ಕಂಬನಿ ನೀನಾದೆ ಮಗಳೆ

*ಛೀ ನಾಚಿಕೆಗೇಡು ಬಿಬಿಸಿ *ಪ್ರಚಾರಕ್ಕಾಗಿ ಅಗ್ಗದ ಚೌಕಾಸಿ

ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೋರೇಷನ್ (ಬಿಬಿಸಿ) ಉದ್ಯೋಗಿ ಲೆಸ್ಲಿ ಉಡ್ವಿನ್ ಎಂಬ ಮಹಿಳೆ ದೆಹಲಿಯ ಅತ್ಯಾಚಾರ ಪ್ರಕರಣದ ಎಳೆ ಇಟ್ಟುಕೊಂಡು ಸಿದ್ಧಪಡಿಸಿದ `ಇಂಡಿಯಾಸ್ ಡಾಟರ್’ ಎಂಬ 60 ನಿಮಿಷದ ಸಾಕ್ಷ್ಯಚಿತ್ರ ಈಗ ವಿವಾದದ ಕೇಂದ್ರಬಿಂದು. ಭಾರತವನ್ನು, ಭಾರತೀಯರನ್ನು ಲೇವಡಿ ಮಾಡುವಂತಿರುವ ಇದನ್ನು ಹಾಡಿಹೊಗಳಿ ಕೊಂಡಾಡಬೇಕೆ? ಎಂಬ ಪ್ರಶ್ನೆ ಒಂದೆಡೆಯಾದರೆ, ಇದು ಬ್ರಿಟಿಷ್ ಮಾನಸಿಕತೆಯ ಕೈಗನ್ನಡಿ ಎಂಬ ಆಕ್ರೋಶದ ನುಡಿಗಳೂ ಕೇಳಿಬರುತ್ತಿವೆ. ಅಷ್ಟಕ್ಕೂ ಬ್ರಿಟಿಷರು ಈ ಪ್ರಕರಣದ ಬೆನ್ನತ್ತಿದ್ದು ಏಕೆ? ಪ್ರಕರಣದ ಆರೋಪಿಗಳಿಗೆ ಮೊದಲೇ ಪ್ರಶ್ನೆ ನೀಡಿ ಸಂದರ್ಶನಕ್ಕೆ ಸಿದ್ಧಪಡಿಸಲಾಗಿತ್ತೇ? ಬಿಬಿಸಿಯ ಇತಿಹಾಸವೇನು? ಅಲ್ಲಿನ ಮಹಿಳಾ ಸಿಬ್ಬಂದಿ ಎಷ್ಟು ಸುರಕ್ಷಿತವಾಗಿದ್ದಾರೆ? ಈ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುವ ಸಣ್ಣ ಪ್ರಯತ್ನ ಇಲ್ಲಿದೆ.

vijayavani vishleshane 7.3.2015ಅಂದು ವ್ಯಾಪಾರದ ನೆಪದಲ್ಲಿ ಬಂದು ದೇಶದ ಮೇಲೆ ಗುಲಾಮಗಿರಿ ಹೇರಿಕೆ…. ಇಂದು ಸಾಕ್ಷೃಚಿತ್ರದ ನೆಪದಲ್ಲಿ ದೇಶವನ್ನು ಅವಮಾನಿಸುವ ಹುನ್ನಾರ…..ದೇಶವನ್ನು ಪ್ರೀತಿಸುವ ಯಾವೊಬ್ಬ ಪ್ರಜ್ಞಾವಂತ ಭಾರತೀಯನೇ ಆದರೂ ಈ ಡಾಕ್ಯುಮೆಂಟರಿ ನೋಡಿದಾಗ ಆತನ ನರನಾಡಿಗಳು ಬಿಗಿದುಕೊಳ್ಳದಿದ್ದರೆ ಕೇಳಿ..

