ಗಿಡುಗನೂ ಅಲ್ಲ…!

Kasuri
Kasuri

ಅಂದು 2015ರ ಅಕ್ಟೋಬರ್ 11. ಮುಂಬೈನ ವರ್ಲಿಯಲ್ಲಿರುವ ನೆಹರು ಸೆಂಟರ್​ನಲ್ಲಿ ಪಾಕಿಸ್ತಾನದ ಮಾಜಿ ಸಚಿವರೊಬ್ಬರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿಯವರ ಆಪ್ತ ಸುಧೀಂದ್ರ ಕುಲಕರ್ಣಿ ಇದರ ಆಯೋಜಕರು. ಗಡಿಯಲ್ಲಿ ದಾಳಿ ನಡೆಸುತ್ತ, ದೇಶದೊಳಗೆ ಆಂತರಿಕ ಭದ್ರತೆಗೆ ಸವಾಲಾಗಿರುವ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಕೆಲಸವನ್ನು ಪಾಕಿಸ್ತಾನ ಬಿಡುವ ತನಕ ಅಲ್ಲಿನವರ ಯಾವುದೇ ಕಾರ್ಯಕ್ರಮ ಇಲ್ಲಿ ನಡೆಯಕೂಡದು. ಹೀಗಾಗಿ ಕಾರ್ಯಕ್ರಮ ರದ್ದುಗೊಳಿಸಿ ಎಂದು ಶಿವಸೇನೆ ನಾಯಕರು ಕುಲಕರ್ಣಿಯವರಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಯಾವುದು ಘಟಿಸಬಾರದಿತ್ತೋ ಅದು ಘಟಿಸಿತು. ಈ ಘಟನೆಯಿಂದಾಗಿ ಪಾಕಿಸ್ತಾನದ ಮಾಜಿ ಸಚಿವರ ಹೆಸರು ದೇಶಾದ್ಯಂತ ಪ್ರಚಲಿತಕ್ಕೆ ಬಂದುದಲ್ಲದೆ, ಅವರ ಪುಸ್ತಕ ‘Neither a Hawk Nor a Dove: An Insider’s Account of Pakistan’s Foreign Policy (ಗಿಡುಗವೂ ಅಲ್ಲ ಪಾರಿವಾಳವೂ ಅಲ್ಲ)’ ಕೂಡ ಪ್ರಸಿದ್ಧಿ ಪಡೆಯಿತು. ಇಲ್ಲದೆ ಹೋಗಿದ್ದರೆ ಹತ್ತರ ಜತೆಗೆ ಹನ್ನೊಂದು ಎಂಬಂತೆ ಇದು ಕೂಡ ಸದ್ದುಗದ್ದಲವಿಲ್ಲದೆ ನೇಪಥ್ಯಕ್ಕೆ ಸರಿದುಬಿಡುತ್ತಿತ್ತು.

ಅಂದ ಹಾಗೆ ಆ ಮಾಜಿ ಸಚಿವರ ಹೆಸರು ಖುರ್ಷಿದ್ ಮಹಮ್ಮದ್ ಕಸೂರಿ. ಜನರಲ್ ಪರ್ವೆಜ್ ಮುಷರಫ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಸೂರಿ ವಿದೇಶಾಂಗ ಸಚಿವ (2002-2007)ರಾಗಿದ್ದವರು. ಹೊಸ ಪುಸ್ತಕ ಅವರ ವ್ಯಕ್ತಿತ್ವ, ಚಿಂತನೆಗಳ ಸ್ಪಷ್ಟ ಚಿತ್ರಣ ನೀಡುತ್ತದೆ. ಅದಲ್ಲದೆ, ಪಾಕಿಸ್ತಾನದ ಆಪ್ತ ರಾಷ್ಟ್ರ ಚೀನಾದ ಜತೆಗಿನ ನಂಟು, ಈ ಅವಧಿಯ ಭಾರತ – ಪಾಕಿಸ್ತಾನ ನಡುವಿನ ಸಂಬಂಧಗಳು, ಪಾಕಿಸ್ತಾನದ ವಿದೇಶ ನೀತಿ- ಅದರಲ್ಲೂ ವಿಶೇಷವಾಗಿ ಭಾರತದ ಕುರಿತಾಗಿರುವ ನೀತಿಗಳಿಗೆ ಆದ್ಯತೆ ನೀಡಿ ಪುಸ್ತಕವನ್ನು ಪ್ರಕಾಶಿಸಲಾಗಿದೆ. ಒಂದು ರೀತಿಯಲ್ಲಿದು ನೆನಪುಗಳ ಮೆರವಣಿಯ ಚಿತ್ರಣ.

