ಜನತಾ ಪರಿವಾರದ ಚುಕ್ಕಾಣಿ ಹಿಡಿದ ‘ಲಿಟ್ಲ್ ನೆಪೋಲಿಯನ್’

PTI11_22_2012_000175Bಮತ್ತೊಂದು ವಿಧಾನಸಭಾ ಚುನಾವಣೆಗೆ ಬಿಹಾರ ಸಿದ್ಧವಾಗುತ್ತಿದೆ. ರಾಜಕೀಯ ಪಕ್ಷಗಳೂ ಭಾರಿ ತಯಾರಿಯನ್ನೇ ನಡೆಸಿವೆ. ಕಳೆದೆರಡು ವರ್ಷಗಳಿಂದ ದೇಶಾದ್ಯಂತ ಬೀಸುತ್ತಿರುವ ಮೋದಿ ಅಲೆ, ಬಿಜೆಪಿ ಪ್ರಾಬಲ್ಯಕ್ಕೆ ತಡೆಯೊಡ್ಡುವುದೇ ಅನ್ಯ ಪಕ್ಷಗಳಿಗೆ ಬಹುದೊಡ್ಡ ಸವಾಲು. ಇದನ್ನು ಎದುರಿಸುವುದಕ್ಕಾಗಿ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ಸಂಯುಕ್ತ ಜನತಾದಳ, ಜಾತ್ಯತೀತ ಜನತಾದಳ, ಇಂಡಿಯನ್ ನ್ಯಾಷನಲ್ ಲೋಕದಳ ಮತ್ತು ಸಮಾಜವಾದಿ ಜನತಾ ಪಾರ್ಟಿ (ರಾಷ್ಟ್ರೀಯ) ಗಳು ಒಟ್ಟು ಸೇರಿ ‘ಜನತಾ ಪರಿವಾರ’ವನ್ನು ರಚಿಸಿಕೊಂಡಿವೆ. ಈ ಪರಿ ವಾರದ ನಾಯಕತ್ವದ ನೊಗ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಹೆಗಲೇರಿದ್ದು, ಕಳೆದ ವಾರದ ರಾಜಕೀಯ ಬೆಳವಣಿಗೆಯಲ್ಲಿ ಗಮನಸೆಳೆದ ಅಂಶ.

ಡಾ. ರಾಮಮನೋಹರ ಲೋಹಿಯಾ ಅವರ ಸಿದ್ಧಾಂತಗಳಿಂದ ಪ್ರಭಾವಿತರಾಗಿ ಸಮಾಜವಾದಿ ಚಿಂತನೆಗಳಿಂದ ಪ್ರೇರಿತರಾಗಿರುವ ಅವರು, ಹಲವು ರಾಜಕೀಯ ಮಜಲುಗಳನ್ನು ದಾಟಿ ಸ್ವಂತ ಪಕ್ಷವನ್ನು ಕಟ್ಟಿ ರಾಷ್ಟ್ರ ರಾಜಕಾರಣದಲ್ಲೂ ಮಹತ್ವದ ಪಾತ್ರ ನಿರ್ವಹಿಸಿದವರು. ಮಧು ಲಿಮಯೆ, ರಾಮ್​ಸೇವಕ್ ಯಾದವ್ ಮತ್ತಿತರರ ನಿಕಟ ಸಂಪರ್ಕದಿಂದಾಗಿ 60ರ ದಶಕದಲ್ಲಿ ರಾಜಕೀಯಕ್ಕೆ ಕಾಲಿರಿಸಿದವರು ಮುಲಾಯಂ. 1967ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಅವರು, 1974ರಲ್ಲಿ ಮತ್ತೊಂದು ಅವಧಿಗೆ ಚುನಾಯಿತರಾಗಿದ್ದರು. 1975ರಲ್ಲಿ ತುರ್ತಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿದ್ದಕ್ಕಾಗಿ 19 ತಿಂಗಳ ಸೆರೆವಾಸ ಅನುಭವಿಸಬೇಕಾಯಿತು. 