ದೆಹಲಿ ಕೋರ್ಟ್ ತಡೆ ನೀಡಿದ್ದಾಗ್ಯೂ, ಭಾರತ ಸರ್ಕಾರ ಕೂಡಾ ಎಚ್ಚರಿಸಿದ್ದಾಗ್ಯೂ ಅವೆಲ್ಲವನ್ನೂ ಕಡೆಗಣಿಸಿ ಬಿಬಿಸಿ ಫೆÇೀರ್ ಈ ಡಾಕ್ಯುಮೆಂಟರಿಯನ್ನು ಪ್ರಸಾರ ಮಾಡಿತು. ಈ ಸಲದ ಮಹಿಳಾ ದಿನಾಚರಣೆ ವೇಳೆ ಭಾರತ ಹಾಗೂ ಬ್ರಿಟನ್‍ನಲ್ಲಿ ಬಿತ್ತರಿಸುವ ಸಲುವಾಗಿ ಬಿಬಿಸಿ ಸಿದ್ಧಪಡಿಸಿದ ಡಾಕ್ಯುಮೆಂಟರಿ ಅದು. ಕಾನೂನು ಸಮಸ್ಯೆ ಎದುರಾಗುತ್ತಿದೆ ಎಂಬುದು ಮನವರಿಕೆಯಾಗುತ್ತಿದ್ದಂತೆ, ಬಿಬಿಸಿ ಮೂರುದಿನ ಮೊದಲೇ ಬ್ರಿಟನ್‍ನಲ್ಲಿ ಅದನ್ನು `A Delhi court has blocked the showing of the film in India` ಎಂಬ ಮುನ್ನುಡಿಯೊಂದಿಗೆ ಪ್ರಸಾರ ಮಾಡಿತು.
ಹೌದು. ಇಂದು ಬಿಬಿಸಿಯ `ಇಂಡಿಯಾಸ್ ಡಾಟರ್’ ಜಗತ್ತಿನಾದ್ಯಂತ ಗಮನ ಸೆಳೆದ ಡಾಕ್ಯುಮೆಂಟರಿ. ಒಪ್ಪಿಕೊಳ್ಳೋಣ.. ಪ್ರಜ್ಞಾವಂತ ಭಾರತೀಯನಾಗಿ ಬಹಳ ತಾಳ್ಮೆಯಿಂದ ನೋಡಿದಾಗ ಮನಸ್ಸಿನಲ್ಲಿ ಮೂಡಿದ್ದಿಷ್ಟು: ಚಿತ್ರಕಥೆ ಮೊದಲೇ ಸಿದ್ಧಪಡಿಸಿ, ಯಾವ್ಯಾವ ಪಾತ್ರದ ಬಾಯಿಯಲ್ಲಿ ಏನೇನು ಡೈಲಾಗ್ ಹೇಳಿಸಬೇಕು ಎಂಬುದನ್ನು ಬರೆದಿಟ್ಟುಕೊಂಡು ಶೂಟಿಂಗ್ ಮಾಡಿಸಿದಂತಿದೆ. ಆರೋಪಿ ಮುಕೇಶ್ ಸಿಂಗ್, ಆರೋಪಿ ಪರ ವಕೀಲರು, ಆಕ್ಸ್‍ಫರ್ಡ್ ವಿವಿಯ ಇತಿಹಾಸ ಸಂಶೋಧಕಿ ಡಾ.ಮರಿಯಾ ಮಿಸ್ರಾ ಸೇರಿದಂತೆ ಕೆಲವರ ಮಾತುಗಳು ಇಂಥದ್ದೊಂದು ಅನುಮಾನಕ್ಕೆ ಪುಷ್ಟಿ ನೀಡುತ್ತವೆ. ಇದಕ್ಕೆ ಪೂರಕವಾಗಿ, ಮುಕೇಶ್ ಸಿಂಗ್‍ಗೆ ಈ ಸಂದರ್ಶನದ ಹೇಳಿಕೆಗಾಗಿ ಲೆಸ್ಲಿ ಉಡ್ವಿನ್ ಅವರ ಕಂಪನಿ 40 ಸಾವಿರ ರೂಪಾಯಿ ಪಾವತಿಸಿದೆ ಎಂಬ ಅಂಶ ತಿಹಾರ್ ಜೈಲಿನ ಮೂಲ ಉಲ್ಲೇಖಿಸಿ ಹಿಂದಿ ಪತ್ರಿಕೆಯೊಂದರಲ್ಲಿ ಶುಕ್ರವಾರ ವರದಿಯಾಗಿದೆ.