ಈ ಪುಸ್ತಕದಲ್ಲಿ ಅವರೇ ಹೇಳಿರುವಂತೆ – ‘ವಿದೇಶಾಂಗ ಸಚಿವರಾಗಿ ನೇಮಕವಾದ ಮೊದಲ ಭೇಟಿಯಲ್ಲೇ ಅಧ್ಯಕ್ಷ ಪರ್ವೆಜ್ ಮುಷರಫ್ ನನ್ನನ್ನು ಕೇಳಿದ ಪ್ರಶ್ನೆ -ಭಾರತದ ವಿಚಾರದಲ್ಲಿ ನೀವು ಗಿಡುಗನೋ ಅಥವಾ ಪಾರಿವಾಳವೋ ಕಸೂರಿ ಸಾಬ್?’. ಇದೆ ವಾಕ್ಯದೊಂದಿಗೆ ಅವರ ಪುಸ್ತಕದ ಮೊದಲ ಅಧ್ಯಾಯ ಆರಂಭವಾಗುತ್ತದೆ. ಪುಸ್ತಕದುದ್ದಕ್ಕೂ ತಾವು ವಾಸ್ತವವಾದಿ/ ಸುಧಾರಣಾವಾದಿ ಎಂದು ಬಿಂಬಿಸಿಕೊಂಡಿರುವ ಅವರು, ಹಲವು ಸಂದರ್ಭ ಗಳಲ್ಲಿ ಪರ್ವೆಜ್ ಮುಷರಫ್ ಅವರ ದ್ವಿಮುಖ ನೀತಿಯನ್ನು ಟೀಕಿಸಿದ್ದಾರೆ. ಒಂದೆಡೆ ಶಾಂತಿ ಪ್ರಕ್ರಿಯೆ ನಡೆಯುತ್ತಿರುವಾಗ ಇನ್ನೊಂದೆಡೆ ದಾಳಿ ನಡೆಸುವುದು ಸರಿಯಲ್ಲ ಎಂದಿದ್ದರು.ಆದರೆ, 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಅದು ರಾಷ್ಟ್ರಹಿತಕ್ಕೆ ಪೂರಕ ಎಂದು ಹೊಗಳಿದ್ದಾರೆ ಕೂಡ. ಪಾಕಿಸ್ತಾನ ಆಳ್ವಿಕೆಯಲ್ಲಿ ಸೇನೆಯ ಪ್ರಾಬಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ದೇಶ ವಿಭಜನೆ ಬಳಿಕ ಕೆಲವರು ಉಭಯ ದೇಶಗಳ ಜನರಲ್ಲಿ ಬಿತ್ತಿ ಬೆಳೆದ ದ್ವೇಷದಿಂದಾಗಿ ಹಗೆತನ ಹಾಗೆಯೇ ಉಳಿಯಿತು. ಭಾರತದ ಜತೆಗಿನ ಕಡುಹಗೆತನದಿಂದಾಗಿ ಪಾಕಿಸ್ತಾನಕ್ಕೆ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನಷ್ಟವೇ ಹೊರತು ಲಾಭವಿಲ್ಲ. ಕಾಶ್ಮೀರದ ವಿಚಾರದಲ್ಲಿ ಪಾಕ್ ಸರ್ಕಾರದ ನಡೆ ಸರಿ ಇಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ, ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿ ಶೋಚನೀಯವಾಗಿದೆ ಎನ್ನುವ ಕಸೂರಿ, ಈ ವಾದವನ್ನು ಪುಷ್ಟೀಕರಿಸಲು, ಮುಂಬಯಿನಲ್ಲಿ ಫ್ಲ್ಯಾಟ್ ಖರೀದಿಸಲು ಮುಸ್ಲಿಮರಿಗೆ ಸಾಧ್ಯವಾಗದ ಸ್ಥಿತಿ ಇದೆ ಎಂಬುದನ್ನು ಚಿತ್ರನಟಿ ಶಬಾನಾ ಆಜ್ಮಿ ದಂಪತಿ ಇತ್ತೀಚೆಗೆ ಹೇಳಿದ್ದರು ಎಂಬ ಅಂಶವನ್ನು ಉಲೇಖಿಸುತ್ತಾರೆ. ಅದೇ ರೀತಿ, ಅಲ್ಪಸಂಖ್ಯಾತರ ಹಿತರಕ್ಷಣೆ ಕಾಪಾಡುವಲ್ಲಿ ಪಾಕ್ ಸರ್ಕಾರವೂ ಸೋತಿದೆ ಎಂಬ ನಿಲುವು ಅವರದ್ದು.