1977ರಲ್ಲಿ ಮತ್ತೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದರು. ಉತ್ತರಪ್ರದೇಶದ ಲೋಕದಳ ಪಕ್ಷದ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದ್ದರು. ಬಳಿಕ ಈ ಪಕ್ಷ ಇಬ್ಭಾಗವಾಗಿ ಉತ್ತರ ಪ್ರದೇಶದಲ್ಲಿ ಲೋಕದಳ ‘ಬಿ’ ಬಣದ ನಾಯಕತ್ವವನ್ನು ಮುಲಾಯಂ ವಹಿಸಿದ್ದರು. ಈ ಪಕ್ಷ ಮುಂದೆ ಜನತಾದಳದ ಜೊತೆ ವಿಲೀನಗೊಂಡಿತು. 1980ರಲ್ಲಿ ಜನತಾ ದಳದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು, 1982-85ರ ತನಕ ಉತ್ತರಪ್ರದೇಶ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದರು. 85ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು, 1987ರ ತನಕವೂ ವಿಪಕ್ಷ ನಾಯಕರಾಗಿ ಮುಂದುವರಿದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮೇಲುಗೈ ಸಾಧಿಸಿದ ಮುಲಾಯಂ 1989ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದರು. ಹಾಗೆ ಮೊದಲಸಲ ಮುಲಾಯಂ ಮುಖ್ಯಮಂತ್ರಿಯಾಗಿದ್ದರು. ಆದರೆ, 1990ರಲ್ಲಿ ಬಾಬ್ರಿ ಮಸೀದಿ ವಿವಾದ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರ ರಥಯಾತ್ರೆ ವಿಷಯದಲ್ಲಿ ಮೈತ್ರಿಯಲ್ಲಿ ಬಿರುಕುಂಟಾಗಿ ಸರ್ಕಾರ ಪತನವಾಯಿತು. ನಂತರ ಕಾಂಗ್ರೆಸ್ ಬೆಂಬಲದೊಂದಿಗೆ 1991ರ ತನಕ ಆಳ್ವಿಕೆ ಮುಂದುವರಿಸಿದರು. ಸಮಾಜವಾದಿ, ಜಾತ್ಯತೀತ ನಿಲುವನ್ನು ಎತ್ತಿಹಿಡಿದ ಅವರು ಅದರ ಮೂಲಕವೇ ರಾಜಕೀಯ ಮಾಡಲಾರಂಭಿಸಿದ್ದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಅವರ ಪಕ್ಷ ಸೋಲನುಭವಿಸಿತು. ಇದೇ ಅವಧಿಯಲ್ಲಿ ಜನತಾದಳದ ನಾಯಕರಲ್ಲಿ ಭಿನ್ನಮತ ಹೆಚ್ಚಾಗಿ ಅಸಮಾಧಾನಗೊಂಡು ಹೊರಬಂದ ಅವರು, 1992ರ ಅಕ್ಟೋಬರ್ ತಿಂಗಳಲ್ಲಿ ಸಮಾಜವಾದಿ ಪಾರ್ಟಿ (ಎಸ್​ಪಿ) ಕಟ್ಟಿದರು.