ನೆಗೆಟಿವ್ ಚಿತ್ರಣ ಬಿತ್ತುತ್ತಿದೆ…!
ಈ ಸಾಕ್ಷ್ಯಚಿತ್ರ ಎಂತಹ ತಲ್ಲಣವನ್ನು ಸೃಷ್ಟಿಸಿಬಿಟ್ಟಿದೆ ಎಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಸಂಸ್ಕøತಿಯೇ ಇದು, ಭಾರತೀಯ ಪುರುಷರೆಲ್ಲ ಇರುವುದೇ ಹೀಗೆ ಎಂಬರ್ಥದ ಚರ್ಚೆಗಳು ಆರಂಭವಾಗಿವೆ. ಕುವೈತ್ ಟೈಮ್ಸ್, ಡಾನ್, ಗಾರ್ಡಿಯನ್ ಮೊದಲಾದ ಪತ್ರಿಕೆಗಳಲ್ಲಿ ಮುಕೇಶ್ ಸಿಂಗ್ ಮತ್ತು ಆರೋಪಿ ಪರ ವಕೀಲನ ಮಾತುಗಳು ಇಡೀ ಭಾರತದ ಪುರುಷರ ಮಾನಸಿಕತೆ ಎಂಬಂತೆ ಬಿಂಬಿಸಲ್ಪಟ್ಟಿವೆ. ಜಾಗತಿಕ ಮಟ್ಟದಲ್ಲಿ ಭಾರತವನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯಬೇಕು ಎಂಬಂತಹ ಪ್ರಯತ್ನಗಳು ನಡೆಯುತ್ತಿರಬೇಕಾದರೆ, ದೇಶದ ಮತ್ತು ದೇಶೀಯರ ತೇಜೋವಧೆ ಮಾಡುವಂತಹ ಕೆಲಸಗಳು ನಡೆದರೆ ಹೇಗಾಗಬೇಡ?

ಭಾರತದಲ್ಲಿ ಸಮಾಜ ಇರುವುದೇ ಹೀಗೆ.. ಸ್ತ್ರೀಯರು ತುಂಡುಡುಗೆ ಧರಿಸಿ ಓಡಾಡುವಂತಿಲ್ಲ, ಅದನ್ನು ಸಮಾಜ ಒಪ್ಪುವುದಿಲ್ಲ. ರೇಪ್ ಮಾಡುವುದು ಇಲ್ಲಿನ ಪುರುಷರ ಜನ್ಮಸಿದ್ಧ ಹಕ್ಕು. ಅದನ್ನು ಯಾರೂ ಬದಲಾಯಿಸಲಾಗದು ಎಂಬ ಭಾವನೆಯನ್ನು ಬಿಂಬಿಸುವ ಸಾಕ್ಷೃಚಿತ್ರದ ಆರಂಭದಿಂದ ಅಂತ್ಯದ ತನಕ ನಮ್ಮ ದೇಶದ, ದೇಶವಾಸಿಗಳ ತೇಜೋವಧೆಯೇ ಪ್ರಮುಖ ವಿಷಯವಾಗಿ ಮೂಡಿಬಂದಿದೆ. ಸಾಕ್ಷ್ಯಚಿತ್ರದಲ್ಲಿರುವ ಪಾತ್ರಧಾರಿಗಳ ಮಾತುಗಳ ಮೂಲಕ ಭಾರತದ ಬಗ್ಗೆ ಒಂದು ನಿರ್ದಿಷ್ಟ ಅಭಿಪ್ರಾಯ ಮೂಡಿಸಲು ಹೊರಟಿರುವುದು ಅಪಾಯಕಾರಿ ಬೆಳವಣಿಗೆ.
ಈ ನಡುವೆ ಡಾಕ್ಯುಮೆಂಟರಿ ನಿಷೇಧಿಸುವ ವಿಚಾರವೂ ಚರ್ಚೆಯಲ್ಲಿದ್ದು, ರಾಷ್ಟ್ರೀಯಪ್ರಜ್ಞೆ ಸತ್ತುಹೋಗಿರುವ ಅನೇಕ ಪ್ರಗತಿಪರರು, ತಥಾಕಥಿತ ಸಾಮಾಜಿಕ ಕಾರ್ಯಕರ್ತರು ಡಾಕ್ಯುಮೆಂಟರಿ ಪರ ವಾದ ಮಾಡತೊಡಗಿದ್ದಾರೆ. ಬ್ರಿಟಿಷರು ನಮ್ಮ ದೇಶವನ್ನು ಆಳಿದ್ದರ ಪರಿಣಾಮವೋ ಏನೋ, ಇನ್ನೂ ಅನೇಕರಿಗೆ ಆ ಬ್ರಿಟಿಷ್ ಮಾನಸಿಕತೆಯಿಂದ ಹೊರಬರಲಾಗಿಲ್ಲ, ಹೊರಬರುವುದಕ್ಕೂ ಆಗುತ್ತಿಲ್ಲ!

