ಗುಜರಾತಿಗೆ ಸಾರಥಿ ರಂಗೂನ್ ರೂಪಾನಿ

ಆನಂದಿ ಬೆನ್ ಪಟೇಲ್ ಆಳ್ವಿಕೆಯ ವೇಳೆ ಗುಜರಾತ್ನ ಮೇಲಿದ್ದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿಡಿತ ಸಡಿಲಗೊಂಡಿದ್ದು ವಾಸ್ತವ. ಅದಕ್ಕೆ ಕಾರಣಗಳು ಅನೇಕ. ಪಟೇಲ್ ಸಮುದಾಯದ ಪ್ರತಿಭಟನೆ, ಅದಾಗಿ ಕಳೆದ ತಿಂಗಳ ಕೊನೆಯಲ್ಲಿ ಗೋವಿನ ವಿಚಾರದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣವೂ ರಾಜಕೀಯವಾಗಿ ಬಿಜೆಪಿಗೆ ಹಿನ್ನಡೆ ಉಂಟುಮಾಡಿತು. ಏತನ್ಮಧ್ಯೆ ಆನಂದಿ ಬೆನ್ ಪಟೇಲ್ ಮಕ್ಕಳ ಅಕ್ರಮ ವಹಿವಾಟು ವಿವಾದಕ್ಕೀಡಾಯಿತು. ಆಗಸ್ಟ್ 1ರಂದು ಮುಖ್ಯಮಂತ್ರಿ ಸ್ಥಾನಕ್ಕೆ ತಾವು ರಾಜೀನಾಮೆ ಸಲ್ಲಿಸಿರುವುದಾಗಿ ಆನಂದಿ ಬೆನ್ ಫೇಸ್ಬುಕ್ ಮೂಲಕ ಘೊಷಿಸಿದರು. ಹೀಗೆ ಕಳೆದ ಒಂದೆರಡು ತಿಂಗಳಲ್ಲಿ ನಡೆದ ತುರುಸಿನ ರಾಜಕೀಯ ಬೆಳವಣಿಗೆಗಳ ಪರಿಣಾಮ ಗುಜರಾತಿನ ಮೊದಲ ಮಹಿಳಾ ಮುಖ್ಯಮಂತ್ರಿ ಅವಧಿಗೆ ಮೊದಲೇ ರಾಜೀನಾಮೆ ನೀಡಬೇಕಾಗಿ ಬಂತು. ಆನಂದಿ ಬೆನ್ ಆಪ್ತ ನಿತಿನ್ ಪಟೇಲ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಏತನ್ಮಧ್ಯೆ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಬಹುದಾದ ಸಂಭಾವ್ಯರ ಪಟ್ಟಿಯಲ್ಲಿ ಅಮಿತ್ ಷಾ ಹೆಸರು ಕೂಡ ಕೇಳಿಬಂದಿತ್ತು. ಈ ಬೆಳವಣಿಗೆ ಆಗುವ ತನಕ ಅಷ್ಟೇಕೆ, ಇದಾಗಿ ಮತ್ತೆರಡು ದಿನವೂ ಪಕ್ಷದ ರಾಜ್ಯ ಅಧ್ಯಕ್ಷ Vijaya Rupaniವಿಜಯ್ ರೂಪಾನಿ ಹೆಸರು ಮುನ್ನೆಲೆಗೆ ಬಂದಿರಲಿಲ್ಲ. ಕೊನೆಗೆ ಇದ್ದಕ್ಕಿದ್ದಂತೆ, ಆನಂದಿ ಬೆನ್ ವಿರೋಧದ ನಡುವೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಬಲದೊಂದಿಗೆ ವಿಜಯ್ ರೂಪಾನಿ ಮುಖ್ಯಮಂತ್ರಿಯಾಗಿ ನಿಯೋಜಿತರಾಗಿದ್ದು, ಭಾನುವಾರ (ಆ.7) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪಟೇಲ್ ಸಮುದಾಯದವರ ಅಸಹನೆ, ಬಣ ರಾಜಕೀಯ ಹೆಚ್ಚಾಗಿದ್ದು ಬಿಜೆಪಿ ವರಿಷ್ಠರ ಪಾಲಿಗೆ ತಲೆನೋವಾಗಿತ್ತು. ಆನಂದಿ ಬೆನ್ ಸಂಪುಟದಲ್ಲಿದ್ದ ಸೌರಭ್ ಪಟೇಲ್ ಹಾಗೂ ನಿತಿನ್ ಪಟೇಲ್ರಲ್ಲಿ ಯಾರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರೂ ಅದು ಬಣರಾಜಕೀಯಕ್ಕೆ ನಾಂದಿಹಾಡುತ್ತಿತ್ತು. ಇವನ್ನೆಲ್ಲ ಶಮನಗೊಳಿಸಿ ಸೂಕ್ತ ವಾರಸುದಾರರನ್ನು ಆಯ್ಕೆ ಮಾಡಬೇಕು ಎಂದಾಗ ಅಮಿತ್ ಷಾ ಕಣ್ಣಿಗೆ ಕಾಣಿಸಿದ್ದು ಜೈನ (ಬನಿಯಾ) ಸಮುದಾಯದ ವಿಜಯ್ ರೂಪಾನಿ. ಪಟೇಲ್ ಮೀಸಲಾತಿ ಹೋರಾಟವನ್ನು ತಣ್ಣಗಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಅವರು. ಪರಿಣಾಮ, ಎಲ್ಲರ ನಿರೀಕ್ಷೆ, ರಾಜಕೀಯ ಲೆಕ್ಕಾಚಾರಗಳಿಗೆ ವ್ಯತಿರಿಕ್ತವಾಗಿ ಸೌರಾಷ್ಟ್ರ ಪ್ರದೇಶದ ವಿಜಯ್ ರೂಪಾನಿ ಗುಜರಾತಿನ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಮೃದು ಭಾಷಿಯಾದ ಅವರು, ಭಾಷಣ ಕಲೆಯನ್ನೂ ಸಿದ್ಧಿಸಿಕೊಂಡಿದ್ದು ಮೋಡಿ ಮಾಡುವಂತೆ ಮಾತನಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅವರ ಸೌಮ್ಯ ಸ್ವಭಾವ, ಸಾಮಾನ್ಯ ಕಾರ್ಯಕರ್ತರೊಡನೆ ಬೆರೆಯುವ ಸರಳತೆ, ಜನರ ನಾಡಿಮಿಡಿತವನ್ನು ಅರಿತು ಕೂಡಲೇ ಸ್ಪಂದಿಸುವ ಗುಣ ಇವೆಲ್ಲವೂ ಅವರ ರಾಜಕೀಯ ಬದುಕಿನ ತಳಹದಿಯನ್ನು ಗಟ್ಟಿಗೊಳಿಸಿವೆ.

ಐದು ದಿನಗಳ ಹಿಂದಷ್ಟೇ 60ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರೂಪಾನಿ, ಸುದೀರ್ಘ ಅವಧಿ ತಾಳ್ಮೆಯ ರಾಜಕಾರಣವನ್ನೇ ಮಾಡಿದ್ದರು. ಸಂಘಟನಾ ಚತುರತೆ, ಸರ್ಕಾರದಲ್ಲಿ ಆಡಳಿತ ಅನುಭವ ಎರಡನ್ನೂ ಹೊಂದಿರುವ ಅವರು, ಷಾ ಮತ್ತು ಮೋದಿ ಅವರಿಗೆ ಆಪ್ತರಾಗಿದ್ದುದು ಹಾಗೂ ಸಂಘ ಪರಿವಾರದಲ್ಲಿ ಕೂಡ ಉತ್ತಮ ಸಂಬಂಧ ಕಾಪಾಡಿಕೊಂಡದ್ದು ಪ್ಲಸ್ ಪಾಯಿಂಟ್ ಆಯಿತು. ತಾಳ್ಮೆಗೆ ತಕ್ಕ ಫಲವನ್ನೇ ಅವರು ಪಡೆದಿದ್ದಾರೆ.

ರೂಪಾನಿ ಮೂಲತಃ ಮ್ಯಾನ್ಮಾರಿನ ರಂಗೂನ್(ಪ್ರಸ್ತುತ ಯಾಂಗೂನ್ ಎಂದು ಕರೆಯಲ್ಪಡುತ್ತಿದೆ)ನವರು. ಅವರು ಹುಟ್ಟಿದ್ದು 1956ರ ಆಗಸ್ಟ್ 2ರಂದು. ತಂದೆ ರಮಣಿಕ್ಲಾಲ್, ತಾಯಿ ಮಾಯಾ ಬೆನ್. ಶಾಲಾ ದಿನಗಳಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಿಗೆ ಹೋಗುತ್ತಿದ್ದವರು. ಸಂಘದ ಪ್ರಭಾವಲಯದಲ್ಲೇ ಬೆಳೆದ ಅವರು, ಸೌರಾಷ್ಟ್ರ ವಿಶ್ವವಿದ್ಯಾಲಯದಿಂದ ಬಿ.ಎ. ಹಾಗೂ ಎಲ್ಎಲ್ಬಿ ಪದವಿ ಶಿಕ್ಷಣ ಪಡೆಯುತ್ತಿರುವಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಸಾರ್ವಜನಿಕ ಜೀವನ ಆರಂಭಿಸಿದರು. ಬಳಿಕ 1971ರಲ್ಲಿ ಜನಸಂಘದ ಮೂಲಕ ರಾಜಕೀಯ ಜೀವನ ಪ್ರವೇಶಿಸಿದ ಅವರು, ತುರ್ತಪರಿಸ್ಥಿತಿ ವೇಳೆ ಭುಜ್ ಮತ್ತು ಭಾವನಗರದ ಸೆರೆಮನೆಗಳಲ್ಲಿ 11 ತಿಂಗಳ ಸೆರೆವಾಸವನ್ನೂ ಅನುಭವಿಸಿದವರು. 1978ರಿಂದ 1981ರ ತನಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಬಳಿಕ ಬಿಜೆಪಿ ಸೇರ್ಪಡೆಗೊಂಡು 1987ರಲ್ಲಿ ರಾಜ್ಕೋಟ್ನ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಕಾರ್ಪೆರೇಟರ್ ಆಗಿ ಆಯ್ಕೆಯಾದರು. ಅಂದು ಡ್ರೖೆನೇಜ್ ಕಮಿಟಿಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಇದಾಗಿ, 1988ರಿಂದ 1996ರ ತನಕ ಮಹಾನಗರಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. 1995ರಲ್ಲಿ ಪುನಃ ಚುನಾವಣೆಯಲ್ಲಿ ಗೆದ್ದು ಕಾರ್ಪೆರೇಟರ್ ಆಗಿ ಮುಂದುವರಿದರು. 1996-97ರ ಅವಧಿಯಲ್ಲಿ

ರಾಜ್ಕೋಟ್ನ ಮೇಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1998ರಲ್ಲಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತರಾದ ಅವರು, ಕೇಶುಭಾಯ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ 1998ರಲ್ಲಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದರು. 2006ರಲ್ಲಿ ಗುಜರಾತ್ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾಗಿದ್ದ ಅವರು, 2006-12ರ ತನಕ ರಾಜ್ಯಸಭೆ ಸದಸ್ಯರಾಗಿದ್ದರು. ನಾಲ್ಕು ಬಾರಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹೊಣೆಗಾರಿಕೆ ನಿರ್ವಹಿಸಿದ್ದರು. 2013ರಲ್ಲಿ ಗುಜರಾತ್ ಮುನಿಸಿಪಲ್ ಹಣಕಾಸು ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2014ರ ಆಗಸ್ಟ್ನಲ್ಲಿ ವಾಜುಭಾಯ್ ವಾಲಾ ಅವರು ಕರ್ನಾಟಕದ ರಾಜ್ಯಪಾಲರಾಗಿ ನಿಯುಕ್ತರಾದಾಗ ಅವರಿಂದ ತೆರವಾದ ರಾಜ್ಕೋಟ್ನ ವಿಧಾನಸಭಾ ಕ್ಷೇತ್ರದ ಉಪಚುನಾವಣೆ(2014 ಅಕ್ಟೋಬರ್ 19ರಂದು)ಗೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅದೇ ಮೊದಲ ಸಲ ವಿಧಾನಸಭೆಗೆ ಸ್ಪರ್ಧಿಸಿದ್ದ ಅವರು, ಪಟೇಲ್ ಸಮುದಾಯದವರೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಭಾರಿ ಬಹುಮತದೊಂದಿಗೆ ಗೆಲುವು ದಾಖಲಿಸಿದರು. ಅದೇ ವರ್ಷ ನವೆಂಬರ್ನಲ್ಲಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ ಆನಂದಿ ಬೆನ್, ಸಾರಿಗೆ, ಜಲ ವಿತರಣೆ, ಕಾರ್ವಿುಕ ಹಾಗೂ ಉದ್ಯೋಗ ಖಾತೆಗಳ ಹೊಣೆ ಹೊರಿಸಿದರು. ಇವೆಲ್ಲದರ ನಡುವೆ, 2016ರ ಫೆಬ್ರವರಿ 19ರಂದು ಪಕ್ಷದ ರಾಜ್ಯ ಅಧ್ಯಕ್ಷರಾಗಿಯೂ ಅವರು ಆಯ್ಕೆಯಾದರು.

ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ರೂಪಾನಿ ಮುಂದೆ ಸಾಕಷ್ಟು ಸವಾಲುಗಳಿವೆ. ನರೇಂದ್ರ ಮೋದಿಯವರ 12 ವರ್ಷಗಳ ಬಿಗು ಆಳ್ವಿಕೆಯ ತರುವಾಯದ ಎರಡೂವರೆ ವರ್ಷಗಳ ಅವಧಿಯಲ್ಲಿ ಗುಜರಾತಿನಲ್ಲಿ ಪಕ್ಷಕ್ಕಾದ ಹಾನಿ ಒಂದೆಡೆ, ಇನ್ನೊಂದೆಡೆ ಬಿಜೆಪಿ ಸರ್ಕಾರದ ವಿರುದ್ಧ ಎದ್ದಿರುವ ಆಡಳಿತ ವಿರೋಧಿ ಅಲೆ, ಅದಕ್ಕೆ ಪೂರಕವಾಗಿರುವ ಪಟೇಲ್ ಸಮುದಾಯದ ಆಕ್ರೋಶ, ದಲಿತರ ಪ್ರತಿಭಟನೆ ಎಲ್ಲವನ್ನೂ ತಣ್ಣಗಾಗಿಸಬೇಕಾಗಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಇವುಗಳ ಲಾಭ ಪಡೆಯುವ ಸನ್ನಾಹದಲ್ಲಿವೆ. 2017ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೊಂದು ಅವಧಿಗೆ ಪಕ್ಷವನ್ನು ಗೆಲ್ಲಿಸುವುದು ಕೂಡ ಪ್ರತಿಷ್ಠೆಯ ವಿಷಯವಾಗಿದೆ. ಮುಖ್ಯಮಂತ್ರಿಯಾಗಿ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಮುನ್ನಡೆಸುವುದು ಒಂದೆಡೆ, ಪಕ್ಷದ ಅಧ್ಯಕ್ಷರಾಗಿ ಎಲ್ಲ ಸಮುದಾಯದ ನಾಯಕರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವುದು ಕೂಡ ಸವಾಲಿನ ಕೆಲಸವೇ ಆಗಿದೆ. ಇವನ್ನೆಲ್ಲ ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬುದೇ ಸದ್ಯದ ಕುತೂಹಲ.

ಇನ್ನು ಅವರ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ, ಪತ್ನಿ ಅಂಜಲಿ ರೂಪಾನಿ. ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ. ಮೊದಲ ಪುತ್ರ ಪೂಜಿತ್ ಮೂರೂವರೆ ವರ್ಷ ವಯಸ್ಸಿನವನಾಗಿದ್ದಾಗ ಮನೆಯ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದ. ಆ ಆಘಾತದಿಂದ ಚೇತರಿಸಿಕೊಳ್ಳಲು ರೂಪಾನಿಗೆ ಬಹಳ ವರ್ಷಗಳೇ ಬೇಕಾದವು. ಕೊನೆಗೆ ರಾಜ್ಕೋಟ್ನಲ್ಲಿ ಅವರು, ಪೂಜಿತ್ ಹೆಸರಿನಲ್ಲಿ ಟ್ರಸ್ಟ್ ಒಂದನ್ನು ಸ್ಥಾಪಿಸಿ ಬಡ ಮಕ್ಕಳು, ಪೌರ ಕಾರ್ವಿುಕರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸಲಾರಂಭಿಸಿದರು. ಮತ್ತೊಬ್ಬ ಪುತ್ರ ಋಷಭ್ ಅವರು ಅಹಮದಾಬಾದ್ನ ನಿರ್ವ ವಿಶ್ವವಿದ್ಯಾಲಯ(ಖಾಸಗಿ ವಿಶ್ವವಿದ್ಯಾಲಯ)ದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ರಾಧಿಕಾ ಪತಿಯೊಂದಿಗೆ ಲಂಡನ್ನಲ್ಲಿ ನೆಲೆಸಿದ್ದಾರೆ. ಇಬ್ಬರೂ ಲೆಕ್ಕ ಪರಿಶೋಧಕರು.

Leave a Reply

Your email address will not be published. Required fields are marked *