ಇರಾಕ್ ನ ರಾಂಬೋ

abu azreal
abu azreal

ಬೋಳುತಲೆ, ಕುರುಚಲು ಮೀಸೆ, ಉದ್ದ ಗಡ್ಡ, ಗಡಸು ಧ್ವನಿ, ಕಟ್ಟುಮಸ್ತಾದ ಶರೀರ, ತುಟಿ ಮೇಲೊಂದು ಕಿರುನಗು. ಕಪ್ಪು ಟೀ ಶರ್ಟ್, ಕಾಗೋ ಪ್ಯಾಂಟ್, ಕಪ್ಪು ಕನ್ನಡಕ ಧರಿಸಿ ತಲೆಗೊಂದು ಕ್ಯಾಪ್ ತೊಟ್ಟು ಕಾರಿನಿಂದ ಕೆಳಗಿಳಿದರೆ ಸಾಕು ಬಾಗ್ದಾದ್​ನ ಪೇಟೆಯಲ್ಲಿರುವ ಜನ ಆತನನ್ನು ಮುತ್ತಿಕೊಳ್ಳುತ್ತಾರೆ. ಕೈ ಕುಲುಕುತ್ತಾರೆ, ಶುಭ ಹಾರೈಸುತ್ತಾರೆ. ಅಷ್ಟೇ ಏಕೆ, ಜತೆಗೆ ನಿಂತು ಸೆಲ್ಪಿ ಕೂಡ ಕ್ಲಿಕ್ಕಿಸಿಕೊಳ್ಳುತ್ತಾರೆ. ಹೊಸಬರು ಯಾರೇ ಬಂದರೂ ಕೂಡಲೇ, ‘ಇಲ್ನೋಡಿ.. ಇವರೇ ನಮ್ಮ ಇರಾಕ್​ನ ರಾಂಬೋ ’ ಎಂದು ಪರಿಚಯಿಸಿಬಿಡುತ್ತಾರೆ ಕೂಡ. ಇರಾಕ್​ನ ಜನ ಆತನನ್ನು ಆರಾಧಿಸತೊಡಗಿದ್ದಾರೆ.

ಇರಾಕ್​ನ ಪ್ರಸಕ್ತ ಸನ್ನಿವೇಶದ ಬಗ್ಗೆ ಹೆಚ್ಚೇನೂ ವಿವರಣೆ ಕೊಡುವುದು ಅಗತ್ಯವಿಲ್ಲ. ಅಲ್ಲಿ ಈಗ ಐಎಸ್​ಐಎಸ್ ಉಗ್ರರದ್ದೇ ಪ್ರಾಬಲ್ಯ. ಅವರನ್ನು ಮಟ್ಟಹಾಕಲು ಇರಾಕ್ ಸೇನೆ ಇನ್ನಿಲ್ಲದಂತೆ ಶ್ರಮಿಸುತ್ತಿದೆ. ಜಗತ್ತಿನ ಬೇರೆ ಬೇರೆ ದೇಶಗಳಿಂದ ಸೇನಾ ನೆರವೂ ಜತೆಗೆ ಇದೆ ಎನ್ನಿ. ಆದರೂ, ಐಎಸ್ ಉಗ್ರರು ಇರಾಕ್​ನ ಆಯಕಟ್ಟಿನ ಜಾಗಗಳನ್ನು ವಶಕ್ಕೆ ತೆಗೆದುಕೊಂಡು ‘ತಮಗಾರೂ ಸಾಟಿ ಇಲ್ಲ’ ಎಂಬಂತೆ ಮೆರೆಯುತ್ತಿದ್ದಾರೆ. ದಯೆ, ದಾಕ್ಷಿಣ್ಯ ತೋರದೆ ತಮ್ಮ ವಿರುದ್ಧವಿರುವವರನ್ನು ಅಲ್ಲಲ್ಲೇ ಕಡಿದು ಕೊಚ್ಚಿಯೋ, ಕತ್ತು ಸೀಳಿಯೋ ಅಥವಾ ತಲೆಗೆ ಗುಂಡು ಹಾರಿಸಿಯೋ ಕೊಲೆ ಮಾಡುವ ಕಿರಾತಕರು ಅವರು. ಅಂತಹ ನಿರ್ದಯಿಗಳೂ ‘ಇರಾಕ್​ನ ರಾಂಬೋ ’ ಹೆಸರು ಕೇಳಿದರೆ ಸಾಕು ನಿಂತಲ್ಲೇ ನಡುಗಿಬಿಡುತ್ತಾರೆ.