ಸಾಕ್ಷ್ಯಚಿತ್ರದ ಅಂಶಗಳನ್ನು ವಿರೋಧಿಸುವವರನ್ನು ಸಾರಾಸಗಟಾಗಿ ಅಪರಾಧಿಗಳಂತೆ ಕಾಣತೊಡಗಿದ್ದಾರೆ. ಇವಿಷ್ಟು ಡಾಕ್ಯುಮೆಂಟರಿಯ ಕಥಾನಕದ ಒಂದು ಚಿತ್ರಣವಾದರೆ, ಇನ್ನೊಂದೆಡೆ ಇದು ನಮ್ಮ ದೇಶದ ಕಾನೂನನ್ನೂ ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಜೈಸಿಂಗ್ ಮತ್ತಿತರರು ಎನ್‍ಡಿಟಿವಿಯ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಸಾಕ್ಷ್ಯಚಿತ್ರದಲ್ಲಿರುವ ಅನೇಕ ಆಕ್ಷೇಪಾರ್ಹ ಅಂಶಗಳನ್ನು ಉಲ್ಲೇಖಿಸಿದ್ದಾರೆ.

ಆಕ್ಷೇಪಾರ್ಹ ಅಂಶಗಳಾವುವು?
ಸಾಕ್ಷ್ಯಚಿತ್ರಕ್ಕೆ ಮುಕೇಶ್ ಸಿಂಗ್ ನೀಡಿದ ಹೇಳಿಕೆ, ಐಪಿಸಿ ಸೆಕ್ಷನ್ 153ಎ(1)(ಎ) ಪ್ರಕಾರ ಆಕ್ಷೇಪಾರ್ಹ. ಇದು ದ್ವೇಷ ಹುಟ್ಟಿಸುವಂಥ ಹೇಳಿಕೆ.
ನಮ್ಮ ದೇಶದಲ್ಲಿ ವಾಕ್ ಮತ್ತು ಅಭಿಪ್ರಾಯ ಸ್ವಾತಂತ್ರ್ಯವಿದ್ದಾಗ್ಯೂ, ಸಂವಿಧಾನದ 19ನೇ ಪರಿಚ್ಛೇದದ ಪ್ರಕಾರ ಸಭ್ಯತೆಯ ಎಲ್ಲೆ ಮೀರದಂತೆ ಇರಲು ಕಾನೂನಿನ ಚೌಕಟ್ಟನ್ನೂ ವಿಧಿಸಲಾಗಿದೆ. ಆದರೆ, ಸಾಕ್ಷ್ಯಚಿತ್ರ ಅದನ್ನು ಮೀರಿದೆ.
ಸಾಕ್ಷ್ಯಚಿತ್ರದಲ್ಲಿ ತೋರಿಸಲಾದ ಸಾಕ್ಷ್ಯಗಳು ವಿಚಾರಣೆ ಮೇಲೆ ಪರಿಣಾಮ ಬೀರುವಂಥದ್ದಾಗಿದ್ದು, ಆರೋಪಿ ಮುಕೇಶ್ ಸಿಂಗ್ ಸಂದರ್ಶನ ಇಡೀ ಚಿತ್ರದ ಕೇಂದ್ರಬಿಂದು. ಆತನ ಪ್ರಚೋದನಕಾರಿ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇಂತಹ ಸಂದರ್ಶನ ನಡೆಸಲು ಅನುಮತಿ ಪಡೆದುದು ಹೇಗೆ? ಎನ್ನುವ ಪ್ರಶ್ನೆ ಕೂಡಾ ಇಲ್ಲಿದೆ.
ಜೈಲಿನಲ್ಲೇ ಮುಕೇಶ್ ಸಿಂಗ್ ಸಂದರ್ಶನ ನಡೆಸಿದ ಲೆಸ್ಲಿ, ಪ್ರಕರಣದ ಇತರೆ ಅಪರಾಧಿಗಳ ನಡೆಯನ್ನೂ ಚಿತ್ರೀಕರಿಸಿದ್ದಾರೆ. ಅವರನ್ನು ಮಾತನಾಡಿಸದೇ ಮುಕೇಶ್ ಸಿಂಗ್ ಬಾಯಲ್ಲಿ ಅವರ ಅಪರಾಧಗಳ ಬಗ್ಗೆ ಹೇಳಿಸಿದ್ದು ಎಷ್ಟು ಸರಿ?
2012ರ ಡಿಸೆಂಬರ್ 16ರ ದೆಹಲಿ ಅತ್ಯಾಚಾರ ಪ್ರಕರಣದ ನ್ಯಾಯತೀರ್ಮಾನ ಇನ್ನೂ ಮುಗಿದಿಲ್ಲ. ಇದಿನ್ನೂ ಸುಪ್ರೀಂ ಕೋರ್ಟ್ ಅಂಗಣದಲ್ಲಿದೆ. ಹೀಗಿರುವಾಗ ಕಾನೂನು ಅಂಶಗಳನ್ನು ಉಲ್ಲೇಖಿಸುವ ಈ ಸಾಕ್ಷ್ಯಚಿತ್ರ ಸ್ಪಷ್ಟವಾಗಿ ಕಾನೂನು ಉಲ್ಲಂಘಿಸಿದೆ.
ನ್ಯಾಯದಾನ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಈ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಿರುವಂತಹ ಜವಾಬ್ದಾರಿ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಬಿಬಿಸಿ ಪ್ರದರ್ಶಿಸಬೇಕಿತ್ತು.