ಸಾಂಪ್ರದಾಯಿಕ ರಾಜಕೀಯ ಕುಟುಂಬ ಹಿನ್ನೆಲೆಯಲ್ಲೆ ಇಂಥ ಕಸೂರಿ ಹುಟ್ಟಿ ಬೆಳೆದಿದ್ದು. ಪಾಕಿಸ್ತಾನದ ರಾಜಕೀಯದ ಮಟ್ಟಿಗೆ ಅವರ ಕುಟುಂಬ ಸರ್ಕಾರಕ್ಕೆ ‘ಸೆಡ್ಡು’ ಹೊಡೆಯುವ ಕುಟುಂಬ ಎಂದೇ ಪ್ರಸಿದ್ಧಿ ಪಡೆದಿದೆ. ಅಜ್ಜ ಅಬ್ದುಲ್ ಖಾದಿರ್ ಕಸೂರಿ ಧಾರ್ವಿುಕ ನೇತಾರರಾಗಿಯೂ, ಅಂದಿನ ಕಾಂಗ್ರೆಸ್ ಪಕ್ಷದ ಮುಖಂಡರಾಗಿಯೂ ಗಮನಸೆಳೆದವರು. ಕಸೂರಿ ಅವರ ತಂದೆ ಮಹಮ್ಮದ್ ಅಲಿ ಕಸೂರಿ ವೃತ್ತಿಯಲ್ಲಿ ವಕೀಲರಾಗಿದ್ದು ರಾಜಕೀಯದಲ್ಲಿ ತೊಡಗಿಸಿಕೊಂಡವರು. 1940ರ ತನಕವೂ ಕಾಂಗ್ರೆಸ್ ಪಕ್ಷದ ಜತೆಗಿದ್ದ ಮಹಮ್ಮದ್ ಅಲಿ ಕಸೂರಿ, ಬಳಿಕ ಸೋಷಿಯಲಿಸ್ಟ್ ಪಕ್ಷ ಸೇರಿ, ಮುಂದೆ ಝುುಲ್ಪಿಕರ್ ಅಲಿ ಭುಟ್ಟೋ ಸಕ್ರಾದಲ್ಲಿ ಕಾನೂನು ಸಚಿವರಾಗಿದ್ದರು. 1973ರಲ್ಲಿ ಪಾಕಿಸ್ತಾನದ ಸಂವಿಧಾನ ರಚನೆ ಆರಂಭವಾದಾಗ ಅದನ್ನು ಸಿದ್ಧಪಡಿಸುವಲ್ಲಿ ಮಹಮ್ಮದ್ ಅಲಿ ಅವರ ಕೊಡುಗೆ ಬಹುದೊಡ್ಡದು. ಲಾಹೋರ್​ನಲ್ಲಿ 1941ರ ಜೂನ್ 18ರಂದು ಜನಿಸಿದ ಖುರ್ಷಿದ್, ಅಲ್ಲೇ ಹೈಸ್ಕೂಲ್​ವರೆಗಿನ ವಿದ್ಯಾಭ್ಯಾಸ ಪಡೆದರು. ನಂತರ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಬಿಎ ಪದವಿ ಪಡೆದರು. ಕಲಿಕೆಯಲ್ಲಿ ಸದಾ ಮುಂದಿದ್ದ ಅವರು, ಪದವಿ ಶಿಕ್ಷಣ ಮುಗಿದ ಕೂಡಲೆ ವಿದೇಶಕ್ಕೆ ತೆರಳಿ ಕ್ಯಾಂಬ್ರಿಡ್ಜ್ ವಿವಿಯಲ್ಲಿ ಕಾನೂನು ವಿಷಯದಲ್ಲಿ ಹೆಚ್ಚುವರಿ ಅಧ್ಯಯನ ನಡೆಸಿದರು. ತರುವಾಯ ಆಕ್ಸ್​ಫರ್ಡ್ ವಿವಿಯಲ್ಲಿ ಸಾರ್ವಜನಿಕ ಆಡಳಿತ ಹಾಗೂ ರಾಜಕೀಯ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಇಷ್ಟೆಲ್ಲ ಅಧ್ಯಯನ ನಡೆಸಿದ ಖುರ್ಷಿದ್ 1990ರ ಅವಧಿಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸೇರಿದರು. ಅಲ್ಲಿದ್ದುಕೊಂಡು ವಿದೇಶ ನೀತಿಗಳ ವಿಷಯದಲ್ಲಿ ಸಲಹೆ ನೀಡಲಾರಂಭಿಸಿದರು. 