ಹೊಸ ಅಖಾಡ-ಆಟ

ಎಸ್.ಶ್ರೀಶಾಂತ್
ಎಸ್.ಶ್ರೀಶಾಂತ್

ಕ್ರಿಕೆಟರ್ ಎಸ್.ಶ್ರೀಶಾಂತ್ ಎಂದಾಗ, `ತಲೆ ತುಂಬಾ ಗುಂಗುರು ಕೂದಲು, ಅದು ಹಾರಾಡದಂತೆ ತಲೆಗೆ ಬ್ಯಾಂಡ್ ಹಾಕಿಕೊಂಡು, ಪ್ಯಾಂಟಿಗೆ ಟವೆಲ್ ಸಿಕ್ಕಿಸಿಕೊಂಡು ನಿಖರ ಗುರಿ ಮತ್ತು ಪರ್ಫೆಕ್ಟ್ ಸೀಮ್ ಪೊಸಿಷನ್‍ನೊಂದಿಗೆ ಮಣಿಕಟ್ಟನ್ನು ಸ್ವಲ್ಪ ಬಾಗಿಸಿ ಚೆಂಡನ್ನು ವೇಗವಾಗಿ ಎಸೆದು ಎದುರಾಳಿಯ ವಿಕೆಟ್ ಬಿದ್ದಾಕ್ಷಣ, ಎಡ ಮೊಣಕಾಲು ನೆಲದ ಮೇಲೂರಿ ಬಲಗೈ ಮೇಲೆತ್ತಿ `ಔಟ್’ ಎಂದು ಅಪೀಲು ಮಾಡಿ, ಬಳಿಕ ಎರಡೂ ಕೈ ಅಗಲಿಸಿ ಕಿರುಚುವ ಆ ಆಕ್ರಮಣಕಾರಿ ಶೈಲಿ’ ನೆನಪಾಗುತ್ತದೆ.
ಆದರೆ, ಸದ್ಯ, `ಕೆದರಿದ ಕೂದಲು, ಎರಡು ಹುಬ್ಬುಗಳ ನಡುವೆ ಒಂದು ಪುಟ್ಟ ಕೆಂಪು ತಿಲಕ, ಬಲಗೈಯಲ್ಲೊಂದು ಫೋನ್ ಹಿಡಿದು ಎಡಗೈಯ ಎರಡು ಬೆರಳು ಮೇಲೇರಿಸಿ ವಿಜಯದ ಸಂಕೇತ ತೋರುತ್ತಿದ್ದಾರೆ’ ಅವರು! ಹೌದು, ಶ್ರೀಶಾಂತ್ ವಿಷಯದಲ್ಲಿ ಕಾಲಚಕ್ರ ಬಹುಬೇಗ ಉರುಳಿಹೋಗುತ್ತಿದೆ. ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಕ್ರಿಕೆಟ್ ಅಲ್ಲ, ಚುನಾವಣೆ!.
ಹುಬ್ಬೇರಿಸಬೇಡಿ.. ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಅದೇ ವೇಗದಲ್ಲಿ ಸಿನಿಮಾರಂಗಕ್ಕೂ ಕಾಲಿಟ್ಟು, ಅಲ್ಲಿಂದ ಈಗ ಚುನಾವಣಾ ಕಣಕ್ಕೂ ಎಂಟ್ರಿ ಕೊಟ್ಟಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ(ಮಾ.25)ವಷ್ಟೇ ಶ್ರೀಶಾಂತ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ತಿರುವನಂತಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶ್ರೀಶಾಂತ್ ಸ್ಪರ್ಧಿಸಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಆ ವೇಳೆ ತಿಳಿಸಿದರು.
ಇದರೊಂದಿಗೆ ರಾಜಕೀಯ ಅಖಾಡದಲ್ಲಿ ಅವರ ಆಟ ಶುರು. ಕ್ರಿಕೆಟ್ ಮೈದಾನದಲ್ಲಿ ಸೀಮರ್ ಅಥವಾ ಫಾಸ್ಟ್‍ಬೌಲರ್(ಸೀಮ್ ಬೌಲಿಂಗ್( ಫಾಸ್ಟ್ ಬೌಲಿಂಗ್‍ನ ಒಂದು ಮಾದರಿ) ಮಾಡುವ ಬೌಲರ್) ಆಗಿ ಗುರುತಿಸಿಕೊಂಡಿರುವ ಶ್ರೀಶಾಂತ್, ಅತ್ಯಲ್ಪ ಅವಧಿಯಲ್ಲಿ ಕ್ರಿಕೆಟ್‍ನಲ್ಲಿ ಖ್ಯಾತಿಯ ತುದಿಗೇರಿದ್ದರು. ಬಳಿಕ `ಕೆಟ್ಟ ಕಾರಣ’ಕ್ಕಾಗಿ ಅದೇ ವೇಗದಲ್ಲಿ ಮೈದಾನದಿಂದ ಹೊರಬಂದಿದ್ದಾರೆ ಕೂಡ. ಅವರ ಬದುಕಿನ ಹಾದಿಯೇ ಹಾಗಿದೆ.
ಆರಂಭದಲ್ಲಿ ಶ್ರೀಶಾಂತ್ ಲೆಗ್‍ಸ್ಪಿನ್ನರ್ ಆಗಿದ್ದರು. ಕ್ರಿಕೆಟ್ ದಂತಕತೆ ಅನಿಲ್ ಕುಂಬ್ಳೆ ಅವರ ಬೌಲಿಂಗ್ ಶೈಲಿಗೆ ಮಾರುಹೋಗಿದ್ದರು. ಕಾಲಾಂತರದಲ್ಲಿ ಅವರು ಯಾರ್ಕರ್‍ಗಳ ಮೂಲಕ ಗಮನ ಸೆಳೆದರಲ್ಲದೆ, ನಿಧಾನವಾಗಿ ಬೌಲಿಂಗ್ ಶೈಲಿಯನ್ನು ಲೆಗ್‍ಸ್ಪಿನ್‍ನಿಂದ ಫಾಸ್ಟ್ ಬೌಲಿಂಗ್‍ಗೆ ಪರಿವರ್ತಿಸಿದರು. ಶ್ರೀಶಾಂತ್ ಕ್ರಿಕೆಟ್ ಪ್ರೇಮಿಗಳ ಗಮನಸೆಳೆದುದು ರಣಜಿ ಟ್ರೋಫಿ ಪಂದ್ಯಾವಳಿ ಮೂಲಕ. ಹಿಮಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ಅವರು ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದು ಅದಕ್ಕೆ ಕಾರಣ. ಅದು ಕೇರಳದ ಬೌಲರ್ ಒಬ್ಬನ ಚೊಚ್ಚಲ ಸಾಧನೆಯೂ ಹೌದು.
ಅದು 2005ರ ಅಕ್ಟೋಬರ್ ತಿಂಗಳು. ಚಾಲೆಂಜರ್ ಟ್ರೋಫಿ ಪಂದ್ಯಾವಳಿ ನಡೆಯುತ್ತಿತ್ತು. ರಣಜಿ ಟ್ರೋಫಿ ಪಂದ್ಯಾವಳಿಯ ಸಾಧನೆಯಿಂದಾಗಿ ಆಯ್ಕೆದಾರರು ಭಾರತ ಬಿ ತಂಡಕ್ಕೆ ಶ್ರೀಶಾಂತ್‍ರನ್ನು ಆಯ್ಕೆ ಮಾಡಿದರು. ಆ ಪಂದ್ಯಾವಳಿಯಲ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿಕೆಟ್ ಕಿತ್ತು ಗಮನಸೆಳೆದರು. ಆ ಪಂದ್ಯಾವಳಿಯಲ್ಲಿ ಅತ್ಯಧಿಕ ವಿಕೆಟ್ ಗಳಿಸಿದ ಅವರಿಗೆ, ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ಚೊಚ್ಚಲ ಅವಕಾಶ ಸಿಕ್ಕಿತು. ಅದೇ ತಿಂಗಳ 25ರಂದು ನಾಗಪುರದಲ್ಲಿ ಈ ಪಂದ್ಯ ನಡೆದು, ಭಾರತಕ್ಕೆ 152 ರನ್‍ಗಳ ಭಾರಿ ಗೆಲುವು ದಕ್ಕಿತ್ತು. ಈ ಪಂದ್ಯದಲ್ಲಿ ಶ್ರೀಶಾಂತ್ 5.4 ಓವರ್ ಎಸೆದು 39 ರನ್ ಕೊಟ್ಟು ಎರಡು ವಿಕೆಟ್ ಗಳಿಸಿದ್ದರು. 2006ರ ಮಾರ್ಚ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿ, 4 ವಿಕೆಟ್ ಪಡೆದು ಗಮನಸೆಳೆದರು. ಅಲ್ಲಿಂದಾಚೆಗೆ ಅವರು ಹಿಂತಿರುಗಿ ನೋಡಲಿಲ್ಲ. ಮುಂದೆ ಐಪಿಎಲ್ ಪಂದ್ಯ, ಟಿ20 ಪಂದ್ಯಗಳಲ್ಲೂ ಮಿಂಚಿದರು. 