ಅಷ್ಟಕ್ಕೂ ಸಮರಾಂಗಣಕ್ಕೆ ನುಗ್ಗುವ ಈ ರಾಂಬೋ  ಹೇಗಿರುತ್ತಾನೆೆ ಗೊತ್ತಾ? ಸೇನಾ ಸಮವಸ್ತ್ರ. ಅದರ ಮೇಲೊಂದು ಗುಂಡುನಿರೋಧಕ ಕವಚ, ಅದರ ಪಾಕೆಟ್​ನಲ್ಲೆಲ್ಲ ಗ್ರೆನೇಡ್, ಮದ್ದುಗುಂಡುಗಳು. ಒಂದು ಕೈಯಲ್ಲಿ ರೈಫಲ್, ಇನ್ನೊಂದು ಕೈಯಲ್ಲಿ ಕೊಡಲಿ, ಒರೆಯಲ್ಲಿ ಖಡ್ಗ ಧರಿಸಿ ನಿಂತಾಗಲೂ ಮುಖದ ಮೇಲೆ ನಗು ಲಾಸ್ಯವಾಡುತ್ತಿರುತ್ತದೆ. ಜತೆಗಿದ್ದವರ ಜತೆ ಹಾಸ್ಯಚಟಾಕಿ ಹಾರಿಸುತ್ತ ಮುನ್ನಡೆದು ಐಎಸ್ ಉಗ್ರರ ಅಭೇದ್ಯ ಕೋಟೆಯೊಳಕ್ಕೆ ಪ್ರವೇಶಿಸಿದರೆ ಅಲ್ಲಿದ್ದವರೆಲ್ಲ ಚೆಲ್ಲಾಪಿಲ್ಲಿ. ಆತನ ಕೈಗೆ ಸಿಕ್ಕರೆ ಶರೀರ ಪೀಸ್​ಪೀಸ್ ಆಗೋದು ಖಚಿತ ಅನ್ನೋದು ಅವರಿಗೆ ಗೊತ್ತು. ಬಾಗ್ದಾದ್​ನ ಜನ ಹೇಳುವಂತೆ ಈಗಾಗಲೇ ಆತನ ಕೈಯಲ್ಲಿ ಸಿಲುಕಿ ಸಾವನ್ನಪ್ಪಿದ ಉಗ್ರರ ಸಂಖ್ಯೆ 1,500 ಗಡಿ ದಾಟಿದೆ. ಆದರೆ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 500 ಉಗ್ರರು ಆತನಿಂದ ಹತರಾಗಿರಬಹುದು ಎನ್ನುತ್ತವೆ ಕೆಲವು ಮಾಧ್ಯಮಗಳು. ಹೀಗಾಗಿ ಈ ವಿಷಯದಲ್ಲಿ ಸ್ಪಷ್ಟತೆ ಇಲ್ಲ. ಆದಾಗ್ಯೂ, ಹೀಗೆ ಕಿರಾತಕರಿಗೇ ಸಾವಿನ ದಾರಿ ತೋರುವವನಾದ ಕಾರಣ ‘ಏಂಜೆಲ್ ಆಫ್ ಡೆತ್’ (ಮೃತ್ಯುದೇವತೆ) ಎಂಬ ಬಿರುದನ್ನು ಉಗ್ರರೇ ನೀಡಿದ್ದಾರೆ. ಇಷ್ಟಕ್ಕೂ ಯಾರು ಈ ಹೀರೋ?