1981ರ ತನಕವೂ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿದ್ದುಕೊಂಡು ಅನುಭವ ಗಳಿಸಿದರು. ತರುವಾಯ ಆಸಕ್ತಿ ರಾಜಕೀಯದ ಕಡೆಗೆ ಹೊರಳಿದ್ದಲ್ಲದೇ, ಅಂದು ಚಾಲ್ತಿಯಲ್ಲಿದ್ದ ಸ್ವಾತಂತ್ರ್ಯ ಚಳವಳಿಯ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದರು. ಈ ಚಳವಳಿಯ ನೇತೃತ್ವವನ್ನು ತೆಹ್ರಿಕ್ ಇ ಇಸ್ತಿಖಾಲ್ ಪಕ್ಷ ವಹಿಸಿತ್ತು. ರಾಜಕೀಯವಾಗಿ ಬಹುಬೇಗ ಬೆಳವಣಿಗೆ ದಾಖಲಿಸಿದ ಖುರ್ಷಿದ್, ಪಕ್ಷದ ಸೆಕ್ರೆಟರಿ ಜನರಲ್ ಆಗಿ ನೇಮಕಗೊಂಡರು. ಝಿಯಾ ಉಲ್ ಹಕ್ ನೇತೃತ್ವದ ಸೇನಾ ಆಡಳಿತವನ್ನು ವಿರೋಧಿಸಿ ನಡೆದ ಚಳವಳಿಯ ಪರಿಣಾಮ ಅನೇಕ ಬಾರಿ ಸೆರೆವಾಸ ಅನುಭವಿಸಬೇಕಾಯಿತು. ಹಕ್ ಅವರ ಸೇನಾ ಸರ್ಕಾರ ಖುರ್ಷಿದ್ ಅವರನ್ನು 1983ರಲ್ಲಿ ಗಡಿಪಾರು ಮಾಡಿತ್ತು. ಆಗ ಅವರು ಫ್ರಾನ್ಸ್​ಗೆ ತೆರಳಿ ಅಧ್ಯಯನ ಮುಂದುವರಿಸಿದರು. ಕೊನೆಗೆ ಜಿಯಾ ಉಲ್ ಹಕ್ ಮರಣಾನಂತರ ಪಾಕ್​ಗೆ ಮರಳಿದರು. 1993ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ ಟಿಕೆಟ್​ನ ಅಡಿ ಸ್ಪರ್ಧಿಸಿದ ಅವರು, ಸರ್ಕಾರ ಹಾಗೂ ಪಕ್ಷದ ಮಟ್ಟದಲ್ಲಿ ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸಿದರು. ಮುಂದೆ ಮುಷರಫ್ ಅವರು ಅಧ್ಯಕ್ಷರಾದಾಗ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದರು. 2008ರ ಚುನಾವಣೆಯಲ್ಲಿ ಸೋಲನುಭವಿಸಿದ ಅವರು, ಪಾಕಿಸ್ತಾನದ ವಿದೇಶ ನೀತಿಗಳನ್ನು ಮುಚ್ಚುಮರೆ ಇಲ್ಲದೆ ಟೀಕಿಸುವ ಗುಣದಿಂದಲೇ ಪ್ರಸಿದ್ಧರಾಗಿದ್ದಾರೆ.

Leave a Reply

Your email address will not be published. Required fields are marked *