2011ರ ಆಗಸ್ಟ್‍ನಲ್ಲಿ ಲಂಡನ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್ ಪಂದ್ಯವೇ ಅಂತಿಮ ಪಂದ್ಯ. ಅನಾರೋಗ್ಯದ ಕಾರಣದಿಂದಾಗಿ ಕ್ರೀಡಾಂಗಣದಿಂದ ದೂರ ಉಳಿಯಬೇಕಾಯಿತು. ಕೆಲವು ಶಸ್ತ್ರಚಿಕಿತ್ಸೆಗಳ ಬಳಿಕ 2012ರ ಕೊನೆಗೆ ದೇಸೀ ಕ್ರಿಕೆಟ್‍ಗೆ ರೀ ಎಂಟ್ರಿ ಪಡೆದುಕೊಂಡರೂ, 2013ರಲ್ಲಿ ಮತ್ತೆ ಅನಾರೋಗ್ಯ ಕಾಡಿತು. ಅದೇ ವರ್ಷ ಐಪಿಎಲ್ ಆರನೇ ಆವೃತ್ತಿಯ ವೇಳೆ ಸ್ಪಾಟ್‍ಫಿಕ್ಸಿಂಗ್‍ನಲ್ಲಿ ಭಾಗಿಯಾದ ಆರೋಪಕ್ಕೂ ಒಳಗಾಗಬೇಕಾಯಿತು. ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾಗ ನಡೆದ ಘಟನೆ ಇದು. ಪರಿಣಾಮ ಐಪಿಎಲ್ ಪಂದ್ಯಾವಳಿಯಿಂದಲೇ ನಿಷೇಧಿಸಲ್ಪಟ್ಟರು. ಬಿಸಿಸಿಐ ಕೂಡ ಆಜೀವ ನಿಷೇಧ ಹೇರಿತು. ಏತನ್ಮಧ್ಯೆ, ದೆಹಲಿ ಪೆÇಲೀಸರಿಂದ ಬಂಧನಕ್ಕೂ ಒಳಗಾಗಿ ಕೆಲಕಾಲ ತಿಹಾರ್ ಜೈಲಿನಲ್ಲಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದರು. ಈ ಆರೋಪದಿಂದ ಕಳೆದ ವರ್ಷವಷ್ಟೇ ಕೋರ್ಟ್ ಶ್ರೀಶಾಂತ್‍ರನ್ನು ದೋಷಮುಕ್ತಗೊಳಿಸಿತು. ಆದರೂ, ಬಿಸಿಸಿಐ ಅವರ ಮೇಲಿನ ನಿಷೇಧವನ್ನು ಇನ್ನೂ ತೆರವುಗೊಳಿಸಿಲ್ಲ. ಆಡಿದ ಐದು ವರ್ಷಗಳ ಅವಧಿಯಲ್ಲಿ ಅವರು ಒಟ್ಟು 27 ಟೆಸ್ಟ್‍ಗಳಲ್ಲಿ 87ವಿಕೆಟ್, 53 ಏಕದಿನ ಪಂದ್ಯಗಳಲ್ಲಿ 75 ವಿಕೆಟ್, 10 ಟಿ20 ಪಂದ್ಯಗಳಲ್ಲಿ 7, 44 ಐಪಿಎಲ್ ಪಂದ್ಯದಲ್ಲಿ 40 ವಿಕೆಟ್ ಪಡೆದಿದ್ದರು.
ಈ ಅವಧಿಯಲ್ಲಿ ಅವರು ಕ್ರೀಡಾಂಗಣಗಳಲ್ಲಿ ಕಪಿಚೇಷ್ಟೆ, ಆಕ್ರಮಣಕಾರಿ ವ್ಯಕ್ತಿತ್ವದ ಕುಖ್ಯಾತಿಗೂ ಒಳಗಾಗಿದ್ದರು. 2007ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಿದ ವೇಳೆ ಮೈಕಲ್ ವೌಘನ್ ಭುಜಕ್ಕೆ ಒರೆಸಿದ ಪ್ರಕರಣ, ಕೆವಿನ್ ಪೀಟರ್‍ಸನ್‍ಗೆ ಆಕ್ಷೇಪಾರ್ಹ ರೀತಿಯಲ್ಲಿ ಬಾಲ್ ಎಸೆದ ಪ್ರಕರಣ, ಸೈಮಂಡ್ಸ್ ಜತೆಗಿನ ಸಂಘರ್ಷಗಳು ಸೇರಿ ಪಟ್ಟಿಯಲ್ಲಿ ಹಲವು ಇವೆ. ಈ ಪೈಕಿ ಐಪಿಎಲ್‍ನಲ್ಲಿ ಹರ್ಭಜನ್ ಸಿಂಗ್ ಅವರು ಶ್ರೀಶಾಂತ್‍ಗೆ `ಕಪಾಳಮೋಕ್ಷ’ ಮಾಡಿದ ಪ್ರಕರಣ ಇಡೀ ಕ್ರಿಕೆಟ್ ಜಗತ್ತಿನ ಗಮನಸೆಳೆದಿತ್ತು. ಇಷ್ಟಾಗ್ಯೂ, ಶ್ರೀಶಾಂತ್ ಬೌಲಿಂಗ್ ಕೌಶಲ, ಸಾಮಥ್ರ್ಯಗಳನ್ನು ಆಲನ್ ಡೊನಾಲ್ಡ್‍ರಂತಹ ಘಟಾನುಘಟಿಗಳೇ ಹೊಗಳಿರುವುದು ಗಮನಾರ್ಹ. ಅವರ ನಡವಳಿಕೆಯಲ್ಲಿ ಸಮಸ್ಯೆ ಇದ್ದಿದ್ದು ನಿಜ. ಅದರ ಪರಿಣಾಮವೇ ಈ ಕುಖ್ಯಾತಿ. ಈ ನಡುವೆ `ಅದೃಷ್ಟ’ಕ್ಕಾಗಿ ಅವರು ತಮ್ಮ ಹೆಸರನ್ನು `ಖ್ಟಛಿಛಿ ಖZ್ಞಠಿe’ ಎಂದೇ ಕರೆಸಿಕೊಳ್ಳಲು ಇಷ್ಟಪಡುತ್ತಿದ್ದರು ಮತ್ತು ಆಂಗ್ಲ ಮಾಧ್ಯಮಗಳೆದುರು ಒಂದೆರಡು ಬಾರಿ ಅದನ್ನು ವ್ಯಕ್ತಪಡಿಸಿದ್ದರು ಕೂಡ.
ಕ್ರಿಕೆಟ್ ಹೊರತಾಗಿ ಹೇಳುವುದಾದರೆ, ಅವರು ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು ಝಲಕ್ ಧಿಕ್‍ಲಾಜಾ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ರಾಬಿನ್ ಉತ್ತಪ್ಪ ಜತೆಗೂಡಿ ಬೆಂಗಳೂರಿನಲ್ಲಿ ಬ್ಯಾಟ್ ಆ್ಯಂಡ್ ಬಾಲ್ ಇನ್ ಎಂಬ ರೆಸ್ಟೋರಂಟ್ ನಡೆಸುತ್ತಿದ್ದಾರೆ. ಅವರು ಹುಟ್ಟಿದ್ದು 1983ರ ಫೆ.6ರಂದು. ತಂದೆ ಶಾಂತಕುಮಾರನ್ ನಾಯರ್, ತಾಯಿ ಸಾವಿತ್ರಿ ದೇವಿ. ಅಣ್ಣ ದೀಪು ಶಾಂತನ್ ಕೊಚ್ಚಿಯಲ್ಲಿ ಮ್ಯೂಸಿಕ್ ಕಂಪನಿಯ ಮಾಲೀಕ. ಅಕ್ಕ ನಿವೇದಿತಾ ಕೇರಳದ ಧಾರಾವಾಹಿ ಕಲಾವಿದೆ. ಇನ್ನೊಬ್ಬ ಅಕ್ಕ ದಿವ್ಯಾ ದಕ್ಷಿಣಭಾರತದ ಖ್ಯಾತ ಹಿನ್ನೆಲೆ ಗಾಯಕ ಮಧುಬಾಲಕೃಷ್ಣನ್‍ರ ಪತ್ನಿ. ಜೈಪುರದ ಗೆಳತಿ ಭುವನೇಶ್ವರಿ ಕುಮಾರಿ ಅವರನ್ನು 2013ರ ಡಿ.12ರಂದು ಗುರುವಾಯೂರ್‍ನಲ್ಲಿ ಶ್ರೀಶಾಂತ್ ವಿವಾಹವಾಗಿದ್ದು, ಆಕೆ ಅಲ್ಲಿನ ರಾಜಮನೆತನದವರು. ಇತ್ತೀಚೆಗೆ ಶ್ರೀಶಾಂತ್ ದಂಪತಿಗೆ ಮಗಳು ಜನಿಸಿದ್ದಾಳೆ.
ಪ್ರಸ್ತುತ ಬದುಕಿನ ಜಂಜಾಟಗಳು ಕಲಿಸಿದ ಪಾಠದಿಂದ ಮಾಗಿರುವ ಶ್ರೀಶಾಂತ್, ರಾಜಕೀಯ ರಂಗದಲ್ಲೂ ಕ್ರೀಡಾಂಗಣದ ಅದೇ ಆಕ್ರಮಕ ವ್ಯಕ್ತಿತ್ವ ಪ್ರದರ್ಶಿಸುವರೇ? ಅಥವಾ ರಾಜಕೀಯ ಚದುರಂಗದ ಪರಿಣತರಾಗುವರೇ? ನೋಡಬೇಕು.

Leave a Reply

Your email address will not be published. Required fields are marked *