vijayavani vishleshane continuation 7.3.2015ಶಿಕ್ಷೆ ಪ್ರಮಾಣ ಭಾರತದಲ್ಲೇ ಹೆಚ್ಚು
ಅತ್ಯಾಚಾರ ಅಪರಾಧಿಗಳಿಗೆ ಶಿಕ್ಷೆ ಆಗಿರುವ ಪ್ರಕರಣಗಳ ಸಂಖ್ಯೆ ತೆಗೆದುಕೊಂಡರೆ ಇಂಗ್ಲೆಂಡ್‍ಗಿಂತ ಭಾರತ ಮುಂದಿದೆ. ಇಂಗ್ಲೆಂಡ್‍ನಲ್ಲಿ ಈ ಪ್ರಮಾಣ ಶೇಕಡ 6.5ರಷ್ಟಿದ್ದರೆ, ಭಾರತದಲ್ಲಿ ಶೇ.26.4ರಷ್ಟಿದೆ. ಇಂಗ್ಲೆಂಡಿನ ಮಿನಿಸ್ಟ್ರಿ ಆಫ್ ಜಸ್ಟೀಸ್ ಮತ್ತು ಆಫೀಸ್ ಫಾರ್ ನ್ಯಾಷನಲ್ ಸ್ಟಾಟಿಸ್ಟಿಕ್ಸ್ 2013ರಲ್ಲಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್‍ನಲ್ಲಿ ವಾರ್ಷಿಕ 85,000 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇಡೀ ದೇಶದ ಅಪರಾಧ ಪ್ರಕರಣಗಳ ಕಡೆಗೆ ನೋಡಿದರೆ ಒಂದು ಮೂಲದ ಪ್ರಕಾರ, ಇಂಗ್ಲೆಂಡ್(48%)ನ ಒಟ್ಟು ಅಪರಾಧ ಪ್ರಕರಣಗಳ ಮಟ್ಟವನ್ನು ತೆಗೆದುಕೊಂಡರೆ ಅದು ಭಾರತ (47%)ಕ್ಕಿಂತ ಹೆಚ್ಚು. ಎಲ್ಲದಕ್ಕೂ ಮಿಗಿಲಾಗಿ ಜಗತ್ತಿನಲ್ಲಿ ಅತಿಹೆಚ್ಚು ಮಹಿಳಾ ದೌರ್ಜನ್ಯ ನಡೆಯುತ್ತಿರುವುದು ಅಮೆರಿಕ, ದಕ್ಷಿಣ ಆಫ್ರಿಕಾ, ಸ್ವಿಜರ್‍ಲೆಂಡ್, ಸ್ವೀಡನ್ ಮೊದಲಾದ ರಾಷ್ಟ್ರಗಳಲ್ಲಿ. ಇವುಗಳನ್ನೆಲ್ಲ ಬಿಟ್ಟು ಬಿಡಿ.. ಬ್ರಿಟನ್ ಕೂಡಾ ಮಹಿಳಾ ದೌರ್ಜನ್ಯದಲ್ಲಿ ಹಿಂದೆ ಬಿದ್ದಿಲ್ಲ. ಇಷ್ಟೆಲ್ಲ ಹುಳುಕುಗಳನ್ನು ತನ್ನೊಡಲಲ್ಲೇ ಇರಿಸಿಕೊಂಡಿರುವ ಬ್ರಿಟನ್‍ನ ಸುದ್ದಿಸಂಸ್ಥೆ ಭಾರತದ ಬಗ್ಗೆ ಇಂಥ ನೆಗೆಟಿವ್ ಚಿತ್ರಣ ನೀಡುವ ಸಾಕ್ಷ್ಯಚಿತ್ರ ಪ್ರಸಾರ ಮಾಡುತ್ತಿರುವುದಕ್ಕೆ ಏನನ್ನೋಣ..

***
ಹೀಗೂ ಮಾಡಬಹುದಿತ್ತಲ್ಲವೇ?
ದೆಹಲಿ ಅತ್ಯಾಚಾರ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದಲ್ಲದೇ, ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತ ಜಾಗೃತಿ, ಸರ್ಕಾರದ ಮೇಲೆ ಕಾನೂನು ತಿದ್ದುಪಡಿಗೆ ಒತ್ತಡ, ಆ ಒತ್ತಡಕ್ಕೆ ಮಣಿದ ಸರ್ಕಾರ ಅತ್ಯಂತ ಕಡಿಮೆ ಅವಧಿಯಲ್ಲಿ ಕಾನೂನು ತಿದ್ದುಪಡಿ ಮಾಡುವ ಮೂಲಕ ಇಡೀ ಜಗತ್ತಿಗೆ ಮಹಿಳಾ ಸುರಕ್ಷತೆ ಕುರಿತು ಪ್ರಬಲ ಸಂದೇಶವೊಂದನ್ನು ಸಾರಿದ್ದು, ತ್ವರಿತಗತಿ ನ್ಯಾಯಾಲಯಗಳ ಮೂಲಕ ಅತ್ಯಾಚಾರ ಪ್ರಕರಣಗಳ ತ್ವರಿತ ವಿಲೇವಾರಿ.. ಮಹಿಳೆಯರಲ್ಲೂ ಮೂಡಿದ ಜಾಗೃತಿ… ಇವೆಲ್ಲವೂ ಧನಾತ್ಮಕ ನಡೆಯೇ ಅಲ್ಲವೇ.. ಈ ವಿಷಯವನ್ನು ಬಿಂಬಿಸುವ ಸಾಕ್ಷ್ಯಚಿತ್ರ ನಿರ್ಮಿಸಬಹುದಿತ್ತಲ್ಲವೇ?

***
ಬಿಬಿಸಿಯ ಕಾಳಜಿ ಎಷ್ಟಿದೆ ಎಂದರೆ…
ಇಂಡಿಯಾಸ್ ಡಾಟರ್ ಎಂಬ ಸಾಕ್ಷ್ಯಚಿತ್ರದ ಮೂಲಕ ಭಾರತದ ತೇಜೋವಧೆ ಮಾಡಲು ಹೊರಟಿರುವ ಬಿಬಿಸಿ, ತನ್ನ ಸಿಬ್ಬಂದಿ ವರ್ಗದಲ್ಲಿರುವ ಮಹಿಳಾ ಉದ್ಯೋಗಿಗಳನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಭಾರಿ ಆಕ್ಷೇಪವಿದೆ. 40 ವರ್ಷಗಳ ಅವಧಿಯಲ್ಲಿ 1000ಕ್ಕೂ ಹೆಚ್ಚು ಹುಡುಗಿಯರು, ಹುಡುಗರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ ನಿರೂಪಕ ಜಿಮ್ಮಿ ಸಾವಿಲ್ ಪ್ರಕರಣದ ಬಗ್ಗೆ ಲೆಸ್ಲಿ ಉಡ್ವಿನ್ ಯಾಕೆ ಚಕಾರ ಎತ್ತಿಲ್ಲ ಅಥವಾ ಎತ್ತುತ್ತಿಲ್ಲ? ಬಿಬಿಸಿಯ ಘನತೆಗೆ ಕುಂದು ಉಂಟಾಗುತ್ತದೆ, ಬ್ರಿಟನ್‍ನ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ ಎಂದಲ್ಲವೇ ಈ ಮುಂಜಾಗರೂಕತೆ.. ಇದೇ ನೀತಿಯನ್ನು ಭಾರತದ ಬಗ್ಗೆಯೂ ಅನುಸರಿಸಬಹುದಿತ್ತಲ್ಲವೇ?
***

Leave a Reply

Your email address will not be published. Required fields are marked *