ಇರಾನ್ ಮೂಲದ ಅಯೂಬ್ ಫಲೇಹ್ ಅಲ್ ರುಬೈ ಎಂಬುದು ಇವನ ಪೂರ್ಣ ಹೆಸರು. ಅಬು ಅಜ್ರೇಲ್ ಎಂದೇ ಪ್ರಸಿದ್ಧ. ಇಂಗ್ಲಿಷ್​ನಲ್ಲಿ ‘ಫಾದರ್ ಆಫ್ ಡೆತ್’ ಎಂದು ಅನುವಾದಿಸಿದ್ದಾರೆ. ನಮ್ಮದೇ ಭಾಷೆಯಲ್ಲಿ ಹೇಳುವುದಾದರೆ ‘ಯಮ’. ನಲವತ್ತು ವರ್ಷ ವಯಸ್ಸಿನ ಅಬು ಅಜ್ರೇಲ್, ಇರಾನ್​ನ ವಿಶ್ವವಿದ್ಯಾಲಯವೊಂದರಲ್ಲಿ ಉಪನ್ಯಾಸಕನಾಗಿದ್ದ. ಸಮರಕಲೆಯಲ್ಲಿ ವಿಶೇಷವಾಗಿ ‘ಟೇಕ್ವಾಂಡೋ’ದಲ್ಲಿ ಚಾಂಪಿಯನ್ ಆಗಿದ್ದ. ಐಎಸ್ ಉಗ್ರರ ಉಪಟಳ ಮಿತಿಮೀರಿದ್ದನ್ನು ನೋಡಿದ ಅಬು, 2014ರ ಜೂನ್ ತಿಂಗಳಲ್ಲಿ ಉದ್ಯೋಗ ತ್ಯಜಿಸಿ ಆಗಷ್ಟೇ ರಚಿಸಲ್ಪಟ್ಟಿದ್ದ ಹರ್ಕತ್ ಉಲ್ ಇರಾಕ್ ಅಲ್ ಇಸ್ಲಾಮಿಯಾ (ಇಸ್ಲಾಮಿಕ್ ಇರಾಕ್ ಚಳವಳಿ)ಯ ಶಿಯಾ ಪ್ರಜಾಸೈನ್ಯವಾದ ‘ಇಮಾಂ ಅಲಿ ಬ್ರಿಗೇಡ್’ಗೆ ಸೇರ್ಪಡೆಗೊಂಡ. ಬಹುಬೇಗ ಕಮಾಂಡರ್ ಪಟ್ಟಕ್ಕೇರಿದ ಅಬು, ಸರ್ಕಾರದ ಮಾತಿಗೆ ಮನ್ನಣೆ ಕೊಡುವುದಕ್ಕಿಂತ ಹೆಚ್ಚಾಗಿ ಇರಾನ್​ನ ಧಾರ್ವಿುಕ ಮುಖಂಡರ ಮಾತಿಗೆ ತಲೆಬಾಗುತ್ತಾನೆ.