ಅದೇ ವರ್ಷ ಡಿಸೆಂಬರ್​ನಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸವಾಗಿದ್ದು, ಮುಲಾಯಂ ರಾಜಕೀಯ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸಿತ್ತು. ಒಂದು ವರ್ಷ ಕಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಇದೇ ವೇಳೆ, ಮುಸ್ಲಿಮರ ಪರ ನಿಂತ ಮುಲಾಯಂ ಅವರ ರಾಜನೀತಿಯನ್ನು ವಿರೋಧಿಗಳು ‘ಮುಲ್ಲಾ -ಮುಲಾಯಂ’ ಮೈತ್ರಿ ಎಂದು ಟೀಕಿಸಿದರು. 1993ರಲ್ಲಿ ನಡೆದ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದ ಅವರು, ಬಹುಜನ ಸಮಾಜ ಪಕ್ಷದ ಮಾಯಾವತಿ ಅವರೊಂದಿಗೆ ಸೇರಿ ಮೈತ್ರಿಸರ್ಕಾರ ರಚಿಸಿದರು. ಈ ಸರ್ಕಾರವೂ ಪೂರ್ಣಾವಧಿ ಬಾಳಲಿಲ್ಲ. 1995ರಲ್ಲಿ ಬಿಎಸ್​ಪಿ ಬೆಂಬಲ ಹಿಂಪಡೆಯಿತು. ಇದರಿಂದಾಗಿ ಮತ್ತೆ ಒಂದು ವರ್ಷಕಾಲ ರಾಷ್ಟ್ರಪತಿ ಆಳ್ವಿಕೆ ಅಲ್ಲಿತ್ತು. ನಂತರ ನಡೆದ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದ ಮಾಯಾವತಿ, ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದರು. 2002ರಲ್ಲಿ ಮತ್ತೆ ಚುನಾವಣೆ ಎದುರಿಸಿದ ಮುಲಾಯಂ, ಬಿಎಸ್​ಪಿ ಜೊತೆ ಸೇರಿ ಸರ್ಕಾರ ರಚಿಸಿದರು. 2007ರ ಚುನಾವಣೆಯಲ್ಲಿ ಸೋಲನುಭವಿಸಿದರೂ, 2012ರಲ್ಲಿ ನಡೆದ ಚುನಾವಣೆ ಎದುರಿಸಲು ಮಗ ಅಖಿಲೇಶ್ ಯಾದವ್​ಗೆ ಪಟ್ಟ ಕಟ್ಟಿದರು. ಈ ರಣತಂತ್ರ ಭರ್ಜರಿಯಾಗೇ ಫಲಿಸಿ, ಸ್ಪಷ್ಟ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿವಲ್ಲಿ ಯಶ ಕಂಡಿದ್ದರು. ಸುಮಾರು 30 ವರ್ಷಗಳ ಕಾಲ ಉತ್ತರಪ್ರದೇಶದಲ್ಲಿ ನೆಲೆ ಕಂಡುಕೊಂಡಿರುವ ಕೀರ್ತಿ ಅವರ ರಾಜಕಾರಣಕ್ಕಿದೆ.

ರಾಜಕೀಯ ಚಾಣಾಕ್ಷ: ಮುಲಾಯಂ 1939ರ ನವೆಂಬರ್ 22ರಂದು ಇಟಾವಾ ಜಿಲ್ಲೆಯ ಸೈಫಾಯ್ ಎಂಬಲ್ಲಿ ಮೂರ್ತಿದೇವಿ ಯಾದವ್ ಮತ್ತು ಸುಘರ್ ಸಿಂಗ್ ಯಾದವ್ ದಂಪತಿಯ ಪುತ್ರನಾಗಿ ಜನಿಸಿದರು. ಇಟಾವಾದಲ್ಲಿಯೇ ಉನ್ನತ ಶಿಕ್ಷಣ ತನಕ ವ್ಯಾಸಂಗ ಮಾಡಿದರು. ಮೊದಲ ಪತ್ನಿ ಮಾಲತಿ ದೇವಿ ಜೊತೆಗಿನ ದಾಂಪತ್ಯದಲ್ಲಿ ಜನಿಸಿದವರು ಅಖಿಲೇಶ್ ಯಾದವ್. ಸಾಧನಾ ಯಾದವ್ ಎಂಬಾಕೆಯನ್ನೂ ಗುಪ್ತವಾಗಿ ವಿವಾಹವಾಗಿದ್ದ ಮುಲಾಯಂಗೆ ಪ್ರತೀಕ್ ಯಾದವ್ ಎಂಬೊಬ್ಬ ಮಗ ಇದ್ದಾರೆ. 2007ರ ಫೆಬ್ರವರಿಯಲ್ಲಿ ಇವರ 2ನೇ ಮದುವೆ ಬಹಿರಂಗಗೊಂಡಿತ್ತು.

ಹವ್ಯಾಸದಿಂದ ಕುಸ್ತಿಪಟುವಾಗಿರುವ ಮುಲಾಯಂ, ‘ರಾಜಕೀಯ ಪಟ್ಟುಗಳನ್ನು ಕರಗತಮಾಡಿಕೊಂಡ ಲಿಟ್ಲ್ ನೆಪೋಲಿಯನ್’ ಎಂದು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಬೆನ್ನುತಟ್ಟಿದ್ದರು. ಇದೇ ರೀತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಹ,‘ಮುಲಾಯಂ ಸಿಂಗ್ ಅವರು ರಾಜಕೀಯ ನೇತಾರನ ವೇಷದಲ್ಲಿರುವ ಸೇನಾಧಿಕಾರಿ. ಕಾರ್ಯಸಾಧನೆಗಾಗಿ ಯಾವ ರಾಜಕೀಯ ನಡೆ ಅನುಸರಿಸಬೇಕು, ಯಾರಿಂದ ಯಾವ ಕೆಲಸ ತೆಗೆಯಬೇಕು ಎಂಬುದನ್ನು ಅರಿತವರು’ ಎಂಬ ಎಚ್ಚರಿಕೆ ಮಾತುಗಳನ್ನು ಆಪ್ತವಲಯದಲ್ಲಿ ಹೇಳಿಕೊಂಡಿದ್ದರೆಂಬ ಉಲ್ಲೇಖವಿದೆ. ಇವೆಲ್ಲವೂ ಅವರ ರಾಜಕೀಯ ಚಾಣಕ್ಷತನವನ್ನು ಬಿಂಬಿಸುವ ಮಾತುಗಳು.

ಇದೀಗ ಪಕ್ಷ ಹಾಗೂ ರಾಷ್ಟ್ರ ರಾಜಕಾರಣಕ್ಕೆ ತಮ್ಮನ್ನು ಸೀಮಿತಗೊಳಿಸಿರುವ ಮುಲಾಯಂ, ಆಗಾಗ ಮಗನ ಸರ್ಕಾರದ ಕಿವಿಹಿಂಡುವ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೀನಾಯಸೋಲು ಕಂಡ ಬಳಿಕ, ಮತ್ತೆ ರಾಜಕೀಯ ಚುರುಕುತನ ಪ್ರದರ್ಶಿಸಲು ಮುಂದಾಗಿದ್ದಾರೆ. 1992ರ ನಂತರದಲ್ಲಿ ಉತ್ತರಪ್ರದೇಶದಲ್ಲಿ ಪ್ರಾಬಲ್ಯ ಕಳೆದುಕೊಂಡಿದ್ದ ಬಿಜೆಪಿ ಈಗ ಮತ್ತೆ ಚಿಗುರಿದ್ದು ನೋಡಿ ಜನತಾ ಪರಿವಾರ ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರು ಆ ಕೆಲಸಕ್ಕೆ ಸಮರ್ಥರು ಎಂಬ ಕಾರಣಕ್ಕೆ ಪರಿವಾರದ ನಾಯಕತ್ವದ ಜವಾಬ್ದಾರಿ ಅವರ ಹೆಗಲೇರಿದೆ. ಎಲ್ಲರೂ ಒಪ್ಪುವಂತಹ ನಿರ್ಣಯ ತೆಗೆದುಕೊಂಡು, ಪಕ್ಷಕ್ಕೊಂದು ಹೆಸರು, ಚಿಹ್ನೆ ಆಯ್ಕೆ ಮಾಡುವ, ಅದೇ ರೀತಿ ಬಿಹಾರ ಚುನಾವಣೆಗೆ ರಣತಂತ್ರ ರೂಪಿಸುವ ಸವಾಲೂ ಅವರ ಮುಂದಿದೆ. ಅದನ್ನವರು ಹೇಗೆ ನಿರ್ವಹಿಸಲಿದ್ದಾರೆ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *