿತ್ತು. ಅವರು ಇಂಟರ್ನ್ಯಾಷನಲ್ ಜರ್ನಲ್ ಆಫ್ ಡಯಾಬಿಟಿಸ್ ಇನ್ ಡೆವಲಪಿಂಗ್ ಕಂಟ್ರೀಸ್ಗೆ ಬರೆದ ‘ಸ್ಟ್ರೆಸ್ ಡಯಾಬಿಟಿಸ್ ಇನ್ ಕಾಶ್ಮೀರಿ ಮೈಗ್ರಂಟ್ಸ್’ ಎಂಬ ಲೇಖನ ವಿಶ್ವ ಆರೋಗ್ಯ ಸಂಸ್ಥೆಯ ಮೆಚ್ಚುಗೆ ಗಳಿಸಿತ್ತು.

ಜಿತೇಂದ್ರ ಸಿಂಗ್ ಅವರ ಪತ್ನಿ ಮಂಜು ಸಿಂಗ್ ಫಾರ್ಮಸಿಸ್ಟ್. ಅರುಣೋದಯ್ ಸಿಂಗ್ ಮತ್ತು ಅಪರಾಜಿತ ಸಿಂಗ್ ಎಂಬ ಇಬ್ಬರು ಗಂಡು ಮಕ್ಕಳು. ಇವರು ಕ್ರಮವಾಗಿ ಯೆಸ್ಬ್ಯಾಂಕ್ ಹಾಗೂ ಎರಿಕ್ಸನ್ ಉದ್ಯೋಗಿಗಳು.

Leave a Reply

Your email address will not be published. Required fields are marked *