ಪ್ರಜಾಸೈನ್ಯದ ಕಮಾಂಡರ್ ಆಗಿರುವ ಅಬು ಸಮರಾಂಗಣಕ್ಕೆ ಇಳಿದರೆ ಮೊದಲು ಭೇಟಿಯಾಗುವುದು ಇರಾಕ್​ನ ಸೇನಾಪಡೆಯ ಸಿಬ್ಬಂದಿ, ಕಮಾಂಡರ್​ಗಳನ್ನು. ಅಲ್ಲಿ ಹೋಗಿ ಇಳಿಯುತ್ತಿರುವಂತೆಯೇ ಸೈನಿಕರು ಕೂಡ ಅಬುವನ್ನು ಮುತ್ತಿಕೊಳ್ಳುತ್ತಾರೆ. ಸಮರಾಂಗಣದಲ್ಲಿ ಮಷಿನ್​ಗನ್ ಹಿಡಿದು, ‘ಐನತ ಫರೂನ್ ಇಲ್​ಹತಾಹೀನ್’ ಎಂದು ಘೊಷಣೆ ಕೂಗಿದರೆ ಅದು ಅಲ್ಲಿ ಅನುರಣಿಸುತ್ತದೆ. ಯುದ್ಧಭೂಮಿಗೆ ಇಳಿದರೆ ಹೊಗೆಯ ವಿನಾ ಬೇರೇನೂ ಕಾಣದು ಎಂಬುದು ಅದರ ಭಾವಾರ್ಥ. ಸಮರಾಂಗಣದಲ್ಲಿ ಹುರಿದುಂಬಿಸುವ ಕಾರಣಕ್ಕೆ ಸೈನಿಕರು ಕೂಡ ಅಬುವನ್ನು ಇಷ್ಟಪಡುತ್ತಿದ್ದಾರೆ.

ಇಂತಹ ಅಬು ಕಳೆದ ವರ್ಷ ಜೂನ್​ನಿಂದೀಚೆಗೆ ಮೂರು ಪ್ರಮುಖ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾನೆ. ಸಲಾಹುದ್ದೀನ್ ಕ್ಯಾಂಪೇನ್ ಮೊದಲನೆಯದು. ಇಲ್ಲಿ ಹಲವು ಬಣಗಳು ಒಟ್ಟಾಗಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ದ ಲೆವಂಟ್(ಐಎಸ್​ಐಎಲ್/ಐಎಸ್​ಐಎಸ್ ಅಥವಾ ದಾಯಿಷ್) ಉಗ್ರರ ವಿರುದ್ಧ ಹೋರಾಟ ನಡೆಸುತ್ತಿವೆ. ಇರಾಕ್​ನ ಉತ್ತರ ಮಧ್ಯಭಾಗದ ಈ ಪ್ರದೇಶ ಉಗ್ರರ ವಶದಲ್ಲಿದೆ. ಈ ಭಾಗವನ್ನು ಕೇಂದ್ರವಾಗಿರಿಸಿಕೊಂಡು ಉಗ್ರರು ಉಳಿದ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದಕ್ಕೆ ಮುನ್ನುಗ್ಗುವುದನ್ನು ತಡೆಯುವುದು ಉಳಿದ ಬಣಗಳಿಗೂ ಅನಿವಾರ್ಯವಾಗಿಬಿಟ್ಟಿದೆ. ಇದೇ ರೀತಿ ತಿಕ್ರಿತ್ (ಸದ್ದಾಂ ಹುಸೇನ್ ಜನ್ಮಸ್ಥಳ) ಮತ್ತು ಬೈಜಿಯಲ್ಲೂ ಐಎಸ್ ಉಗ್ರರು ಪ್ರಾಬಲ್ಯ ಹೊಂದಿದ್ದು ಆ ಪ್ರದೇಶದ ಮರುವಶಕ್ಕೆ ಇಮಾಂ ಬ್ರಿಗೇಡ್ ಕಾರ್ಯಾಚರಿಸುತ್ತಿದೆ. ವಾಕಿಟಾಕಿ ಮೂಲಕ ಉಗ್ರರ ಜಾಡು ಹಿಡಿದು ಮುಂದೆ ಸಾಗುವುದರಲ್ಲಿ ಅಬು ಪರಿಣತ. ಹೀಗೆ ರಹಸ್ಯ ಮಾಹಿತಿಗಳನ್ನು ಪಡೆದು ಉಗ್ರರ ಇರುವಿಕೆಯನ್ನು ಪತ್ತೆಹಚ್ಚಿ ಅವರನ್ನು ನಿರ್ನಾಮ ಮಾಡುವ ಕೆಲಸವನ್ನು ಅಬು ಸಲೀಸಾಗಿ ಮಾಡುತ್ತಿದ್ದಾನೆ. ಹೀಗೆ ನಡೆಸಿದ ವಿವಿಧ ಕಾರ್ಯಾಚರಣೆಯ ವಿಡಿಯೋ ತುಣುಕುಗಳನ್ನು ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡುತ್ತಿದ್ದಾನೆ. ಪರಿಣಾಮ ಅಬು ಅಜ್ರೇಲ್​ಗೆ ರ್ಯಾಂಬೋ ಇಮೇಜ್ ಬಂದುಬಿಟ್ಟಿದೆ.

2015ರ ಮಾರ್ಚ್​ನಲ್ಲೇ ಫೇಸ್​ಬುಕ್​ನಲ್ಲಿ ಅಬು ಅಜ್ರೇಲ್ ಪುಟವನ್ನು ಇಷ್ಟಪಟ್ಟವರ ಸಂಖ್ಯೆ 3 ಲಕ್ಷದ ಗಡಿದಾಟಿತ್ತು. ಅಬುವಿನ ನಾನಾ ಅವತಾರದ ಫೋಟೋಗಳು ಫೇಸ್​ಬುಕ್ ಖಾತೆಯಲ್ಲಿದ್ದು, ಸಿಂಹದ ಜತೆಗಿರುವ ಪೋಸ್ಟರ್ ಎಲ್ಲೆಡೆ ರಾರಾಜಿಸುತ್ತಿದೆ. ಇದೀಗ ಅಬುವಿನ ಹೆಸರಿನಲ್ಲಿ ಹೊಸ ಹೊಸ ಪೇಜ್​ಗಳು, ಸಮುದಾಯ ಪುಟಗಳನ್ನು ಹಲವರು ತೆರೆದಿದ್ದಾರೆ. ಕೆಲವು ಪುಟದಲ್ಲಿ ಅಬುವಿನ ಸಾವಿನ ಸುದ್ದಿಯೂ ಇದೆ.

ಅಬುವಿನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ವಿವರಗಳೇನೂ ಸಿಗುವುದಿಲ್ಲ. ಆದರೆ ಐದು ಮಕ್ಕಳ ತಂದೆ ಎಂಬ ಮಾಹಿತಿಯಿದೆ. ಸದ್ಯ ಐಎಸ್​ಐಎಸ್ ಉಗ್ರರನ್ನು ಮಟ್ಟಹಾಕುವುದೇ ತನ್ನ ಗುರಿ ಎಂದು ಘೊಷಿಸಿಕೊಂಡಿರುವ ಅಬುವಿಗೆ ದಿಢೀರ್ ಪ್ರಸಿದ್ಧಿ ಬಂದುಬಿಟ್ಟಿದೆ. ಆತನ ಫೋಟೋಗಳು ವಿವಿಧ ಅಂತರ್ಜಾಲ ತಾಣದಲ್ಲಿ ಹರಿದಾಡುತ್ತಿವೆ. ಪರಿಣಾಮ ಅವನ ಭದ್ರತೆಯ ವಿಚಾರದಲ್ಲೂ ಆತಂಕ ಸೃಷ್ಟಿಸಿದೆ. ಆದಾಗ್ಯೂ, ಟಿವಿ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ ‘ಕಾರ್ಯಾಚರಣೆಯ ಎಲ್ಲ ವಿಷಯಗಳನ್ನೂ ನಾವು ಹೊರಹಾಕಿಲ್ಲ. ಹೀಗಾಗಿ ನನ್ನ ಭದ್ರತೆ ವಿಚಾರದಲ್ಲಿ ಯಾವುದೇ ಆತಂಕವಿಲ್ಲ’ ಎಂದಿದ್ದಾನೆ. ಈ ಬೆಳವಣಿಗೆ ಅವನಿಗೆ ಜಗತ್ತಿನಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹುಟ್ಟುಹಾಕಿದ್ದಂತೂ ವಾಸ್ತವ.

Leave a Reply

Your email address will not be published. Required fields are marked *